ಕೋಲಾರ

ಮೀಟರ್ ಹಾಕದೆ 'ಆಟೋ'ಟ

Published On :

ಕ.ಪ್ರ.ವಾರ್ತೆ, ಕೋಲಾರ, ಮೇ.2
ಸೆಕ್ಷನ್ 66ರ ಮೋಟಾರ್ ವಾಹನಗಳ ಕಾಯಿದೆ 1988ರ ಪ್ರಕಾರ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸರಬೇಕು.
ಆದರೆ, ಕೋಲಾರ ಸೇರಿದಂತೆ ರಾಜ್ಯದ ಬಹುತೇಕ ಕಡೆ ಸರ್ಕಾರದ ನಿಯಮ ಪಾಲನೆ ಆಗುತ್ತಿಲ್ಲ.
ರಾಜಕಾರಣಿಗಳ ಹಸ್ತಕ್ಷೇಪ, ಸಂಘಟನೆಗಳ ಧಮಕಿಯಿಂದಾಗಿ ಪ್ರಾದೇಶಿಕ ಸಾರಿಗೆ ಸಂಸ್ಥೆ ಅಧಿಕಾರಿಗಳು ಸಹ ಪ್ರಯಾಣಿಕರಿಗೆ ಆಗುತ್ತಿರುವ ಹೊರೆ, ಶೋಷಣೆ ತಡೆಗಟ್ಟಲು ಅಸಹಾಯಕರಾಗಿದ್ದಾರೆ.
ಸೆಕ್ಷನ್ 192ಓ ಪ್ರಕಾರ ಪ್ರತಿಯೊಂದು ಆಟೋರಿಕ್ಷಾಗಳ ನೋಂದಣಿಗಾಗಿ 750 ರು.ಶುಲ್ಕ, ಪರವಾನಗಿ ಇಲ್ಲದೆ ಓಡಿಸುವ ಆಟೋಗಳಿಗೆ 300 ರು.ದಂಡ ವಿಧಿಸುವ ಪ್ರಾದೇಶಿಕ ಸಾರಿಗೆ ಇಲಾಖೆಯು ಕಡ್ಡಾಯವಾಗಿ ಮೀಟರ್ ಅಳವಡಿಸದವರಿಗೆ ದಂಡ ಇಲ್ಲವೇ ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡದಿರುವುದರಿಂದ ಪ್ರಯಾಣಿಕರು ಆಟೋ ರಿಕ್ಷಾ ಚಾಲಕರೊಂದಿಗೆ ಕನಿಷ್ಠ ದರದ ವಿಚಾರವಾಗಿ ಪ್ರತಿನಿತ್ಯ ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಾನಗರಗಳಲ್ಲಿ ಮಾತ್ರ: ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು ಮಹಾ ನಗರಗಳಲ್ಲಿ ಮಾತ್ರ ಆಟೋ ರಿಕ್ಷಾ ಚಾಲಕರು ಮೀಟರ್ ಅಳವಡಿಸಿಕೊಂಡು ಮಾದರಿ ಆಗಿದ್ದಾರೆ. ಕೆಲವರು ಮಾತ್ರ ಮೀಟರ್ ಹಾಕಿಯೂ ಹೆಚ್ಚುವರಿ ಹಣಕ್ಕಾಗಿ ಪ್ರಯಾಣಿಕರ ಬಳಿ ಒತ್ತಾಯಿಸಿ, ಕೊಡದಿದ್ದಾಗ ಅನುಚಿತವಾಗಿ ವರ್ತಿಸುವ ಬೆರಳೆಣಿಕೆಯಷ್ಟು ಘಟನೆಗಳು ನಡೆಯುತ್ತಿದ್ದು, ಗ್ರಾಹಕರ ವೇದಿಕೆಗೆ ಸೂಕ್ತ ದಾಖಲೆಗಳೊಂದಿಗೆ ಹೋದರೆ ಪ್ರಯಾಣಿಕರಿಂದ ಕಸಿದುಕೊಂಡ ಹಣಕ್ಕಿಂತ ದುಪ್ಪಟ್ಟು ಪರಿಹಾರ ನೀಡುವ ಅವಕಾಶವನ್ನು ಸಹ ಕಾನೂನಿನಲ್ಲಿ ಒದಗಿಸಲಾಗಿದೆ.
ಮೀಟರ್ ಅಳವಡಿಸಿದರೆ ಹೆಚ್ಚು ಹಣ ಸಿಗುವುದಿಲ್ಲ ಎಂಬುದು ಚಾಲಕರ ವಾದ, ಮೀಟರ್ ಹಾಕಿ ಯಂತ್ರದಲ್ಲಿ ತೋರುವ ಹಣ ನೀಡಲು ಬದ್ಧವೆಂಬುದು ಪ್ರಯಾಣಿಕರ ಪ್ರತಿವಾದ. ಆದರೆ, ಸಮಸ್ಯೆ ನಿವಾರಣೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಪ್ರಯಾಣಿಕರು ಪರದಾಡುವುದು ತಪ್ಪುತ್ತಿಲ್ಲ.
