ಕೋಲಾರ

ಈಜುಕೊಳ ಸ್ವಚ್ಛಗೊಳಿಸಿ...

Published On :

ಚಿಕ್ಕಬಳ್ಳಾಪುರ ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆಯಿಂದ ನಿರ್ಮಿಸಲಾಗಿರುವ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದಿಂದ ಅನೇಕರಿಗೆ ತುಂಬಾ ಅನುಕೂಲವಾಗಿದೆ. ಬೇಸಿಗೆಕಾಲವಾಗಿರುವುದರಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನ ಈಜುಕೊಳಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಈಜುಕೊಳದಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಪ್ರತಿದಿನ ನೀರನ್ನು ಶುದ್ಧೀಕರಿಸಿ ಬದಲಾಯಿಸುವ ಕೆಲಸವಾಗದೆ ಸ್ವಚ್ಛತೆ ಸಮಸ್ಯೆ ಕಾಡುತ್ತಿದೆ.
ಅಲ್ಲದೇ ಈಜುಕೊಳದಲ್ಲಿ ನೀರನ್ನು ಶುದ್ಧಿಕರಿಸುವಂತಹ ಯಂತ್ರಗಳನ್ನು ಅಳವಡಿಸಲಾಗಿದ್ದರೂ ನೀರು ಶುದ್ಧೀಕರಣ ಮಾಡುವ ಅಗತ್ಯ ಔಷಧಿಗಳನ್ನು ಸಮರ್ಪಕವಾಗಿ ಬಳಸದೆ ಇರುವುದರಿಂದ ದುರ್ವಾಸನೆ ಬರುತ್ತದೆ. ಈಜುಕೊಳದಲ್ಲಿ ಈಜಾಡುವ ಸಂದರ್ಭದಲ್ಲಿ ಮಕ್ಕಳು ನೀರಿನಲ್ಲಿ ಎಂಜಲು ಉಗಿಯುವುದು ಸೇರಿದಂತೆ ನಾನಾ ರೀತಿಯಲ್ಲಿ ಗಲೀಜು ಮಾಡುತ್ತಾರೆ. ಇದರಿಂದ ಪ್ರತಿನಿತ್ಯ ನೀರನ್ನು ಶುದ್ಧೀಕರಿಸಬೇಕು. ಹೆಚ್ಚುವರಿ ನೀರನ್ನು ಹೊರ ಬಿಡಬೇಕು. ಶುಲ್ಕವನ್ನು ವಸೂಲಿ ಮಾಡುವವರು ಸೂಕ್ತ ರೀತಿಯ ಅನುಕೂಲ ಮಾಡಿಕೊಡದಿದ್ದರೆ ಹೇಗೆ?.
- ಸುಹಾಸ್, ಕ್ರೀಡಾಪಟು, ಚಿಕ್ಕಬಳ್ಳಾಪುರ
ರಸ್ತೆಯಲ್ಲಿ ಕಸದ ರಾಶಿ...
ಕೆಜಿಎಫ್ ನಗರದ ವಿವೇಕನಗರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಕಸದ ರಾಶಿ ತುಂಬಿಕೊಂಡು ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದ್ದು ಸ್ಥಳೀಯ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕೂಡಲೇ ಕಸ ವಿಲೇವಾರಿಗೆ ಮುಂದಾಗಬೇಕಿದೆ. ಅದೇ ರೀತಿ ಈ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಮತ್ತು ಬೀದಿಗಳಲ್ಲಿರುವ ಚರಂಡಿಗಳು ತುಂಬಿಕೊಂಡು ದುರ್ನಾತ ಬೀರುತ್ತಿದೆ ಇದರಿಂದ ಸೊಳ್ಳೆಗಳ ಮತ್ತಿತರ ಕೀಟನಾನುಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ವಿವೇಕನಗರ ಬಡಾವಣೆಯ ಸುತ್ತಮುತ್ತಲಿನಲ್ಲಿ ಶಾಲೆಗಳು, ದೇವಸ್ಥಾನಗಳು ಮತ್ತು ಹೊಟೇಲ್‌ಗಳಿದ್ದು ರಸ್ತೆಯಲ್ಲಿ ಕಳೆದ ವಾರದಿಂದ ಕಸದ ರಾಶಿ ತುಂಬಿಕೊಂಡು ಇದರಿಂದ ಪರಿಸರಕ್ಕೆ ಹಾನಿ ಉಂಟಾಗುವುದಲ್ಲದೆ ಇದರಿಂದ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ, ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮತ್ತು ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಕಸ ವಿಲೇವಾರಿಗೆ ಅಗತ್ಯ ಕ್ರಮವನ್ನು ಜರುಗಿಸಲು ಮುಂದಾಗಬೇಕಿದೆ.
