ಖಾಸಗಿ ಸಾಲದ ಶೂಲಕ್ಕೆ ಸಿಲುಕಬೇಡಿ
ಕನ್ನಡಪ್ರಭ ವಾರ್ತೆ, ಕೋಲಾರ, ಮೇ 1
ದೇಶದ ಶ್ರಮಿಕ ಶಕ್ತಿಯಾದ ಕಾರ್ಮಿಕರು ಖಾಸಗಿ ಸಾಲದ ಶೂಲಕ್ಕೆ ಸಿಲುಕದೆ ಎಚ್ಚರಿಕೆಯಿಂದ ಜೀವನ ನಿರ್ವಹಣೆ ಮಾಡುವಂತೆ ನಗರಸಭಾ ಅಧ್ಯಕ್ಷ ಮುಬಾರಕ್ ತಿಳಿಸಿದರು.
ನಗರಸಭೆಯಲ್ಲಿ ಗುರುವಾರ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಪರಿಷತ್, ಜಿಲ್ಲಾ ತ್ರಿಚಕ್ರವಾಹನ ಚಾಲಕರ ಸಂಘ, ಬೀಡಿ ವರ್ಕರ್ಸ್ ವೆಲ್ಫೇರ್ ಸೊಸೈಟಿ, ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಾಸಿಗೆ ಇದ್ದಂತೆ ಕಾಲು ಚಾಚು ಎಂಬ ಹಿರಿಯರ ಮಾತಿನಂತೆ ಪರಿಶ್ರಮದಿಂದ ಜೀವನ ನಿರ್ವಹಣೆ ಮಾಡುವುದರ ಜತೆಗೆ ಸ್ವಲ್ಪ ಪ್ರಮಾಣದಲ್ಲಿ ಉಳಿತಾಯಕ್ಕೂ ಆದ್ಯತೆ ನೀಡುವುದರಿಂದ ಮುಂದೆ ಸಂಕಷ್ಟಗಳು ಎದುರಾದ ಸಂದರ್ಭದಲ್ಲಿ ಆಸರೆಯಾಗುತ್ತದೆ ಎಂದರು.
ಪೌರ ಕಾರ್ಮಿಕರ ಪರಿಶ್ರಮದಿಂದ ಮಾತ್ರವೇ ಸುಂದರ ಹಾಗೂ ಆರೋಗ್ಯಕರ ನಗರ ನಿರ್ಮಾಣ ಸಾಧ್ಯವಾಗಿದೆ ಎಂದ ಅವರು, ಈ ಕಾರ್ಮಿಕರ ಪರಿಶ್ರಮಕ್ಕೆ ಬೆಲೆಕಟ್ಟಲಾಗದು ಎಂದ ಅವರು, ಕೆಲಸದಲ್ಲಿ ಬದ್ದತೆ, ನಿಷ್ಠೆ ಹೊಂದಿರುವ ಈ ಶ್ರಮಿಕರ ಶಕ್ತಿಗೆ ಗೌರವ ನೀಡುವ ಅಗತ್ಯವಿದೆ, ಅವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸಿಕೊಡಲು ಸಂಘ ಸಂಸ್ಥೆಗಳು ಹೆಚ್ಚಿನ ಜಾಗಣತಿ ವಹಿಸಬೇಕೆಂದರು.
ಡಿವೈಎಸ್ಪಿ ಅಶೋಕ್ಕುಮಾರ್, ಬಂಡವಾಳಶಾಹಿ ವ್ಯವಸ್ಥೆಯಿಂದಾಗಿ ಶ್ರಮಿಕರಿಗೆ ಸಿಗಬೇಕಾದ ಸೌಲಭ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ತಲುಪುತ್ತಿಲ್ಲ, ಅಸಂಘಟಿತ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ ಎಂದು ವಿಷಾದಿಸಿದರು.
ಸಂಘಟನೆಯಿಂದ ಮಾತ್ರ ಶ್ರಮಿಕ ಶಕ್ತಿ ತನ್ನ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯ ಎಂದ ಅವರು, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಿ ಎಂದು ಕರೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್, 125 ವರ್ಷಗಳ ಹಿಂದೆ ಕಾರ್ಮಿಕರು ತಮ್ಮ ದುಡಿಮೆಯ ಅವಧಿ ನಿಗದಿಗಾಗಿ ನಡೆಸಿದ ಹೋರಾಟದ ಸ್ಮರಣೆಯೇ ಕಾರ್ಮಿಕ ದಿನಾಚರಣೆಯಾಗಿದೆ ಎಂದರು. ದುಡಿಮೆಗೆ ತಕ್ಕ ವೇತನ ಸಿಗುವಂತಾಗಬೇಕು, ಕಾರ್ಮಿಕನೆಂದು ಗೌರವದಿಂದ ಹೇಳಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು, ಈ ನಿಟ್ಟಿನಲ್ಲಿ ಬೀಡಿ ಕಾರ್ಮಿಕರ ಸಂಘದ ಕಾರ್ಯ ಶ್ಲಾಘಿನೀಯ ಎಂದರು.
