ಕೋಲಾರ

ಬರದ ನಾಡಲ್ಲಿ ಗರಿಗೆದರಿದ ರಾಜಕೀಯ

Published On :

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಪ್ರಚಾರ ಕಾರ್ಯಕ್ರಮಗಳು ಹೆಚ್ಚಾಗಿದ್ದು ಆರೋಪ ಪ್ರತ್ಯಾರೋಪಗಳು ಬಿರುಸುಗೊಳ್ಳುತ್ತಿವೆ.
ಈಗಾಗಲೇ ಜೆಡಿಎಸ್ ಹೊರತುಪಡಿಸಿ ( ಅನಿತಾ ಕುಮಾರಸ್ವಾಮಿ ಅಥವಾ ಉದ್ಯಮಿ ಶ್ರೀನಿವಾಸ್ ಮೂರ್ತಿ) ಈ ಕ್ಷೇತ್ರದಿಂದ ಸ್ಪರ್ಧಿಸುವ ಪಕ್ಷಗಳ ಅಭ್ಯರ್ಥಿಗಳು ಪಕ್ಕಾ ಆಗಿದ್ದು ಹೈಕಮಾಂಡ್ ತಮ್ಮ ಹೆಸರನ್ನು ನಿಧಾನವಾಗಿ ಪಟ್ಟಿಯಲ್ಲಿ ಬಿಡುಗಡೆ ಮಾಡಿದರಿಂದ ಪ್ರಾರಂಭದಲ್ಲಿ ಕಂಗಾಲಾಗಿದ್ದ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಕಾಂಗ್ರೆಸ್, ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಬಿಜೆಪಿ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಸಿಪಿಎಂ, ನಿವೃತ್ತ ಪೊಲೀಸ್ ಅಧಿಕಾರಿ ಆರ್ಕೇಶ್ ಆಮ್ ಆದ್ಮಿ ಪಕ್ಷ, ಕೆ.ಸಿ. ರೆಡ್ಡಿ ಜೆಡಿಯು ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.
ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ತಮ್ಮ ಅಭಿವೃದ್ಧಿಯನ್ನು ಬಿಂಬಿಸುವ ನುಡಿದಂತೆ ನಡೆದವರು ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ತಮ್ಮ ಸಾಧನೆಯನ್ನು ಹೇಳಿಕೊಳ್ಳುತ್ತಿದ್ದು ಮುಖ್ಯಮಂತ್ರಿಯಾದಗಿನಿಂದ ಹಿಡಿದು ಇಲ್ಲಿಯವರೆಗೂ ಮಾಡಿದ ಪ್ರಗತಿಯನ್ನು ವಿವರಿಸಿದ್ದಾರೆ.
ಈ ಭಾಗದ ಜನರ ನೀರಿನ ದಾಹ ನೀಗಿಸಲು ಎತ್ತಿನಹೊಳೆ ಯೋಜನೆ ಜಾರಿಗೆ ತರಲಾಗುತ್ತಿದೆ. ಅಲ್ಲದೇ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಉದ್ಯೋಗ ಮೇಳ ಕೈಗೊಂಡು ಸುಮಾರು 30 ಸಾವಿರ ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಡಿಸಲಾಗಿದೆ. ರೈಲ್ವೆ ಯೋಜನೆಗಳು, ರಸ್ತೆಗಳ ಅಭಿವೃದ್ಧಿ, ಹೆಚ್ಚಿಗೆ ಅನುದಾನ ಬಿಡುಗಡೆ ಎಂದೆಲ್ಲಾ ಹೇಳಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಮೊಯ್ಲಿರವರ ವಿರುದ್ಧ ಟೀಕೆಗಳನ್ನು ಮಾಡುವ, ಸುಳ್ಳು ಭರವಸೆ ನೀಡಿ ವಂಚಿಸಿರುವುದರ ಬಗ್ಗೆ ನಾಗರಿಕ ಹಿತ ರಕ್ಷಣಾ ವೇದಿಕೆ ಹೆಸರಿನಲ್ಲಿ ಕೆಲವರು ಕರಪತ್ರ ಬಿಡುಗಡೆ ಮಾಡಿ ಮನೆ ಮನೆಗೂ ತಲುಪಿಸುತ್ತಿದ್ದಾರೆ. ಈ ಮೂಲಕ ನುಡಿದಂತೆ ನಡೆದವರು ಪುಸ್ತಕಕ್ಕೆ ಪ್ರತಿಯಾಗಿ ಆಡಿದ್ದೇನು.... ಮಾಡಿದ್ದೇನು, ಇದು ವೀರಪ್ಪ ಮೊಯ್ಲಿ ರಿಪೋರ್ಟ್, ಮೊಯ್ಲಿ ಫೇಲ್ ಎಂಬ ಕರಪತ್ರ ಎಲ್ಲೆಡೆ ಹರಿದಾಡುತ್ತಿದೆ. 