ನಿಲ್ಲದ ಅಕ್ರಮ ಮರಳು ಸಾಗಣೆ, ಕಾರ್ಮಿಕ ಬಲಿ
ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂತರ್ಜಲಮಟ್ಟ ದಿನೇ ದಿನೇ ಕುಸಿಯುತ್ತಿದೆ. ಅಕ್ರಮ ಮರಳು ಸಾಗಾಣಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ಸರ್ಕಾರ ಹೊಸ ಮರಳು ನೀತಿಯನ್ನು ಜಾರಿಗೆ ತಂದರೂ, ಮರಳಿನ ಲೂಟಿ ಇನ್ನೂ ದೊಡ್ಡ ದಂಧೆಯಾಗಿ ಪರಿವರ್ತನೆಯಾಗಿದೆ.
ಶನಿವಾರ ಶಿಡ್ಲಘಟ್ಟ ತಾಲೂಕಿನ ರಾಮಸಮುದ್ರದಲ್ಲಿರುವ ಕೆರೆಯ ಸಮೀಪದ ಕಾಲುವೆಯಲ್ಲಿ ಮರಳಿನ ದಿಬ್ಬ ವನ್ನು ಅಗೆದು ಅಕ್ರಮವಾಗಿ ವಾಹನಕ್ಕೆ ತುಂಬುವ ಸಂದರ್ಭದಲ್ಲಿ ಮರಳು ದಿನ್ನೆ ಕುಸಿದು ಚೌಡಪ್ಪ (42) ಎಂಬಾತ ಮೃತಪಟ್ಟಿದ್ದಾನೆ. ಮಂಜುನಾಥ್ ಎಂಬ ಕೂಲಿ ಕಾರ್ಮಿಕ ಗಂಭೀರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿರುವುದು ತಾಜಾ ಘಟನೆಯಾಗಿದೆ.
ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಆಗಾಗ ಅನಿರೀಕ್ಷಿತ ದಾಳಿ ನಡೆಸಿ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಮಾಲು ಸಮೇತ ವಶಕ್ಕೆ ಪಡೆದುಕೊಳ್ಳುತ್ತಿದ್ದು, ದಂಡವನ್ನು ವಿಧಿಸಿ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದೆ. ಆದರೆ ದಂಡವನ್ನು ಕಟ್ಟಿದ ನಂತರ ಸಹ ತಮ್ಮ ಇವರು ತಮ್ಮ ಚಾಳಿ ಬಿಡುವುದಿಲ್ಲ. ಎಂದಿನಂತೆ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ದಂಧೆಯಲ್ಲಿ ಪ್ರಭಾವಿಗಳು ಮತ್ತು ರಾಜಕೀಯ ಮುಖಂಡರುಗಳೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದ್ದಾರೆ. ಗ್ರಾಮದಲ್ಲಿ ಕೂಲಿ ಕಾರ್ಮಿಕರನ್ನು ಕಳುಹಿಸಿ ಟ್ರ್ಯಾಕ್ಟರ್ಗಳಿಗೆ ಮರಳು ತುಂಬಿಸಿಕೊಳ್ಳಲಾಗುತ್ತದೆ. ಇದು ಹಾಡಹಗಲೇ ನಡೆದರೆ, ರಾತ್ರಿ 8 ಗಂಟೆಯ ನಂತರ ಸಾಗಾಣಿಕೆ ಕಾರ್ಯ ನಡೆಯುತ್ತದೆ.
ಪೊಲೀಸರು ಯಾವ ಮಾರ್ಗದಲ್ಲಿ ಪಹರೆ ಕಾಯುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಂಡು ಬದಲಿ ಮಾರ್ಗಗಳಲ್ಲಿ ಸಾಗಾಣಿಕೆಯ ಮಾಸ್ಟರ್ಪ್ಲಾನ್ ಮಾಡಲಾಗುತ್ತದೆ. ಇನ್ನೂ ಪೊಲೀಸರು ದಾಳಿ ನಡೆಸಲು ಮುಂದಾದ ಸಂದರ್ಭದಲ್ಲಿ ಮೊದಲೇ ಮರಳು ದಂಧೆಕೋರರಿಗೆ ಸಂದೇಶ ಹೋಗಿರುತ್ತದೆ. ಇನ್ನು ಕೆಲವೊಮ್ಮೆ ಪೊಲೀಸರಿಗೆ ಕೈ ಬೆಚ್ಚಾಗುವುದರಿಂದ ಕಂಡು ಕಾಣದಂತೆ ಇದ್ದು ಬಿಡುತ್ತಾರೆ.
ಮರಳು ಸಾಗಾಣಿಕೆದಾರರು ಅಕ್ರಮ ದಂಧೆಯಿಂದ ಚೆನ್ನಾಗಿ ಉದ್ಧಾರವಾಗುತ್ತಿದ್ದಾರೆ. ಇವರ ನಡುವೆ ಕೂಲಿ ಕಾರ್ಮಿಕರು, ಕಟ್ಟಡ ಮಾಲೀಕರು ಮತ್ತು ಸರ್ಕಾರ ಮೋಸ ಹೋಗುತ್ತಿದೆ. ಹೆಚ್ಚಿನ ಕೂಲಿಯಾಸೆ ತೋರಿಸುತ್ತಿರುವುದರಿಂದ ಬಡ ಕೂಲಿ ಕಾರ್ಮಿಕರು ಅಪಾಯ ಮತ್ತು ಅಪರಾಧ ಎನಿಸಿದರೂ ಮರಳನ್ನು ತೆಗೆದು ವಾಹನಗಳಿಗೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆಗಾಗ ಮಣ್ಣು ತೆಗೆಯುವಾಗ ಕುಸಿದ ದಿಬ್ಬಗಳಡಿ ಸಿಲುಕಿಕೊಂಡು ಕೂಲಿ ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ. ಇದಕ್ಕೆ ಗೌರಿಬಿದನೂರು, ಗುಡಿಬಂಡೆ ಮತ್ತು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಮರಳಿನ ದಿಬ್ಬ ಕುಸಿದು ಕಾರ್ಮಿಕರು ಮೃತಪಟ್ಟ ಘಟನೆಗಳೇ ಸಾಕ್ಷಿ. ಇಂತಹ ಘಟನೆಗಳು ನಡೆದ ಕೆಲ ಸಂದರ್ಭದಲ್ಲಿ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋದವರು ಕಾರ್ಮಿಕನ ಮನೆಗೆ ಸ್ವಲ್ಪ ಹಣವನ್ನು ಕೊಟ್ಟು ಘಟನೆ ಬೆಳಕಿಗೆ ಬಾರದಂತೆ ಇಲ್ಲವೇ ದಿಕ್ಕು ತಪ್ಪಿಸುವಂತಹುದು ನಡೆಯುತ್ತಿದೆ ಎಂದರೂ ತಪ್ಪಾಗಲಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

