ಕೋಲಾರ

ಜೆಡಿಎಸ್ ತೆಕ್ಕೆಗೆ ಕೋಲಾರ ನಗರಸಭೆ

Published On :

ಕ.ಪ್ರ.ವಾರ್ತೆ  ಕೋಲಾರ ಮಾ. 10
ಜಾತ್ಯತೀತ ಜನತಾದಳ ಕೋಲಾರ ನಗರಸಭೆಯನ್ನು ತನ್ನ ಮಡಲಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
 ಸೋಮವಾರ ನಡೆದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಹಿರಿಯ ಹಾಗೂ ನಿಷ್ಠಾವಂತ ಕಾರ್ಯಕರ್ತ ಬಿ.ಎಂ. ಮುಬಾರಕ್ ಹಾಗೂ ಉಪಾಧ್ಯಕ್ಷರಾಗಿ ಸಾಕಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. 3ನೇ ವಾರ್ಡಿನ ಮುಬಾರಕ್, 11ನೇ ವಾರ್ಡಿನ ಸುಕುಮಾರ್,12ನೇ ವಾರ್ಡಿನ ರವೀಂದ್ರ ಹಾಗೂ 14ನೇ ವಾರ್ಡಿನ ಮುರಳಿಗೌಡ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು.
ಜೆಡಿಎಸ್‌ನಲ್ಲಿ ಬಂಡಾಯ ತಪ್ಪಿಸಲು ಮಾಜಿ ಸಚಿವ ಶ್ರೀನಿವಾಸಗೌಡರು ಪಕ್ಷದ ಎಲ್ಲಾ 16 ಮಂದಿ ಸದಸ್ಯರನ್ನು ತೀರ್ಥಯಾತ್ರೆಗೆ ಕಳುಹಿಸಿದ್ದರು. ಪಕ್ಷದ ಮುಖಂಡರು ತಮ್ಮ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರಾಗಲು ಅವಕಾಶ ನೀಡುವರೆಂಬ ನಂಬಿಕೆಯಿಂದ ಮುಬಾರಕ್ ತಮ್ಮ ಪಕ್ಷದವರನ್ನು ಮಾತ್ರವಲ್ಲದೆ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಸದಸ್ಯರ ಬೆಂಬಲ ಕೋರಿದ್ದರು.
ಹಿರಿಯ ಸದಸ್ಯರಾದ ಮುರಳಿಗೌಡ ಹಾಗೂ ರವೀಂದ್ರ ಅವರು ಸಹ ಪ್ರಯತ್ನಿಸಿದ್ದರಾದರೂ ಮುಬಾರಕ್ ಕಡೆ ಜೆಡಿಎಸ್‌ನ 15, ಸಿಪಿಐಎಂ ಹಾಗೂ ಬಿಜೆಪಿಯ ತಲಾ ಒಬ್ಬರು ಹಾಗೂ ನಾಲ್ವರು ಪಕ್ಷೇತರರು ಸೇರಿದಂತೆ 21 ಮಂದಿ ಸದಸ್ಯರು ಬೆಂಬಲಕ್ಕೆ ನಿಂತಿರುವ ವಿಷಯ ತಿಳಿದು ಕಡೆ ಘಳಿಗೆಯಲ್ಲಿ ಮುಬಾರಕ್ ಅವರನ್ನು ಬೆಂಬಲಿಸಲು ತೀರ್ಮಾನಿಸಿದರು.
50 ತಿಂಗಳ ಅಧಿಕಾರದ ಅವಧಿಯಲ್ಲಿ 30 ತಿಂಗಳು ಮುಬಾಕರ್ ನಂತರ ತಲಾ 10 ತಿಂಗಳು ರವೀಂದ್ರ ಹಾಗೂ ಸುಕುಮಾರ್ ಅವರಿಗೆ ಅವಕಾಶ ಮಾಡಿಕೊಡುವುದಕ್ಕೆ ಜೆಡಿಎಸ್ ಮುಖಂಡರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಸುಕುಮಾರ್ ಸಹ ಬಂಡಾಯಕ್ಕೆ ಅವಕಾಶ ಮಾಡಿಕೊಡದೆ ಮುಬಾರಕ್ ಅವರನ್ನು ಬೆಂಬಲಿಸಿ ಜೆಡಿಎಸ್‌ನ ನಗರಸಭೆಯ ಆಡಳಿತ ಹಿಡಿಯಲು ಸಹಕಾರ ನೀಡಿದರು.
