ಕೋಲಾರ

ವಿದ್ಯುತ್ ಅವಘಡ: ದಂಪತಿ ಸಾವು

Published On :

ಮುಳಬಾಗಲು: ತಾಲೂಕಿನ ಉತ್ತನೂರು ಗ್ರಾಪಂ ವ್ಯಾಪ್ತಿಯ ನಲ್ಲಂಡಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ವಿದ್ಯುತ್
ಶಾಕ್‌ನಿಂದಾಗಿ ದಂಪತಿ ಸಾವಿಗೀಡಾಗಿರುವ ಪ್ರಕರಣ ವರದಿಯಾಗಿದೆ.  ಕೃಷಿ ಪಂಪ್‌ಸೆಟ್‌ನ ಪ್ಯಾನಲ್‌ಬೋರ್ಡ್‌ನ ಫೀಸ್ ಆಳವಡಿಸುವ ವೇಳೆಯಲ್ಲಿ (ಲೋಡ್ ಶೆಡ್ಡಿಂಗ್ ಸಮಯದಲ್ಲಿ) ಹಠಾತ್ ವಿದ್ಯುತ್ ಪೂರೈಕೆ ಉಂಟಾಗಿ ಎ.ನಾಗರಾಜು (35),ಪತ್ನಿ ಕನಕಮ್ಮ(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿದ್ಯುತ್ ಶಾಕ್ ವೇಳೆ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ಮೃತರಾಗಿದ್ದಾರೆ. ಪರಿಶೀಲನೆ ವೇಳೆ ಬೆಸ್ಕಾಂ ಅಧಿಕಾರಿಗಳು ಆಗಮಿಸಿ ಲೋಡ್ ಶೆಡ್ಡಿಂಗ್ ವೇಳೆಯಲ್ಲೇ ಹಠಾತ್ ವಿದ್ಯುತ್ ಪೂರೈಕೆ ಯಾದ ಕಾರಣ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.  ನಾಗರಾಜು-ಕನಕಮ್ಮ ದಂಪತಿ ರು.3ಲಕ್ಷ ಸಾಲ ಮಾಡಿ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ಪಡೆದಿದ್ದರು.
ಮೃತ ಕುಟುಂಬಕ್ಕೆ ಬೆಸ್ಕಾಂ ವತಿಯಿಂದ ಪರಿಹಾರ ನೀಡಲು ಗ್ರಾಮದ ಮುಖಂಡ ನಲ್ಲಂಡಹಳ್ಳಿ ರಮೇಶ್, ರೈತ ಮುಖಂಡ ಪೊಂಬರಹಳ್ಳಿ ರಮೇಶ್ ಮತ್ತಿತರರು ಒತ್ತಾಯಿಸಿದ್ದಾರೆ.
ಹುಲ್ಲಿನ ಮೆದೆಗೆ ಬೆಂಕಿ
ಮುಳಬಾಗಲು: ಪಟ್ಟಣದ ಕುರುಬರಪೇಟೆಯ ಬಿ.ಶಂಕರಪ್ಪ ಎಂಬುವರಿಗೆ ಸೇರಿದ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಚುಹೋದ ಪ್ರಕರಣ ಶುಕ್ರವಾರ ಬೆಳಗ್ಗೆ ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಮತ್ತೊಂದು ಪ್ರಕರಣದಲ್ಲಿ ಉತ್ತನೂರು ಗ್ರಾಮದಲ್ಲಿ ಪ್ರಭಾಕರರೆಡ್ಡಿ ಎಂಬುವರಿಗೆ ಸೇರಿದ ಹುಲ್ಲಿನ ಮೆದೆ ಬೆಂಕಿಗೆ ಆಹುತಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಕಾರ್ಮಿಕರಿಗೆ ಸಂಬಳವಿಲ್ಲ
ಮುಳಬಾಗಲು: ಕಪ್ಪಲಮೊಡಗು ಸಮೀಪದ ಎಂಜಿ-6 ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಪ್ರಾರಂಭವಾದ 6 ತಿಂಗಳಲ್ಲೇ ಪಾಲುದಾರರ ನಡುವೆ ಉಂಟಾದ ಭಿನ್ನಭಿಪ್ರಾಯದಿಂದಾಗಿ, ಕಾರ್ಮಿಕರು ವೇತನ ಪಡೆಯದೆ ದುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಎಂಜಿ-6ರಲ್ಲಿ ಪ್ರಾರಂಭದಲ್ಲಿ 48 ಮಂದಿ ಸಿಬ್ಬಂದಿ ಇದ್ದರು. ವೇತನ ಸಿಗದ ಕಾರಣ ಸಿಬ್ಬಂದಿ ಸಂಖ್ಯೆ 20ಕ್ಕೆ ಇಳಿದಿದೆ.
