ಶೌಚನೀಯ ಸ್ಥಿತಿಗೆ ಪಿಡಿಒ ಪೀಡೆ!
ಕೋಲಾರ: ಬಾಗಲಕೋಟೆ, ಕೊಪ್ಪಳ ಹಿಂದುಳಿದ ಜಿಲ್ಲೆಯಾಗಿದ್ದರೂ ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಈ ಎರಡು ಜಿಲ್ಲೆಗಳು ರಾಜ್ಯಕ್ಕೆ ಮಾದರಿಯಾಗಿವೆ.
ಆದರೆ, ಕೋಲಾರ ಜಿಲ್ಲೆಯಲ್ಲಿ ರಾಜಕೀಯ ಹಸ್ತಕ್ಷೇಪ, ಗ್ರಾಪಂ ಪಿಡಿಒಗಳ ಉದಾಸೀನ ಹಾಗೂ ನೀರಿನ ಕೊರತೆಯಿಂದ 2013-14ನೇ ಸಾಲಿನಲ್ಲಿ ಶೇ.27.35ರಷ್ಟು ಮಾತ್ರ ಗುರಿ ಸಾಧನೆ ಮಾಡಲಾಗಿದೆ.
ಪ್ರತಿಯೊಂದು ಮನೆಯಲ್ಲಿ, ಶಾಲೆ, ಕಾಲೇಜು, ಅಂಗನವಾಡಿಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಿಂದ ಕೋಟ್ಯಾಂತರ ರುಪಾಯಿ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಕೋಲಾರ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಶೌಚಾಲಯ ನಿರ್ಮಾಣ ಸಾಧ್ಯವಾಗಿಲ್ಲ.2014ರ ಮಾರ್ಚ್ ವೇಳೆಗೆ ಜಿಲ್ಲೆಯಲ್ಲಿ 1,64,302 ಕುಟುಂಬಗಳಲ್ಲಿ, 232 ಶಾಲೆಗಳಲ್ಲಿ ಹಾಗೂ 528 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳು ಇಲ್ಲವೆಂದು ಗುರುತಿಸಲಾಗಿದ್ದು ಸರ್ಕಾರ 58472 ಶೌಚಾಲಯಗಳನ್ನು ನಿರ್ಮಿಸಲು ಜಿಲ್ಲಾ ಪಂಚಾಯಿತಿಗೆ ಗುರಿ ನಿಗದಿ ಮಾಡಿತ್ತು. ನಿರ್ಮಲ ಭಾರತ ಅಬಿಯಾನ ಯೋಜನೆಯಡಿ ಒಟ್ಟು 15,992(ಶೇ.27.35)ಶೌಚಾಲಯ ಮಾತ್ರ ನಿರ್ಮಿಸಲಾಗಿದೆ.
ಗ್ರಾಪಂ ಪಿಡಿಒಗಳಲ್ಲಿ ಶೇಕಡ 50ರಷ್ಟು ಮಂದಿ ವೈಯಕ್ತಿಕ ಶೌಚಾಲಯ ನಿರ್ಮಾಣ ಯೋಜನೆಗೆ ಆಸಕ್ತಿ ತೋರುತ್ತಿಲ್ಲ. ಕೇಂದ್ರ ಸರ್ಕಾರ ರು.4,700 ಗಳನ್ನು ಫಲಾನುಭವಿಗಳಿಗೆ ಆನ್ಲೈನ್ ಮೂಲಕ ಹಣ ಸಂದಾಯ ಮಾಡುವುದಕ್ಕೆ ಮುಂದಾಗಿರುವುದರಿಂದ ನಮಗೇನು ಇದರಿಂದ ಲಾಭವಿಲ್ಲವೆಂಬ ಧೋರಣೆಯಿಂದಾಗಿ ಸರ್ಕಾರದ ಮೂಲ ಉದ್ದೇಶಕ್ಕೆ ಹಿನ್ನಡೆ ಆಗುತ್ತಿದೆ.ಪಿಡಿಒಗಳು ಮನಸ್ಸು ಮಾಡಿದಲ್ಲಿ ಯೋಜನೆಯನ್ನು ಫಲಪ್ರದವಾಗಿಸಬಹುದು. ಸರ್ಕಾರ ಮನೆಗೊಂದು ಶೌಚಾಲಯ ಕಡ್ಡಾಯವಾಗಿ ಇರಬೇಕೆಂಬ ಉದ್ದೇಶದಿಂದ ಪಿಡಿಒಗಳಿಗೆ ಸಾಕಷ್ಟು ತರಬೇತಿ ನೀಡುತ್ತಿದೆ. ಸರ್ಕಾರಕ್ಕೆ ಅಗತ್ಯ ಮಾಹಿತಿ ನೀಡುವುದಕ್ಕೆ ಪಿಡಿಒಗಳು ವಿಫಲವಾಗಿರುವ ಹಿನ್ನಲೆಯಲ್ಲಿ ಶಿಸ್ತು ಕ್ರಮಗಳನ್ನು ಸಹ ಜಾರಿಗೆ ತಂದಿದ್ದರೂ ಪ್ರಯೋಜವಾಗುತ್ತಿಲ್ಲ.
