ಅರಳೇರಿ ರಸ್ತೆ ಒತ್ತುವರಿ ಗಡಿ ಗುರುತು
ಮಾಲೂರು: ಜಿಲ್ಲಾ ಭೂಮಾಪನ ಇಲಾಖೆಯವರು ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಪಟ್ಟಣದ ಅರಳೇರಿ ರಸ್ತೆಯ ಒತ್ತುವರಿಗಳನ್ನು ಅಳೆತೆ ಮಾಡಿ ಗಡಿ ಗುರುತು ಮಾಡಿದ್ದು, ರಸ್ತೆ ಅಕ್ಕಪಕ್ಕ ಇರುವ ನೂರಾರು ಮನೆ ಮಾಲೀಕರಿಗೆ ಮನೆ ತೆರವಿನ ಅಂತಕ ಮನ ಮಾಡಿದೆ.
ಸರ್ವೆ ಇಲಾಖೆಯವರು ಮಾಡಿರುವ ಗಡಿ ಗುರುತಿನ ಪ್ರಕಾರ ಅರಳೇರಿ ರಸ್ತೆಯ ಶಿರಡಿ ಸಾಯಿಬಾಬಾ ದೇವಾಲಯ ಸೇರಿದಂತೆ ಕೋಟ್ಯಂತರ ರು. ಮೌಲ್ಯದ ಮನೆಗಳನ್ನು ಕಳೆದುಕೊಳ್ಳುವ ಸಂಭವವಿದೆ. ಪಟ್ಟಣದಲ್ಲಿ ಹೆಚ್ಚು ಭೂಮೌಲ್ಯ ಹೊಂದಿರುವ ಅರಳೇರಿ ರಸ್ತೆಯ ಅಕ್ಕಪಕ್ಕ ಈ ಹಿಂದೆ ಇದ್ದ ರಾಜಕಾಲುವೆ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಲಾಗಿದೆ ಎಂಬ ಆರೋಪ ಮೇಲೆ ಈ ಸರ್ವೆ ಗಡಿ ಗುರುತು ಕಾರ್ಯಕ್ರಮ ನಡೆದಿದೆ.
ಈ ಹಿಂದೆ ಇದೇ ಬಡಾವಣೆಯ ಹುಸೇನ್ ಸಾಬ್ ಎಂಬುವರು ಲೋಕಾಯುಕ್ತರಿಗೆ ಇಲ್ಲಿನ ರಾಜಕಾಲುವೆ-ಗೋಮಾಳಗಳ ಒತ್ತುವರಿ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಲೋಕಾಯುಕ್ತರಿಂದ ಬಂದ ಆದೇಶದಂತೆ 2009ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಇಲ್ಲಿನ ತಹಸೀಲ್ದಾರ್ ರವರಿಗೆ ಸರ್ವೆ ಮಾಡಿ ವರದಿ ನೀಡುವಂತೆ ಆದೇಶ ನೀಡಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ಅಂದಿನ ತಹಸೀಲ್ದಾರ್ ನಾಗರಾಜ್ ರವರು ಪಟ್ಟಣದ ಆದರ್ಶ ನಗರ ಹಾಗೂ ಮಾರುತಿ ಬಡಾವಣೆ ಮಧ್ಯೆ ಹಾದು ಹೋಗುತ್ತಿರುವ ಈ ರಸ್ತೆಯ ಎರಡೂ ಬದಿಯ ಸರ್ವೆ ನಡೆಸಿ ಅನಧಿಕೃತವಾಗಿ ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿರುವುದನ್ನು ಪತ್ತೆ ಹೆಚ್ಚಿ ಸರ್ವೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು.
