ಕೋಲಾರ

ದೊರೆತ ಭರವಸೆ: ಬಿಜೆಪಿ ಧರಣಿ ಹಿಂದಕ್ಕೆ

Published On :

ಗೌರಿಬಿದನೂರು: ತಹಸೀಲ್ದಾರ್ ಡಾ.ಭಾಸ್ಕರ್ ಮತ್ತು ತಾಪಂ ಇಒ ರೆಡ್ಡಪ್ಪ ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಮಂಗಳವಾರದಿಂದ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿದ್ದ ಧರಣೆಣಿಯನ್ನು ಬುಧವಾರ ಕೈ ಬಿಡಲಾಯಿತು.
ತಾಪಂ ಇಒ ಅವರು ವಸತಿ ಯೋಜನೆಯಡಿ ಕಾಂಗ್ರೆಸ್ ಬೆಂಬಲಿತರಿಗೆ ಮಾತ್ರ ಚೆಕ್ ನೀಡಿದ್ದು, ಬಿಜೆಪಿ ಬೆಂಬಲಿತ ನಾಲ್ವರಿಗೆ ನೀಡಿಲ್ಲ ಎಂದು ಆರೋಪಿಸಿ ರವಿನಾರಾಯಣರೆಡ್ಡಿ ಅವರು ಇಲ್ಲಿನ ತಾಪಂ ಆವರಣದಲ್ಲಿ ಧರಣಿ ಆರಂಭಿಸಿದ್ದರು. ತಾಮಗೊಂಡ್ಲು ಗ್ರಾಪಂ ಬಿಜೆಪಿ ಬೆಂಬಲಿತರ ಆಡಳಿತದಲ್ಲಿದೆ. ಬಸವ ವಸತಿಯೋಜನೆಯಡಿ ಸಹಾಯಧನಕ್ಕಾಗಿ ಫಲಾನುಭವಿಗಳನ್ನು ಗುರುತಿಸಿ ತಾಪಂ ಇಒ ಅವರಿಗೆ ಅರ್ಜಿ ಸಲ್ಲಿಸಲಾಗಿತ್ತು. ಒಟ್ಟು ಫಲಾನುಭವಿಗಳ ಪೈಕಿ ನಾಲ್ವರ ಅರ್ಜಿ ತಿರಸ್ಕರಿಸಿದ್ದ ಇಒ ಅವರು, ಕಾಂಗ್ರೆಸ್ ಬೆಂಬಲಿಗರೊಬ್ಬರಿಗೆ ಚೆಕ್ ವಿತರಿಸಿದ್ದಾರೆ. ಇದು ತಾಪಂ ಇಒ ಅವರ ಪಕ್ಷಪಾತ ಧೋರಣೆಯನ್ನು ತೋರಿಸುತ್ತಿದೆ ಎಂದು ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ ಅವರು ಆರೋಪಿಸಿದ್ದಾರೆ.
ಧರಣಿಯ ತೀವ್ರತೆಯನ್ನು ಅರಿತ ತಾಪಂ ಇಒ ರೆಡ್ಡಪ್ಪ ಹಾಗೂ ತಹಸೀಲ್ದಾರ್ ಡಾ.ಭಾಸ್ಕರ್ ಅವರು ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಅಕ್ರಮ ಸಕ್ರಮ ಯೋಜನೆಯನ್ವಯ ನಿವೇಶನಗಳನ್ನು  ಸಕ್ರಮ ಗೊಳಿಸಿಕೊಡಲಾಗುವುದು ಎಂಬ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ಕೈ ಬಿಡಲಾಗಿದೆ.  ಒಂದು ವೇಳೆ ಈಗ ನೀಡಿರುವ ಭರವಸೆಯನ್ನು ಈಡೇರಿಸದಿದ್ದರೆ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ ಎಚ್ಚರಿಸಿದ್ದಾರೆ. ಧರಣಿಯಲ್ಲಿ ಗೋಪಿನಾಥ್, ಸಿ.ಆರ್.ನರಸಿಂಹಮೂರ್ತಿ, ನಾಗರಾಜರೆಡ್ಡಿ, ಕೀಮ್ಲಾನಾಯಕ್, ಜಯಣ್ಣ, ನಾಮಗೊಂಡ್ಲು ಜಯರಾಮರೆಡ್ಡಿ, ರಮೇಶ್, ಎಸ್.ರಮೇಶ್, ಡಿಪಾಳ್ಯ ಶಶಿಧರ್, ಜಿ.ಬಾಲಾಜಿ, ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
'ಬಿಜೆಪಿ ಧರಣೆ ಹಾಸ್ಯಾಸ್ಪದ'
ಗೌರೀಬಿದನೂರು: ತಾಲೂಕಿನ ನಾಮಗೊಂಡ್ಲು ವ್ಯಾಪ್ತಿಗೆ ಸೇರಿದ ಸಾರಗೊಂಡ್ಲು ವ್ಯಾಪ್ತಿಯಲ್ಲಿ ಕೆಲವು ನಿವೇಶನದಾರರಿಗೆ ಫಲಾನುಭವಿ ಬಿಲ್ ಪಾವತಿಸಿಲ್ಲ ಎಂದು ಬಿಜೆಪಿ ಮುಖಂಡರು ತಾಲೂಕು ಪಂಚಾಯಿತಿ ಆವರಣದಲ್ಲಿ ಧರಣಿ ಹೂಡಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಮುಖಂಡ ಎಚ್.ಎನ್.ಪ್ರಕಾಶ್‌ರೆಡ್ಡಿ ಲೇವಡಿ ಮಾಡಿದರು. ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ನಾಮಗೊಂಡ್ಲು ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತವಿದ್ದು, ಅಲ್ಲಿನ ಸದಸ್ಯರು ಸಹ ಬಿಜೆಪಿಯವರೇ ಆಗಿದ್ದಾರೆ. ಆ ವ್ಯಾಪ್ತಿಗೆ ಬರುವ ನಿವೇಶನಗಳ ಹಂಚಿಕೆಯ ಸಾಧಕ- ಭಾದಕಗಳು ಅವರಿಗೇ ಸೇರಿದ್ದು, ಈಗ ವಿನಾಕಾರಣ ಕಾಂಗ್ರೆಸ್ ನಾಯಕರನ್ನು, ಸರ್ಕಾರಿ ಅಧಿಕಾರಿಗಳನ್ನು ದೂರುವುದು ಸರಿಯಲ್ಲ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿರಂಜನ್, ವೇದಲವೇಣಿ ವೇಣು, ಪ್ರಕಾಶ್, ಶ್ರೀನಿವಾಸ್ ಗೌಡ, ಕಡಬೂರು ಸಂಜೀವಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.