ಮೋದಿ ಪ್ರಧಾನಿ; ದಲಿತರ, ಅಲ್ಪಸಂಖ್ಯಾತರ ಅಭಿವೃದ್ಧಿ
ಕ.ಪ್ರ.ವಾರ್ತೆ , ಕೋಲಾರ , ಮಾ.6
ನರೇಂದ್ರ ಮೋದಿ ಪ್ರಧಾನಮಂತ್ರಿ ಆದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಖಂಡಿತ ಈಡೇರಿಸುತ್ತಾರೆಂದು ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವ ಭಾರತೀಯ ರಿಪಬ್ಲಿಕನ್ ಪಕ್ಷ(ಆರ್ಪಿಐ)ದ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭಾ ಸದಸ್ಯ ರಾಂದಾಸ್ ಅಠಾವಳೆ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕೆಇಬಿ ಸಮುದಾಯ ಭವನದಲ್ಲಿ ಗುರುವಾರ ಆರ್.ಪಿ.ಐ.ನಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ, ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಹಾಗೂ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಹಿತ ಕಾಪಾಡಲು ಆರ್ಪಿಐ ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದು, ಲೋಕ ಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು ಎನ್ಡಿಎಗೆ ಬೆಂಬಲ ಘೋಷಣೆ ಮಾಡಿರುವುದರಿಂದ ಮೋದಿ ಪ್ರಧಾನಿ ಆಗುವುದು ಶತಸಿದ್ಧವೆಂದು ನುಡಿದರು.
ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದಲ್ಲಿ ತಮಗೂ ಹಾಗೂ ರಾಮ್ವಿಲಾಸ್ ಪಾಸ್ವಾನ್ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಸಿಗುವುದು ಖಚಿತ, ಈ ಬಗ್ಗೆ ತಾವು ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯೊಂದಿಗೆ ಚರ್ಚಿಸಿ ಭರವಸೆ ಪಡೆದುಕೊಂಡಿರುವುದಾಗಿ ಹೇಳಿದರು.
ಎನ್ಡಿಎ ಸರ್ಕಾರದಲ್ಲಿ ತಮಗೆ ಗೃಹ ಸಚಿವ ಸ್ಥಾನ ದೊರೆತಲ್ಲಿ ಭ್ರಷ್ಟಾಚಾರವೆಸಗಿರುವ ಹಾಗೂ ಬೆಲೆ ಏರಿಕೆ ಮಾಡಿ ಬಡವರ ಶೋಷಣೆ ಮಾಡಿರುವ ಕಾಂಗ್ರೆಸ್ ಮುಖಂಡರನ್ನು ಜೈಲಿಗೆ ಕಳುಹಿಸುವುದು ಖಚಿತವೆಂದು ಹೇಳಿದ ರಾಂದಾಸ್ ಅಠವಳೆ, ರಾಜ್ಯದಲ್ಲಿ ಯೂಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಡೆದ ಭ್ರಷ್ಟಾಚಾರ ವಿರುದ್ಧ ನಮ್ಮ ಪಕ್ಷ ಹೋರಾಡಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಲೋಪ ದೋಷಗಳ ವಿರುದ್ಧವೂ ಹೋರಾಡುತ್ತಿದೆ, ಬಿಜೆಪಿಯ ನಾಯಕರು ಕೋಮುವಾದದಿಂದ ಹಿಂದೆ ಸರಿದು ಎಲ್ಲಾ ವರ್ಗಗಳ ಹಿತ ರಕ್ಷಣೆ ಮಾಡಲು ನಿರ್ಧರಿಸಿರುವುದರಿಂದ ಆರ್ಪಿಐ ಎನ್ಡಿಎಗೆ ಬೆಂಬಲ ನೀಡಿದ್ದು ಮೋದಿ ಪ್ರಧಾನಿಯಾದಲ್ಲಿ ನಮ್ಮ ಪಕ್ಷದ ಆಶಯದಂತೆ ದೇಶದಲ್ಲಿನ 20 ಸಾವಿರ ಕೋಟಿ ಸರ್ಕಾರಿ ಭೂಮಿಯನ್ನು ಭೂ ರಹಿತ ದಲಿತರಿಗೆ ತಲಾ 5 ಎಕರೆ ಭೂಮಿಯನ್ನು ಉಚಿತವಾಗಿ ಹಂಚಿಕೆ ಮಾಡಿಸುತ್ತೇವೆಂದರು.