- ಶಾಂತಕುಮಾರಿ, ವಿವೇಕನಗರ ಬಡಾವಣೆಯ ನಿವಾಸಿ
ಮೂಲ ಸೌಲಭ್ಯಗಳಿಲ್ಲದ ಸರ್ಕಾರಿ ಆಸ್ಪತ್ರೆ
ಇತಿಹಾಸ ಪ್ರಸಿದ್ಧ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲದೆ ರೋಗಿಗಳು ಮತ್ತು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಈ ಆಸ್ಪತ್ರೆಯಲ್ಲಿ ಕಳೆದ 6 ತಿಂಗಳಿಂದ ಕೊಳವೆ ಬಾವಿ ದುರಸ್ತಿಗೊಂಡಿದ್ದು ಕುಡಿಯಲು ನೀರಿಲ್ಲದೆ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಅಗತ್ಯ ಚಿಕಿತ್ಸೆಗೆ ವೈದ್ಯರಿಲ್ಲದೆ, ಸಲಕರಣಗಳು ಮತ್ತು ಉಪಕರಣಗಳಿಲ್ಲದೆ ಕ್ಷೇತ್ರದ ಜನರು ಪರದಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಆಸ್ಪತ್ರೆ ಕಡೆ ಗಮನ ಹರಿಸಬೇಕಾಗಿದೆ.
- ರಮೇಶ್‌ಕುಮಾರ್ ಎಂ.ಜಿ.,ಮಾರುಕಟ್ಟೆ ವ್ಯಾಪಾರಸ್ಥರು
ಸಿಗ್ನಲ್ ದೀಪ ಲೋಕಾರ್ಪಣೆ ಮಾಡಿ...
ಚಿಕ್ಕಬಳ್ಳಾಪುರ: ನಗರದಲ್ಲಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಗರದ ಪ್ರಮುಖ ಎರಡು ವೃತ್ತಗಳಾದ  ಮರಳು ಸಿದ್ದೇಶ್ವರ ಸ್ವಾಮಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಮುಂಭಾಗ ನೂತನವಾಗಿ ಸಿಗ್ನಲ್ ದೀಪ ಅಳವಡಿಸಲಾಗಿದೆ. ಆದರೆ ಕಳೆದ 3-4  ತಿಂಗಳ ಹಿಂದೆ ಅಳವಡಿಸಿರುವ ಸಿಗ್ನಲ್ ದೀಪಗಳು ಇದುವರೆಗೂ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ.  ಜಿಲ್ಲಾ ಕೇಂದ್ರವಾಗಿರುವುದರ ಜೊತೆಗೆ ಬೆಂಗಳೂರಿಗೆ ಸಮೀಪವಿರುವುದರಿಂದ ಹೆಚ್ಚಿಗೆ ಜನರು ಬಂದು ಹೋಗುತ್ತಿದ್ದು ವಾಹನ ದಟ್ಟಣೆ ಸದಾ ಹೆಚ್ಚಾಗಿರುತ್ತದೆ. ಈ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡಲು ನಗರಸಭೆ ವತಿಯಿಂದ ಪೊಲೀಸ್ ಇಲಾಖೆ ಕೋರಿಕೆ ಮೇರೆಗೆ ನಗರದ ಸಿದ್ದೇಶ್ವರ ವೃತ್ತ ಮತ್ತು ಪೊಲೀಸ್ ವೃತ್ತದಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಸಿದ್ದು, ಅಳವಡಿಸಿದಾಗಿನಿಂದಲೂ ಹಳದಿ ದೀಪ ಮಾತ್ರ ಬೆಳಗುತ್ತಿದೆ. ವಿಪರ್ಯಾಸವೆಂದರೆ ಇದುವರೆಗೂ ಇದು ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ಮರಳು ಸಿದ್ದೇಶ್ವರ ವೃತ್ತದಲ್ಲಿ ಸಿಗ್ನಲ್ ದೀಪ ಅಳವಡಿಸಿ 4 ತಿಂಗಳು ಕಳೆದರೂ ಸಾರ್ವಜನಿಕ ಸೇವೆಗೆ ಇದುವರೆಗೂ ಅರ್ಪಿಸಿಲ್ಲ. ಈಗಲಾದರೂ ಸಂಬಂಧಪಟ್ಟ ಇಲಾಖೆ ಸಿಗ್ನಲ್ ಲೈಟುಗಳು ಕಾರ್ಯ ನಿರ್ವಹಿಸುವಂತೆ ಮಾಡಲಿ.
-ವೆಂಕಟೇಶ್ ಪ್ರಸಾದ್, ಕೊರಚರಪೇಟೆ, ಚಿಕ್ಕಬಳ್ಳಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.