ಕೋಲಾರ

ಜಿಪಂ ಸ್ಥಾಯಿ ಸಮಿತಿ ಚುನಾವಣೆ ಮುಂದಕ್ಕೆ

Published On :

ಚಿಕ್ಕಬಳ್ಳಾಪುರ: ಜಿಪಂ ಸ್ಥಾಯಿ ಸಮಿತಿ ಚುನಾವಣೆಯನ್ನು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಿರುವುದು ಜಿಪಂ ಅಧ್ಯಕ್ಷ ಮತ್ತು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಸೋಮವಾರ ಜಿಪಂ ಸಭಾಂಗಣದಲ್ಲಿ ಜಿಪಂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಹಿಂದೆ ಅಧಿಕಾರಿಗಳು ತಿಳಿಸಿದ್ದು, ಜಿಪಂ ಸದಸ್ಯರಿಗೆ ಚುನಾವಣೆಯಲ್ಲಿ ಭಾಗವಹಿಸುವಂತೆ ಕೋರುವ ಪತ್ರಗಳನ್ನು ಕಳುಹಿಸಲಾಗಿತ್ತು. ಇದರಿಂದ ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸಭಾಂಗಣದಲ್ಲಿ ಬಂದು ಕುಳಿತುಕೊಂಡು ಬಹಳ ಹೊತ್ತು ಕಾದರು. ಈ ನಡುವೆ ಚುನಾವಣೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ದಿಢೀರ್ ನಿರ್ಧಾರ ಕೈಗೊಂಡು ಗೊಂದಲ ಮೂಡಿಸಿರುವುದು ಖಂಡನೀಯ ಎಂದು ಜಿಪಂ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ ಅಧಿಕಾರಿಗಳ ಮೇಲೆ ಹರಿಹಾಯ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ನಯವಾಗಿ ನುಣಿಚಿಕೊಳ್ಳುವ ಕೆಲಸ ಮಾಡಿದರು.

ಇಂದು ಮಾಸಿಕ ಕೆಡಿಪಿ ಸಭೆ
ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾ.11 ರಂದು ಬೆಳಿಗ್ಗೆ 11 ಗಂಟೆಗೆ ಮಾಸಿಕ ಕೆಡಿಪಿ ಸಭೆಯನ್ನು ಆಯೋಜಿಸಲಾಗಿದೆ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿ.ಪಂ. ಕಚೇರಿ ಪ್ರಕಟಣೆ ತಿಳಿಸಿದೆ.

ಅಪಘಾತ; ವ್ಯಕ್ತಿ ಸಾವು
ಚಿಂತಾಮಣಿ: ಚಾಲಕನ ಅತಿವೇಗ ಮತ್ತು ಅಜಾಗರುಕತೆಯ ಪರಿಣಾಮ, ಮೊಬೈಲ್ ಸಂಭಾಷಣೆಯಲ್ಲಿ ತೊಡಗಿದ್ದ ಖಾಸಗಿ ಬಸ್ ನಿರ್ವಾಹಕನಿಗೆ ನಿಂತಿದ್ದ ಟೆಂಪೋ ವಾಹ ತಲೆಗೆ ಹೊಡೆದ ರಭಸಕ್ಕೆ ರುಂಡ ಮತ್ತು ಮುಂಡ ಬೇರ್ಪಡೆಯಾಗಿರುವ ದಾರುಣ ಘಟನೆ ನಗರದ ಚೇಳೂರು ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಪಟ್ಟಣದ ಇಡ್ಲಿಪಾಳ್ಯದ ನಿವಾಸಿ ರಾಜೇಶ್(28) ಮೃತ ವ್ಯಕ್ತಿ.  ರಾಜೇಶ್ ಬಸ್‌ನ ಹಿಂಬದಿ ಬಾಗಿಲಿನಲ್ಲಿ  ಮೊಬೈಲ್ ಸಂಭಾಷಣೆಯಲ್ಲಿ ತೊಡಗಿದ್ದ, ತಲೆ ಹೊರ ಇಕ್ಕಿದ ಪರಿಣಾಮ, ರಸ್ತೆ ಬದಿಯಲ್ಲಿ ನಿಂತಿದ್ದ 407 ಟೆಂಪೋಗೆ ತಲೆ ಹೊಡೆದ ರಭಸಕ್ಕೆ ರುಂಡ ಮತ್ತು ಮುಂಡ ಬೇರ್ಪಡೆಯಾಗಿ, ರಕ್ತ ಕಾರಂಜಿಯಂತೆ ರಸ್ತೆಯಲ್ಲಿ ಹರಿದ ಘಟನೆ ದಾರುಣವಾಗಿತ್ತು. ನಗರ ಠಾಣೆ ವೃತ್ತ ನಿರೀಕ್ಷಕ ನಂಜಪ್ಪ ಸ್ಥಳ ಪರಿಶೀಲಿಸಿ, ನಂತರ ರುಂಡ ಮತ್ತು ಮುಂಡ ದೇಹವನ್ನು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಕೇಸು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ಕಾರ್ಮಿಕ ಸಾವು
ಚಿಂತಾಮಣಿ: ಮರಳು ದಿಣ್ಣೆ ಕಾರ್ಮಿಕನ ಮೇಲೆ ಬಿದ್ದ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜಂಗಾಲಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ತಾಲೂಕಿನ ಚಿಲಕಲನೇರ್ಪು ಹೋಬಳಿ ಜಂಗಾಲಹಳ್ಳಿ ಗ್ರಾಮದ ಜಮೀನು ಒಂದರಲ್ಲಿ ಮರಳು ಅಗೆಯುತ್ತಿರುವಾಗ ಮರಳು ದಿಣ್ಣೆ ಏಕಾಏಕಿ ಮೈಮೇಲೆ ಬಿದ್ದ ಪರಿಣಾಮ, ಶಿಡ್ಲಘಟ್ಟ ತಾಲೂಕಿನ ಇದ್ಲೂಡು ಗ್ರಾಮದ ಹರೀಶ್ (22) ಕೂಲಿ ಕಾರ್ಮಿಕ ಸಾವನ್ನಪ್ಪಿದ ದುರ್ದೈವಿ ಎಂದು ಹೇಳಲಾಗಿದ್ದು,  ಘಟನೆ ಬಗ್ಗೆ ಹೆಚ್ಚಿನ ವಿವರ ತಿಳಿದು ಬಂದಿಲ್ಲ.

