ಕೋಲಾರ

ಈ ತಿಂಗಳಲ್ಲೇ ಮಾಲೂರು ತಾ. ಕನ್ನಡ ಸಾಹಿತ್ಯ ಸಮ್ಮೇಳನ

Published On :

ಕೋಲಾರ: ಕಳೆದ ತಿಂಗಳು ಫೆ.12 ಮತ್ತು 13ರಂದು ನಗರದಲ್ಲಿ ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರಳ ಮತ್ತು ಸುಂದರವಾಗಿ ನಡೆದ ಬೆನ್ನ ಹಿಂದೆಯೇ ತಾಲೂಕು ಸಮ್ಮೇಳನಗಳನ್ನು ನಡೆಸಲು ಜಿಲ್ಲಾ ಕಸಾಪ ನಿರ್ಧರಿಸಿದೆ.
ತಾಲೂಕು ಸಮ್ಮೇಳನಗಳನ್ನು ಈ ಬಾರಿ ತಾಲೂಕು ಕೇಂದ್ರ ಸ್ಥಾನದಲ್ಲಿ ನಡೆಸುವ ಬದಲಿಗೆ ಹೋಬಳಿಗಳಿಗೆ ವಿಸ್ತರಣೆ ಮಾಡುವ ಮೂಲಕ ಕಸಾಪಕ್ಕೆ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿನ ಸಹಕಾರ ಪಡೆಯುವ ಉದ್ದೇಶವನ್ನು ಹೊಂದಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ, ಜಿಲ್ಲಾ ಸಮ್ಮೇಳನ ಈ ಬಾರಿ ಅತ್ಯಂತ ಸರಳವಾಗಿ, ಯಶಸ್ವಿಯಾಗಿ ನಡೆದಿದೆ. ಕಳೆದ ವರ್ಷ ಮಾಲೂರಿನಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ 17.50ಲಕ್ಷ ರು. ಖರ್ಚು ಆಗಿತ್ತು, ಈ ಬಾರಿ ಕೋಲಾರದಲ್ಲಿ ನಡೆದ ಎರಡು ದಿನಗಳ ಸಮ್ಮೇಳನಕ್ಕೆ 8.50 ಲಕ್ಷ ರು. ಖರ್ಚು ಮಾಡಿ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ ಎಂದರು.
ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ. ಚಂದ್ರಶೇಖರ ನಂಗಲಿ ಅವರ ಆಶಯದಂತೆ ಸಮ್ಮೇಳನದಲ್ಲಿ ಭೂಮಿತತ್ವದಡಿ ಅರ್ಥಪೂರ್ಣವಾಗಿ ನಡೆಸಲಾಗಿದ್ದು, ಇದೇ ರೀತಿ ತಾಲೂಕು ಸಮ್ಮೇಳನಗಳನ್ನು ಸಹ ಸರಳ ಸುಂದರವಾಗಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಮಾರ್ಚ್ 31ರೊಳಗೆ ಮಾಲೂರು ತಾಲೂಕಿನ ಲಕ್ಕೂರಿನಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಉಳಿದ ತಾಲೂಕುಗಳಲ್ಲಿ ಪರೀಕ್ಷೆಗಳು ಮುಗಿದ ಬಳಿಕ ಮೇ ಅಥವಾ ಜೂನ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಕಸಾಪ ರಾಜ್ಯಾಧ್ಯಕ್ಷರ ಒಪ್ಪಿಗೆ ಪಡೆಯಬೇಕಾಗಿದ್ದು ಈ ಸಂಬಂಧ ತಾವು ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಲಿರುವುದಾಗಿ ಹೇಳಿದರು.