ದೇಶದಲ್ಲಿನ ಎಲ್ಲಾ ವರ್ಗದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 5 ಸಾವಿರ ಮಾಸಾಶನ, ದಲಿತರು ಮತ್ತು ಸವರ್ಣಿಯರ ನಡುವೆ ಸೌಹಾರ್ದತೆ, ದಲಿತರ ಮೇಲಿನ ದೌರ್ಜನ್ಯ ತಡೆಗೆ ಕಟ್ಟುನಿಟ್ಟಿನ ಕ್ರಮ, ಬ್ರಾಹ್ಮಣರು ಸೇರಿದಂತೆ ಎಲ್ಲಾ ಜಾತಿಯ ಬಡವರಿಗೆ ಶೇ.25ರಷ್ಟು ಮೀಸಲಾತಿ ಹೀಗೇ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇವೆ, ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಈ ಅಂಶಗಳನ್ನು ತಿಳಿಸಲಾಗುವುದೆಂದು ಹೇಳಿದರು.
ತಮ್ಮನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಪ್ಕ್ಷದವರು ಸೋಲಿಸಿದ್ದರು. ಆದರೆ, ಎನ್ಡಿಎ ಮತ್ತು ಶಿವಸೇನೆಯ ನಾಯಕರು ತಮ್ಮನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ದಲಿತರ ಬಗ್ಗೆ ಅವರಿಗಿರುವ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಲೂ ಆರ್ಪಿಐ ಎನ್ಡಿಎಗೆ ಬೆಂಬಲ ನೀಡಲು ಕಾರಣವಾಗಿದೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಪ್ಕ್ಷವನ್ನು ಸೋಲಿಸಿ ಮನೆಗೆ ಕಳುಹಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕೆಂದರು.
ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿಯವರು ಆರ್ಪಿಐಗೆ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದಲ್ಲಿ ಎಲ್ಲಾ ಸ್ಥಾನಗಳಲ್ಲಿ ಎನ್.ಡಿ.ಎ ಜಯ ಗಳಿಸುವುದಕ್ಕೆ ಆರ್ಪಿಐ ಶ್ರಮಿಸಲಿದೆ, ನಾವು ಚಾಮರಾಜನಗರ ಮತ್ತು ಕೋಲಾರ ಮೀಸಲು ಕ್ಷೇತ್ರದಲ್ಲಿ ಸ್ಪರ್ಧೆಗೆ ಇಚ್ಚಿಸಿದ್ದೇವೆ. ಬಿಜೆಪಿಯ ನಾಯಕರು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಕೋಲಾರದಿಂದ ಸ್ಪರ್ಧಿಸಲು ಲೋಕ ಜನಶಕ್ತಿಯ ಮುಖಂಡರಾದ ರಾಜ್ಯಾಧ್ಯಕ್ಷೆ ಎಂ. ಪ್ರಭಾವತಿ, ದಲಿತ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಸಾಹಿತಿ, ಕವಿ ಗೊಲ್ಲಹಳ್ಳಿ ಶಿವಪ್ರಸಾದ್, ಆರ್ಪಿಐ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ಅಕಾಂಕ್ಷಿಗಳಾಗಿದ್ದು 8 ವಿಧಾನಸಭಾ ಕ್ಷೇತ್ರಗಳಲ್ಲಿನ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಿ ಟಿಕೆಟ್ ನೀಡುತ್ತೇವೆ. ಯಾರಿಗೇ ಟಿಕೆಟ್ ನೀಡಿದರೂ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಪಕ್ಷಕ್ಕೆ ಶಕ್ತಿ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆರ್ಪಿಐ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ, ಹಿರಿಯ ಮುಖಂಡ ಕೆ. ಚಂದ್ರಶೇಖರ್,ಪ್ರಭಾವತಿ,ವಾಲ್ಮೀಕಿ ಸಮುದಾಯದ ಬೆಳ್ಳೂರು ಆಂಜನಪ್ಪ ಮಾತನಾಡಿದರು. ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಸುರೇಶ್ ರಾಜ್, ಆರ್. ಶ್ರೀರಾಮಣ್ಣ, ವೆಂಕಟರಮಣಪ್ಪ, ಗೋವಿಂದಸ್ವಾಮಿ, ಮಣಿಘಟ್ಟ ರಾಮಯ್ಯ ಇದ್ದರು.