2009 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೊಯ್ಲಿ ಬಿಡುಗಡೆ ಮಾಡಿದ ವೈಯಕ್ತಿಕ ಪ್ರಣಾಳಿಕೆಯಲ್ಲಿ ಭರವಸೆಗಳ ಪಟ್ಟಿಯನ್ನು ಮಾಡಿ ಈಡೇರಿದೆಯಾ ಎನ್ನಲಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಬ್ರಾಡ್ ಬ್ಯಾಂಡ್ ಸಂಪರ್ಕ, ಯಲಹಂಕದಿಂದ ಬಾಗೇಪಲ್ಲಿಯವರೆಗೆ ವಿಶೇಷ ಕೈಗಾರಿಕಾ ವಲಯ ಸ್ಥಾಪನೆ, ಬೆಂಗಳೂರಿನ ಮೆಟ್ರೋ ರೈಲನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವುದು, ಪ್ರತಿ ತಿಂಗಳು ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ, ಚಿಕ್ಕಬಳ್ಳಾಪುರವನ್ನು ರಾಷ್ಟ್ರೀಯ ತೋಟಗಾರಿಕಾ ರಾಜಧಾನಿಯಾಗಿ ಪರಿವರ್ತಿಸುವುದು, ಇಲ್ಲಿ ತೋಟಗಾರಿಕೆ ವಿಶ್ವ ವಿದ್ಯಾನಿಲಯವನ್ನು ಪ್ರಾರಂಭಿಸುವುದು, ವಿಶ್ವಬ್ಯಾಂಕಿನ ನೆರವಿನಿಂದ ಎಲ್ಲಾ ಕೆರೆಗಳ ಪುನರುಜ್ಜೀವನ ಕಾರ್ಯ ಕೈಗೊಳ್ಳುವುದು ಸೇರಿದಂತೆ 20 ಅಂಶಗಳನ್ನು ಪ್ರಸ್ತಾಪಿಸಿ ಭರವಸೆ ಈಡೇರಿರುವುದನ್ನು ಕೆಳಮುಖವಾಗಿ ತೋರಿಸಲಾಗಿದೆ.
ಮತ್ತೊಂದೆಡೆ ಸಿಪಿಎಂ ಪಕ್ಷದಿಂದಲೂ ಕಿರುಹೊತ್ತಿಗೆ ಬಿಡುಗಡೆ ಮಾಡಲಾಗಿದೆ. ಮತದಾರರೇ ಜಾಗೃತಗೊಳ್ಳಲು, ಕ್ಷೇತ್ರದ ಅಭಿವೃದ್ಧಿಗೆ 30 ನಿಮಿಷ  ಪ್ಲೀಸ್ ಮೀಸಲಿಡಿ ಎಂಬ ಪುಸ್ತಕದ ಮೂಲಕ ನಿಜವಾದ ಕ್ಷೇತ್ರದ ಅಭಿವೃದ್ಧಿ ಹೇಗಿರಬೇಕೆಂಬ ಯೋಚನೆಯನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಶಾಶ್ವತ ನೀರಾವರಿ ಸಮಸ್ಯೆ, ನಿರುದ್ಯೋಗ, ಆರ್ಥಿಕ ವ್ಯವಸ್ಥೆ ಸುಧಾರಣೆ, ಬಡ ಮತ್ತು ಮಧ್ಯಮ ವರ್ಗದ ಜನರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಹೋರಾಟ ನಡೆಸುವವರಿಗೆ ಬೆಂಬಲ ಸೂಚಿಸುವುದು. ಇದಕ್ಕೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ದೂರವಿಟ್ಟು ಸಿಪಿಎಂ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಲಾಗುತ್ತಿದೆ.
ಜೆಡಿಯು ತನ್ನದೇ ಆದ ಪುಸ್ತಕ ಬಿಡುಗಡೆ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ನಮ್ಮ ಹೋರಾಟದ ಪ್ರಮುಖ ಅಂಶ ಶಾಶ್ವತ ನೀರಾವರಿ ಸಮಸ್ಯೆ, ನದಿಗಳ ಜೋಡಣೆಯ ಬೇಡಿಕೆ, ಹೈನೋದ್ಯಮ ಮತ್ತು ತೋಟಗಾರಿಕೆ ಅಭಿವೃದ್ಧಿ ಎಂದು ಜನರಿಗೆ ತಿಳಿಸುತ್ತಿದೆ. ಮುಂದಿನ ದಿನಗಳಲ್ಲಿ ತಮ್ಮ ಗೆಲುವಿಗಾಗಿ ಇನ್ನೂ ಇತರೆ ಪಕ್ಷಗಳ ಅಭ್ಯರ್ಥಿಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಿದ್ದು ಅದರಿಂದ ಯಶಸ್ಸು ಹೇಗೆ ಪಡೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.



-ಎನ್. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.