ಇರುವ ಸಿಬ್ಬಂದಿಗೂ ಸಹ ಕಳೆದ ನವೆಂಬರ್‌ನಿಂದಲೂ ವೇತನ ನೀಡಿಲ್ಲ. ಕೆಲಸ ಬಿಟ್ಚರೆ ಬೇರೆಡೆ ಉದ್ಯೋಗ ಸಿಗುವುದು ಕಷ್ಟ. ತಡವಾಗಿಯಾದರೂ ಸಂಬಳ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ದುಡಿಯುತ್ತಿರುವುದಾಗಿ ನೌಕರರಾದ ಮುನಿರಾಜು, ಆರ್.ನಾಗರಾಜ್, ಎಸ್.ಅರುಣಕುಮಾರಿ, ರೂಪಶ್ರೀ ಅಲವತ್ತುಕೊಂಡಿದ್ದಾರೆ.
ಅಗಸ್ತೇಶ್ವರ ಸ್ವಾಮಿ ರಥೋತ್ಸವ
ಮುಳಬಾಗಲು: ಪಟ್ಟಣದ ಪ್ರಸನ್ನ ಅಗಸ್ತೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಮೇ 4ರಿಂದ 7ರವರೆಗೆ ನಡೆಯಲಿದೆ. 4ರಂದು ರಾಮಚಂದ್ರ ಪ್ರಭು ಅಗಸ್ತೇಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ. ಪಂಚಾಮೃತಾಭಿಷೇಕ, ಸಹಸ್ರನಾಮ, ಮಹಾನೇವೇದ್ಯ, ಮಂತ್ರಪುಷ್ಪ, ಮಂಗಳಾರತಿ ಉತ್ಸವ ಅಲಂಕಾರ ನೆರವೇರಲಿದೆ. ಪ್ರಧಾನ ಅರ್ಚಕರಾದ ಎಂ.ಜಿ.ಶ್ರೀನಿವಾಸವಿಠ್ಠಲ್, ಶ್ರೀರಾಮವಿಠ್ಠಲ್, ಎಂ.ಜಿ. ಬಿಂದುಮಾಧವರಾವ್, ಎಂ.ಬಿ.ಪಾಂಡುರಂಗಿ ಮತ್ತಿತರರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ ಎಂದು ಪ್ರಕಟಣೆ ತಿಳಿಸಿದೆ.
5 , 6 ರಂದು ಬೇಸಿಗೆ ಶಿಬಿರ
ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ವೇದಿಕೆ-ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸಿರಿಗನ್ನಡ ವೇದಿಕೆ ಸಹಕಾರದಿಂದ ನಗರದ ಮಹಾತ್ಮ ಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಮೇ 5, 6 ರಂದು ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಉಚಿತ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ ಎಂದು ತಾಲೂಕು ಚುಸಾಪ ಅಧ್ಯಕ್ಷ ಕಾಗತಿ ವಿ.ವೆಂಕಟರತ್ನಂ ತಿಳಿಸಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ನಡೆಯುವ ಈ ಶಿಬಿರದಲ್ಲಿ ಭಾವಗೀತೆ, ಜನಪದಗೀತೆ, ಉಕ್ತಲೇಖನ, ಪ್ರಬಂಧ ರಚನೆ, ರಂಗೋಲಿ ಬಿಡಿಸುವುದು, ಕರಕುಶಲ ತರಬೇತಿ, ಯೋಗಾಭ್ಯಾಸ, ಚಿತ್ರ ಬಿಡಿಸುವುದು, ನಾಟಕ, ಚುಟುಕು ರಚನೆ,ಧಾರ್ಮಿಕ ಶ್ಲೋಕ ಪಠಣ, ವಚನ ಮುಂತಾದ ಕಾರ್ಯಕ್ರಮಗಳು ಇರುತ್ತವೆ.  ಮೇ 5 ರಂದು ಬೆಳಿಗ್ಗೆ 10.30 ಗಂಟೆಗೆ ಮಹಾತ್ಮಗಾಂಧಿ ಸರ್ಕಾರಿ ಬಾಲಕರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಕೆ.ಎನ್.ರಮಣಾರೆಡ್ಡಿ ಶಿಬಿರ ಉದ್ಘಾಟಿಸಲಿದ್ದು, ಚಿಕ್ಕಬಳ್ಳಾಪುರ ಚುಸಾಪ ಜಿಲ್ಲಾಧ್ಯಕ್ಷ ಪಿ.ಎಂ.ಚಲಪತಿಗೌಡ ಮತ್ತಿತರರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣಪತ್ರ, ಬಹುಮಾನ ವಿತರಿಸಲಾಗುವುದು. ಆಸಕ್ತರು ಮಾಹಿತಿಗೆ, ಮೊ. 93435-29327 ಅಥವಾ 97388-28561 ಇಲ್ಲಿಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.