ಬಾಗೇಪಲ್ಲಿ ತಾಲೂಕಲ್ಲಿ ಮಟ್ಕಾ ದಂಧೆ ಅವ್ಯಾಹತ
ಬಾಗೇಪಲ್ಲಿ: ನೆರೆಯ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಾಲೂಕಿನಲ್ಲಿ ಇತ್ತೀಚೆಗೆ ಮಟ್ಕಾ ದಂಧೆ ವ್ಯಾಪಕವಾಗಿ ಹರಡುತ್ತಿದೆ. ಕೃಷಿ ಕೂಲಿ ಕಾರ್ಮಿಕರು ಕೂಲಿ ನಾಲಿ ಮಾಡಿ ಗಳಿಸಿದ ಹಣವನ್ನು ಡಬಲ್ ಮಾಡುವಂತಹ ದುರಾಸೆಯಲ್ಲಿ ಮಟ್ಕಾ ಎಂಬ ಹೆಮ್ಮಾರಿಯ ಬಾಯಿಗೆ ಹಾಕುತ್ತಿದ್ದಾರೆ.
ಸುಮಾರು ವರ್ಷಗಳಿಂದ ಹೇಳುವವರು ಕೇಳುವವರು ಯಾರೂ ಇಲ್ಲವೆಂಬಂತೆ ಮಟ್ಕಾ ದಂಧೆಯು ಇಲ್ಲಿ ನಡೆಯುತ್ತಿದ್ದರೂ ಮಟ್ಕಾ ದಂಧೆಗೂ ನಮಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎನ್ನುವಂತೆ ಪೊಲೀಸರು ವರ್ತಿಸುತ್ತಿರುವುದು ನಾನಾ ರೀತಿಯ ಅನುಮಾನಕ್ಕೆ ಕಾರಣವಾಗಿದೆ.
ರಾಜಕೀಯ ನಾಯಕರ ಹಾಗೂ ಅಧಿಕಾರಿಗಳ ಒತ್ತಡಕ್ಕೆ ಮಣಿದ ಕೆಲವೊಮ್ಮೆ ಮಟ್ಕಾ ದಂಧೆಗಳ ಅಡ್ಡಗಳ ಮೇಲೆ ಕಾಟಾಚಾರಕ್ಕೆ ದಾಳಿ ನಡೆಸಿ ಅವರಿಂದ ಮಟ್ಕಾ ಚೀಟಿ, ಪೆನ್ನು, ಮೊಬೈಲ್ ಹಾಗೂ ಚಿಕ್ಕ ಮೊತ್ತದಲ್ಲಿನ ನಗದು ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿ ಕೈತೊಳೆದುಕೊಳ್ಳುವುದು ಮಾಮೂಲಿಯಾಗಿ ನಡೆಯುತ್ತಿದೆ. ದೊಡ್ಡ ಸಮುದ್ರದಂತೆ ಇರುವ ಮಟ್ಕಾ ದಂಧೆಯಲ್ಲಿ ತಿಮ್ಮಿಂಗಲಗಳನ್ನು ಬಿಟ್ಟು ಬಿಡಲಾಗುತ್ತಿದೆ. ಚಿಕ್ಕ ಚಿಕ್ಕ ಮೀನುಗಳನ್ನು ಹಿಡಿಯುವ ಮೂಲಕ ಹೀರೋಗಳಂತೆ ಮೆರೆಯಲಾಗುತ್ತಿದೆ.
ಪೊಲೀಸರು ಕೆಲವರನ್ನು ಬಂಧಿಸಿದ 2-3 ದಿನಗಳ ಬಳಿಕ ದಂಧೆಯು ಸ್ವಲ್ಪ ಕಡಿಮೆಯಾದಂತೆ ಕಂಡು ಬಂದರೂ ಮತ್ತೆ ಸದ್ದಿಲ್ಲದೆ ಮಟ್ಕಾ ಎಂಬ ಹಾವು ತನ್ನ ಹೆಡೆಯನ್ನು ಮತ್ತೇ ಬಿಚ್ಚುತ್ತದೆ.
