ಕೋಲಾರ

ರಸ್ತೆ ಅಗಲೀಕರಣ ನಿಧಾನ; ಗ್ರಾಹಕರಿಗಿಲ್ಲ ಸಮಾಧಾನ

Published On :

ಶ್ರೀನಿವಾಸಪುರ: ಪಟ್ಟಣದ ಎಂಜಿ ರಸ್ತೆ ಆಗಲೀಕರಣಗೊಳ್ಳುತ್ತಿರುವುದರಿಂದ ದಿನ ನಿತ್ಯದ ಸರಕು ಸಾಮಾಗ್ರಿಗಳಿಗೆ ಗ್ರಾಹಕರು ಪರದಾಡುವಂತಾಗಿದೆ.
ಆಂಧ್ರಪ್ರದೇಶದ ಗಡಿಭಾಗದ ಕೊತ್ತಪಲ್ಲಿಯಿಂದ ಪಟ್ಟಣದ ಎಂಜಿ ರಸ್ತೆ ಮೂಲಕ ತಮಿಳುನಾಡಿಗೆ ಸಂಪರ್ಕ ಹೊಂದಿರುವ ರಾಜ್ಯ ಹೆದ್ದಾರಿಯ ಆಗಲೀಕರಣ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು  ಲೋಕೋಪಯೋಗಿ ಇಲಾಖೆ ಕಟ್ಟಡಗಳನ್ನು ತೆರುವುಗೊಳಿಸುವಂತೆ ಗಡುವು ನೀಡಿತ್ತು.
ಪಟ್ಟಣದ ಈ ರಸ್ತೆಯಲ್ಲಿ ಎಲ್ಲ ಸರಕು ಸಾಮಾಗ್ರಿಗಳು ಸಿಗುವ ವಹಿವಾಟಿನ ಕೇಂದ್ರ ಬಿಂದುವಾಗಿರುವ ಕಾರಣ ಗ್ರಾಹಕರು ದಿನ ನಿತ್ಯದ ಸರಕುಗಳು ದೊರೆಯಿದೆ ಪರದಾಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಎಂಜಿ ರಸ್ತೆಯಲ್ಲಿ ಕಟ್ಟಡಗಳನ್ನು ತೆರುವುಗೊಳಿಸುವ ಕಾರ್ಯ ಪೂರ್ಣಗೊಳಿಸಬೇಕೆಂದು ನಾಗರಿಕರು ಮನವಿ ಮಾಡಿದ್ದಾರೆ.
ಗ್ರಾಪಂ ಮರು ಚುನಾವಣೆ; ಜೆಡಿಎಸ್ ಮೇಲುಗೈ
ಶ್ರೀನಿವಾಸಪುರ: ತಾಲೂಕಿನ ಕಸಬಾ ಹೋಬಳಿಯ 3 ಗ್ರಾಪಂಗಳಲ್ಲಿ ತೆರುವುವಾಗಿದ್ದ ಗ್ರಾಪಂ ಸದಸ್ಯರ ಸ್ಥಾನಕ್ಕೆ ಮರು ಚುನಾವಣೆ ನಡೆದು, ಒಂದು ಸ್ಥಾನದಲ್ಲಿ ಕಾಂಗ್ರೆಸ್, ಎರುಡು ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ. ತಾಲೂಕಿನ ಮಾಸ್ತೇನಹಳ್ಳಿ ಗ್ರಾಪಂನಲ್ಲಿ ನಡೆದ ಮರುಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸುಮಿತ್ರ ಹಾಗೂ ಕಲ್ಲೂರು ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ್ ಗೆಲುವು ಸಾಧಿಸಿದ್ದಾರೆ. ಕೇತನಗಾನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕದಿರಪ್ಪ ಗೆದಿದ್ದಾರೆ.
