ಅಮೆ ನಡಿಗೆಯಲ್ಲಿ ಯರಗೋಳ್
ಕೋಲಾರ: ಶುದ್ಧವಾದ ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸಿರುವ ಕೋಲಾರ ಜಿಲ್ಲೆಯ ಎರಡು ಪಟ್ಟಣಗಳು, ಒಂದು ನಗರ ಹಾಗೂ 45 ಗ್ರಾಮಗಳಿಗೆ ಪರಿಹಾರ ಕಲ್ಪಿಸಲು ರೂಪಿಸಿರುವ ಯರಗೋಳ್ ನೀರಿನ ಯೋಜನೆಯ ಕಾಮಗಾರಿ ಅಮೆ ನಡಿಗೆಯಲ್ಲಿ ಸಾಗಿದೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಗ್ರಾಮದಲ್ಲಿ ಸದರಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಯೋಜನೆ ರೂಪಿಸಿದ್ದು ಅಂದಾಜು 260 ಕೋಟಿ ರು.ವೆಚ್ಚವಾಗಲಿದೆ.
2006ರಲ್ಲಿ ಯರಗೋಳ್ ಯೋಜನೆ ಜಾರಿಗೆ ಚಿಂತನೆ ಮಾಡಲಾಯಿತು. ರಾಜ್ಯ ಸರ್ಕಾರ ತನ್ನ ಪಾಲಿನ 90 ಕೋಟಿ ರು.ಗಳನ್ನು ಕರ್ನಾಟಕ ನೀರು ಸರಬರಾಜು ಮಂಡಳಿಗೆ ಪಾವತಿಸಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 30 ಕೋಟಿ ರು.ಗಳನ್ನು ಪೈಪ್ ಲೈನ್ ಕಾಮಗಾರಿಗೆ ಖರ್ಚು ಮಾಡಲಾಗಿದೆ.
2010ರಲ್ಲೇ ಮುಗಿಯಬೇಕಿತ್ತು: 2010ರಲ್ಲೇ ಯೋಜನೆ ಮುಗಿಯಬೇಕಾಗಿತ್ತು. ಆದರೆ, ರಾಜ್ಯ ಸರ್ಕಾರದ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಸಿಗುವುದು ವಿಳಂಬವಾಗಿತ್ತು. ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ನೀಡಬೇಕಾದರೆ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಪರ್ಯಾಯ ಭೂಮಿ ನೀಡಬೇಕೆಂಬ ಶರತ್ತು ವಿಧಿಸಿದ್ದರಿಂದ ಯೋಜನೆಗೆ ಅಧಿಕೃತ ಪರವಾನಗಿ ಸಿಗಲು ಕಷ್ಟವಾಯಿತು.
ಯೋಜನೆಗೆ ಅನಮತಿ ಸಿಗುವ ಮುನ್ನವೇ ಪೈಪ್ ಲೈನ್ ಕಾಮಗಾರಿ ನಡೆಸಲು ಕ್ರಮ ಕೈಗೊಂಡ ಶಾಸಕ ವರ್ತೂರ್ ಪ್ರಕಾಶ್ ಟೀಕೆಗೂ ಗುರಿಯಾಗಿದ್ದರು. ಆಗ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಶಾಸಕರು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರೂ ಆಗಿದ್ದರಿಂದ ಪೈಪ್ ಲೈನ್ ಕಾಮಗಾರಿ ವಿವಾದಕ್ಕೆ ಎಡೆಯಾಗಿತ್ತು.
ಯರಗೋಳ್ ಯೋಜನೆ ಕಾಮಗಾರಿ ವಿಳಂಬಕ್ಕೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಬಿಜೆಪಿ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದ ವರ್ತೂರ್ ಪ್ರಕಾಶ್, ಜಿಲ್ಲಾಧಿಕಾರಿ ವಿಳಂಬ ಮಾಡುತ್ತಿರುವುದಾಗಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಪರಿಣಾಮ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಯೋಜನೆ ಅನುಷ್ಠಾನಕ್ಕೆ ವೇಗ ನೀಡಿತು.
ಕಾಮಗಾರಿ ಸ್ಥಗತ: ಯರಗೋಳ್ ಯೋಜನೆ ಅನುಷ್ಠಾನಕ್ಕಾಗಿ ಯರಗೋಳ್ ಪ್ರದೇಶದಲ್ಲಿ ಸಿದ್ಧತೆ ನಡೆಯುತ್ತಿರುವ ಸಮಯದಲ್ಲೇ ಲೋಕಸಭಾ ಚುನಾವಣೆ ಬಂದಿದ್ದರಿಂದ ಕಲ್ಲುಬಂಡೆಗಳನ್ನು ಸಿಡಿಸಲು ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿ ಕಳೆದ ಒಂದು ತಿಂಗಳಿಂದ ಬಂಡೆ ಸಿಡಿಸುವ ಕೆಲಸ ಸ್ಥಗಿತಗೊಂಡಿದೆ. ಇದರಿಂದ ಜಲ್ಲಿ ಕ್ರಷರ್ ಯಂತ್ರಗಳು ಕೆಲಸವಿಲ್ಲದೆ ತುಕ್ಕು ಹಿಡಿಯುತ್ತಿವೆ. ಕಾಮಗಾರಿ ಕೆಲಸಕ್ಕಾಗಿ ಬಾಡಿಗೆಗೆ ತಂದಿದ್ದ ಟಿಪ್ಪರ್, ಇಟಾಚಿ, ಜೆಸಿಬಿ ಮುಂತಾದ ಯಂತ್ರೋಪಕರಣಗಳನ್ನು ವಾಪಸ್ ಕಳುಹಿಸಲಾಗಿದೆ.
ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಮೇ 28 ಕಡೆ ದಿನವಾಗಿದೆ. ಅಣೆಕಟ್ಟೆ ನಿರ್ಮಾಣ ಸ್ಥಳದಲ್ಲಿ ಇರುವ ಕಲ್ಲು ಬಂಡೆಗಳನ್ನು ಸಿಡಿಸಿ ಪಾಯ ಅಗೆಯಲು ಇನ್ನು ಕನಿಷ್ಠ 3 ತಿಂಗಳು ಬೇಕಾಗುತ್ತದೆ. ಜಲ್ಲಿ ಮತ್ತು ಸಿಮೆಂಟ್ ಮಿಶ್ರಣಕ್ಕೆ ಆರ್ಎಂಪಿ ಘಟಕ ಅಳವಡಿಸಿ ಪಾಯ ನಿರ್ಮಿಸಲು ಹಾಗೂ ಅಣೆಕಟ್ಟೆ ಕಟ್ಟಲು ಕನಿಷ್ಠ ಒಂದುವರೆ ವರ್ಷವಾದರೂ ಬೇಕಾಗುತ್ತದೆ.
ಈ ಕೆಲಸಕ್ಕೆ ಯಾವುದೇ ಅಡ್ಡಿ ಬರದಿದ್ದರೆ ಮಾತ್ರ 2015ರ ಏಪ್ರಿಲ್ 15ರೊಳಗೆ ಅಣೆಕಟ್ಟೆ ನಿರ್ಮಿಸಬಹುದು. ಆದರೆ, ಬಾಕಿ ಉಳಿಯುವ ಬೃಹತ್ ಗಾತ್ರದ ನೀರಿನ ತೊಟ್ಟಿ, ಕಾಲುವೆಗಳ ನಿರ್ಮಾಣ, ನೀರು ಶುದ್ಧೀಕರಣ ಘಟಕಗಳು, ವಿದ್ಯುತ್ ಸಂಪರ್ಕ, ಪವರ್ ಸ್ಟೇಷನ್, ಟ್ಯಾಂಕ್ಗಳ ನಿರ್ಮಾಣ, ಬಾಕಿ ಇರುವ ಪೈಪ್ ಲೈನ್ ಅಳವಡಿಕೆ ಕೆಲಸ ಹಾಗೂ 45 ಹಳ್ಳಿಗಳಿಗೆ ನೀರು ಹರಿಸಲು ಕೈಗೊಳ್ಳಬೇಕಾದ ಕಾಮಗಾರಿಗಳು ನಿಗದಿತ ಸಮಯದೊಳಗೆ ಮುಗಿಸಲು ಸಾಧ್ಯವೇ ಎಂಬ ಅನುಮಾನ ಜನತೆಯಲ್ಲಿ ಕಾಡತೊಡಗಿದೆ.
ದಿನಕ್ಕೆ 55 ಲೀಟರ್ ಶುದ್ಧ ನೀರು: ಬಂಗಾರಪೇಟೆ ತಾಲೂಕಿನ ಬೂದಿಕೋಟೆಯ ಮಾರ್ಕಂಡಯ್ಯ ಕೆರೆಯಿಂದ 16ಕಿಮಿ ಕಾಲುವೆ ನಿರ್ಮಿಸಿ ಅಲ್ಲಿನ ಕೋಡಿ ನೀರನ್ನು ಯರಗೋಳ್ ಅಣೆಕಟ್ಟೆಗೆ ಹರಿಸಲು ಉದ್ದೇಶಿಸಲಾಗಿದೆ. ವಾರ್ಷಿಕ ವಾಡಿಕೆ ಮಳೆ 710 ಮಿ.ಮೀ ಇದ್ದು, ಇದರಲ್ಲಿ ಶೇ.40ರಷ್ಟು ವ್ಯರ್ಥವಾದರೂ ಉಳಿದ ನೀರನ್ನು ಸಂಗ್ರಹಣೆ ಮಾಡಿ ಕನಿಷ್ಠ ಮೂರು ವರ್ಷಗಳ ಕಾಲ ಜನರಿಗೆ ದಿನ ಬಿಟ್ಟು ದಿನ ತಲಾ 55 ಲೀಟರ್ ಶುದ್ಧವಾದ ನೀರು ಕೊಡಲು ಚಿಂತನೆ ನಡೆದಿದೆ.
ಅಣೆಕಟ್ಟೆಯಲ್ಲಿ 1ಕೋಟಿ 38 ಲಕ್ಷ ಲೀಟರ್ ಸಂಗ್ರಹಣೆ ಮಾಡಲು ಉದ್ದೇಶಿದ್ದು ಅಣೆಕಟ್ಟೆ ನಿರ್ಮಾಣಕ್ಕಾಗಿಯೇ 67 ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಜೊತೆಗೆ ಯರಗೋಳ್ ಸಮೀಪದ ಭೀಮಗಾನಹಳ್ಳಿಯಲ್ಲಿ ಕಾಮಸಮುದ್ರ ಕೆರೆಯಿಂದ ಹರಿಯುವ ಕೋಡಿ ನೀರು ಸಂಗ್ರಹಣೆ ಮಾಡಿ 1.5 ಕಿಮೀ ಉದ್ದದ ಕಾಲುವೆ ಮೂಲಕ ಯರಗೋಳ್ ಅಣೆಕಟ್ಟೆಗೆ ಸಂಪರ್ಕ ನೀಡಿದಲ್ಲಿ ಈ ನೀರು ಅಣೆಕಟ್ಟೆಯಲ್ಲಿ ಸಂಗ್ರಹಣೆ ಆಗುವುದರಿಂದ ಅನುಕೂಲವಾಗುತ್ತದೆ ಎಂಬುದು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿ ನಾಯಕ್ ಅವರ ಅಭಿಪ್ರಾಯ.
-ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

