ಎಚ್ಚರ, ರೈಲು ನಿಲ್ದಾಣಕ್ಕೆ ಕಣ್ಣು ಬಂದಿದೆ!
ಪಾ.ಶ್ರೀ. ಅನಂತರಾಮ್
ಕ.ಪ್ರ.ವಾರ್ತೆ ್ಣ ಕೋಲಾರ ್ಣ ಮೇ 1
ಹೆಚ್ಚು ಜನ ಸಂದಣಿ ಇರುವ ಜಾಗಗಳನ್ನು ಗುರಿಯಾಗಿಟ್ಟುಕೊಂಡು ಬಾಂಬ್ ಸ್ಫೋಟ ಮಾಡುವ ಮೂಲಕ ಅಮಾಯಕರ ಹತ್ಯೆ ಮಾಡುತ್ತಿರುವ ಹಾಗೂ ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಉಗ್ರಗಾಮಿಗಳನ್ನು ಮಟ್ಟ ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿ ಸಹಭಾಗಿತ್ವದಲ್ಲಿ ಬಿಗಿ ಭದ್ರತಾ ವ್ಯವಸ್ಥೆಯ ಜೊತೆಗೆ ದುಷ್ಕರ್ಮಿಗಳನ್ನು ಬೇಗನೆ ಪತ್ತೆ ಮಾಡಲು ಆತ್ಯಾಧುನಿಕ ತಂತ್ರಜ್ಞಾನ ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಉಗ್ರರು ರೇಲ್ವೆ ನಿಲ್ದಾಣಗಳಿಗೆ ರಾಜಾರೋಷವಾಗಿ ನುಗ್ಗಿ ಬಾಂಬ್ ಸ್ಫೋಟದ ಮೂಲಕ ಜನತೆಯ ಪ್ರಾಣ ತೆಗೆಯುತ್ತಿರುವುದಲ್ಲದೆ ಸಾರ್ವಜನಿಕರ ಆಸ್ತಿಯಾಗಿರುವ ರೈಲುಗಳನ್ನು ನಾಶ ಮಾಡಿ ದೇಶಕ್ಕೆ ಆರ್ಥಿಕ ನಷ್ಟ ಉಂಟು ಮಾಡುತ್ತಿದ್ದು ಎಲ್ಲಾ ರೈಲು ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಉಗ್ರರ ಉಪಟಳಕ್ಕೆ ಬ್ರೇಕ್ ಹಾಕದಿದ್ದರೆ ಜನರ ಅಮೂಲ್ಯವಾದ ಪ್ರಾಣಕ್ಕೆ ಬೆಲೆ ಇಲ್ಲದಂತಾಗುತ್ತದೆ.
ದೇಶದ ವಿವಿಧ ಭಾಗಗಳ ರೈಲು ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ನಡೆದಿದ್ದರೂ ರೇಲ್ವೆ ಇಲಾಖೆಯವರು ನಿಲ್ದಾಣಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದ ಕಾರಣ ಉಗ್ರರು ಧೈರ್ಯವಾಗಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಣೆ ಮಾಡಿ ದೇಶಾದ್ಯಂತ ಅಟ್ಟಹಾಸ ಪ್ರದರ್ಶಿಸುತ್ತಿದ್ದಾರೆ.
ದಕ್ಷಿಣ ಭಾರತದ ಮೇಲೆ ಕಣ್ಣು: ಉತ್ತರ ಭಾರತದಲ್ಲಿ ಕ್ರೂರತನ ಪ್ರದರ್ಶಿಸಿ ಏನೋ ಸಾಧನೆ ಮಾಡಿರುವುದಾಗಿ ಬಿಗುತ್ತಿರುವ ಉಗ್ರರು ಈಗ ದಕ್ಷಿಣ ಭಾರತದ ಮೇಲೆ ಕಣ್ಣು ಹಾಕಿದ್ದಾರೆ. ಚೆನ್ನೈನಲ್ಲಿ ಬಾಂಬ್ ಸ್ಫೋಟ ಮಾಡಿರುವ ಉಗ್ರರು ಮುಂದೊಂದು ದಿನ ಕರ್ನಾಟಕದಲ್ಲೂ ಪೈಶಾಚಿಕ ಕೃತ್ಯಕ್ಕೆ ಕೈಹಾಕಲು ಹೇಸುವುದಿಲ್ಲ. ಘಟನೆ ನಡೆದ ನಂತರ ಎಚ್ಚರಗೊಂಡು ಕ್ರಮಗಳನ್ನು ಕೈಗೊಳ್ಳುವ ಬದಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿ ಸಹಯೋಗದಲ್ಲಿ ರಾಜ್ಯದ ಎಲ್ಲಾ ರೈಲು ನಿಲ್ದಾಣಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.
