ಅಭ್ಯರ್ಥಿಗಳ ಚಲನವಲನ ಮೇಲೆ ಹದ್ದಿನಕಣ್ಣು
ಕೋಲಾರ: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾದಾಗಿನಿಂದ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ವಹಿಸಿ ಎಲ್ಲಾ ದಾಖಲೆಗಳೊಂದಿಗೆ ಅವರ ವೆಚ್ಚವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ಕೆ. ರವಿ ಸೂಚಿಸಿದರು.
ಅವರು ಶುಕ್ರವಾರ ಲೋಕಸಭಾ ಚುನಾವಣೆಗಾಗಿ ನೇಮಿಸಿರುವ ಸೆಕ್ಟರ್ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಎಂ.ಆರ್.ಓ. ಗಳಿಗೆ ತರಬೇತಿ ನೀಡಲು ಹಮ್ಮಿಕೊಂಡಿದ್ದ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಅಭ್ಯರ್ಥಿಗಳ ವೆಚ್ಚಗಳನ್ನು ಕಡ್ಡಾಯವಾಗಿ ಮತ್ತು ಗುಪ್ತವಾಗಿ ವಿಡಿಯೋ ಮೂಲಕ ಚಿತ್ರೀಕರಣಗೊಳಿಸಬೇಕು. ಸಭೆ, ಸಮಾರಂಭಗಳಿಗಾಗಿ ಬಳಕೆ ಮಾಡುವ ವಾಹನಗಳ, ಟೇಬಲ್, ಕುರ್ಚಿ, ಶಾಮಿಯಾನ ಇತ್ಯಾದಿಗಳನ್ನು ಪರಿಗಣನೆಗೆ ತೆಗೆದುಕೊಂಡು ವೆಚ್ಚದ ಶ್ಯಾಡೋ ಪುಸ್ತಕದಲ್ಲಿ ನಮೂದಿಸಬೇಕಾಗುತ್ತದೆ ಎಂದರು.
ಕಾನೂನು ಬಾಹಿರವಾದ ವೆಚ್ಚಗಳನ್ನು ಸಹ ಪತ್ತೆ ಹಚ್ಚಬೇಕು. ಮತದಾರರಿಗೆ ಹಣ, ಮದ್ಯ, ಉಡಗೊರೆಗಳು ಸಂಗ್ರಹಣೆ ಮಾಡುವುದು ಹಾಗೂ ಹಂಚಿಕೆ ಮಾಡುವುದನ್ನು ತಡೆಯಬೇಕು ಹಾಗೂ ಅಕ್ರಮ ಕಂಡಲ್ಲಿ ದೂರು ದಾಖಲು ಮಾಡಿಕೊಂಡು ವರದಿ ನೀಡುವಂತೆ ಸೂಚಿಸಿದರು.
ಹೆದ್ದಾರಿಗಳಲ್ಲಿ ಚೆಕ್ಪೋಸ್ಟ್ಗಳನ್ನು ನಿರ್ಮಿಸಿದ್ದು ಇಲ್ಲಿ ಸ್ಟ್ಯಾಟಿಕ್ ಸರ್ವಿಲೆನ್ಸ್ ತಂಡಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಇವುಗಳಿಗೆ ಸಂಚಾರಿ ದಳದವರು ಸಹ ಪೂರ್ಣ ಸಹಕಾರ ನೀಡಿ ಅಕ್ರಮ ವಸ್ತುಗಳ ಸಾಗಾಣಿಕೆಯನ್ನು ಪತ್ತೆ ಹಚ್ಚುತ್ತಾರೆ ಎಂದರು.
ಹಣ ಮತ್ತು ವಸ್ತುಗಳನ್ನು ಜಪ್ತಿ ಮಾಡುವಾಗ ಅವುಗಳನ್ನು ಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕು. ಜಪ್ತಿ ಮಾಡುವ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿಯೇ ಮಾಡಬೇಕಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದರು.
ಚೆಕ್ಪೋಸ್ಟ್ಗಳಲ್ಲಿ ಅನುಮಾನ ಬಂದರೆ ಸರ್ಕಾರಿ ಕಚೇರಿಗಳ ವಾಹನಗಳನ್ನು ಸಹ ತಪಾಸಣೆ ಮಾಡಬಹುದು. ಯಾವುದಕ್ಕೂ ಹಿಂಜರಿಕೆ ಬೇಕಾಗಿಲ್ಲವೆಂದು ಅಧಿಕಾರಿಗಳಿಗೆ ದೈರ್ಯ ತುಂಬಿದರು.
ವಾಹನಗಳನ್ನು ತಪಾಸಣೆ ಮಾಡುವಾಗ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಇರುತ್ತಾರೆ. ಈ ಸಂದರ್ಭದಲ್ಲಿ ಪೆಲೀಸರು ಸೌಜನ್ಯತೆಯಿಂದ ವರ್ತಿಸಬೇಕು. ಮಾನವೀಯತೆ ಉಲ್ಲಂಘನೆ ಆಗಬಾರದೆಂದು ತಾಕೀತು ಮಾಡಿದರಲ್ಲದೆ,ಅನುಮಾನ ಬಂದರೆ ಅವರಲ್ಲಿನ ವಸ್ತುಗಳನ್ನು ಮತ್ತು ಹಣವನ್ನು ಜಪ್ತಿ ಮಾಡಬೇಕೆಂದು ತಿಳಿಸಿದರು.
ಲೋಕಸಭಾ ಚುನಾವಣೆ ಮುಕ್ತ, ನಿರ್ಭೀತಿ ಮತ್ತು ನ್ಯಾಯಸಮ್ಮತವಾಗಿ ನಡೆಯಲು ವಿಡಿಯೋ ಸರ್ವೆಲೆನ್ಸ್ ತಂಡ, ವಿಡಿಯೋ ವೀವಿಂಗ್ ತಂಡ, ಅಕೌಂಟ್ಸ್ ತಂಡ, ವೆಚ್ಚಗಳ ನಿರ್ವಹಣೆ ಮತ್ತು ಕಾಲ್ಸೆಂಟರ್, ಮಾಧ್ಯಮ ದೃಢೀಕರಣ ಮತ್ತು ನಿರ್ವಹಣೆ ತಂಡ, ಸಂಚಾರಿ ದಳ ಹಾಗೂ ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ ಕೆಲಸ ನಿರ್ವಹಿಸುತ್ತವೆ ಎಂದು ಹೇಳಿದರು.
ಈ ಎಲ್ಲಾ ತಂಡಗಳನ್ನು ಈಗಾಗಲೇ ರಚಿಸಿದ್ದು ತರಬೇತಿ ನೀಡಲಾಗುತ್ತಿದೆ. ನಾಮಪತ್ರ ಸಲ್ಲಿಕೆ ಪ್ರಾರಂಭವಾದ ಕೂಡಲೇ ಎಲ್ಲಾ ತಂಡಗಳು ಕಾರ್ಯಪ್ರವೃತ್ತವಾಗಲಿವೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಐ.ಎಂ. ಜಮೀಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

