ಕೋಲಾರ

ಎಪಿಎಂಸಿ ಸ್ವಚ್ಛತೆಗೆ ಶಾಸಕರ ತಾಕೀತು

Published On :

ಚಿಂತಾಮಣಿ: ಎಪಿಎಂಸಿ ಯಾರ್ಡ್‌ಲ್ಲಿ ಸ್ವಚ್ಛತೆಯಿಲ್ಲದೆ ಹಂದಿಗಳ ಗೂಡಾಗಿರುವ ಬಗ್ಗೆ ಅಧಿಕಾರಿಗಳನ್ನು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ತರಾಟೆಗೆ ತೆಗೆದುಕೊಂಡರು.
ನಗರದ ಎಪಿಎಂಸಿ ಯಾರ್ಡ್‌ನಲ್ಲಿ ನೂತನವಾಗಿ ಕೋಮುಲ್‌ನಿಂದ ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟನೆ ನಂತರ ಶಾಸಕರು ರೈತರ ದೂರಿನ ಮೇರೆಗೆ ಮಾರ್ಕೆಟ್‌ನ್ನು ಪ್ರತ್ಯಕ್ಷವಾಗಿ ಕಂಡು ಸ್ಥಳೀಯ ಎಪಿಎಂಸಿ ಅಧಿಕಾರಿಗಳ ಬಗ್ಗೆ ಕಿಡಿ ಕಾರಿದರು.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಯುವ ಎಪಿಎಂಸಿ ಮಾರುಕಟ್ಟೆಯಲ್ಲಿ ಸಾವಿರಾರು ರೈತರು ಬೆಳೆದು ತರುವ ತರಕಾರಿ ಹಾಗೂ ದವಸ ಧಾನ್ಯಗಳ ದರ ಪಟ್ಟಿಯನ್ನು ಸರಿಯಾಗಿ ನಮೂದಿಸದೆ, ಸ್ವಚ್ಛತೆಯಿಲ್ಲದೆ ಕಳೆದ 6 ತಿಂಗಳಿಂದ ಗುತ್ತಿಗೆದಾರನಿಗೆ ಬಿಲ್ ಪಾವತಿಸಿದ್ದರೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲಗೊಂಡಿರುವುದಾಗಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅಸಮದಾನ ವ್ಯಕ್ತಪಡಿಸಿದರು. ಪ್ರತಿ ತಿಂಗಳೂ ಗುತ್ತಿಗೆದಾರನಿಗೆ 45 ಸಾವಿರ ಸ್ವಚ್ಛತೆಗಾಗಿ ವೆಚ್ಚ ಮಾಡುತ್ತಿದ್ದರೂ ಸ್ವಚ್ಛತೆ ಇಲ್ಲವೆಂದು ಆರೋಪಿಸಿದರು. ರೈತರು ತರುವ ತರಕಾರಿ ಹಾಗೂ ದವಸ ಧಾನ್ಯಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಿಯಾದ ಬೆಲೆ ಸಿಗದೆ ಹಲವು ದಲ್ಲಾಳಿಗಳು ಮನ ಬಂದಂತೆ ರೈತರಿಗೆ ಬೆಲೆ ನೀಡಿ ಮೋಸ ಮಾಡುತ್ತಿದ್ದರೂ ಎಪಿಎಂಸಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವ ಬಗ್ಗೆ ರೈತರು ದೂರು ನೀಡಿದ್ದರೂ ಆಡಳಿತ ಸಭೆಯಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳದೆ ಇರುವ ಬಗ್ಗೆ ಶಾಸಕರು ಸ್ಥಳದಲ್ಲೇ ಇದ್ದ ಕಾರ್ಯದರ್ಶಿ ನಾಗರಾಜ್ ವಿರುದ್ಧ ಕಿಡಿ ಕಾರಿದರು. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡಿ ಇಲ್ಲವೆ ಮನೆಗೆ ಹೋಗಿ, ನಿಮ್ಮ ಬದಲಾಗಿ ಬೇರೆ ಅಧಿಕಾರಿ ಬಂದು ಕಾರ್ಯನಿರ್ವಹಿಸಲಿ ಎಂದು ಶಾಸಕರು ತಾಕೀತು ಮಾಡಿದರು. ಕೋಮುಲ್ ನಿರ್ದೇಶಕ ಟಿ.ಎನ್. ರಾಜಗೋಪಾಲ್, ಎಪಿಎಂಸಿ ಸದಸ್ಯರಾದ ಕೈವಾರ ಸುಬ್ಬಾರೆಡ್ಡಿ, ಎಚ್. ನಾರಾಯಣಸ್ವಾಮಿ,ನಗರಸಭಾ ಸದಸ್ಯರಾದ ಮಂಜುನಾಥ್, ಪ್ರಕಾಶ್, ಕೃಷ್ಣಪ್ಪ, ಜಿಯಾವುಲ್ಲಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.