ತಪ್ಪು ಮಾಹಿತಿ ವಿರುದ್ಧ ತನಿಖೆ: ಬಂಗಾರಪೇಟೆ ತಾಲೂಕಿನ ಬೇತಮಂಗಲದ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಇಲ್ಲದಿದ್ದರೂ ಶೌಚಾಲಯ ನಿರ್ಮಿಸಿರುವುದಾಗಿ ತಪ್ಪು ಮಾಹಿತಿ ನೀಡಿದ್ದ ಅಧಿಕಾರಿ ವಿರುದ್ಧವೂ ತನಿಖೆ ನಡೆದಿದೆ. ಕೊಳಚೆ ಪ್ರದೇಶ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸ ಮಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನತೆಯ ಆರೋಗ್ಯ ದೃಷ್ಟಿಯಿಂದ ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಫಲಾನುಭವಿಗಳಿಗೆ ತಲಾ 4700 ರು. ನರೇಗಾ ಯೋಜನಯಡಿ 5400 ಹಾಗೂ ವಿಶೇಷ ಅನುದಾನ ಪ್ರತಿ ಫಲಾನುಭವಿಗೆ 5 ಸಾವಿರ ರು. ಸೇರಿ ಒಟ್ಟು 15 ಸಾವಿರ ರು. ನೀಡುತ್ತಿದ್ದರೂ ಗುರಿ ಸಾಧನೆ ಮಾಡಲು ಆಗದಿರುವುದಕ್ಕೆ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.2013-14ನೇ ಸಾಲಿನಲ್ಲಿ ಶಾಲೆಗಳಲ್ಲಿ 40 ಶೌಚಾಲಯ ನಿರ್ಮಿಸಲು ಗುರಿ ನೀಡಿದ್ದು ಕೇವಲ 15(ಶೇ.38) ಸಾಧನೆ ಮಾಡಿದ್ದರೆ ಅಂಗನವಾಡಿಗಳಲ್ಲಿ 50 ಶೌಚಾಲಯಗಳಿಗೆ ಶೇ.8 ನಿರ್ಮಿಸಲಾಗಿದೆ.
ಪಿಡಿಒಗಳಿಗೆ ಕಟ್ಟುನಿಟ್ಟಿನ ಆದೇಶ: 33 ಸಾವಿರ ನಿರ್ಮಿಸಲು ಗುರಿ ಹೊಂದಲಾಗಿದೆ. ಪ್ರತಿಯೊಂದು ಗ್ರಾಪಂ ಪಿಡಿಒಗಳು ಗುರಿ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಉದ್ದೇಶ ಈಡೇರಿಸದ ಪಿಡಿಒಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಯೋಜನಾ ನಿರ್ದೇಶಕ ಚಲುವರಾಜು ತಿಳಿಸಿದ್ದಾರೆ.
-ಪಾ.ಶ್ರೀ.ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