ಲಕ್ಕೂರು ಕಸಾಪ ಘಟಕ ಪದಾಧಿಕಾರಿಗಳ ಆಯ್ಕೆ
ಮಾಲೂರು: ತಾಲೂಕಿನ ಲಕ್ಕೂರು ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ತಾಲೂಕು ಘಟಕದ ಅಧ್ಯಕ್ಷ ಮಧುಸೂಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಕ್ಕೂರು ಹೋಬಳಿಯ ಕಸಾಪ ಗೌರವಾಧ್ಯಕ್ಷ ಬರಗೂರು ಪ್ರಕಾಶ್, ಅಧ್ಯಕ್ಷ ನ. ವೆಂಕಟಪತಿ, ಗೌರವ ಕಾರ್ಯದರ್ಶಿ ಡಾ.ನಾ. ಮುನಿರಾಜು, ಸುರೇಶ್ ಜಕಾತಿ, ಖಂಜಾಚಿ, ಎಲ್.ಪಿ. ನಾರಾಯಣಸ್ವಾಮಿ, ಪತ್ರಿಕಾ ಕಾರ್ಯದರ್ಶಿ, ವಿ. ಶ್ರೀನಿವಾಸ್, ಕೆ.ಆರ್. ಚಂದ್ರಶೇಖರ್, ಪ್ರಧಾನ ಸಂಚಾಲಕ, ಗಂಗಪ್ಪ ತಳವಾರ್, ಡಿ. ಕಾಂತರಾಜ್, ಸದಸ್ಯರಾಗಿ ವೆಂಕಟಗಿರಿಯಪ್ಪ, ಹೇಮಾವತಿ, ಎಂ. ಮುನಿಸ್ವಾಮಿ, ಎಂ. ರಮೇಶ್, ಆರ್. ರಮೇಶ್, ಎಲ್.ಆರ್.ನಾಗರಾಜ್, ಕೆ. ಶಶಿಧರ್, ಎನ್.ನಾರಾಯಣಸ್ವಾಮಿ, ಎ.ವಿ. ರಾಜೇಂದ್ರ, ಸಿದ್ದಾರೆಡ್ಡಿ, ಕೋಡಿಹಳ್ಳಿ ವಸಂತಕುಮಾರ್, ಕಬೀರ್ ಅಹಮ್ಮದ್‌ರನ್ನು ನೇಮಿಸಲಾಗಿದೆ. ಸಭೆಯಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎ. ಅಶ್ವಥ್‌ರೆಡ್ಡಿ,ನ. ಗುರುಮೂರ್ತಿ, ಡಿ.ಎಂ. ವೆಂಕಟೇಶ್, ಉಪನ್ಯಾಸಕ ಆರ್. ಆನಂತಮೂರ್ತಿ, ವಿ. ರಾಮಕೃಷ್ಣ ಇದ್ದರು.
ಕಾರ್ಮಿಕರ ಆರೋಗ್ಯ ತಪಾಸಣೆಗೆ ಮನವಿ
ಶಿಡ್ಲಘಟ್ಟ: ರೇಷ್ಮೆ ಕೂಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ ವಿಶೇಷ ಶಿಬಿರ ನಡೆಸಬೇಕೆಂದು ಪ್ರಧಾನ ಮಂತ್ರಿ 15 ಅಂಶಗಳ ಸ್ಥಾಯಿ ಸಮಿತಿ ಮಾಜಿ ಸದಸ್ಯ ತಮೀಮ್ ಪಾಷ ನಿಮ್ಹಾನ್ಸ್ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ಮತ್ತು ಹೈನುಗಾರಿಕೆಯಲ್ಲಿ ಖ್ಯಾತಿ ಹೊಂದಿದ್ದರು ಉತ್ತಮ ಆರೋಗ್ಯವಿಲ್ಲದೇ ಬಡವರು ಪರದಾಡುತ್ತಿದ್ದಾರೆ. ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆಸುವ ಮಾದರಿಯಲ್ಲಿ ಶಿಡ್ಲಘಟ್ಟದಲ್ಲಿ ಮಾಸಿಕ ವಿಶೇಷ ಆರೋಗ್ಯ ಶಿಬಿರ ನಡೆಸಬೇಕೆಂದು ಆಗ್ರಹಿಸಿ ಆಸ್ಪತ್ರೆಯ ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಇಲಿಯಾಸ್ ಮೂಲಕ ಆಡಳಿತ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನರರೋಗ ಮತ್ತು ಮಾನಸಿಕ ರೋಗದಿಂದ ನರಳುತ್ತಿರುವ ಬಡಜನರು ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹೋಗಿ ಬರಲು ಕಷ್ಟವಾಗಿದ್ದು ಬಡಜನರಿಗೆ ಅನುಕೂಲ ಕಲ್ಪಿಸಲು ವಿಶೇಷ ಶಿಬಿರ ನಡೆಸಬೇಕೆಂದು ಮನವಿ ಮಾಡಿದ್ದಾರೆ.
ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹ
ಕೋಲಾರ: ಸಮಾಜ ಕಲ್ಯಾಣ ಇಲಾಖೆ ಮತ್ತು ಕೋಲಾರ ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು ಶಾಖೆಯ ಸಮನ್ವಯ ಕೊರತೆಯಿಂದ ತಾಲೂಕಿನ ವಿವಿಧ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪರಿಶಿಷ್ಟ ಜಾತಿಯ 3,600 ವಿದ್ಯಾರ್ಥಿಗಳಿಗೆ ಬಿಡುಗಡೆಯಾದ ವಿದ್ಯಾರ್ಥಿ ವೇತನ 5,64,400 ರು.ಗಳು ವಿಲೇವಾರಿಯಾಗದೆ ಆರು ತಿಂಗಳಿಂದ ಬ್ಯಾಂಕಿನಲ್ಲಿ  ಕೊಳೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಆರೋಪಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಮುಖಂಡರು, ಸರ್ಕಾರ ಪಾರದರ್ಶಕ ಕಾಪಾಡುವ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ನೇರವಾಗಿ ವಿದ್ಯಾರ್ಥಿ ವೇತನವನ್ನು ಚೆಕ್ ಮುಖಾಂತರ ಅವರ ಖಾತೆಗೆ ವರ್ಗಾವಣೆ ಮಾಡುತ್ತಿರುವುದು ಸಂತಸದ ವಿಷಯವಾದರೂ ಬ್ಯಾಂಕುಗಳು ಸರಿಯಾದ ಸಮಯಕ್ಕೆ ಜಮಾ ಮಾಡದೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಸೂಲಿಕುಂಟೆ ರಮೇಶ್, ನಾಗನಾಳ ಮುನಿಯಪ್ಪ,ಪುರಹಳ್ಳಿ ಜಿ.ಯಲ್ಲಪ್ಪ, ಮದನಹಳ್ಳಿ ವೆಂಕಟೇಶ್, ಮುದುವತ್ತಿ ಕೇಶವ, ಗೋವಿಂದರಾಜು ಆರೋಪಿಸಿದ್ದಾರೆ. ನಂತರ ಇಲಾಖೆ ಇದನ್ನು ಸರಿಪಡಿಸಿ ಬ್ಯಾಂಕಿಗೆ ಕಳುಹಿಸಿದ್ದರೂ ಇದುವರೆಗೂ ವಿದ್ಯಾರ್ಥಿಗಳ ಖಾತೆಗಳಿಗೆ ಹಣ ಬದಲಾವಣೆಯಾಗಿಲ್ಲ ಪೋಷಕರು ಮತ್ತು ವಿದ್ಯಾರ್ಥಿಗಳು ಆರು ತಿಂಗಳಿಂದ ಬ್ಯಾಂಕಿಗೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಅಲೆದು ಸಾಕಾಗಿದ್ದಾರೆ. ಈ ವಿಚಾರವನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಒಂದು ವಾರದಲ್ಲಿ ಬ್ಯಾಂಕಿನಿಂದ ಹಣ ಬಿಡುಗಡೆಯಾಗದಿದ್ದಲ್ಲಿ ಜಿಪಂ ಕಚೇರಿಗೆ  ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ
ಬಂಗಾರಪೇಟೆ: ಸತತವಾಗಿ ಬರಗಾಲಕ್ಕೆ ಸಿಲುಕಿರುವ ಜಿಲ್ಲೆಗೆ ವಿಶೇಷ ವಿದರ್ಬ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಹಾಗೂ ಹಸಿರು ಸೇನೆ ಮುಖಂಡರು ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಮಾಡಿದರು.