ತಾಲೂಕು ಸಮ್ಮೇಳನ ಒಂದು ದಿನಕ್ಕೆ ಸೀಮಿತಗೊಳಿಸಲಾಗಿದೆ. ಎಲ್ಲಾ ತಾಲೂಕುಗಳ ಅಧ್ಯಕ್ಷರೊಂದಿಗೆ ಚರ್ಚಿಸಿ ಸಮ್ಮೇಳನಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುವುದೆಂದು ಜೆ.ಜಿ. ನಾಗರಾಜ ತಿಳಿಸಿದರು.
ಕನ್ನಡಭವನ ನಿರ್ಮಾಣ: ಕೋಲಾರದ ಅಂತರಗಂಗೆ ರಸ್ತೆಯಲ್ಲಿನ ಸರ್ಕಾರಿ ನೂತನ ಕಿರಿಯ ಕಾಲೇಜಿನ ಬಳಿ ಕನ್ನಡ ಭವನ ನಿರ್ಮಾಣಕ್ಕೆ ಜಿಲ್ಲಾ ಕಸಾಪಗೆ ಈ ಹಿಂದಿನ ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಅವರು 1750 ಚದರಡಿ ಭೂಮಿಯನ್ನು ಕಸಾಪಗೆ ನೀಡಿದ್ದಾರೆ. ಕಸಾಪದ ಶತಮಾನೋತ್ಸವ 2014ರ ಮೇ 5 ರಿಂದ ಬರುವ 2015ರ ಮೇ 15ರವರೆಗೆ ನಡೆಯಲಿದ್ದು ಇದರ ಸವಿ ನೆನಪಿಗಾಗಿ ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದೆಂದು ಪ್ರಕಟಿಸಿದರು.
ಜಿಲ್ಲೆಗೆ ಸಂದ ಗೌರವ: ರಾಜ್ಯ ಸರ್ಕಾರ ಕೋಲಾರ ಜಿಲ್ಲೆಯ ಪಿಚ್ಚಳ್ಳಿ ಶ್ರೀನಿವಾಸ್ ಅವರನ್ನು ಕರ್ನಾಟಕ ಜಾನಪದ ಅಕಾಮಿಡೆಗೆ ಅಧ್ಯಕ್ಷರನ್ನಾಗಿ ಮಾಡಿರುವುದು ಜಿಲ್ಲೆಗೆ ಸಂದ ಗೌರವವಾಗಿದೆ ಎಂದು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಾನಪದ ಅಕಾಡೆಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಾಹಿತಿ ಡಾ. ಚಂದ್ರಶೇಖರ ನಂಗಲಿ, ಪರಿಷತ್ತಿನ ಗೌರವ ಕಾರ್ಯದರ್ಶಿ ಮಾಲೂರು ಅಶ್ವತ್ಥ್ ರೆಡ್ಡಿ, ಎಂ.ವಿ. ಜನಾರ್ದನ್,ಜಿಲ್ಲಾ ಸಂಚಾಲಕ ತೇ.ಸಿ. ಬದರಿನಾಥ್, ಪದಾಧಿಕಾರಿಗಳಾದ ರತ್ನಪ್ಪ ಮೇಲಾಗಾಣಿ, ಯಶೋಧ ವಿ. ನಾರಾಯಣಸ್ವಾಮಿ, ಗೋಕುಲ್ ವಿ. ನಾರಾಯಣಸ್ವಾಮಿ, ಶ್ರೀನಿವಾಸಪುರ ತಾಲೂಕು ಘಟಕದ ಅಧ್ಯಕ್ಷ ಮುನಿವೆಂಕಟೇಗೌಡ, ಮಾಲೂರಿನ ಮಾ.ಗೋ. ಮಧುಸೂದನ್, ಕೆಜಿಎಫ್‌ನ ವೀರವೆಂಕಟಪ್ಪ,ಮುಳಬಾಗಿಲಿನ ಮು.ಕೃ. ಪದ್ಮನಾಭರಾವ್, ಕೋಲಾರ  ತಾಲೂಕು ಕಸಾಪ ಪ್ರಧಾನ ಸಂಚಾಲ ನಾಗನಂದ ಕೆಂಪರಾಜ್ ಮತ್ತಿತರ ಪದಾಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.