ರಸ್ತೆ ರಿಪೇರಿಗೆ ದುಡ್ಡಿಲ್ಲ!?
ಬಂಗಾರಪೇಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದರೂ ಗ್ರಾಮೀಣ ರಸ್ತೆಗಳ ಸ್ಥಿತಿ ಗತಿಗಳಲ್ಲಿ ಯಾವುದೇ ಬದಲಾವಣೆಗಳು ಕಂಡಿಲ್ಲವಾದರೂ ಲೋಕೋಪಯೋಗಿ ಇಲಾಖೆ ಸಚಿವರ ಬಂಗಲೆ ಮಾತ್ರ ಕೋಟಿಗಳಲ್ಲಿ ನವೀಕರಣಗೊಂಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿಯೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ಮಂಜೂರಾಗಿತ್ತು. ಆದರೆ ಅಭಿವೃದ್ಧಿ ಮಾತ್ರ ಕಂಡಿಲ್ಲ. ಹಾಗಾದರೆ ಕೋಟಿ ಕೋಟಿ ಹಣ ಎಲ್ಲಿ ಏನಾಯಿತು ಎಂಬುದು ದೇವರಿಗೇ ಗೊತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು ನೀಡಿ ಭರವಸೆಗಳು ಮತ್ತು ಸಾಗಿದ ವೇಗದಿಂದ ಜನರು ಹೊಸ ಕನಸುಗಳನ್ನು ಕಂಡಿದ್ದರು.
ಆದರೆ ವರ್ಷವಾದರೂ ಪಟ್ಟಣ ಪ್ರದೇಶದ ರಸ್ತೆಗಳಂತೆ ಗ್ರಾಮೀಣ ಭಾಗದ ರಸ್ತೆಗಳೂ ಸಂರ್ಪೂಣವಾಗಿ ಹಾಳಾಗಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಒಂದು ಕಡೆ ಹೊಸ ರಸ್ತೆಗಳ ನಿರ್ಮಾಣ ಮಾಡುತ್ತಿದ್ದರೂ ಕಳಪೆ ಕಾಮಗಾರಿಯಿಂದ ಕಾಮಗಾರಿ ನಡೆದ ತಿಂಗಳಲ್ಲೇ ಮತ್ತೆ ಹಾಳಾಗುತ್ತಿದ್ದರೂ ಗುತ್ತಿಗೆದಾರರನ್ನು ಪ್ರಶ್ನಿಸುವುದಿಲ್ಲ. ಮಾತ್ತೆತ್ತಿದರೆ ಕಾಮಗಾರಿಗಳಲ್ಲಿ ರಾಜಿಯಿಲ್ಲ. ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಹಿಂದಿನ ಶಾಸಕರೂ ಹೇಳಿದ್ದರೂ ಹಾಲಿ ಶಾಸಕರೂ ಅದನ್ನೇ ಪುನರುಚ್ಚರಿಸಿದ್ದಾರೆ. ವಿಪರ್ಯಾಸವೆಂದರೆ ಎಲ್ಲಾ ಕಡೆ ಕಳಪೆ ರಸ್ತೆ ಡಾಂಬರೀಕರಣ, ಹೊಸ ರಸ್ತೆ ನಿರ್ಮಾಣದಲ್ಲಿ ಕಳಪೆ ಕಂಡರೂ ಇದುವರೆಗೂ ಯಾರನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ. ತಾಲೂಕಿನ ಗಡಿ ಭಾಗವಾದ ದೋಣಿಮಡಗು ಪಂ-ಬತ್ತಲಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿ ದಶಕಗಳೇ ಕಳೆದರೂ ಇದುವರೆಗೂ ಮೋಕ್ಷ ಸಿಕ್ಕಿಲ್ಲ. ಈ ಗ್ರಾಮಕ್ಕೆ ಬಸ್ಸುಗಳು ಹೋಗಿ ಬರಲು ಹರಸಾಹಸ ಮಾಡಬೇಕು. ಆಯಾ ತಪ್ಪಿದರೆ ನೆಲಕ್ಕೆ ಉರುಳುವುದು ಖಚಿತ ಇದಕ್ಕೆ ತಾಜಾ ಉದಾಹರಣೆ ಬುಧವಾರ ಬೋರ್ ಲಾರಿಯೊಂದು ರಸ್ತೆ ಅವ್ಯವಸ್ಥೆಯಿಂದ ನೆಲಕ್ಕೆ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಗಡಿ ಭಾಗದ ರಸ್ತೆಗಳು ಸರ್ಕಾರಕ್ಕೆ ಕಾಣಿಸುವುದಿಲ್ಲವೆ ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.
ಇನ್ನು ಎಷ್ಟು ಜನರ ಪ್ರಾಣ ಹೋದ ಮೇಲೆ ರಸ್ತೆ ದುರಸ್ತಿ ಕಾಣುವುದು ಎಂದು ಕೇಳುವಂತಾಗಿದೆ. ಆದರೆ ಇದಕ್ಕೆ ಉತ್ತರ ಕೊಡುವವರು ಯಾರು. ಚುನಾವಣೆ ವೇಳೆ ಮಾತ್ರ ಮತ ಭೇಟಿಗೆ ಬರುವ ಜನಪ್ರತಿನಿಧಿಗಳು ದಶಕಗಳಿಂದ ಭರವಸೆ ಕೊಡುತ್ತಲೇ ಬಂದಿದ್ದಾರೆ ಇನ್ನೂ ಈಡೇರಿಲ್ಲ. ಲೋಕೋಪಯೋಗಿ ಇಲಾಖೆ ಸಚಿವರ ಬಂಗಲೆ ನವೀಕರಣಕ್ಕೆ ಮಾತ್ರ ಕೋಟಿ ಕೋಟೆ ವೆಚ್ಚ ಮಾಡುವರು ರಸ್ತೆಗಳ ದುರಸ್ತಿಗೆ ಹಣವಿಲ್ಲವೆ. ಸಚಿವರು ತಮ್ಮ ಬಂಗಲೆ ನವೀಕರಿಸುವ ಬದಲು ಹಳ್ಳಿ ರಸ್ತೆಗಳಿಗೆ ಮೊದಲು ಮೋಕ್ಷ ಕಲ್ಪಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