ಕೋಲಾರ ಜಿಲ್ಲೆ ಸತತವಾಗಿ 8ವರ್ಷಗಳಿಂದ ಬರಗಾಲಕ್ಕೆ ಸಿಲುಕಿ ರೈತರು ಹಾಗೂ ಕೂಲಿ ಕಾರ್ಮಿಕರ ಜೀವನ ಮೂರಾಬಟ್ಟೆಯಾಗಿದ್ದು, ತುತ್ತಿನ ಚೀಲ ತುಂಬಿಸಿಕೊಳ್ಳಲು ವಲಸೆ ಹೋಗುವಂತಾಗಿದೆ. ತಾರತಮ್ಯ ನಿವಾರಿಸಬೇಕು ಮತ್ತು ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿರುವ ಎಲ್ಲಾ ಕೆರೆಗಳಲ್ಲಿ ತುಂಬಿರುವ ಹೂಳನ್ನು ಎತ್ತಿ ಮಳೆ ನೀರು ಶೇಖರಣೆಗೆ ಅನುವು ಮಾಡಿಕೊಡಬೇಕು, ಅಕ್ರಮವಾಗಿ ಮರಳು ಫಿಲ್ಟರ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನ ಪ್ರಕರಣ ದಾಖಲಿಸಬೇಕು, ನಕಲಿ ಬಿತ್ತನೆ ಬೀಜ ಮತ್ತು ಔಷಧಗಳನ್ನು ರೈತರಿಗೆ ಮಾರುತ್ತಿರುವ ವ್ಯಾಪಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಉದಯ್ ಕುಮಾರ್, ಶ್ರೀನಿವಾಸಗೌಡ, ನಾಗರಾಜ್, ವೆಂಕಟೇಶ್, ಯಲ್ಲಪ್ಪ, ರಾಮಚಂದ್ರ, ಹಣಸನಹಳ್ಳಿ ವೆಂಕಟೇಶ್ ಇದ್ದರು.
ಪಡಿತರ ಚೀಟಿಗೆ ಆಗ್ರಹಿಸಿ ಪ್ರತಿಭಟನೆ
ಬಾಗೇಪಲ್ಲಿ: ಹೊಸ ಪಡಿತರ ಚೀಟಿಗಳನ್ನು ಸಮರ್ಪಕವಾಗಿ ವಿತರಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಸೇನೆ ತಾ.ಅಧ್ಯಕ್ಷ ಬಿ.ಎ. ಬಾಬಾಜಾನ್ ಮಾತನಾಡಿ, ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಸಾರ್ವಜನಿಕರಿಗೆ ಬಿಪಿಎಲ್ ಪಡಿತರ ಚೀಟಿಗಳ ಬದಲಿಗೆ ಎಪಿಎಲ್ ಪಡಿತರ ಚೀಟಿಗಳನ್ನು ಹಾಗೂ ಎಪಿಎಲ್ ಪಡಿತರ ಚೀಟಿಗಳ ಬದಲಿಗೆ  ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಪಿಎಲ್ ಪಡಿತರ ಚೀಟಿಗಳು ಅರ್ಹ ಫಲಾನುಭವಿಗಳಿಗೆ ತನಿಖೆ ನೆಪದಲ್ಲಿ ವಿತರಿಸದೇ ವಿಳಂಬ ಮಾಡಿ, ಸಂಬಂದಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಹೊಸ ಪಡಿತರ ಚೀಟಿಗಳನ್ನು ಪಡೆಯಲು ಸ್ತ್ರೀ ಮತ್ತು ಪುರುಷರು ಒಂದೇ ಸಾಲಿನಲ್ಲಿ ಗಂಟೆಗಟ್ಟಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಪಡಿತರ ಚೀಟಿ ವಿತರಿಸಲು ಆಹಾರ ನಿರೀಕ್ಷಕರ ಕಚೇರಿಯಲ್ಲಿ ಒಂದೇ ಕೇಂದ್ರ ಇರುವುದರಿಂದ ಹೊಸ ಪಡಿತರ ಚೀಟಿಗಳನ್ನು ಪಡೆಯಲು ವೃದ್ಧರು, ಅಂಗವಿಕಲರು, ಗರ್ಭಿಣಿಯರು, ರೋಗಿಗಳು ಗಂಟೆಗಟ್ಟಲೆ ಸಾಲಿನಲ್ಲೇ ನಿಲ್ಲುವುದರಿಂದ ಹೆಚ್ಚು ತೊಂದರೆಯಾಗುತ್ತಿದೆ. ಹೊಸ ಪಡಿತರ ಚೀಟಿಗಳನ್ನು ಪಡೆಯಲು ಬಂದ ಫಲಾನುಭವಿಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಎಂ.ಎ. ಪದ್ಮ ರವರಿಗೆ  ಮನವಿ ನೀಡಿದರು. ಕನ್ನಡಸೇನೆಯ ಕರಾಟೆ ರಿಯಾಜ್, ತಾ.ಪ್ರಧಾನ ಕಾರ್ಯದರ್ಶಿ ರವೀಂದ್ರ ಇದ್ದರು.
