ತಿಮ್ಮಂಪಲ್ಲಿ ಹಾಸ್ಟೆಲ್ ಅವ್ಯವಸ್ಥೆ ಆಗರ
ಬಾಗೇಪಲ್ಲಿ: ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಹಾಗೂ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ತಾಲೂಕಿನ ತಿಮ್ಮಂಪಲ್ಲಿ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಅವ್ಯವಸ್ಥೆಗಳ ಆಗರದ ಗೂಡಾಗಿದೆ.
ಬಡವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 5 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸರ್ಕಾರ ಕೋಟ್ಯಂತರ ರು. ವೆಚ್ಚದಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸರ್ಕಾರ ಸ್ಥಾಪಿಸಿದ್ದು ದೇವರು ವರ ಕೊಟ್ಟರೂ ಪೂಜಾರಿ ಒಲ್ಲೆ ಎನ್ನುವಂತಾಗಿದೆ. ಸರ್ಕಾರ ವಿದ್ಯಾರ್ಥಿಗಳಿಗೆ ಊಟ, ಬಟ್ಟೆ, ಪೆನ್ನು, ಪುಸ್ತಕ,ಸೋಪು,ಉತ್ತಮ ಸೌಲಭ್ಯಗಳುಳ್ಳ ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹುತೇಕ ಎಲ್ಲಾ ರೀತಿಯ ಮೂಲ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ತಾಲೂಕಿನ ಗೂಳೂರು ಹೋಬಳಿಯ ತಿಮ್ಮಂಪಲ್ಲಿ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ. ಇಲ್ಲಿ ಎಲ್ಲಾ ರೀತಿಯಲ್ಲಿಯೂ ಅವ್ಯವಸ್ಥೆ ತಾಂಡವವಾಡುತ್ತಿದೆ. ಬಡವರ ಮಕ್ಕಳ ಪಾಲಿಗೆ ವರದಾನವಾಬೇಕಾಗಿದ್ದ ಸರ್ಕಾರಿ ವಿದ್ಯಾರ್ಥಿ ನಿಲಯಗಳು ನರಕದ ನಿಲಯಗಳಾಗಿ ಪರಿವರ್ತನೆಯಾಗಿವೆ. ಸುಮಾರು 65 ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕಾಗಿರುವ ಈ ವಿದ್ಯಾರ್ಥಿ ನಿಲಯದಲ್ಲಿ 11 ವಿದ್ಯಾರ್ಥಿಗಳು ಮಾತ್ರ ಇದ್ದಾರೆ. 2014-15 ನೇ ಸಾಲಿಗೆ 5 ರಿಂದ 10 ನೇ ತರಗತಿಗಳಿಗೆ ವಿದ್ಯಾರ್ಥಿ ನಿಲಯ ಪ್ರಾರಂಭವಾಗಿ ಸುಮಾರು 20 ದಿನಗಳು ಕಳೆದರೂ ಇದುವರೆಗೂ ಸಮರ್ಪಕವಾಗಿ ಆಹಾರ ಪದಾರ್ಥಗಳು ಪೂರೈಕೆಯಾಗುತ್ತಿಲ್ಲ. ವಾರ್ಡನ್ ತಮ್ಮ ಸ್ವಂತ ಹಣದಿಂದ ಆಹಾರ ಪದಾರ್ಥಗಳನ್ನು ಖಾಸಗಿ ಚಿಲ್ಲರೆ ಅಂಗಡಿಯಿಂದ ತರುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ಸಿಗುತ್ತಿಲ್ಲ. ನಿಲಯದಲ್ಲಿ ಅಳವಡಿಸಲಾಗಿರುವ ಕುಡಿಯವ ನೀರಿನ ಫಿಲ್ಟರ್ ಕೆಟ್ಟು 2 ವರ್ಷ ಹಾಗೂ ಸ್ನಾನಕ್ಕಾಗಿ ಬಿಸಿ ನೀರಿಗಾಗಿ ಅಳವಡಿಸಲಾಗಿರುವ ಸೋಲಾರ್ ಉಪಕರಣಗಳು ಕೆಟ್ಟು ಒಂದು ವರ್ಷ ಕಳೆದಿದೆ.ಆದರೆ ಸಂಬಂಧಪಟ್ಟ ಅಧಿಕಾರಿಗಳು ಇದರ ಕಡೆ ಗಮನಹರಿಸಿಲ್ಲ. ಈ ವಿದ್ಯಾರ್ಥಿ ನಿಲಯದಲ್ಲಿ ಫ್ಯಾನು, ಕುಡಿಯುವ ನೀರಿನ ಫಿಲ್ಟರ್, ಸೋಲಾರ್ ಉಪಕರಣಗಳು ಇದ್ದು ಇಲ್ಲ ಎನ್ನುವ ಪರಿಸ್ಥಿತಿಯಲ್ಲಿವೆ.
ಇನ್ನೂ ನಿಲಯದ ಕೊಠಡಿಗಳ ಬಾಗಿಲುಗಳಿಗೆ ರಂಧ್ರಗಳು ಬಿದ್ದಿವೆ. ವಿದ್ಯಾರ್ಥಿಗಳ ರಾತ್ರಿಯ ವೇಳೆ ಓದಲು ಸರಿಯಾದ ರೀತಿಯಲ್ಲಿ ಬೆಳಕು ನೀಡುವಂತಹ ವಿದ್ಯುತ್ ದೀಪಗಳನ್ನು ಅಳವಡಿಸಿಲ್ಲ. ಇದರಿಂದ ಕತ್ತಲ ಕಾಟ ಇದೆ. ಕೊಠಡಿಗಳಲ್ಲಿ ಅಳವಡಿಸಿರುವ ಬಹುತೇಕ ಫ್ಯಾನುಗಳು ಮುರಿದು ನೇತಾಡುತ್ತಿವೆ. ನಿಲಯದ ಸುತ್ತಲು ಸ್ವಚ್ಛತೆಯಿಲ್ಲ.ಇಂದೋ ನಾಳೆನೇ ಕುಸಿದು ಬೀಳುವಂತಹ ಸ್ಥಿತಿಯಲ್ಲಿರುವ ಮೇಲ್ಚಾವಣಿಯ ಕೆಳಗೆ ಕುಳಿತು ಓದುವಂತಹ ಪರಿಸ್ಥಿತಿ ಇಲ್ಲಿನ ವಿದ್ಯಾರ್ಥಿಗಳದ್ದು.
ಕಳೆದ 2 ತಿಂಗಳಿಂದ ವಿದ್ಯಾರ್ಥಿ ನಿಲಯಗಳಿಗೆ ರಜಾ ಇತ್ತು. ಈ ಸಮಯದಲ್ಲಿ ಸೋಲಾರ್, ಫ್ಯಾನ್ , ಮುರಿದು ಬೀಳುವಂತಹ ಮೇಲ್ಚಾವಣಿ ಮುಂತಾದವುಗಳನ್ನು ಸರಿಪಡಿಸಬೇಕಾಗಿತ್ತು. ಆದರೆ ಯಾರೂ ತಲೆ ಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

