ಕೋಲಾರ

ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಿ

Published On :

ಚಿಕ್ಕಬಳ್ಳಾಪುರ: ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸುವಂತಹ ಕೆಲಸಗಳು ಹೆಚ್ಚಿಗೆ ನಡೆಯಬೇಕೆಂದು ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಂ.ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
 ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಾರತ ಸೇವಾದಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಒಕ್ಕಲಿಗರ ಸಂಘ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಭೆ ಗುರುತಿಸಿ: ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಆದರೆ, ಅದನ್ನು ಗುರುತಿಸುವ ಕೆಲಸವಾಗಬೇಕು. ಅಗತ್ಯವಿರುವ ಸವಲತ್ತುಗಳಿಂದ ಪ್ರೋತ್ಸಾಹಿಸುವ ಮೂಲಕ ಮಗು ತನ್ನ ಪ್ರತಿಭೆಯನ್ನು ತೋರಿಸಲು ಸಹಕಾರ ನೀಡಬೇಕು. ಇದರಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಎಷ್ಟು ಮುಖ್ಯವಾಗಿದೆಯೋ ಸ್ವಯಂ ಸೇವಾ ಸಂಸ್ಥೆಗಳು, ಸಂಘಟನೆಗಳ ಬೆಂಬಲ ಸಹ ಮುಖ್ಯ ಎಂದರು.
 ಪ್ರತಿಭೆಗೆ ಬಡತನವಿಲ್ಲ. ಆದರೆ, ಪ್ರತಿಭಾವಂತರಿಗೆ ಬಡತನ ಅಡ್ಡಿ ಬರುತ್ತದೆ. ಇದರಿಂದ ಅನೇಕರು ತಮ್ಮ ಪ್ರತಿಭೆಯನ್ನು ತೋರಿಸಲಾಗದೇ ಹಿನ್ನಡೆ ಅನುಭವಿಸುತ್ತಾರೆ. ಇವರನ್ನು ಬೆಳಕಿಗೆ ತರಲು ಪ್ರತಿಯೊಬ್ಬರು ತಮ್ಮ ಕೈಯಲ್ಲಾದ ಮಟ್ಟಿಗೆ ಶ್ರಮಿಸಬೇಕೆಂದರು.
ಸವಲತ್ತು ಸದ್ಬಳಕೆಯಾಗಲಿ: ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ ಮಾತನಾಡಿ, ವಿದ್ಯಾರ್ಥಿಗಳು ಸಮಾಜದಲ್ಲಿ ಸಿಗುವ ಸವಲತ್ತುಗಳನ್ನು ಸಮರ್ಪಕ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸಬೇಕು. ಇದಕ್ಕೆ ಗುರಿ ಮತ್ತು ಛಲವಿರಬೇಕು. ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹತಾಶ ಮನೋಭಾವನೆಯಲ್ಲಿದ್ದರೆ ಸಾಧನೆಯನ್ನು ಮಾಡಲು ಸಾಧ್ಯವಿಲ್ಲ ಎಂದರು.
 ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಮಗುವಿನ ಪ್ರತಿಭೆಯನ್ನು ಹೆಚ್ಚಿಸಲು ಶ್ರಮಿಸಲಾಗುತ್ತಿದೆ. ಪ್ರತಿಯೊಂದು ಮಗು ತನಿಗಿಷ್ಟವಾದ ಒಂದಲ್ಲಾ ಒಂದು ಕ್ಷೇತ್ರದಲ್ಲಿ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ನೀಡಲಾಗುತ್ತಿದೆ ಎಂದರು.
ಪ್ರತಿಭೆ ಪ್ರತೋತ್ಸಾಹಿಸಿ: ತಹಸೀಲ್ದಾರ್  ಜಗದೀಶ್  ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ. ಇದು ಮತ್ತಷ್ಟು ಸಾಧನೆಗೆ ಪ್ರೋತ್ಸಾಹದಾಯಕವಾಗುತ್ತದೆ. ಅಲ್ಲದೇ ಇತರರನ್ನೂ ಪ್ರೇರೆಪಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಹೆಚ್ಚಿಗೆ ನೆಡೆಯಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಲ್ಲಿ ತಲಾ 10 ಮಂದಿಯನ್ನು ಜಿಲ್ಲೆಯ 6 ತಾಲ್ಲೂಕುಗಳಿಂದ ಆಯ್ಕೆ ಮಾಡಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
 ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಆರ್. ನಾರಾಯಣಸ್ವಾಮಿ, ಸೇವಾ ದಳ ಜಿಲ್ಲಾ ಉಪಾಧ್ಯಕ್ಷ ಕೆ.ನಾಗಭೂಷಣ್, ಮುಖಂಡರಾದ ಗವಿರಾಯಪ್ಪ, ಜಯಚಂದ್ರ, ಎಂ.ಶ್ರೀನಿವಾಸ್, ಕೆಂಪೇಗೌಡ, ಶಶಿಧರ್, ಎಂ.ಸಿ.ನಾರಾಯಣ್, ಬೋರಯ್ಯ ಮತ್ತಿತರರು  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.