ನಾಯಕರಿಗೆ ವೋಟಿನ ಚಿಂತೆ, ನಾಗರಿಕರಿಗೆ ನೀರಿನ ಚಿಂತೆ!
ಕೆ. ರಮೇಶ್
ಬಂಗಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ರಾಜಕಾರಣಿಗಳು ಪ್ರಚಾರದಲ್ಲಿ, ಅಧಿಕಾರಿಗಳು ಚುನಾವಣೆ ಕರ್ತವ್ಯದಲ್ಲಿ ತಲ್ಲೀಣರಾಗಿದ್ದಾರೆ.
ಇದರಿಂದ ತಮ್ಮ ಗೋಳನ್ನು ಹೇಳಿಕೊಳ್ಳುವುದು ಯಾರ ಬಳಿ ಎಂದು ಜನ ಸಾಮಾನ್ಯರು ಪರದಾಡುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಅಂಗವಾಗಿ ತಾಲೂಕಿನ ವಿವಿಧೆಡೆ ಕೆಲ ಜನಪ್ರತಿನಿಧಿಗಳು ನಿತ್ಯ ಸರಬರಾಜು ಮಾಡುತ್ತಿದ್ದ ಉಚಿತ ಕುಡಿಯುವ ನೀರು ಬಂದ್ ಆಗಿರುವುದು ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ.
ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆ ಅಧಿಕಾರಿಗಳು ಟ್ಯಾಂಕರ್ ವಶಪಡಿಸಿಕೊಂಡರೆ ಮೂರು ತಿಂಗಳು ಬಿಡುಗಡೆ ಮಾಡುವುದಿಲ್ಲ. ರಾದ್ಧಾಂತ ಯಾಕೆ ಎಂದು ಉಚಿತ ನೀರು ಸರಬರಾಜುದಾರರು ತಮ್ಮ ಸೇವೆ ಸ್ಥಗಿತಗೊಳಿಸಿದ್ದಾರೆ.
ಪಟ್ಟಣದ ಕುಪ್ಪಸ್ವಾಮಿ ಮೊದಲಿಯಾರ್ ಮತ್ತು ವಿವೇಕಾನಂದನಗರ, ಶಾಂತಿನಗರ, ಟಿಪ್ಪುನಗರ ಮತ್ತಿತರ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಅತಿಯಾಗಿದ್ದು, ಈ ಬಡಾವಣೆಗಳಲ್ಲಿ ಪುರಸಭೆ ನಾಲ್ಕು ತಿಂಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿರುವುದರಿಂದ ಇಲ್ಲಿನ ನಾಗರಿಕರು ಹನಿ ನೀರಿಗೂ ಹಪಿಹಪಿಸುವಂತಾಗಿದೆ. ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಚುನಾವಣೆ ಹೆಸರು ಹೇಳಿ ಅಧಿಕಾರಿಗಳು ನುಣಿಚಿಕೊಳ್ಳುತ್ತಿದ್ದಾರೆ. ಪಟ್ಟಣದ ಬಹುತೇಕ ವಾರ್ಡುಗಳಲ್ಲಿ ಇಂತದೇ ಸಮಸ್ಯೆ ಇದೆ.
ಈ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ಖಾಸಗಿ ಟ್ಯಾಂಕರ್ ಮಾಲೀಕರು ಟ್ಯಾಂಕರ್ ನೀರಿನ ಬೆಲೆ ಏರುಸುತ್ತಲೆ ಇದ್ದಾರೆ. ಮೊದಲು ಟ್ಯಾಂಕರ್ವೊಂದಕ್ಕೆ 400ರಿಂದ 450 ಇತ್ತು ಈಗ 600ಕ್ಕೆ ಮುಟ್ಟಿದೆ. ಸಣ್ಣ ಮನೆ ಹೊಂದಿರುವವರು, ದೊಡ್ಡ ಸಂಪ್ ವ್ಯವಸ್ಥೆ ಇಲ್ಲದವರ ಪಾಡು ದಯನೀಯವಾಗಿದೆ.
ಅರ್ಧ ಟ್ಯಾಂಕರ್ ಬರಲ್ಲ ಎನ್ನುತ್ತಾರೆ, ವಾರದ ಮುನ್ನವೆ ಟ್ಯಾಂಕರ್ ಬುಕ್ ಮಾಡಬೇಕು ಇದರ ನಡುವೆ ವಿದ್ಯುತ್ ಕೈಕೊಟ್ಟರೆ ಮತ್ತಷ್ಟು ವಿಳಂಬ. ಪಟ್ಟಣದ ಹೊರವಲಯದ ಕೊಪ್ಪದ ಕೆರೆಯಲ್ಲಿ 20 ಕೊಳವೆ ಬಾವಿ ಕೊರೆದು ಅದರ ಮೂಲಕ ಪಟ್ಟಣಕ್ಕೆ ನೀರು ಪೂರೈಸಬೇಕು ಎಂದು ಪುರಸಭೆ ಹಾಗೂ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತೀರ್ಮಾನಿಸಿದ್ದರು. ಆದರೆ ಲೋಕಸಭೆ ಚುನಾವಣೆ ಘೋಷಣೆಯಾದ ಕಾರಣ ಈ ಕಾರ್ಯ ಮುಂದಕ್ಕೆ ಹೋಗಿದೆ.
ಇದು ಪಟ್ಟಣದ ಸಮಸ್ಯೆಯಾದರೆ ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವೇನಲ್ಲ ಕೆಲವು ಕಡೆ ಈಗಲೂ ತೆರೆದ ಬಾವಿಗಳನ್ನು ಕುಡಿಯುವ ನೀರಿಗಾಗಿ ಆಶ್ರಯಿಸುವಂತಾಗಿದೆ. ರಾಜಕೀಯ ಪಕ್ಷಗಳಿಗೆ ಮತ ಪಡೆಯುವ ಚಿಂತಯಾದರೆ ಜನರಿಗೆ ಕುಡಿಯುವ ನೀರಿನ ಚಿಂತೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

