ಕಾರ್ಮಿಕರ ಶೋಷಣೆಗೆ ವಿರೋಧ
ಬಂಗಾರಪೇಟೆ: ರಾಷ್ಟ್ರದ ಅಭಿವೃದ್ಧಿಗೆ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಯಾವುದೆ ಸೌಲಭ್ಯ ನೀಡದಿರುವುದು ವಿಷಾದದ ಸಂಗತಿ ಎಂದು ಆದಿಮ ಸಂಘಟನೆ ಸಂಸ್ಥಾಪಕ ಅಯ್ಯಪಲ್ಲಿ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಬಂಡವಾಳಶಾಹಿ ವ್ಯವಸ್ಥೆಯಿಂದ ಕಾರ್ಮಿಕರು ಶೋಷಣೆಗೆ ಒಳಪಟ್ಟಿದ್ದಾರೆ. ಕನಿಷ್ಠ ಕೂಲಿ ಕೂಡ ಸಿಗುತ್ತಿಲ್ಲ. ಸರ್ಕಾರಿ ನಿಯಮ ಜಾರಿ ಮಾಡುವಲ್ಲಿ ಅಧಿಕಾರಿಗಳು ಕೂಡ ಸೂಕ್ತ ಕಾಳಜಿ ವಹಿಸುತ್ತಿಲ್ಲ. ಅಸಂಘಟಿತ ಕಾರ್ಮಿಕರ ಅನುಕೂಲಕ್ಕಾಗಿ ಸಂವಿಧಾನಬದ್ಧ ಹಕ್ಕುಗಳು ಜಾರಿಯಾಗಬೇಕು ಎಂದರು.
ತಾಲೂಕಿನ ಮಾವಳ್ಳಿ ಪಂಚಾಯಿತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 8 ಗಂಟೆ ದುಡಿಯುತ್ತಿರುವ ಸಂಘಟಿತ ಕಾರ್ಮಿಕರಿಗೆ ಉತ್ತಮ ವೇತನ, ಸೇವಾ ಭದ್ರತೆ, ಸೌಲಭ್ಯ ಸಿಗುತ್ತಿದೆ. ಆದರೆ 12 ಗಂಟೆ ಶ್ರಮಿಸಿದರೂ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ಕೂಲಿ ಸಿಗುತ್ತಿಲ್ಲ. ಅಲ್ಲದೆ ಇವರ ರಕ್ಷಣೆಗೆ ಯಾವುದೇ ಪರಿಣಾಮಕಾರಿ ಕಾನೂನು ಕೂಡ ಜಾರಿಯಾಗಿಲ್ಲ ಎಂದು ವಿಷಾದಿಸಿದರು.
ಪ್ರಸ್ತುತ ಜಾರಿಯಾಗುತ್ತಿರುವ ಕಾರ್ಮಿಕರ ಕಲ್ಯಾಣ ನೀತಿ, ಧೋರಣೆಗಳು ಕಾರ್ಮಿಕರ ಬಲ ಕುಗ್ಗಿಸುತ್ತಿದೆ. ಮುಂದುವರಿದರೆ ಬಂಡವಾಳಶಾಹಿ ವ್ಯವಸ್ಥೆ ಬಲಿಷ್ಟವಾಗಿ ಕಾರ್ಮಿಕರ ಸ್ಥಿತಿ ಮತ್ತಷ್ಟು ಶೋಚನೀಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ದೇಶದ ನಾಗರಿಕತೆ ಬೆಳವಣಿಗೆಯಲ್ಲಿ ಕಾರ್ಮಿಕರ ಶ್ರಮ ಇದೆ. ಕೃಷಿ, ಕೈಗಾರಿಕೆ, ತೃತೀಯ ವಲಯದಲ್ಲಿ ಸುಂದರವಾಗಿ ಕಾಣುವ ಪ್ರತಿಯೊಂದು ವಸ್ತುವಿನಲ್ಲಿ ಅವರ ಬೆವರು ಅಡಗಿದೆ. ಸರ್ಕಾರ ಅವರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕಿದೆ ಎಂದರು. ಅಸಂಘಟಿತ ಕಾರ್ಮಿಕರು ಒಟ್ಟಾಗಿ ಹೋರಾಟ ನಡೆಸಿ ತಮ್ಮ ಹಕ್ಕು ಪಡೆಯಬೇಕು. ದುಡಿಮೆಗೆ ತಕ್ಕ ಪ್ರತಿಫಲ ದೊರಕಿಸಿಕೊಳ್ಳಬೇಕು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

