ಕೋಲಾರ

ಕೆಂದಟ್ಟಿ ಕಲ್ಲು ಕ್ವಾರಿಯಿಂದ ನೀರು ಪೂರೈಕೆ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಮಾ.7
ತಾಲೂಕಿನ ಅರಾಭಿಕೊತ್ತನೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಕೆಂದಟ್ಟಿ ಗ್ರಾಮದ ಬಳಿಯ ಕಲ್ಲು ಕ್ವಾರೆಯಲ್ಲಿನ ನೈಸರ್ಗಿಕ ಕೋಳದಲ್ಲಿ ಶೇಖರಣೆ ಆಗಿರುವ ನೀರನ್ನು ಪೈಪ್ ಲೈನ್ ಮೂಲಕ ಕೋಲಾರ ನಗರಕ್ಕೆ ಒದಗಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಶುಕ್ರವಾರ ತಮ್ಮನ್ನು ಭೇಟಿಯಾಗಿದ್ದ ಪತ್ರಕರ್ತರೊಂದಿಗೆ ಕೆಂದಟ್ಟಿ ಗ್ರಾಮದ ಬಳಿ ಪ್ರಾಕೃತಿಕವಾಗಿ ಸಿಕ್ಕಿರುವ ನೀರನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾವು ಮಾ.4 ರಂದು ಪರಿಶೀಲನೆ ಮಾಡಿದ್ದು ನೀರನ್ನು ಮಡೇರಹಳ್ಳಿ ಕೆರೆಯಲ್ಲಿನ ಜಲ ಸಂಗ್ರಹಣಾ ಕೇಂದ್ರಕ್ಕೆ ತುಂಬಿಸಿ ನಂತರ ಅಲ್ಲಿಂದ ಕೋಲಾರ ನಗರಕ್ಕೆ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ ಎಂದರು.
ಈ ಸಂಬಂಧ ನೀರು ಸರಬರಾಜು ಮಂಡಳಿಗೆ ಯೋಜನೆ ಮತ್ತು ಅಂದಾಜು ವೆಚ್ಚದ ವರದಿ ಸಿದ್ಧಪಡಿಸಿಕೊಡುವಂತೆ ಸೂಚಿಸಲಾಗಿದೆ. ಕಲ್ಲು ಕ್ವಾರಿಯಲ್ಲಿನ ನೀರಿನಲ್ಲಿ ಪ್ಲೋರೈಡ್ ಅಂಶ ಇರುವುದರಿಂದ ಆ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಮಡೇರಹಳ್ಳಿಯ ಜಲ ಸಂಗ್ರಹಣಾ ಕೇಂದ್ರಕ್ಕೆ ಹರಿಸಿ ಶುದ್ಧೀಕರಿಸಿದ ನೀರನ್ನು ಪೈಪ್ ಲೈನ್ ಮೂಲಕ  ದಿನ ಬಳಕೆಗಾಗಿ ನೀರನ್ನು ಕೊಡಬಹುದಾಗಿದೆ ಎಂದು ತಿಳಿಸಿದರು.
ಕ್ವಾರಿಯಲ್ಲಿನ ನೀರನ್ನು ಮೊದಲು 10 ಸಾವಿರ ಲೀಟರ್ ಸಾಮರ್ಥ್ಯಯದ ಟ್ಯಾಂಕರ್‌ಗಳ ಮೂಲಕ ಮಡೇರಹಳ್ಳಿಯ ಜಲ ಸಂಗ್ರಹಣಾ ಕೇಂದ್ರಕ್ಕೆ ಸರಬರಾಜು ಮಾಡಲಾಗುತ್ತದೆ, ಇದರಿಂದ ಕ್ವಾರಿಯಲ್ಲಿ ಎಷ್ಟು ನೀರಿದೆ ಹಾಗೂ ಎಷ್ಟು ಪ್ರಮಾಣದಲ್ಲಿ  ನೀರನ್ನು ಮೇಲಕ್ಕೆ ಎತ್ತಿಬಹುದೆಂಬುದು ತಿಳಿಯಬಹುದಾಗಿದ್ದು, ಕ್ವಾರೆಯಲ್ಲಿ ನೀರು ಖಾಲಿಯಾದ ಮೇಲೂ ಕೋಳದಲ್ಲಿ ನೀರು ಉತ್ಖನನವಾದಲ್ಲಿ ಸುತ್ತಮುತ್ತಲಿನ ಜಲ ಸೆಲೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮಳೆಗಾಲದಲ್ಲಿ ಸುತ್ತಮುತ್ತಲ ಬೆಟ್ಟಗುಡ್ಡಗಳಿಂದ ಹರಿಯುವ ನೀರನ್ನು ಕೊಳಕ್ಕೆ ಹರಿಯುವಂತೆ ಮಾಡಿ ಕೋಲಾರ ನಗರದ ನೀರಿನ ಸಮಸ್ಯೆ ನಿವಾರಣೆಗೆ ಪರಿಹಾರ ರೂಪಿಸಲಾಗುವುದೆಂದು ಹೇಳಿದರು.
