ಕೋಲಾರ

ಜಿಲ್ಲೆಯ 820 ಚಿಣ್ಣರಿಗೆ ಕರ್ನಾಟಕ ದರ್ಶನ

Published On :

ಕೋಲಾರ: ಕರ್ನಾಟಕ ದರ್ಶನ ಯೋಜನೆಯಡಿ ಜಿಲ್ಲೆಯ 820 ಪ್ರೌಢಶಾಲಾ ಮಕ್ಕಳಿಗೆ ಈ ತಿಂಗಳ 10ರಂದು ನಾಲ್ಕು ದಿನಗಳ ಪ್ರವಾಸ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಶನಿವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಪಂ ಸಿಇಒ ವಿನೋತತ್ಪ್ರಿಯ ಅವರು ಮಕ್ಕಳ ಪ್ರವಾಸ ಕಾರ್ಯಕ್ರಮದಲ್ಲಿ ಯಾವುದೇ ಲೋಪ ಬರದಂತೆ ಹಾಗೂ ಮಕ್ಕಳ ರಕ್ಷಣೆಯ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಂದ ತಲಾ ಇಬ್ಬರಂತೆ ಪ್ರವಾಸ ಕೈಗೊಳ್ಳಲು ಅವಕಾಶವಿದ್ದು, ಒಟ್ಟಾರೆಯಾಗಿ ಪರಿಶಿಷ್ಟ ಜಾತಿಯ 268, ಪರಿಶಿಷ್ಟ ವರ್ಗದ 102 ಹಾಗೂ ಹಿಂದುಳಿದ,ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದ 450 ಮಕ್ಕಳಿಗೆ  ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಾಗಿದ್ದು ನಾಲ್ಕುಗಳ ಪ್ರವಾಸ ಅಚ್ಚುಕಟ್ಟಾಗಿ ಇರಬೇಕು, ಮಕ್ಕಳಿಗೆ ನಿರಾಸೆ ಆಗದ ರೀತಿಯಲ್ಲಿ ಯೋಜನೆ ಇರಲಿ ಎಂದು ತಿಳಿಸಿದರು.
ಪ್ರತಿ ಶಾಲೆಯಿಂದ ಇಬ್ಬರನ್ನು ಆಯ್ಕೆ ಮಾಡುವಾಗ ಹೆಚ್ಚಿನ ವಿದ್ಯಾರ್ಥಿಗಳು ಪ್ರವಾಸಕ್ಕೆ ಆಸಕ್ತಿ ವಹಿಸಿ ಮುಂದೆ ಬಂದಲ್ಲಿ ಬಾಲಕ-ಬಾಲಕಿಯರನ್ನು ಪ್ರತ್ಯೇಕವಾಗಿ ಲಾಟರಿ ಮೂಲಕ ಆಯ್ಕೆ ಮಾಡಬೇಕೆಂದು ತಿಳಿಸಿದರು.
ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದ್ಯತೆ ಮೇರೆಗೆ ವಿದ್ಯಾರ್ಥಿಗಳ ಪಟ್ಟಿ ಪಡೆದು ಪ್ರವಾಸಕ್ಕೆ ಸಂಬಂಧಿಸಿದ ಹಣದ ಚೆಕ್‌ನ್ನು ಡಿಡಿಪಿಐ ಅವರಿಂದ ಪಡೆಯಲು ಸೂಚಿಸಿದರು.
ಬಿಇಒ ಅವರೇ ತಮ್ಮ ಹಂತದಲ್ಲಿ ಸಾರಿಗೆ ಸಂಸ್ಥೆ ವ್ಯವಸ್ಥಾಪಕರನ್ನು ಭೇಟಿಯಾಗಿ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪ್ರತ್ಯೇಕ ಬಸ್ಸುಗಳಲ್ಲಿ ಪ್ರವಾಸ ಕರೆದೊಯ್ಯುವಂತೆ ತಿಳಿಸಿದರು.
ಪ್ರತಿ ವಿದ್ಯಾರ್ಥಿಗೆ ತಲಾ 3500 ರು. ಖರ್ಚು ಮಾಡಬಹುದಾಗಿದ್ದು, ಹಣ ದುರುಪಯೋಗವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಬೇಕೆಂದು ಹೇಳಿದರು. ವಿದ್ಯಾರ್ಥಿಗಳೊಂದಿಗೆ ಪ್ರತಿ ಬಸ್ಸಿಗೆ ಇಬ್ಬರು ಕ್ರಿಯಾಶೀಲ ಶಿಕ್ಷಕರು ಹೋಗಲಿದ್ದು, ಅವರಲ್ಲಿ ಒಬ್ಬರು ಮಹಿಳಾ ಶಿಕ್ಷಕರಿರಬೇಕು ಮತ್ತು ಒಬ್ಬರು ವ್ಯವಸ್ಥಾಪಕರು ಹಾಗೂ ಮತ್ತೊಬ್ಬರು ಖಜಾಂಚಿಯಾಗಿರುತ್ತಾರೆಂದು ಡಿಡಿಪಿಐ ಪದ್ಮನಾಭಭ್ವಿವರಿಸಿದರು.
ಶಿಕ್ಷಣಾಧಿಕಾರಿ ನಾಗೇಂದ್ರಪ್ರಸಾದ್, ವಿದ್ಯಾರ್ಥಿಗಳು ಪ್ರತಿದಿನ ರಾತ್ರಿ ಆಯಾದಿನ ವೀಕ್ಷಿಸಿದ ಪ್ರವಾಸಿ ತಾಣಗಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ, ಭಾಷಣ ಸ್ವರ್ಧೆಗಳನ್ನು ಆಯೋಜಿಸಲಾಗುವುದು ಎಂದರು.
ಇದರಲ್ಲಿ ವಿಜೇತರಾದ ಮಕ್ಕಳಿಗೆ ಪ್ರವಾಸದ ನಂತರ ಬಹುಮಾನ ನೀಡುವುದಾಗಿ ತಿಳಿಸಿದರು.
ಸಭೆಯಲ್ಲಿ ಡಯಟ್ ಪ್ರಾಂಶುಪಾಲ ಆಂಜಿನಪ್ಪ, ಡಿವೈಪಿಸಿ ಸಿದ್ದಗಂಗಯ್ಯ, ಆರ್‌ಎಂಎಸ್‌ಎ ಅಧಿಕಾರಿ ಮಾಧವರೆಡ್ಡಿ, ವಿಷಯ ಪರೀಕ್ಷಕ ವೆಂಕಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ. ಜಗದೀಶ್, ಸುಬ್ರಹ್ಮಣ್ಯಂ, ದೇವರಾಜ್, ಕೃಷ್ಣಮೂರ್ತಿ, ಬಿಆರ್‌ಸಿ ಯುವರಾಜ್, ವೇಣುಗೋಪಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.