ಗ್ರಾಮ ಮಟ್ಟದಿಂದ ಭ್ರಷ್ಟಾಚಾರ ತಡೆ ಅಗತ್ಯ
ಕ.ಪ್ರ.ವಾರ್ತೆ ಕೋಲಾರ ಮಾ.12
ಭ್ರಷ್ಟಾಚಾರ ತಡೆಗಟ್ಟಲು ವಿದ್ಯಾರ್ಥಿಗಳು, ಯುವಕರು ಮನಸ್ಸು ಮಾಡಬೇಕು. ಸಮಾಜದಲ್ಲಿ ಆಗುತ್ತಿರುವ ಅನ್ಯಾಯ, ಅಕ್ರಮಗಳ ಬಗ್ಗೆ ತಾವು ಜಾಗೃತರಾಗಿ ಬೇರೆಯವನ್ನೂ ಜಾಗೃತಗೊಳಿಸಿದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಾಗುತ್ತದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ತಿಳಿಸಿದರು.
ಅವರು ನಗರದಲ್ಲಿ ಗುರುವಾರ ಅರಿವು ಸಂಪರ್ಕ್ ಪತ್ರಿಕೆಯಿಂದ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಸಮಾಜ ಪರಿವರ್ತನೆ ಕುರಿತ ಚರ್ಚಾಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶಕ್ಕೆ ಸ್ವಾತಂತ್ರ್ಯ ಸಿಗಲು ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಪ್ರಮುಖ ಪಾತ್ರ ವಹಿಸಿದ್ದರು. ಬ್ರಿಟಿಷರನ್ನು ದೇಶದಿಂದ ಓಡಿಸಲು ಸಂಘಟಿತರಾಗಿ ಹೋರಾಡಿದ್ದರು. ಆದರೆ, ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ನಿರುತ್ಸಾಹ, ನಿರಾಸಕ್ತಿ ಕಾಣುತ್ತಿರುವುದು ಬೇಸರ ಉಂಟು ಮಾಡಿದೆ, ಪರಿಸ್ಥಿತಿ ಹೀಗೇಯೇ ಮುಂದುವರೆದರೆ ದೇಶಕ್ಕೆ ಉಳಿಗಾಲವಿಲ್ಲವೆಂದರು. ಕುಂಭ ಕರ್ಣನ ನಿದ್ರೆಯಂತೆಯಂತಾಗಿರುವ ಸಮಾಜವನ್ನು ಎಚ್ಚರಿಸುವ ಕೆಲಸವಾಗಬೇಕಾಗಿದೆ. ಆದರೆ, ಪ್ರಸ್ತುತ ವ್ಯವಸ್ಥೆಯನ್ನು ಸರಿಪಡಿಸದೆ ಹೊಣೆಗೇಡಿಗಳಾಗಿದ್ದೇವೆ, ಇನ್ನಾದರೂ ನಾವು ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು ಗಮನ ನೀಡಿದ್ದರೆ ದೇಶ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲವೆಂದರು.
ಗ್ರಾಮೀಣ ಮಟ್ಟದಿಂದ ಸಮಾಜ ಪರಿವರ್ತನೆ ಆಗದಿದ್ದರೆ ಭ್ರಷ್ಟಾಚಾರ ನಿಯಂತ್ರಣ ಅಸಾಧ್ಯ, ಯುವಕರು, ಜನಪರವಾಗಿ ಚಿಂತನೆ ಮಾಡುವವರು ಹಳ್ಳಿಗಳಿಗೆ ಹೋಗಿ ಜನತೆಯಲ್ಲಿ ಜಾಗೃತಿ ಮೂಡಿಸಬೇಕು, ಗ್ರಾಮ ಸಭೆಗಳು ಕಡ್ಡಾಯವಾಗಿ ನಡೆಯುವಂತೆ ಅಲ್ಲಿನ ಜನತೆಗೆ ಅರಿವು ಮೂಡಿಸುವ ಮೂಲಕ ದೇಶದ ಸಂಪತ್ತು ಪ್ರತಿಯೊಬ್ಬರಿಗೆ ಸಿಗುವಂತೆ ಮಾಡದಿದ್ದರೆ, ಬಡವರು