ಹೊಸ ಪಡಿತರ ಚೀಟಿಗಳ ವಿತರಣೆಗೆ ಇಂದಿನಿಂದ ಚಾಲನೆ
ಕೋಲಾರ: ರಾಜ್ಯಾದ್ಯಂತ ಹೊಸ ಪಡಿತರ ಚೀಟಿಗಳ ವಿತರಣೆಗೆ ಗುರುವಾರ(ಜೂ.19)ಚಾಲನೆ ನೀಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತ ಹರ್ಷಗುಪ್ತ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸ ಪಡಿತರ ಚೀಟಿಗಾಗಿ ಒಟ್ಟು 35 ಲಕ್ಷ ಅರ್ಜಿಗಳು ಬಂದಿದ್ದು, ಸಾಫ್ಟ್ವೇರ್ನಲ್ಲಿ ಹೊಸ ಬದಲಾವಣೆ ತಂದಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳ ವಿತರಣೆ ಸ್ವಲ್ಪ ತಡವಾಯಿತು. ಈಗಾಗಲೇ 10ಲಕ್ಷ ಅರ್ಜಿಗಳ ಪರಿಶೀಲನೆ ಕಾರ್ಯ ಮುಗಿಸಿ ಅರ್ಹರನ್ನು ಗುರುತಿಸಲಾಗಿದೆ. ನಾಳೆಯಿಂದಲೇ ಪಡಿತರ ಚೀಟಿಗಳ ವಿತರಣೆ ಮಾಡಲಾಗುತ್ತದೆ ಎಂದರು.
ಎಪಿಕ್ ನಂಬರ್ ಕಡ್ಡಾಯ: ಹೊಸ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿರುವವರು ಮೊ.ನಂ 92123-57123ಗೆ ಎಸ್ಎಂಎಸ್ ಮಾಡಿ ಎಫಿಕ್ ಕಾರ್ಡಿನ ಸಂಖ್ಯೆಯನ್ನು ತಿಳಿಸಿದಲ್ಲಿ, ಪರಿಶೀಲಿಸಿ ಕಾರ್ಡುಗಳ ವಿತರಣೆ ಮಾಡಲಾಗುತ್ತದೆ. ಹೊಸ ಕಾರ್ಡುದಾರರು ಮಾತ್ರವಲ್ಲದೆ ಈಗಾಗಲೇ ಕಾರ್ಡುಗಳನ್ನು ಹೊಂದಿರುವವರು ಸಹ ಎಫಿಕ್ ಕಾರ್ಡಿನ ಸಂಖ್ಯೆಯನ್ನು ಎಸ್ಎಂಎಸ್ ಮೂಲಕ ಕಡ್ಡಾಯವಾಗಿ ಕಳುಹಿಸಬೇಕೆಂದು ಸೂಚಿಸಿದರು.
ಕಾರ್ಡುದಾರರ ವಿವರ: ಹೊಸ ಸಾಫ್ಟ್ವೇರ್ ಅನುಷ್ಠಾನದಿಂದಾಗಿ ಬೋಗಸ್ ಕಾರ್ಡುಗಳ ಪತ್ತೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅನುಕೂಲವಾಗಿದೆ. ಈಗಾಗಲೇ ರಾಜ್ಯಾದ್ಯಂತ 21 ಲಕ್ಷ ಜನರು ಎಸ್ಎಂಎಸ್ ಮೂಲಕ ಎಪಿಕ್ ಕಾರ್ಡಿನ ಸಂಖ್ಯೆ ಕಳುಹಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 285917 ಮಂದಿ ಬಿಪಿಎಲ್ ಕಾರ್ಡುದಾರರು ಇದ್ದು, ಈವರೆಗೆ 25 ಸಾವಿರ ಮಂದಿ ಎಪಿಕ್ ಕಾರ್ಡಿನ ವಿವರಗಳನ್ನು ಕಳುಹಿಸಿದ್ದಾರೆಂದರು.
ಎಸ್ಎಂಎಸ್ ಮೂಲಕ ಎಪಿಕ್ ಕಾರ್ಡಿನ ನಂಬರ್ ಕಳುಹಿಸಲು ಜೂನ್ 30ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಸಚಿವರ ಸೂಚನೆ ಮೇರೆಗೆ ಜುಲೈ 30ರವರೆಗೆ ಗಡುವು ವಿಸ್ತರಿಸಲಾಗಿದೆ.
ಒಂದು ವೇಳೆ ಕಡೆ ದಿನ ಮುಗಿದರೂ ಎಪಿಕ್ ಕಾರ್ಡಿನ ಮಾಹಿತಿ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ಪಡಿತರ ವಿತರಣೆ ನಿಲ್ಲಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಹೊಸ ಪಡಿತರ ಚೀಟಿದಾರರು ಎಪಿಕ್ ಕಾರ್ಡಿನ ವಿವರ ನೀಡದ ನಂತರ ಆಹಾರ ಇಲಾಖೆ, ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ, ಪಡಿತರ ಚೀಟಿಯ ಫೋಟೋ ಸೆಂಟರ್ನಲ್ಲಿ ಹೆಚ್ಚಿನ ಮಾಹಿತಿ ಪಡೆದು ಕಾರ್ಡುಗಳನ್ನು ಪಡೆಯಬಹುದೆಂದರು. ಜಿಲ್ಲಾಧಿಕಾರಿ ಡಿ.ಕೆ.ರವಿ, ಜಿಪಂ ಸಿಇಒ ವಿನೋತ್ ಪ್ರಿಯಾ ಪತ್ರಿಕಾಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