ಆದರೆ ಮತ ರಾಜಕೀಯ ಕಾರಣವಾಗಿ ಈ ಸರ್ವೆ ವರದಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಉಳಿದಿತ್ತು. ಇವುಗಳ ಮಧ್ಯೆ ಪಟ್ಟಣದ ಇನ್ನೂಬ್ಬ ನಿವೃತ್ತಿ ಅಭಿಯಂತರ ತಮ್ಮ ಮನೆ ನಿರ್ಮಾಣಕ್ಕೆ ಅಡ್ಡಿ ಪಡಿಸಿದ ಪುರಸಭೆ ಕಾರ್ಯ ವೈಖರಿ ಮತ್ತು ಅರಳೇರಿ ರಸ್ತೆಯ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಲೋಕಾಯುಕ್ತರಿಗೆ ದೂರು ನೀಡಿದ್ದರು. 2009 ರಲ್ಲಿ ನೀಡಿದ್ದ ದೂರಿನ ಬಗ್ಗೆ ಜಿಲ್ಲಾಡಳಿತ ಇನ್ನೂ ಕ್ರಮ ಕೈಗೊಳ್ಳದ ಬಗ್ಗೆ ಹುಸೇನ್ ಸಾಬ್ ಮತ್ತೇ ಫೆಬ್ರವರಿಯಲ್ಲಿ ಲೋಕಾಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಇತ್ತಿಚ್ಚೀಗೆ ಲೋಕಾಯುಕ್ತರು ಮತ್ತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರದು ಇದುವರೆಗೂ ಕ್ರಮ ಕೈಗೊಳ್ಳದ ನಿಮ್ಮ ಮೇಲೆ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಮಾ.18ರೊಳಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡಿ ಎಂದು ಸೂಚಿಸಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾ ಭೂಮಾಪನ ಇಲಾಖೆ ಪಟ್ಟಣಕ್ಕೆ ಭೇಟಿ ನೀಡಿ ಇಲ್ಲಿನ ಅರಳೇರಿರಸ್ತೆಯಲ್ಲಿ ತಮ್ಮ ಬಳಿ ಇದ್ದ ಗಡಿ ಸೂಚನಾ ಮಾಹಿತಿ ಪತ್ರದಂತೆ ಗಡಿಗಳನ್ನು ಗುರ್ತಿಸಿ ಹೋಗಿದ್ದಾರೆ.
ಮಾಲೀಕರ ಪರಾದಾಟ: ಪಟ್ಟಣದ ಮಿನಿ ವಿಧಾನ ಸೌಧದ ಪಕ್ಕ ಹಾದು ಹೋಗುವ ಈ ಅರಳೇರಿ ರಸ್ತೆಯಲ್ಲಿ 1989ರಲ್ಲಿ ನೂತನವಾಗಿ ಬಡಾವಣೆಗಳು ನಿರ್ಮಾಣಗೊಂಡಿದ್ದು, ಸರ್ಕಾರಿ ರಾಜು ಕಾಲುವೆ, ಗೋಮಾಳಗಳನ್ನು ಪುರಸಭೆ ಅಧಿಕಾರಿಗಳ ಜತೆ ಶಾಮೀಲಾಗಿ ಬಡಾವಣೆ ನಿರ್ಮಿಸಿದ್ದರು. ಮನೆಗಳು ನಿರ್ಮಾಣಗೊಂಡು ಎರಡು ದಶಕಗಳ ಮೇಲಾಗಿದ್ದು, ಬಿಎಂಆರ್ಡಿಯಿಂದ ಅನುಮತಿ ಪಡೆದಿರುವ ಬಡಾವಣೆಯಲ್ಲಿ ನಿವೇಶನ ಪಡೆದು ಮನೆಗಳನ್ನು ನಿರ್ಮಿಸಲಾಗಿದೆ. ಇದು ಅಕ್ರಮವಲ್ಲ ಎನ್ನುವ ಸ್ಥಳೀಯರು ಈ ಬಗ್ಗೆ ಲೋಕಾಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಮರು ಪರಿಶೀಲಿಸಬೇಕೆಂದು ಹಿರಿಯ ವಕೀಲ ಸೋಮಶೇಖರ್ ಮನವಿ ಮಾಡಿದ್ದಾರೆ.
ಅರಳೇರಿ ರಸ್ತೆಯ ನಿವಾಸಿಗಳ ಸಭೆ
ಮಾಲೂರು: ಜಿಲ್ಲಾ ಭೂಮಾಪನ ಇಲಾಖೆಯವರು ಇಲ್ಲಿನ ಅರಳೇರಿ ರಸ್ತೆಯಲ್ಲಿ ಸರ್ಕಾರಿ ಜಾಗ ಕಬಳಿಕೆಯಾಗಿದೆ ಎಂದು ಸರ್ವೆ ನಡೆಸಿ ಗಡಿ ಗುರುತು ಮಾಡ್ಟಿ ಹಿನ್ನೆಲೆಯಲ್ಲಿ ಮನೆ, ಅಂಗಡಿಗಳನ್ನು ಕಳೆದುಕೊಳ್ಳುತ್ತಿರುವ ಕಟ್ಟಡಗಳ ಮಾಲೀಕರು ಭಾನುವಾರ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಸಭೆ ಸೇರಿದರು.