ಮತ್ತು ಶ್ರೀಮಂತರ ನಡುವೆ ತಾರತಮ್ಯ ಹಾಗೆಯೇ ಮುಂದುವರೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಬದಲಾವಣೆ ತರಲು ಆಮ್ ಆದ್ಮಿ ಪಕ್ಷ ಕೊಂಚ ಮಟ್ಟಿಗೆ ಸಫಲವಾಗಿದೆ. ಅದೇ ರೀತಿ ಅಣ್ಣಾ ಹಜಾರೆಯವರು ಸಹ ತಮ್ಮ ಹೋರಾಟಗಳ ಮೂಲಕ ಪ್ರಯತ್ನ ಮುಂದುವರೆಸಿದ್ದಾರೆಂದ ದೊರೆಸ್ವಾಮಿಯವರು, ಜನಪ್ರತಿನಿಧಿಗಳ ಕರ್ತವ್ಯಗಳನ್ನು ಪ್ರಶ್ನಿಸುವ ಅಧಿಕಾರ ನಮಗಿದ್ದರೂ ಅಂಕುಶ ಬಳಕೆ ಮಾಡುತ್ತಿಲ್ಲವಾದ್ದರಿಂದ ವ್ಯವಸ್ಥೆಯಲ್ಲಿ ಪರಿವರ್ತನೆ ತರಲಾಗುತ್ತಿಲ್ಲವೆಂದು ವಿಷಾಧಿಸಿದರು. ಜನತೆ ಮನಸ್ಸು ಮಾಡದಿದ್ದರೆ ಸಮಾಜ ಪರಿವರ್ತನೆ ಅಸಾಧ್ಯ, ಸಮಾಜ ಪರಿವರ್ತನೆ ಆಗದಿದ್ದರೆ ಭ್ರಷ್ಟಾಚಾರ, ದುರಾಡಳಿತ ನಿರ್ಮೂಲನೆ ಆಗಲಾರದು ಎಂದು ಅಭಿಪ್ರಾಯಟ್ಟರು.
ಕಾರ್ಯಕ್ರಮದ ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ಅರಿವು ಸಂಪರ್ಕ್ ಪತ್ರಿಕೆ ಸಂಪಾದಕ ಪಿ.ಎಸ್. ರೆಡ್ಡಿ ವ್ಯವಸ್ಥೆಯಲ್ಲಿ ಎಲ್ಲರೂ ಭ್ರಷ್ಟರೆ ಹಾಗಾಗಿ ಎಲ್ಲಾ ವಲಯಗಳಲ್ಲಿ ಭಷ್ಟಾಚಾರ ನಡೆಯುವ ಮುನ್ನವೆ ತಡೆಯುವುದು ಮುಖ್ಯವಾಗಿರುತ್ತದೆ. ಹಾಗಾಗಿ ಏಕಮೇವವಾಗಿ ಹೋರಾಡುವ ಬದಲು ಜಿಲ್ಲೆಯ ಎಲ್ಲಾ ಹೋರಾಟಗಾರರು ಸಂಘಟಿತರಾಗಿ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯವೆಂದರು.
ಇದೇ ಸಂದರ್ಭದಲ್ಲಿ ಹೆಚ್.ಎಸ್. ದೊರೆಸ್ವಾಮಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಆರಂಭಕ್ಕೆ ಮುನ್ನ ನೀರಾವರಿ ತಜ್ಞ ಪರಮಶಿವಯ್ಯ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಹಿರಿಯ ಪತ್ರಕರ್ತ ಕೆ. ಪ್ರಹ್ಲಾದ್ರಾವ್, ಅರಿವು ಸಂಪರ್ಕ್ ಪತ್ರಿಕೆಯ ನಿರ್ದೇಶಕಿ ಎ.ಸಿ. ಮಾಧವಿ, ಬಳದ ಸದಸ್ಯರಾದ ವಿ. ಶ್ರೀನಿವಾಸುಲು, ಗಂಗಾಧರ್, ಆರ್.ಟಿ.ಐ ಕಾರ್ಯಕರ್ತರಾದ ರಾಮಕೃಷ್ಣೇಗೌಡ, ಬಿ.ಎಂ. ರಘುನಾಥ್, ಬಾಲಕೃಷ್ಣೇಗೌಡ, ಪ್ರಕೃತಿ ನಾರಾಯಣಸ್ವಾಮಿ ಇದ್ದರು. ಜಿ.ಆರ್. ಶಾಂತಕುಮಾರ್ ಸ್ವಾಗತಿಸಿ, ಬಿ.ಪ್ರಭಾಕರ್ ವಂದಿಸಿದರು,ಆರ್. ಸಿದ್ದರಾಜು ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

