ಬೆನ್ನಿಗೆ ಚೂರಿ ಹಾಕಿದ ಮುಖಂಡರು: ಸುಧಾಕರ್
ಚಿಂತಾಮಣಿ: ನಮ್ಮ ಜೊತೆಯಲ್ಲೇ ಇದ್ದ ಹಲವು ಮುಖಂಡರು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸಕ್ಕೆ ಮುಂದಾಗಿದ್ದೇ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನಪ್ಪಲು ಕಾರಣವಾಯಿತೆಂದು ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ತಮ್ಮ ನೋವನ್ನು ವ್ಯಕ್ತಪಡಿಸಿದರು.
ನಗರದ ಮಾಳಪ್ಪಲ್ಲಿಯ ಅಂಜನಿ ನಿವಾಸದಲ್ಲಿ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, 60 ವರ್ಷಗಳಿಂದ ದಿವಂಗತ ಎಂ.ಸಿ.ಆಂಜನೇಯರೆಡ್ಡಿ ಕುಟುಂಬದ ಮೇಲೆ ಕ್ಷೇತ್ರದ ಜನ ನಂಬಿಕೆ, ಪ್ರೀತಿ ವಿಶ್ವಾಸ ಇಟ್ಟಿದ್ದಾರೆ. ಜನರು 65 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿ ತಮ್ಮ ವಿಶ್ವಾಸವನ್ನು ನನ್ನ ಮೇಲೆ ವ್ಯಕ್ತಪಡಿಸಿದ್ದಾರೆ. ಆದರೆ ಹಲವು ಮುಖಂಡರು ನಮ್ಮ ಜೊತೆಯಲ್ಲಿಯೇ ಇದ್ದು ಆಸೆ ಆಮಿಷಗಳಿಗೆ ಒಳಗಾಗಿ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸಕ್ಕೆ ಮುಂದಾಗಿದ್ದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತೆಂದರು.
ಕ್ಷೇತ್ರದಲ್ಲಿ ಬಹಳಷ್ಟು ಜನ ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನಂತರ ಇದೇ 24ರಂದು ಎಲ್ಲ ಮುಖಂಡರ, ಕಾರ್ಯಕರ್ತರ ಒಮ್ಮತದ ಅಭಿಪ್ರಾಯದ ಮೇರೆಗೆ ಲೋಕಸಭೆ ಚುನಾವಣೆಯ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಪ್ರಕಟಿಸುವುದಾಗಿ ತಿಳಿಸಿದರು.
ಇದು ಆರಂಭ: ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ದಿ. ಎಂ.ಸಿ.ಆಂಜನೇಯರೆಡ್ಡಿ ಕುಟುಂಬದ ಮೇಲೆ ಜನರು ಇಂದಿಗೂ ಅಭಿಮಾನದಿಂದ ಮತ ಚಲಾಯಿಸಿದ್ದಾರೆ ವಿನಾ ನೋಟಿನ ಆಸೆಗೆ, ಆಮಿಷಕ್ಕೆ ಒಳಗಾಗಿಲ್ಲವೆಂದು ಪರೋಕ್ಷವಾಗಿ ಸ್ಥಳೀಯ ಶಾಸಕರ ವಿರುದ್ಧ ಗುಡುಗಿದರು. ಕಾರ್ಯಕರ್ತರು ಅಂತೆ ಕಂತೆಗಳಿಗೆ ಕಿವಿಗೊಡದೆ, ಏಪ್ರಿಲ್ 17ರಂದು ನಡೆಯಲಿರುವ ಲೋಕಸಭಾ ಚುನಾವಣೆ ಎದುರಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ತನ್ನ ರಾಜಕೀಯ ವಿರೋಧಿಗಳಿಗೆ ಇದು ಅಂತ್ಯವಲ್ಲ ಆರಂಭವೆಂದು ಮಾಜಿ ಶಾಸಕ ಸುಧಾಕರ್ ಎಚ್ಚರಿಕೆ ಗಂಟೆ ನೀಡಿದರು. ಮುಖಂಡರಾದ ಮುನಿಸ್ವಾಮಣ್ಣ, ಲಕ್ಷ್ಮಿದೇವಕೋಟೆ ನಾರಾಯಣಸ್ವಾಮಿ, ವೆಂಕಟರವಣಸ್ವಾಮಿ, ವೆಂಕಟಶಿವಾರೆಡ್ಡಿ, ಸುಲ್ತಾನ್ ಷರೀಫ್, ಬುಕ್ಕನಹಳ್ಳಿ ಶಿವಣ್ಣ, ಬೈರೆಡ್ಡಿ, ಮಸಲಹಳ್ಳಿ ಶಿವಾರೆಡ್ಡಿ,ದೇವರಾಜ್, ಷೇಕ್ ಹುಸೇನ್, ಗೋಪಾಲರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ನಾಳೆ ಹೋಬಳಿ ಸಮಾವೇಶ
ಮ.15ರಂದು ಅಂಬಾಜಿದುರ್ಗ ಹೋಬಳಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಭೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಮಾಜಿ ಶಾಸಕ ಎಂ.ಸಿ.ಸುಧಾಕರ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