ಕೋಲಾರದಂತಹ ನಗರಗಳಲ್ಲಿ ಮೀಟರ್ ಅಳವಡಿಸಿಕೊಂಡು ಆಟೋ ಓಡಿಸುವುದು ಕಷ್ಟ. ಜನರಲ್ ಇಲ್ಲವೇ ಮೀಟರ್‌ಗೆ 600 ರಿಂದ 700 ರು.ಖರ್ಚು ಆಗುತ್ತದೆ, ಡಿಜಿಟಲ್ ಮೀಟರ್‌ಗೆ 2700ರಿಂದ 3 ಸಾವಿರ ಬೇಕಾಗುತ್ತದೆ. ಕಡಿಮೆ ಸಂಖ್ಯೆಯಲ್ಲಿ ಆಟೋಗಳು ಇದ್ದರೆ ಹೇಗೋ ನಿಬಾಯಿಸಬಹುದು, ಕೋಲಾರ ಜಿಲ್ಲೆಯಲ್ಲಿ 2012ರ ಮಾರ್ಚ್ 31ಕ್ಕೆ 4895 ಅಧಿಕೃತ ಆಟೋಗಳಿದ್ದವು. ಪ್ರಸ್ತುತ ಪರವಾನಗಿ ಇರುವ 3000 ಆಟೋಗಳು ಮಾತ್ರ ಓಡುತ್ತಿದ್ದು ಅನಧಿಕೃತವಾಗಿ ಜಿಲ್ಲೆಯಾದ್ಯಂತ 8 ಸಾವಿರಕ್ಕೂ ಹೆಚ್ಚು ಆಟೋಗಳು ಓಡುತ್ತಿದ್ದರೂ ಅಧಿಕಾರಿಗಳು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆಟೋರಿಕ್ಷಾ ಚಾಲಕರು ಅಳಲು ತೋಡಿಕೊಂಡಿದ್ದಾರೆ.
ತಿಂಗಳ ಕಾಲಾವಕಾಶ ನೀಡಲಾಗಿತ್ತು: ಇಂಧನ ಬೆಲೆ ಏರಿಕೆ, ದುಬಾರಿ ನಿರ್ವಹಣಾ ವೆಚ್ಚ ಇತ್ಯಾದಿ ಕಾರಣಗಳಿಂದ ಕನಿಷ್ಟ ದರ ರು.25ಕ್ಕೆ ಒತ್ತಾಯಿಸಲಾಗಿತ್ತು. ಕಳೆದ ಫೆಬ್ರವರಿ 11 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮೀಟರ್ ಇರುವ ಆಟೋಗಳಿಗೆ ಮಾತ್ರ ಕನಿಷ್ಠ ದರ ರು. 25 ನಿಗದಿ ಮಾಡಿ ಉಳಿದಂತೆ ಮೀಟರ್ ಇಲ್ಲದ ಆಟೋಗಳು ರು.20 ಪಡೆಯುವಂತೆ ಹಾಗೂ ಡಿಜಿಟಲ್ ಮೀಟರ್ ಅಳವಡಿಕೆಗೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಕೋಲಾರ ನಗರದ ವ್ಯಾಪ್ತಿ 2ರಿಂದ 3 ಕಿಮೀ ಇದ್ದರೂ ಆಟೋ ಚಾಲಕರು ಹೆಚ್ಚು ಹಣ ಕೇಳುವ ಮೂಲಕ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ಸಂಘರ್ಷ ತಪ್ಪಿಸಲು ಜಿಲ್ಲಾಧಿಕಾರಿ ಮತ್ತೊಮ್ಮೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ ಕರೆದು ಡಿಜಿಟಲ್ ಮೀಟರ್‌ಗೆ ಹೆಚ್ಚು ಹಣ ಭರಿಸಲು ಆಗದಿದ್ದ ಪಕ್ಷದಲ್ಲಿ ಕೇಬಲಲ್ಮೀಟರ್ ಅನ್ನು ತಕ್ಷಣ ಅಳವಡಿಸಿಕೊಂಡು ಪ್ರಯಾಣಿಕರಿಗೆ ಆಗುತ್ತಿರುವ ಶೋಷಣೆ ತಪ್ಪಿಸಬೇಕಾಗಿದೆ.

 ಪಾ.ಶ್ರೀ.ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.