ಜೂಜು: ಐವರ ಸೆರೆ
ಚಿಂತಾಮಣಿ: ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ  ದಾಳಿ ನಡೆಸಿ 5 ಜನರನ್ನು ಬಂಧಿಸಿ, ಸಾವಿರಾರು ರು. ವಶಪಡಿಸಿಕೊಂಡಿರುವ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದೇಪಲ್ಲಿ ಕೆರೆ ಅಂಗಳದಲ್ಲಿ ಸೋಮವಾರ ಸಂಜೆ ನಡೆದಿದೆ. ತಾಲೂಕಿನ ಸಿದ್ದೇಪಲ್ಲಿ ಕೆರೆ ಹತ್ತಿರದ ಗೋಶಾಲೆ ಹಿಂಭಾಗದಲ್ಲಿ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಕೆಂಚಾರ್ಲಹಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಪರ ಸುಧಾಕರ್ ಪಾದಯಾತ್ರೆ
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲು ಶಾಸಕ ಡಾ. ಕೆ.ಸುಧಾಕರ್ ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಪೆರೇಸಂದ್ರ ಶ್ರೀನಿವಾಸ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಯುಪಿಎ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದು ಉತ್ತಮ ಆಡಳಿತ ನೀಡಿದೆ. ಇದನ್ನು ಜನರಿಗೆ ತಿಳಿಸುವುದರ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಗೆ ಚುನಾವಣೆಯಲ್ಲಿ ಮತಚಲಾಯಿಸುವಂತೆ ಕೋರಲಾಗುವುದು ಎಂದರು. ಮಾ.11 ರಂದು ಬೆಳಿಗ್ಗೆ 8 ಗಂಟೆಗೆ ತಾಲೂಕಿನ ಐತಿಹಾಸಿಕ ಸ್ಥಳ ನಂದಿಯ ಭೋಗನಂದೀಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆಯೊಂದಿಗೆ ಪ್ರತಚಾರ ಪ್ರಾರಂಭವಾಗಲಿದೆ. ನಂತರ ಮಾ.12, 13 ಮತ್ತು 14 ರಂದು ನಾಲ್ಕು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ ಎಂದರು.

ಚಿಕ್ಕಬಳ್ಳಾಪುರಕ್ಕೆ ಕೇಜ್ರಿವಾಲ್ ಇಂದು
ಚಿಕ್ಕಬಳ್ಳಾಪುರ: ದೆಹಲಿ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಮಾ.16 ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ. ಮಾ.16 ರಂದು ಯಲಹಂಕ, ದೊಡ್ಡಬಳ್ಳಾಪುರ, ಗೌರಿಬಿದನೂರು, ಚಿಕ್ಕಬಳ್ಳಾಪುರಗಳಲ್ಲಿ ಆಯೋಜಿಸಿರುವ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಆಮ್ ಆದ್ಮಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪೃಥ್ವಿರೆಡ್ಡಿ,   ಪಕ್ಷದ ಅಭ್ಯರ್ಥಿ ಕೆ.ಆರ್.ಅರ್ಕೇಶ್ ಮತ್ತಿತರರು ಭಾಗವಹಿಸಲಿದ್ದಾರೆ,