ಕರ್ನಾಟಕದಲ್ಲಿ ಪ್ರಸ್ತುತ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಸೇರಿದಂತೆ ಬೆರಳೆಣಿಕೆಯಷ್ಟು ರೇಲ್ವೆ ನಿಲ್ದಾಣಗಳಲ್ಲಿ ಮಾತ್ರ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಉಗ್ರರು ಸಿಸಿ ಕ್ಯಾಮರಾಗಳನ್ನು ದ್ವಂಸ ಮಾಡಿ ಕೃತ್ಯ ಎಸಗುತ್ತಿರುವುದರಿಂದ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸುವ ಅಗತ್ಯವಿದೆ.
156 ರೈಲು ನಿಲ್ದಾಣಗಳು: ರಾಜ್ಯದಲ್ಲಿ ಸುಮಾರು 156ಕ್ಕೂ ಹೆಚ್ಚು ರೇಲ್ವೆ ನಿಲ್ದಾಣಗಳು ಇದ್ದು ಪ್ರತಿ ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ಗಳ ಮೂಲಕ ರೈಲು ಬೋಗಿಗಳ ಶೋಧನೆ, ಬೋಗಿಗಳಲ್ಲೂ ಸಿಸಿ ಕ್ಯಾಮರಾಗಳ ವ್ಯವಸ್ಥೆ ಮಾಡುವ ಮೂಲಕ ಜನರ ಪ್ರಾಣದ ಜೊತೆಗೆ ಸರ್ಕಾರಕ್ಕೆ ಆಗುವ ಆರ್ಥಿಕ ನಷ್ಟ ತಪ್ಪಿಸಲು ಯೋಜನೆ ಅನುಷ್ಠಾನಕ್ಕೆ ತರಬೇಕಾಗಿದೆ.
ರಾಜ್ಯದ ಅನೇಕ ದೊಡ್ಡ ರೈಲು ನಿಲ್ದಾಣಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಲ್ಲ, ಕೋಲಾರ, ಕೆ.ಆರ್.ಪುರಂ, ಚಿಕ್ಕಬಳ್ಳಾಪುರ, ಮಂಡ್ಯ, ಅರಸೀಕೆರೆ, ಶಿವಮೊಗ್ಗ, ದಾವಣಗೆರೆ, ಹಾಸನ, ಹಾವೇರಿ, ಕೆಜಿಎಫ್, ಮಾರಿ ಕುಪ್ಪಂ, ಉರಿಗಾಂ, ಚಾಮರಾಜನಗರ, ಕೆ.ಆರ್. ಪೇಟೆ, ಕೆ.ಆರ್. ನಗರ, ತುಮಕೂರು ಸೇರಿದಂತೆ ಬಹುತೇಕ ಕಡೆ ರೇಲ್ವೆ ನಿಲ್ದಾಣಗಳಿಗೆ ಭದ್ರತಾ ವ್ಯವಸ್ಥೆ ಅತ್ಯಂತ ಕಡಿಮೆ. ರೇಲ್ವೆ ಭದ್ರತಾ ಪಡೆ ಹಾಗೂ ಸ್ಥಳೀಯ ಪೊಲೀಸರ ಸಂಖ್ಯೆ ಕಡಿಮೆ ಇರುವುದರಿಂದ ರೇಲ್ವೆ ನಿಲ್ದಾಣಗಳಲ್ಲಿ ಏನೇ ಅವಘಡ ಸಂಭವಿಸಿದರೂ ತಕ್ಷಣ ಪರಿಹಾರ ಕಲ್ಪಿಸುವುದು ಕಷ್ಟವಾಗಿದೆ.
ದೊಡ್ಡ ರೇಲ್ವೆ ನಿಲ್ದಾಣಗಳಲ್ಲಿ ಉಗ್ರರ ಚಲನ ವಲನ ಪತ್ತೆ ಮಾಡುವ ಆತ್ಯಾಧುನಿಕ ತಂತ್ರಜ್ಞಾನ ಅನುಷ್ಠಾನ, ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಭದ್ರತಾ ಸಿಬ್ಬಂದಿ ಹೆಚ್ಚಳಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗುವ ಮೂಲಕ ರಾಜ್ಯದಲ್ಲಿ ಉಗ್ರರ ಆಟ ನಡೆಯದಂತೆ ಎಚ್ಚರಗೊಳ್ಳುವುದು ಅಗತ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