ಕಾಂಗ್ರೆಸ್ ಅಪಾಯಕಾರಿ: ಸಮಾವೇಶಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಂದಾಸ್ ಅಠವಳೆ, ಬಿಜೆಪಿಯ ಕೋಮುವಾದದ ಬಗ್ಗೆ ನಾವು ಹೋರಾಟ ಮಾಡಿದ್ದು ನಿಜ, ಆದರೆ, ಕಾಂಗ್ರೆಸ್ ಬಿಜೆಪಿಗಿಂತ ಅಪಾಯಕಾರಿ ಎಂಬುದು ಕಳೆದ 10 ವರ್ಷಗಳ ಅವಧಿಯಲ್ಲಿ ರುಜುವಾತಾಗಿದೆ. ದೇಶದ ಹಿತದೃಷ್ಟಿಯಿಂದ ಬಿಜೆಪಿ ತನ್ನ ಕೆಲವು ನಿಲುಗಳನ್ನು ಕೈಬಿಟ್ಟು ದಲಿತ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬದ್ಧವೆಂದು ತಿಳಿಸಿರುವುದರಿಂದ ಮೋದಿ ಪ್ರಧಾನಿ ಆಗುವುದಕ್ಕೆ ಒಪ್ಪಿದ್ದು, ಒಂದು ವೇಳೆ ಅಂಬೇಡ್ಕರ್ ಆಶಯಗಳಿಗೆ ತದ್ವಿರುದ್ಧವಾಗಿ ನಡೆದುಕೊಂಡರೆ ಬಿಜೆಪಿಯ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಸ್ಪಷ್ಟಪಡಿಸಿದರು.
ಆರ್ಪಿಐ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಬಿಜೆಪಿಯವರು ಅಂಬೇಡ್ಕರ್ ಸಂವಿಧಾನವೇ ನಮಗೆ ಧರ್ಮ ಗ್ರಂಥವೆಂದು ತಿಳಿಸಿದ್ದಾರೆ. ಮೋದಿ ಈಗಾಗಲೇ ವಿಚಾರವನ್ನು ಬಹಿರಂಗ ಸಭೆಗಳಲ್ಲಿ ಮಂಡಿಸುತ್ತಿದ್ದಾರೆ. ಹಾಗಾಗಿ ಬಿಜೆಪಿಯ ಮೇಲೆ ವಿಶ್ವಾಸವಿಟ್ಟು ಎನ್ಡಿಎಗೆ ಬೆಂಬಲ ನೀಡಲಾಗಿದ್ದು ರಾಜ್ಯದಲ್ಲಿ ಎರಡೂ ಕ್ಷೇತ್ರಗಳನ್ನು ಆರ್ಪಿಐಗೆ ಬಿಟ್ಟುಕೊಡುವ ವಿಶ್ವಾಸವಿದೆ. ಒಂದು ವೇಳೆ ಅವಕಾಶ ನೀಡದಿದ್ದರೆ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

