ಕೋಲಾರ

ಕ್ವಾರೆ ನೀರಿನಲ್ಲಿ ಮುಳುಗಿ ಯುವಕ ಸಾವು

Published On :

ಕೋಲಾರ,ಮಾ: ಕಳೆದ ವರ್ಷ ಆರು ಯುವಕರನ್ನು ಬಲಿ ತೆಗೆದುಕೊಂಡಿರುವ ಕೋಲಾರ ತಾಲೂಕಿನ ಅರಾಭಿಕೊತ್ತನೂರು ಸಮೀಪದ ಕ್ವಾರೆಯಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಈಜಲು ಸ್ನೇಹಿತರೊಂದಿಗೆ ಬಂದಿದ್ದ ಯುವಕನೊಬ್ಬ ಜಲಪಾತದಲ್ಲಿ ಸಿಕ್ಕಿ ಸಾವನ್ನಪ್ಪಿದ್ದಾನೆ.
ಮೃತನನ್ನು ಬೆಂಗಳೂರಿನ ಹೆಣ್ಣೂರು ಕ್ರಾಸ್ ನಿವಾಸಿ ಲೋಕೇಶ್(20) ಎಂದು ಗುರುತಿಸಲಾಗಿದೆ. ಮೃತ ಲೋಕೇಶ್ ಗುರುವಾರ ಸಂಜೆ ಸ್ನೇಹಿತರಾದ ಚೇತನ್, ಲಿಖಿತ್,ಥೋಯದ್‌ರೊಂದಿಗೆ ಅರಾಭಿಕೊತ್ತನೂರು ಸಮೀಪದ ಕೊಳಕ್ಕೆ ಈಜಲು ಬಂದಿದ್ದನೆಂದು ಆತನ ತಂದೆ ಚಕ್ರವರ್ತಿ ತಿಳಿಸಿದ್ದಾರೆ.
ಮೃತನ ಸ್ನೇಹಿತರು ಹೇಳುವಂತೆ ಲೋಕೇಶ್‌ಗೆ ಈಜಲು ಬಾರದ ಕಾರಣ ಕೊಳದ ಒಂದು ಕಡೆ ಇರುವ ಮೂರುನಾಲ್ಕು ಅಡಿ ನೀರಿನಲ್ಲಿ ಆಟವಾಡುತ್ತಿದ್ದಾಗ ಜಾರಿ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣ ಸ್ನೇಹಿತರು ಶೋಧನೆ ಮಾಡಿದರಾದರೂ ಶವ ಪತ್ತೆಯಾಗಿಲ್ಲ.
ಘಟನೆ ಬಗ್ಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ನುರಿತ ಈಜುಗಾರರಿಂದ ಶವ ತೆಗೆಯುವ ಕೆಲಸ ಆರಂಭಿಸಿದರಾದರೂ ಯಾವುದೇ ಪ್ರಗತಿ ಇನ್ನೂ ಕಂಡು ಬಂದಿರಲಿಲ್ಲ.
ಅರಾಭಿಕೊತ್ತನೂರು ಮತ್ತು ಗುಡ್ಡನಪುರ ಸರ್ವೇ ನಂ 152 ರಲ್ಲಿರುವ ಈ ಕಲ್ಲಿನ ಕ್ವಾರಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಜಲ್ಲಿಗಾಗಿ ಲ್ಯಾಂಕೋ ಕಂಪನಿಯವರು ಕೊರೆದು ಕಾಮಗಾರಿ ನಂತರ ಹಾಗೆಯೇ ಬಿಟ್ಟು ಹೋಗಿದ್ದಾರೆ. ಈ ಕ್ವಾರಿಯಲ್ಲಿ ಸುಮಾರು 80 ಅಡಿ ಆಳವಾದ ನೀರಿದ್ದು, ಬೆಂಗಳೂರು ಮತ್ತು ಸುತ್ತಮುತ್ತಲ ಯುವಕರಿಗೆ ಇದು ನೀಲಿ ನೀರಿನ ಕೊಳ ಎಂದೇ ಖ್ಯಾತವಾಗಿದೆ.
ಕ್ವಾರಿ ಕೊರೆದಾಗಿನಿಂದ 7 ಜನ ಸತ್ತಿದ್ದಾರೆ. ಬೆಂಗಳೂರು, ಹೊಸಕೋಟೆ, ಕೋಲಾರ ಮತ್ತಿತರ ಕಡೆಗಳಿಂದ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಯುವಕರು,ಯುವತಿಯರು ಇಲ್ಲಿಗೆ ಈಜಲು ಬರುತ್ತಾರೆ.