ಮುರಳಿಗೌಡ ನಾಮಪತ್ರ ವಾಪಸ್: ಸೋಮವಾರ ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಜೆಡಿಎಸ್‌ನಿಂದ ಮುಬಾರಕ್, ಮುರಳಿಗೌಡ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಮುಖಂಡರ ಸೂಚನೆಯಂತೆ ಮುರಳಿಗೌಡ ನಾಮಪತ್ರ ಹಿಂದಕ್ಕೆ ಪಡೆದರು.
ಕಾಂಗ್ರೆಸ್ಸಿನಿಂದ ಅಧ್ಯಕ್ಷ ಸ್ಥಾನಕ್ಕೆ 6ನೇ ವಾರ್ಡಿನ ರಮೇಶ್,7ನೇ ವಾರ್ಡಿನ ರೌತ್ ಶಂಕರಪ್ಪ ನಾಮಪತ್ರ ಸಲ್ಲಿಸಿ ನಂತರ ಹಿಂದಕ್ಕೆ ಪಡೆದರು. ಕಾಂಗ್ರೆಸ್ಸಿನಿಂದ ಹಿಂದುಳಿದ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ 23ನೇ ವಾರ್ಡಿನ ಸುಜಾತ, ಜೆಡಿಎಸ್‌ನಿಂದ 27ನೇ ವಾರ್ಡಿನ ಸಾಕಮ್ಮ ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್ ಕಡೆ ಬಹುಮತವಿದ್ದ ಕಾರಣ ಕಾಂಗ್ರೆಸ್ಸಿನಿಂದ ಉಮೇದುವಾರಿಕೆ ಸಲ್ಲಿಸಿದ್ದವರು ಕಣದಿಂದ ಹಿಂದೆ ಸರಿದಿದ್ದರಿಂದ ಮುಬಾರಕ್ ಹಾಗೂ ಸಾಕಮ್ಮ ಕ್ರಮವಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಮಂಜುನಾಥ್ ಘೋಷಿಸಿದರು.
ನಾಮಪತ್ರ ಹಿಂದಕ್ಕೆ ಪಡೆದು ಕಾಂಗ್ರೆಸ್ ಸದಸ್ಯರು ಹಾಗೂ ಬೆಂಬಲಿಗರು ನಗರಸಭೆಯಿಂದ ನಿರ್ಗಮಿಸಿದರು, ಜೆಡಿಎಸ್‌ನ 17ನೇ ವಾರ್ಡಿನ ಸದಸ್ಯ ಅಪ್ರೋಜ್ ಪಾಷ ಗೈರು ಹಾಜರಾಗಿದ್ದರು. ನಗರಸಭೆ ಆಯುಕ್ತ ಜಗದೀಶ್ ಚುನಾವಣೆ ಪ್ರಕ್ರಿಯೆಯಲ್ಲಿ ಉಪವಿಭಾಗಾಧಿಕಾರಿಗೆ ಸಹಾಯ ಮಾಡಿದರು.ಮುಂಜಾಗ್ರತಾ ಕ್ರಮವಾಗಿ ನಗರಸಭೆಯ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ಮುಬಾರಕ್ ಮುಂದಿರುವ ಸಮಸ್ಯೆ, ಸವಾಲುಗಳು...
  ಪಾ.ಶ್ರೀ.ಅನಂತರಾಮ್
ಕೋಲಾರ: ಮೊಟ್ಟ ಮೊದಲ ಬಾರಿಗೆ ನಗರಸಭೆಗೆ ಪ್ರವೇಶ ಮಾಡಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಜೆಡಿಎಸ್ ಯುವ ಮುಖಂಡ ಬಿ.ಎಂ. ಮುಬಾರಕ್ ಹಾದಿ ಮುಳ್ಳಿನ ಹಾಸಿಗೆಗಿಂತ ಭಿನ್ನವಾಗಿಯೇನೂ ಇಲ್ಲ.
