ಒಕ್ಕಲಿಗರ ಸಂಘದ ಭ್ರಷ್ಟರ ವಿರುದ್ಧ ಪ್ರಚಾರ
ಕೋಲಾರ: ರಾಜ್ಯ ಒಕ್ಕಲಿಗರ ಸಂಘದಲ್ಲಿ 2007-2008ರಲ್ಲಿ ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಆಗಿರುವ ಸುಮಾರು 10 ಕೋಟಿ ರು.ಗಳ ಅವ್ಯವಹಾರವನ್ನು ಸಮುದಾಯಕ್ಕೆ ತಿಳಿಸುವ ಉದ್ದೇಶದಿಂದ ರಾಜ್ಯಾಧ್ಯಂತ ಪ್ರವಾಸ ಕೈಗೊಂಡಿರುವುದಾಗಿ ಒಕ್ಕಲಿಗರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಹಾಲಿ ನಿರ್ದೇಶಕ ಡಾ.ಕೆ. ಮಹದೇವ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಅವರು ಶನಿವಾರ ಸುದ್ಧಿಗಾರರೊಂದಿಗೆ ಮಾತನಾಡಿ, ಸಂಘದ ಹಾಲಿ ಅಧ್ಯಕ್ಷ ಡಾ. ಅಪ್ಪಾಜಿಗೌಡ, ಉಪಾಧ್ಯಕ್ಷ ಎ. ದೇವೇಗೌಡ,ನಿರ್ದೇಶಕ ಡಿಸಿಕೆ ಕಾಳೇಗೌಡ, ಮಾಜಿ ನಿರ್ದೇಶಕ ರಾಜಶೇಖರ್, ಎಚ್.ಕೆ. ರಮೇಶ್, ಕೃಷ್ಣೇಗೌಡ, ಆರ್. ಮಂಜುನಾಥ್ ಹಾಗೂ ಮಾಜಿ ಶಾಸಕ ಎಂ. ಶ್ರೀನಿವಾಸ್ ಅವರು ನಡೆಸಿರುವ ಅಕ್ರಮಗಳ ಬಗ್ಗೆ ಫೆ.18 ರಂದು ಬೆಂಗಳೂರಿನ ಚಾಮರಾಜಪೇಟೆಯ ಸಿಟಿ ಕ್ರೈಮ್ ಬ್ರಾಂಚ್ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಲಿಖತವಾಗಿ ದೂರು ನೀಡಲಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
ಸಂಘದ ಚುನಾವಣೆಯಲ್ಲಿ ಅಪ್ಪಾಜಿಗೌಡ ಮತ್ತವರ ತಂಡ ಅಪ್ರಾಮಾಣಿಕವಾಗಿ ಗೆದ್ದಿದ್ದರೂ ನಾವು ಮತದಾರರ ತೀರ್ಪಿಗೆ ಗೌವರ ನೀಡಿದ್ದೇವೆ. ಆದರೆ, ಇವರು ಸಂಘದ ಹಿತಕ್ಕಾಗಿ ಕೆಲಸ ಮಾಡಿರುವ ಮಾಜಿ ಅಧ್ಯಕ್ಷ ಕೆಂಚೇಗೌಡ ಮತ್ತವರ ತಂಡದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಹಾಗಾಗಿ 2007-08ರಲ್ಲಿ ನಡೆದಿರುವ ಅವ್ಯವಹಾರಗಳನ್ನು ತಿಳಿಸಲು ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವುದಾಗಿ ಹೇಳಿದರು. ಕೆಂಪೇಗೌಡ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಗೆ ಕಾಮೆಡ್ ಕೆ ನಿಂದ 44 ವೈದ್ಯಕೀಯ ಸೀಟುಗಳು ಮಂಜೂರು ಆಗಿದ್ದು, ಎಲ್ಲಾ 44 ವಿದ್ಯಾರ್ಥಿಗಳು ಅರ್ಹರಾಗಿದ್ದರೂ ಹಣದ ಆಸೆಯಿಂದ ಆರೋಪಿಗಳು ಆಯ್ಕೆಯಾಗಿದ್ದ ವಿದ್ಯಾರ್ಥಿಗಳನ್ನು ಕೈಬಿಟ್ಟು ತಮಗೆ ಬೇಕಾದವರಿಗೆ ಸೀಟುಗಳನ್ನು ಮಾರಾಟ ಮಾಡಿಕೊಂಡು 10 ಕೋಟಿ ರು.ದುರುಪಯೋಗ ಮಾಡಿಕೊಂಡಿದ್ದಾರೆಂದು ದೂರಿದರು.
ಸಂಘದ ಹಾಲಿ ಅಧ್ಯಕ್ಷ ಡಾ. ಅಪ್ಪಾಜಿಗೌಡರು ತಮ್ಮ ಮಗ ಸುಶ್ರುತಾನಿಗೆ ಅರ್ಹತೆ ಇಲ್ಲದಿದ್ದರೂ ನಕಲಿ ದಾಖಲೆಗಳನ್ನು ನೀಡಿ ಎಸ್.ಎಸ್. ಅಪ್ತಮಾಲಾಜಿಗೆ ಸೇರಿಸಿದ್ದಾರೆಂದು ಆರೋಪಿಸಿದ ಅವರು, ಪೊಲೀಸರು ಸೂಕ್ತ ರೀರಿಯಲ್ಲಿ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡದಿದ್ದರೆ ಹೈಕೋರ್ಟ್ನಲ್ಲಿ ದಾವೆ ಹೂಡಲಾಗುವುದೆಂದು ತಿಳಿಸಿದರು.
ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಪ್ಪಾಜಿಗೌಡ ಇತರರು ಈ ಹಿಂದಿನ ಪದಾಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಪೈಕಿ ಆರ್.ಮಂಜುನಾಥ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಆದ ಹಿನ್ನಲೆಯಲ್ಲಿ ಬಂಧನವಾಗಿತ್ತು. ಸಂಘದ ನಿಯಮಗಳ ಪ್ರಕಾರ ಮಂಜುನಾಥ್ರವರ ಪ್ರಾಥಮಿಕ ಸದಸ್ಯತ್ವ ಸಹ ರದ್ದು ಮಾಡಲಾಗಿದೆ. ಈ ಹಿಂದಿನ ಆಡಳಿತ ಮಂಡಳಿಯ ವಿರುದ್ಧ ಸುಳ್ಳು ಆರೋಪ ಮಾಡಲಾಗಿದ್ದು, ತಾವು ಆ ತಂಡದಲ್ಲಿ ಇದ್ದರೂ ತಮ್ಮ ವಿರುದ್ಧ ಮಾತನಾಡಿಲ್ಲ. ಆದರೂ ತಾವು ಸಂಘದಲ್ಲಿ ನಡೆದಿರುವ ಅವ್ಯವಹಾರಗಳನ್ನು ಸಮುದಾಯಕ್ಕೆ ತಿಳಿಸುವ ಉದ್ದೇಶದಿಂದ ಎಲ್ಲ ಕಡೆ ಪ್ರವಾಸ ಮಾಡುತ್ತಿರುವುದಾಗಿ ಹೇಳಿದರು. ಗೋಷ್ಠಿಯಲ್ಲಿ ಸಂಘದ ಮಾಜಿ ನಿರ್ದೇಶಕ ನಂಜುಂಡೇಗೌಡ, ಹೆಬ್ಬಟಿ ನಾರಾಯಣಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