ಕಳೆದ ವರ್ಷ ಜೂನ್‌ನಲ್ಲಿ ಕನ್ನಡಪ್ರಭದಲ್ಲಿ ಈ ಕೊಳದ ಬಗ್ಗೆ ಜಿಲ್ಲಾಡಳಿತದ ಬೆಳಕು ಚೆಲ್ಲುವ ಪ್ರಯತ್ನವಾಗಿತ್ತು. ಅಂದಿನ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಕ್ವಾರೆಯಲ್ಲಿನ ನೀರು ಜನರ ಉಪಯೋಗಕ್ಕೆ ಯೋಗ್ಯವಿದ್ದರೆ ಯೋಜನೆ ರೂಪಿಸುವುದಾಗಿ ಹೇಳಿದ್ದರಾದರೂ ಅವರ ವರ್ಗಾವಣೆಯಿಂದ ಸಾಧ್ಯವಾಗಲಿಲ್ಲ.
ನೀರು ಪೂರೈಕೆಗೆ ಯೋಜನೆ
ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಗೂ ಜಿಲ್ಲಾಧಿಕಾರಿ ಡಿ.ಕೆ.ರವಿ ಸ್ಥಳಕ್ಕೆ ಭೇಟಿ ನೀಡಿ ಕ್ವಾರೆಯಲ್ಲಿ ತಿಳಿಯಾದ ನೀಲಿ ಬಣ್ಣದ ನೀರು ಕಂಡು ಅಚ್ಚರಿ ವ್ಯಕ್ತಪಡಿಸಿ ನೀರಿನ ಸಮಸ್ಯೆ ಎದುರಿಸುತ್ತಿರುವ ಕೋಲಾರ ನಗರಕ್ಕೆ ಈ ನೀರು ಬಳಕೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದರು.
ಲೋಕಸಭಾ ಚುನಾವಣೆಗೆ ವೇಳಾ ಪಟ್ಟಿ ಪ್ರಕಟಣೆಗೆ ಮುಂಚಿತವಾಗಿಯೇ ಯೋಜನೆಗೆ ಡಿಪಿಆರ್ ಮಾಡಲು ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸುಮಾರು 30 ರಿಂದ 45 ಲಕ್ಷ ರು.ವೆಚ್ಚದಲ್ಲಿ ಪೈಪ್‌ಲೈನ್ ಮೂಲಕ ಕೋಲಾರಕ್ಕೆ ನೀರು ಪೂರೈಕೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.  ಅಧಿಕಾರಿಗಳು ಕೂಡಲೇ ಕ್ವಾರೆಯ ನೀರಿನ ಸಂರಕ್ಷಣೆ ಹಾಗೂ ಜನರ ಪ್ರಾಣ ರಕ್ಷಣೆಗಾಗಿ ತಂತಿ ಬೇಲಿ ಹಾಕಿಸಬೇಕು. ಕೊಳದಲ್ಲಿ ಈಜುವುದು ಅಪಾಯಕಾರಿ ಎಂದು ಸೂಚನಾ ಫಲಕ ಅಳವಡಿಸಬೇಕು. ಅದಷ್ಟು ಬೇಗನೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಿದಲ್ಲಿ ಈಜಲು ಬರುವ ಜನರ ಪ್ರಾಣ ಕಾಪಾಡಿದಂತಾಗುತ್ತದೆ ಎಂದು ಅರಾಭಿಕೊತ್ತನೂರು ಸಮೀಪದ ಕ್ವಾರೆಯಲ್ಲಿ ಪ್ರಕೃತಿದತ್ತವಾದ ಜಲ ಸಂಪತ್ತು ಇದೆ ಎಂಬುದನ್ನು ಜನರಿಗೆ ಗೊತ್ತುಪಡಿಸಿದ ನಗರಸಭೆ ಮಾಜಿ ಸದಸ್ಯ ಹಾಗೂ ಕನಿವೇ ಜಿಲ್ಲಾ ಸಂಚಾಲಕ ತ್ಯಾಗರಾಜ್ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.