ತಮಿಳ್ನಾಡಿಗೆ ಹೆಚ್ಚುವರಿ ಹರಿಯುವ ಕಾವೇರಿ ಬಯಲುಸೀಮೆಗೆ ಸಿಗಲಿ
ಕೋಲಾರ: ಮಳೆಗಾಲದಲ್ಲಿ ತಮಿಳುನಾಡಿಗೆ ಹೆಚ್ಚುವರಿಯಾಗಿ ಹರಿದು ಹೋಗುವ ಕಾವೇರಿ ನೀರನ್ನು ಹಾಗೂ ಶರಾವತಿ ನದಿಯ ನೀರನ್ನು ಬಯಲು ಸೀಮೆಗೆ ಹರಿಸುವುದರ ಮೂಲಕ ಬಯಲು ಸೀಮೆಯ ಬರ ಪೀಡಿತ ತಾಲೂಕುಗಳಲ್ಲಿನ ನೀರಿನ ಸಮಸ್ಯೆ ನಿವಾರಿಸಬಹುದಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಕೋಲಾರ ಎಪಿಎಂಸಿಯಲ್ಲಿ ಜಿಲ್ಲಾ ಕೃಷಿಕ ಸಮಾಜ ವತಿಯಿಂದ ನಿರ್ಮಿಸಿರುವ ಸಿ. ಬೈರೇಗೌಡ ಕೃಷಿ ಸಂಕೀರ್ಣದ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎತ್ತಿನಹೊಳೆ ಯೋಜನೆಗೆ ಸೋಮವಾರ ಶಂಕುಸ್ಥಾಪನೆ ಮಾಡುವ ಮೂಲಕ ನಮ್ಮ ಸರ್ಕಾರ ಕೊನೆ ಪಕ್ಷ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಗಮನ ಹರಿಸಿದೆ. ಅನೇಕ ಜನರ ಹೋರಾಟದ ಪ್ರತಿಫಲವೂ ಇದಾಗಿದೆ ಎಂದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿದರೆ ವ್ಯವಸಾಯದ ಪರಿಸ್ಥಿತಿ ಏನೆಂಬ ಪ್ರಶ್ನೆ ಮತ್ತೆ ಮುಂದೆ ಬಂದು ನಿಲ್ಲುತ್ತದೆ, ತನ್ನ ಬಳಿ ಇರುವ ಮಾಹಿತಿ ಪ್ರಕಾರ ಕಾವೇರಿ ಜಲಾಶಯದ ತಮಿಳು ನಾಡಿಗೆ ಹೆಚ್ಚು ನೀರು ಬಿಡಲಾಗುತ್ತಿದೆ. ಈ 2 ವರ್ಷದಲ್ಲಿ ಹೆಚ್ಚುವರಿ ನೀರು ಸಹ ಹರಿದುಹೋಗುತ್ತಿದ್ದು ಆ ನೀರನ್ನು ಈ ಭಾಗದಲ್ಲಿ ಒಣಬೇಸಾಯದಿಂದ ತತ್ತರಿಸುತ್ತಿರುವ ರೈತರಿಗೆ ಕೊಡುವ ಬಗ್ಗೆ ನಾವು ಯೋಚನೆ ಮಾಡಬೇಕಾಗಿದೆ ಎಂದರು.
ಶರಾವತಿ ಜಲಾಶಯ ಕಟ್ಟಿರುವುದು ಕೇವಲ ವಿದ್ಯುತ್ ಉತ್ಪಾದನೆಗಾಗಿ ಇದರ ನೀರಿನ ಮೇಲೆ ಯಾವ ರೈತರು ಅವಲಂಭಿತವಾಗಿಲ್ಲ, ಅದಕ್ಕಾಗಿ ಶರಾವತಿಯಿಂದ ಬೆಂಗಳೂರು ಗ್ರಾಮಾಂತರ ಭಾಗಕ್ಕೆ 30 ಟಿ.ಎಂ.ಸಿ ಯಷ್ಟು ನೀರನ್ನು ತರಬಹುದಾಗಿದೆ ಎಂಬ ವರದಿಯು ಇದ್ದು ಇದನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ವಿದ್ಯುತ್ ಅನ್ನು ಇತರೆ ಮೂಲಗಳಿಂದ ತಯಾರು ಮಾಡಬಹುದು ಆದರೆ ನೀರನ್ನು ತಯಾರು ಮಾಡಲು ಸಾಧ್ಯವಿಲ್ಲ ಭವಿಷ್ಯದ ದೃಷ್ಟಿಯಿಂದ ಜನಪ್ರತಿನಿಧಿಗಳು ಕುಡಿಯುವ ಹಾಗೂ ಕೃಷಿಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು. ಇದಕ್ಕಾಗಿ 500 ಕೋಟಿ ರು.ಗಳನ್ನು ಕೃಷಿ ಭಾಗ್ಯ ಯೋಜನೆಯಲ್ಲಿ ಒಣ ಬೇಸಾಯಕ್ಕಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ, ಈ ಭಾಗದಲ್ಲಿ ನೀರಿನ ಪರಿಹಾರ ಕಲ್ಪಿಸಿದರೆ ಎಲ್ಲಾ ಸಮಸ್ಯೆಯೂ ಬಗೆ ಹರಿಯಲಿದೆ ಎಂದರು.
ಲೋಕಸಭೆಗೆ ಹೋಗುವ ಆಸೆಯಿಲ್ಲ....
ಲೋಕಸಭೆಗೆ ಹೋಗುವ ಇಚ್ಚೆ ಇಲ್ಲ, ರಾಜ್ಯದಲ್ಲೇ ಕೃಷಿ ಸಚಿವನಾಗಿ ಮುಂದುವರೆಯುವ ಇರಾದೆ ಇದೆ, ಈ ಬಗ್ಗೆ ತನ್ನ ಕ್ಷೇತ್ರದ ಮತದಾರರಿಗೆ ಮಾತುಕೊಟ್ಟಿದ್ದೇನೆ. ಆದರೂ ಪಕ್ಷ ತೆಗೆದುಕೊಳ್ಳುವಂತಹ ತೀರ್ಮಾನಗಳಿಗೆ ತಾವು ಬದ್ಧರಾಗಿರಬೇಕಾಗುತ್ತದೆ ಎಂದು ಸಚಿವ ಕೃಷ್ಣಾಬೈರೇಗೌಡ ಅಡ್‌ಡಗೋಡೆ ಮೇಲೆ ದೀಪವಿಟ್ಟಂತೆ ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್,ಶಾಸಕ ರಮೇಶ್‌ಕುಮಾರ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ವರ್ತೂರು ಪ್ರಕಾಶ್ ಮಾತನಾಡಿ, ನಮ್ಮ ಜಿಲ್ಲೆಯವರೇ ಕೃಷಿ ಸಚಿವರಾಗಿದ್ದು ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮೊದಲೇ ಕೃಷಿ ಬೆಲೆ ಆಯೋಗವನ್ನು ರಚಿಸಿ ಅದಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವಂತಹ ಕೆಲಸ ಬೇಗ ಆಗಬೇಕೆಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