ಕ್ವಾರಿಯ ನೀರನ್ನು ಟ್ಯಾಂಕರ್‌ಗಳ ಮೂಲಕ ಕೋಲಾರ ನಗರಕ್ಕೆ ಲಿಫ್ಟ್ ಮಾಡಲು 70 ರಿಂದ 80 ಲಕ್ಷ ರು.ಬೇಕಾಗಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, 30 ಲಕ್ಷ ರು.ವೆಚ್ಚದಲ್ಲಿ ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡಲು ಯೋಜನೆ ಸಿದ್ಧಪಡಿಸಿಕೊಡುವಂತೆ ನೀರು ಸರಬರಾಜು ಮಂಡಳಿಗೆ ತಿಳಿಸಲಾಗಿದ್ದು ಈ ಯೋಜನೆ ಜಾರಿಗೆ ಬಂದರೆ ಕೊಂಚಮಟ್ಟಿಗೆ ಸಮಸ್ಯೆ ನಿವಾರಣೆ ಆಗಬಹುದು, ಮಳೆಗಾಲದಲ್ಲಿ ಕ್ವಾರಿ ತುಂಬಿದಲ್ಲಿ ಯೋಜನೆ ಫಲಪ್ರದವಾಗುವುದರಲ್ಲಿ ಅನುಮಾನವಿಲ್ಲವೆಂದರು.
ಎಲೆಮಲ್ಲಪ್ಪ ಯೋಜನೆಗೆ ಡಿಪಿಆರ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆ.ಆರ್. ಪುರಂ ಸಮೀಪದ ಎಲೆಮಲ್ಲಪ್ಪ ಕೆರೆಯಿಂದ ಪೈಪ್ ಲೈನ್ ಮೂಲಕ ಕೋಲಾರ ತಾಲೂಕು ಸೇರಿದಂತೆ ಇನ್ನಿತರ ಕಡೆಗಳಿಗೆ ನೀರು ಹರಿಸಲು ರೂಪಿಸಿರುವ ಯೋಜನೆಗೆ ಡಿಪಿಆರ್ ಮಾಡಲು ನೀರು ಸರಬರಾಜು ಮಂಡಳಿಗೆ ತಿಳಿಸಲಾಗಿದೆ, ಅದಷ್ಟು ಬೇಗನೆ ಡಿಪಿಆರ್ ಬಂದಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಿನ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ನುಡಿದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋಲಾರ ನಗರ, ಮಾಲೂರು ಮತ್ತು ಬಂಗಾರಪೇಟೆ ಪಟ್ಟಣಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಅಗತ್ಯವಿರುವ ಕಡೆ ಕೊಳವೆಬಾವಿಗಳನ್ನು ಕೊರೆಸಲಾಗುತ್ತದೆ, ಒಂದುವೇಳೆ ನೀರು ಸಿಗದಿದ್ದರೆ ಮಾತ್ರ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುವುದೆಂದರು.
ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ, ಎಸ್‌ಎಫ್‌ಸಿ ಅನುದಾನ, ಬರ ಪರಿಹಾರ ನಿಧಿಯಿಂದ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.