ಶುಲ್ಕ ಏರಿಕೆ  ಖಂಡಿಸಿ ಎಸ್‌ಎಫ್‌ಐ ಧರಣಿ
ಶಿಡ್ಲಘಟ್ಟ: ಪದವಿ ಪರೀಕ್ಷೆಗಳ ಶುಲ್ಕ ಏರಿಕೆ ಮಾಡಿ ಸರ್ಕಾರ ವಿದ್ಯಾರ್ಥಿಗಳ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು  ಆರೋಪಿಸಿ ಎಸ್‌ಎಫ್‌ಐ ಸಂಘಟನೆ ಕಾರ್ಯಕರ್ತರು, ಪದವಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಶುಲ್ಕ ಏರಿಕೆ ವಿರುದ್ದ ಘೋಷಣೆ ಕೂಗಿದರು. ಸರ್ಕಾರದ ಈ ನಿರ್ಧಾರದಿಂದ ಅನೇಕ ಬಡ ವಿದ್ಯಾ ರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಆಗ್ರಹಿಸಿದ ಪ್ರತಿಭಟನಾಕಾರರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಕುಂದಲಗುಕರ್ ಮುನೀಂದ್ರ, ಎಸ್‌ಎಫ್‌ಐ. ಜಿಲ್ಲಾಧ್ಯಕ್ಷ ಜಂಗಾಲಪಲ್ಲಿ ರಾಜಶೇಖರ್, ರವಿ.ಜಿ.ಎನ್, ಜಿಲ್ಲಾ ಉಪಾಧ್ಯಕ್ಷರಾದ ಚಿಂತಾಮಣಿ ಬಾಬುರೆಡ್ಡಿ, ಗುಡಿಬಂಡೆ ಈಶ್ವರಪ್ಪ, ತಾಲೂಕು ಅಧ್ಯಕ್ಷ ರವಿ, ವೆಂಕಟೇಶ್, ಭಾರ್ಗವಿ, ವೀಣಾ, ಜ್ಯೋತಿ, ವೇಣು, ಮಂಜುನಾಥ್, ಶ್ವೇತಾ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಬೈಕ್- ಮಿನಿ ಬಸ್ ಡಿಕ್ಕಿ: ದಂಪತಿ ಸಾವು
ಪಾವಗಡ: ಬೈಕ್ ಹಾಗೂ ಮಿನಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ತಾಲೂಕಿನ ದಂಪತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಕೊರಟಗೆರೆ ತಾ.ಉರ್ಡುಗೆರೆ ಸಮೀಪ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರು ಪಾವಗಡ ತಾಲೂಕಿನ ದವಡಬೆಟ್ಟ ಗ್ರಾಮದ ವಾಸಿಗಳಾದ ಗ್ರಾಪಂ ಮಾಜಿ ಅಧ್ಯಕ್ಷ ಪಳ್ಳಳಪ್ಪ (52) ಹಾಗೂ ಆತನ ಪತ್ನಿ ಸಣ್ಣಮ್ಮ (45) ಎಂಬುವರು. ತಾಲೂಕಿನ ದವಡಬೆಟ್ಟ ಗ್ರಾಮದ ಪಳಳ್ಳಪ್ಪ ಎಂಬುವರು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಕಳೆದ 2 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕುಟುಂಬ ಸಮೇತ ವಾಸವಾಗಿದ್ದರೆನ್ನಲಾಗಿದ್ದು ತಮ್ಮ ಗ್ರಾಮಕ್ಕೆ ಬರುವ ಸಲುವಾಗಿ ಮಧ್ಯಾಹ್ನ ಬೆಂಗಳೂರಿನಿಂದ ಪಲ್ಸರ್ ಬೈಕಿನಲ್ಲಿ ಪತ್ನಿ ಸಮೇತ ಹೊರಾಟಿದ್ದಾರೆ. ಬೆಂಗಳೂರಿನ ಹೈವೆ ರಸ್ತೆಯಲ್ಲಿ ಪಾವಗಡ ಮಾರ್ಗವಾಗಿ ಬರುತ್ತಿರುವಾಗ ಬೆಂಗಳೂರಿನ ಕಡೆ ತೆರಳುತ್ತಿದ್ದ ಮಿನಿಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಳ್ಳಳಪ್ಪ ಹಾಗೂ ಪತ್ನಿ ಸಣ್ಣಮ್ಮ  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.