ಶಾಸಕ ಕೆ.ಎಸ್. ಮಂಜುನಾಥ್ ಗೌಡ ನೇತೃತ್ವ ವಹಿಸಿದ್ದ ಸಭೆಯಲ್ಲಿ ಹಿರಿಯ ವಕೀಲರಾದ ಅಪ್ಪಾಜಿ ಗೌಡ, ಸೋಮಶೇಖರ್, ಬಿ.ವಿ. ಪಾಪಣ್ಣ ಮಾತನಾಡಿ, ಈ ಹಿಂದೆ ಬಿಎಮ್ಆರ್ಡಿಯಿಂದ ಅನುಮತಿ ಪಡೆದಿದ್ದ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಮನೆಗಳನ್ನು ಕಟ್ಟಲಾಗಿದೆ. ಕಳದೆ ಇಪ್ಪತ್ತು ವರ್ಷದಿಂದ ಪುರಸಭೆಗೆ ಕಂದಾಯ ಕಟ್ಟಲಾಗಿದೆ. ಈಗ ಅವೈಜ್ಞಾನಿಕವಾಗಿ ಮಾಡಿರುವ ಸರ್ವೆಯಿಂದ ಅಮಾಯಕರು ತೊಂದರೆ ಅನುಭವಿಸಬೇಕಾಗಿದ್ದು, ವಾಸ್ತವ ಸ್ಥಿತಿ ಬಗ್ಗೆ ಲೋಕಾಯುಕ್ತರಿಗೆ ಮನ ವರಿಕೆ ಮಾಡಿಕೊಡಬೇಕಾಗಿದೆ ಎಂದರು. ಮಾಜಿ ಶಾಸಕ ಎ. ನಾಗರಾಜ್ ಮಾತನಾಡಿ, ಈ ಹಿಂದೆ ಲೀಗಲ್ಆಗಿ ಪಡೆದಿರುವ ನಿವೇಶನಗಳನ್ನು ನಿವೇಶನ ನಿರ್ಮಿಸುವ ಮೊದಲು ಇದ್ದ ಸ್ಥಿತಿಯ ನಕ್ಷೆಯನ್ನು ತೋರಿಸಿ ಈಗ ಅಮಾಯಕ ಜನರನ್ನು ತೊಂದರೆಗೆ ತಳ್ಳುತ್ತಿರುವುದು ಸರಿಯಲ್ಲ. ಈ ರಸ್ತೆಗಳು ನೂರಕ್ಕಿಂತ ಹೆಚ್ಚು ಅಗಲದ ರಸ್ತೆಗಳಾಗಿದ್ದು, ಸಂಚಾರಕ್ಕೆ ಯಾವೂದೇ ತೊಂದರೆಯಾಗುತ್ತಿಲ್ಲ. ಅಲ್ಲದೇ ಬಡಾವಣೆಗೆ ಸರ್ಕಾರವೇ ಅನುಮತಿ ನೀಡಿ ಈಗ ಅಕ್ರಮ ಎನ್ನುತ್ತಿರುವುದು ಸರಿಯಲ್ಲ ಎಂದರು. ಮಾಜಿ ಶಾಸಕರ ಮಾತಿಗೆ ಸಹಮತ ವ್ಯಕ್ತಪಡಿಸಿದ ಹಾಲಿ ಶಾಸಕ ಮಂಜುನಾಥ್ಗೌಡ, ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದು, ಲೋಕಾಯುಕ್ತ ಆದೇಶವಿರುವುದರಿಂದ ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ. 29 ರ ವರೆಗೆ ನಮ್ಮೆಲೆರಿಗೂ ಕಾಲವಕಾಶ ನೀಡಿದ್ದಾರೆ. ಅಷ್ಟರೊಳಗೆ ಸ್ಥಳೀಯ ಪುರಸಭೆ ಅಭಿಯಂತರ ಮೂಲಕ ಈ ರಸ್ತೆಯ ಈಗಿನ ಸ್ಥಿತಿ ಹಾಗೂ ಅವಶ್ಯವಿಲ್ಲದ ಈ ತೆರವು ಕಾರ್ಯಕ್ರಮದಿಂದ ಅಮಾಯಕರಿಗೆ ಅಗುವ ನಷ್ಟದ ಬಗ್ಗೆ ವರಿದಿ ತಯಾರಿಸಿ ಲೋಕಾಯುಕ್ತರಿಗೆ ನೀಡಬೇಕಾಗಿದೆ ಎಂದರು. ಸರ್ವೆಯ ಗಡಿ ಗುರುತಿನಿಂದ ಮನೆ ಕಳೆದುಕೊಳ್ಳುತ್ತಿರುವ ಸುಮಾರು ಇನ್ನೂರು ಜನ ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