ಕೇವಲ ಕೂಗಳತೆಯ ದೂರದಲ್ಲಿರುವ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಈ ತಾಲೂಕು ತೀವ್ರ ಬರಗಾಲಕ್ಕೆ ತುತ್ತಾಗಿರುವ ಹಾಗೂ ಇಡೀ ರಾಜ್ಯದಲ್ಲಿಯೇ ಅತೀ ಹಿಂದುಳಿದ ತಾಲ್ಲೂಕಾಗಿದೆ.
ಇಲ್ಲಿನ ಜನತೆ ಒಪ್ಪತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿಯಿದ್ದು ಆದರೆ ಕೂಲಿ ನಾಲಿ ಮಾಡಿ ಜೀವನ ಸಾಗಿಸುವಂತಹ ಮಂದಿ ಅತೀ ಬೇಗನೆ ಶೀಮಂತರಾಗುವ ಕನಸಿನಲ್ಲಿ ದುಪ್ಪಟ್ಟು ಹಣದ ಆಸೆಗಾಗಿ ಪ್ರತಿ ನಿತ್ಯವೂ ಮಟ್ಕಾ ದಂಧೆಯಲ್ಲಿ ಲಕ್ಷಾಂತರ ರು.ಗಳ ಹಣವನ್ನು ತೊಡಗಿಸುವುದರಿಂದ ಬಹುತೇಕ ಸಂಸಾರಗಳು ಬೀದಿಪಾಲಾಗುತ್ತಿವೆ.
ಮಟ್ಕಾ ಎಂಬ ಜೂಜಾಟಕ್ಕೆ ಬಲಿಯಾಗುವವರನ್ನು ರಕ್ಷಣೆ ಮಾಡಲು ಸರ್ಕಾರ ಈ ದಂಧೆಯನ್ನು ರಾಜ್ಯದಲ್ಲಿ ನಿಷೇಧಿಸಿದ್ದರೂ ಸಹ ಇಲ್ಲಿ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವುದು ತಿಳಿದು ಬರುತ್ತಿದೆ. ಪ್ರಮುಖವಾಗಿ ಈ ಸಂಬಂಧ ದೂರು ನೀಡಿದರೂ ಯಾವುದೇ ಪ್ರಯೋಜವಾಗುತ್ತಿಲ್ಲವೆಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪವಾಗಿದೆ.
ದುಪ್ಪಟ ಹಣದ ಆಸೆಯಿಂದ ಜನಸಾಮಾನ್ಯರಿಂದ ಹಿಡಿದು ಕೂಲಿ ಕಾರ್ಮಿಕರು, ಗಾರೆ ಕೆಲಸಗಾರರು, ಸಣ್ಣಪುಟ್ಟ ವ್ಯಾಪಾರಸ್ಥರು, ಸರ್ಕಾರಿ ನೌಕರರು ಸೇರಿದಂತೆ ಬುದ್ದಿವಂತರೆನಿಸಿಕೊಂಡ ಬಹುತೇಕ ಜನರು ಪ್ರತಿ ನಿತ್ಯವೂ ತಾವು ದುಡಿದ ದುಡಿಮೆಯ ಹಣವನ್ನು ಹಿರಿಯ ಕಿರಿಯರೆಂಬ ತಾರತಮ್ಯವಿಲ್ಲದೆ ಈ ಮಟ್ಕಾ ದಂಧೆಗೆ ಹಣವನ್ನು ಸುರಿಯುತ್ತಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳೂ ಸಹ ಈ ದಂಧೆಯಲ್ಲಿ ಭಾಗವಹಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
10ಸಾವಿರ ರು.ಗಳ ಸಂಬಳವನ್ನು ಪಡೆಯುವ ಸರ್ಕಾರಿ ನೌಕರನು ತನ್ನ ಸಂಬಳದ ದಿನ ಮಾತ್ರ ತನಗೆ ಬರುವ ವೇತನವನ್ನು ಕಂಡು ಆನಂದ ಪಡುತ್ತಾನೆ. ಆದರೆ, ಮರುಕ್ಷಣವೇ ಅವನ ಆನಂದವು ಅವನಿಂದ ದೂರವಾಗುತ್ತದೆ. ಏಕೆಂದರೆ ಅವನು ಆ ಹಣವನ್ನು ಈ ದಂಧೆಯಲ್ಲಿ ತೊಡಗಿಸುತ್ತಾನೆ.ಅವನಿಗೆ ಅಸಲು ಸಹ ಬರುವುದಿಲ್ಲ. ಆಗ ಅವನು ಇತರರಿಂದ ಸಾಲಸೋಲ ಮಾಡಿ ಸಾಲಗಾರನಾಗಿ ತಾನು ಕಷ್ಟಪಡುವುದಲ್ಲದೇ ಇತರರು ಕಷ್ಟಪಡಲು ಕಾರಣವಾಗುತ್ತಾನೆ.