ಸುಂಕ ವಸೂಲಿ ವಿರೋಧಿಸಿ ಪ್ರತಿಭಟನೆ
ಬಾಗೇಪಲ್ಲಿ: ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಂದ ಸುಂಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಕರವೇ ಕಾಯಂಕರ್ತರು ಟೋಲ್ ಪ್ಲಾಜಾ ಬಳಿ ರಸ್ತೆ ತಡೆ ನಡೆಸಿದರು.
ಪಟ್ಟಣದ ಹೊರವಲಯದ ಟೋಲ್ ಪ್ಲಾಜಾ ಬಳಿ ಕಾರ್ಯಕರ್ತರು ರಸ್ತೆ ತಡ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸುಂಕ ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆಂದು ಕರವೇ ಜಿಲ್ಲಾಧ್ಯಕ್ಷ ಎಸ್. ಜಯಂತ್ ಕುಮಾರ್ ಆರೋಪಿಸಿದರು.
ಪ್ರತಿಭಟನೆ ನೇತೃತ್ವವನ್ನು ಸುಬ್ರಮಣ್ಯಾಚಾರಿ, ರವಿಕುಮಾರ್, ಸುಮಿತ್ರಮ್ಮ, ರಾ. ಮಂಜುನಾಥ್ ವಹಿಸಿದ್ದರು. ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಸರ್ಕಲ್ ಇನ್ಸ್‌ಪೆಕ್ಟರ್ ವಸಂತ್ ಕುಮಾರ್ ಬಂದೋಬಸ್ತ್ ಏರ್ಪಡಿಸಿದ್ದರು.
ಪರೀಕ್ಷಾ ಶುಲ್ಕ ಏರಿಕೆ ವಿರೋಧಿಸಿ ಪ್ರತಿಭಟನೆ
ಚಿಂತಾಮಣಿ: ಪದವಿ ಹಾಗೂ ಬಿಬಿಎಂ ಪರೀಕ್ಷಾ ಶುಲ್ಕ ಏರಿಸಿರುವುದನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನ ಪದವಿ ಅಂತಿಮ ವರ್ಷ ಹಾಗೂ ಬಿಬಿಎಂ ಪರೀಕ್ಷಾ ಶುಲ್ಕ 187 ರು.ಗಳಿಂದ ಏಕಾಏಕಿ 1,400 ರು.ಗಳಿಗೆ ಏರಿಸಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ಪರೀಕ್ಷಾ ಶುಲ್ಕವನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ಮಾತನಾಡಿದ ಎಬಿವಿಪಿ ಮುಖಂಡ ಎನ್. ಸೌಮ್ಯ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಎಲ್ಲರೂ ಆದಾಯ ಪ್ರಮಾಣ ಪತ್ರ ಹೊಂದಿದ್ದಾರೆ.
ಆದರೆ ಸರ್ಕಾರ ಯಾವುದನ್ನೂ ಪರಿಗಣಿಸದೆ ಏಕಾಏಕಿ ಪರೀಕ್ಷಾ ಶುಲ್ಕ ಏರಿಸಿರುವುದನ್ನು ಕೂಡಲೇ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಪ ತಹಸೀಲ್ದಾರ್ ವಿಠಲ್‌ಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.