ಜಿಲ್ಲಾ ಕೇಂದ್ರ ಸ್ಥಾನವಾಗಿರುವ ಕೋಲಾರ ನಗರ ಜನಪ್ರತಿನಿಧಿಗಳಲ್ಲಿನ ಇಚ್ಚಾಶಕ್ತಿಯ ಕೊರತೆ, ಅಧಿಕಾರಿಗಳ ಅಸಡ್ಡೆ, ಜನತೆಯಲ್ಲಿನ ಅಸಹಾಯಕತೆಯಿಂದ ಅಭಿವೃದ್ಧಿಗೆ ಬದಲು ಅಡ್ಡಾದಿಡ್ಡಿಯಾಗಿ ಬೆಳೆದಿದೆ. ಹೆಸರಿಗೆ ನಗರವಾದರೂ ದೊಡ್ಡಹಳ್ಳಿಯಂತೆ ಕಾಣುತ್ತಿದೆ.
ನಗರದ ಜನಸಂಖ್ಯೆ ಈಗ 1.40 ಸಾವಿರ ದಾಟಿದೆ. 35 ವಾರ್ಡುಗಳನ್ನು ಒಳಗೊಂಡಿರುವ ನಗರಸಭೆಯಲ್ಲಿ ಜನತೆಗೆ ಅಗತ್ಯ ಸೇವೆ ಕಲ್ಪಿಸಲು ಅಗತ್ಯವಿರುವ ಸಿಬ್ಬಂದಿ ಇಲ್ಲ.
ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದಕ್ಕೆ ಅಗತ್ಯ ಆರ್ಥಿಕ ಸಂಪನ್ಮೂಲಗಳು ಕ್ರೋಢಿಕರಿಸಲು ಸಾಧ್ಯವಾಗುತ್ತಿಲ್ಲ.
ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಜನರಿಗೆ ಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ. ಟ್ಯಾಂಕರ್ ಮೂಲಕ ಸರಬರಾಜು ಆಗುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ, ಅಕ್ರಮ ನೀರು ಸಂಪರ್ಕ, ನಗರಸಭೆಯ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವ ಜನರ ವಿರುದ್ಧ ಈ ಹಿಂದೆ ಆಡಳಿತ ನಡೆಸಿರುವವರು ಹಾಗೂ ಅಧಿಕಾರಿ ವರ್ಗ ಕ್ರಮ ಕೈಗೊಳ್ಳದ ಪರಿಣಾಮ ನಗರಸಭೆಗೆ ಕೋಟ್ಯಾಂತರ ರು.ನಷ್ಟವಾಗಿದೆ.
ಟ್ಯಾಂಕರ್ ಮಾಫಿಯಾ ನಿಯಂತ್ರಣಕ್ಕೆ ಸಿಸಿ ಟಿವಿಗಳನ್ನು ಅಳವಡಿಸಿದರೂ ಕದೀಮರು ಚಾಪೆ ಕೆಳಗೆ ತೂರುವುದು ಬಿಟ್ಟಿಲ್ಲ, ಸಾವಿರಾರು ರು.ಖರ್ಚು ಮಾಡಿ ಹಾಕಿದ ಸಿಸಿ ಟಿವಿಗಳನ್ನು ನಾಶ ಮಾಡಿದ್ದಾರೆ, ಬೀದಿ ದೀಪಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ, 2 ಲೋಡ್ ನೀರು ಸಾಗಾಣೆ ಮಾಡಿ 5 ಲೋಡ್‌ಗೆ ಬಿಲ್ ಮಾಡಿ ಸಾರ್ವಜನಿಕರ ತೆರಿಗೆ ಹಣವನ್ನು ಲಪಟಾಯಿಸಿದ್ದಾರೆ.
ನಗರ ಪ್ರದೇಶದಲ್ಲಿ ಆಸ್ತಿಗಳ ಪುನರ್ ಸಮೀಕ್ಷೆ ಅಗತ್ಯವಿದೆ. ಖಾತೆದಾರರ ಮಾಹಿತಿ ಗಣಕೀಕರಣವಾಗಬೇಕಾಗಿದೆ, ಇನ್ನು ಕೆಲವು ಬಡಾವಣೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಇವೆ, ಮೂಲ ಸೌಕರ್ಯಗಳು ಮಾತ್ರ ನಗರಸಭೆಯಿಂದ ಕಲ್ಪಿಸಲಾಗುತ್ತಿದೆ. ನೂತನ ಅಧ್ಯಕ್ಷ ಮುಬಾರಕ್ ಅವರಿಗೆ ಕೋಲಾರವನ್ನು ತಮ್ಮ ಅವಧಿಯಲ್ಲಿ ಮಾದರಿ ನಗರವನ್ನಾಗಿ ಮಾಡಬೇಕೆಂಬ ಇಚ್ಚಾಶಕ್ತಿ ಇದ್ದಲ್ಲಿ, ಸರ್ಕಾರದ ಸಹಾಯದಿಂದ ಕೂಡಲೇ ನಗರಸಭೆಯ ಆಸ್ತಿಯ ಪತ್ತೆ ಹಾಗೂ ರಕ್ಷಣೆಗಾಗಿ ಸಮೀಕ್ಷೆ ಕಾರ್ಯ ನಡೆಸಲು ಮುಂದಾದರೆ ದೊಡ್ಡ ಸಾಧನೆ ಮಾಡಿದಂತಾಗುತ್ತದೆ.
ನಗರಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳ ವಿಲೇವಾರಿ, ದಾಖಲೆಗಳ ಸಂರಕ್ಷಣೆ, ಕಾಲ ಮಿತಿಯಲ್ಲಿ ಜನತೆಯ ಅಹವಾಲುಗಳ ಪರಿಷ್ಕರಣೆ, ದೂರು-ದುಮ್ಮನ ನಿವಾರಣೆಗಾಗಿ ಪ್ರತಿ ತಿಂಗಳು ಇಲ್ಲವೇ ಎರಡು ತಿಂಗಳಿಗೊಮ್ಮೆ ವಿಶೇಷ ಅದಾಲತ್, ಜನ ಸಂಪರ್ಕ ಸಭೆ, ಹಿರಿಯ ಪ್ರಬುದ್ಧ ನಾಗರೀಕರ ಸಮಿತಿ ರಚನೆ ಮಾಡಿ ನಗರದ ಅಭಿವೃದ್ಧಿಗೆ ವಿಶೇಷ ಗಮನ ನೀಡುವ ಕೆಲಸ ಆಗಬೇಕಾಗಿದೆ.
ಸರ್ಕಾರದಿಂದ ಅನುದಾನ ಸಿಗುತ್ತಿದೆ ಎಂದು ಬೇಕಾಬಿಟ್ಟಿಯಾಗಿ ಆಡಳಿತ ನಡೆಸುವುರಿಂದ ನ್ಯಾಯಾಲಯಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ತೆರಿಗೆ ವಂಚನೆ ಮಾಡುವವರಿಗೆ ಬುದ್ಧಿ ಕಲಿಸಲು ಧೈರ್ಯ ತೋರುವುದು ಹಾಗೂ ಇದಕ್ಕೆ ಎಲ್ಲಾ ಸದಸ್ಯರ ಮನಸ್ಥಿತಿಯನ್ನು ಕ್ರೋಢಿಕರಿಸಿ ಕಾರ್ಯಕ್ರಮ ರೂಪಿಸುವುದು ನೂತನ ಅಧ್ಯಕ್ಷರ ಮುಂದಿರುವ ಪ್ರಮುಖ ಸವಾಲು ಆಗಿದೆ.
ನೂತನ ಅಧ್ಯಕ್ಷ ಮುಬಾರಕ್ ಉತ್ಸಾಹಿ ಯುವಕರಾಗಿರುವುದಲ್ಲದೆ, ಸಾಮಾಜಿಕ ಕಾಳಜಿಯುಳ್ಳರಾಗಿರುವುದರಿಂದ ಕನಿಷ್ಟ ಒಂದೆರಡು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಜನಾನುರಾಗಿ ಮುಖಂಡರಾಗಬಹುದಾಗಿದೆ.
ಅಂತರ್ಜಲ ಸಮಸ್ಯೆಯಿರುವ ಕೋಲಾರ ನಗರಕ್ಕೆ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ಚರಂಡಿ, ಬೀದಿ ದೀಪ, ನಗರಸಭೆ ಆಸ್ತಿಯನ್ನು ಕಬಳಿಕೆ ಮಾಡಿರುವವರ ವಿರುದ್ಧ ಕಾನೂನು ಕ್ರಮ, ಪಾರದರ್ಶಕ ಆಡಳಿತ, ಶೇ.22.75 ಅನುದಾನ ದಲಿತ ಸಮುದಾಯದ ಆರ್ಹರಿಗೆ ತಲುಪಿಸುವುದಕ್ಕೆ ಮುಬಾರಕೆ ಆದ್ಯತೆ ನೀಡಿದಲ್ಲಿ ಕೋಲಾರವನ್ನು ರಾಜ್ಯದಲ್ಲೇ ನಂ.1ನಗರವನ್ನಾಗಿ ಮಾಡುವುದು ಕಷ್ಟವೇನಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.