ಕುಟುಂಬಗಳು ಬೀದಿಪಾಲು
ಅದೇ ರೀತಿ ರೈತನಿಂದ ಹಿಡಿದು ವಿವಿಧ ರೀತಿಯ ಕಾರ್ಮಿಕರು ತಾವು ದುಡಿದು ಸಂಪಾದಿಸಿದ ಹಣವನ್ನು ತನ್ನ ಸಂಸಾರದ ಸದಸ್ಯರಿಗೆ ನೀಡುವ ಬದಲಿಗೆ ಈ ದಂಧೆಗೆ ಹಾಕುವುದರಿಂದ ಮನೆಯಲ್ಲಿರುವ ಪಗಡೆ ಸಾಮಾನುಗಳನ್ನು ಮಾರಬೇಕಾಗುತ್ತದೆ. ಸಾಲ ತೀರಿಸಲಾಗದೇ ಹೆಂಡತಿಯನ್ನ ಹೆದರಿಸಿ, ಬೆದರಿಸಿ ಕೊನೆಗೆ ಹೆಂಡತಿಯ ತಾಳಿಯನ್ನ ಕಿತ್ತುಕೊಂಡು ಅದನ್ನು ಮಾರಿ ಮಟ್ಕಾಗೆ ಹಣವನ್ನು ತೊಡಗಿಸಬೇಕಾಗುತ್ತದೆ. ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಅನೇಕ ಕುಟುಂಬಗಳು ನೆಮ್ಮದಿಯನ್ನು ಕಳೆದುಕೊಳ್ಳುತ್ತಿವೆ.
ನೊಂದ ಕುಟುಂಬಗಳ ಮಹಿಳೆಯರು ಈ ಬೃಹದಾಕಾರವಾಗಿ ಬೆಳೆದಿರುವ ಮಟ್ಕಾ ಎಂಬ ಹಾವಿನ ಹೆಡೆಯ ನೆರಳಲ್ಲಿ ಈ ದಂಧೆಯನ್ನು ನಡೆಸುತ್ತಿರುವವರ ಮಟ್ಕಾ ದಂಧೆಕೋರರಿಗೆ ಹಿಡಿ ಶಾಪವನ್ನು ಹಾಕುತ್ತಾರೆ. ಮಟ್ಕಾ ದಂಧೆ ಮಾಡುತ್ತಿರುವವರು ದಿನದಿಂದ ದಿನಕ್ಕೆ ಆರ್ಥಿಕವಾಗಿ ಬೆಳೆಯತ್ತಿದ್ದರೆ, ದುಪ್ಪಟ ಹಣದ ಆಸೆಗಾಗಿ ಮಟ್ಕಾಗೆ ಹಣ ಸುರಿಯುವ ಸಾಮಾನ್ಯ ಜನರು ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮಟ್ಕಾ ಎಂಬ ಹೆಮ್ಮಾರಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫರಾಗಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ದಕ್ಷ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