ರಾಜ್ಯ ಆಟೋ ಯೂನಿಯನ್ ಅಧ್ಯಕ್ಷ ಕೆ.ವಿ. ಸುರೇಶ್ಕುಮಾರ್, ದುಡಿಯುವ ಕೈಗಳ ಶ್ರೇಷ್ಠತೆ ಸಾರುವ ದಿನವೇ ಇಂದು ಎಂದು ತಿಳಿಸಿ, ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಈ ದಿನವನ್ನು ಆಚರಿಸುತ್ತಿರುವುದಾಗಿ ತಿಳಿಸಿದರು.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ರಾಜ್ಯ ಸರ್ಕಾರ ಕಾರ್ಮಿಕರ ಸುರಕ್ಷತಾ ಯೋಜನೆಗಾಗಿ ವರ್ಷಕ್ಕೆ 10 ಕೋಟಿ ರು. ಖರ್ಚು ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಪಿಂಚಣಿ ಯೋಜನೆ ಜಾರಿಯಾಗಿದ್ದು, ಈಗಾಗಲೇ 2.30 ಲಕ್ಷ ಮಂದಿಗೆ ಈ ಸೌಲಭ್ಯ ದೊರಕಿದೆ, ಅದೇ ರೀತಿ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಡಿ ಆರೋಗ್ಯ ವಿಮೆ ದೊರಕುತ್ತಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಎ.ವಿ. ಆನಂದ್, ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮೊದಲು ನೋಂದಾಯಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿ, ಆಟೋ ಚಾಲಕರು ಸಂಚಾರಿ ನಿಯಮಗಳ ಪಾಲನೆಗೆ ಕೋರಿದರು.
ಇದೇ ಸಂದರ್ಭದಲ್ಲಿ ನಗರಸಭೆಯ ಸ್ವಚ್ಛತಾ ಕಾರ್ಮಿಕರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಅಮ್ಜದ್ಪಾಷ, ಬೀಡಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ಅಸೀಫ್ಪಾಷ ಇದ್ದರು. ಬೀಡಿಕಾರ್ಮಕರ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನಜೀಬುನ್ನೀಸಾ ನಿರೂಪಿಸಿ, ಮಂಜುನಾಥ್ ಸ್ವಾಗತಿಸಿ, ವಂದಿಸಿದರು.
ಕೆಜಿಎಫ್ನಲ್ಲಿ...
ಕೆಜಿಎಫ್: ದೇಶಕ್ಕೆ ಕಟ್ಟಡ ಕಾರ್ಮಿಕರ ಕೊಡುಗೆ ಪ್ರಮುಖವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ರೇಣುಕಾಪ್ರಸಾದ್ ಹೇಳಿದರು.
ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರಿಗೆ ನಗರದ ಕಿಂಗ್ಜಾರ್ಜ್ ಹಾಲ್ ಆವರಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಮಿಕರಿಗಾಗಿ ಸರ್ಕಾರದಿಂದ ನೀಡುವ ಕಾರ್ಯಕ್ರಮಗಳ ಬಗ್ಗೆ ಅರಿವು ಸಿಗುತ್ತಿಲ್ಲ ಈ ಹಿನ್ನಲೆಯಲ್ಲಿ ಸರ್ಕಾರಗಳು ಕಾರ್ಮಿಕರಿಗೆ ಇಂತಹ ಕಾನೂನು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕಿದೆ ಎಂದರು. ನ್ಯಾಯಾಧೀಶರಾದ ಸುಬ್ರಮಣ್ಯ ಮಾತನಾಡಿ, ಕಟ್ಟಡ ಕಾರ್ಮಿಕರ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು. ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ದೊರೆಯುವ ಯೋಜನೆಗಳ ಬಗ್ಗೆ ನಿವೃತ್ತ ಕಾರ್ಮಿಕ ನಿರೀಕ್ಷಕ ಜಿ. ರಾಮಕೃಷ್ಣ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಯೋಜನೆಗಳ ಬಗ್ಗೆ ವಕೀಲ ಕೆ.ಆರ್.ಧನರಾಜ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಿಣಿಕೇರಿ, ಕೋಲಾರ ಪ್ರಧಾನ ಹಿರಿಯ ಸಿವಿಲ್ ನ್ಯಾಯದೀಶ ಕೆಂಗಬಾಲಯ್ಯ, ಗಂಗಾಧರ್ ಮಾತನಾಡಿದರು. ವಿಜಯಕುಮಾರ್, ಉಪಾಧ್ಯಕ್ಷ ವಿಜಯಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

