ಆಮೆಗತಿ ಬರ ನಿರ್ವಣೆಗೆ ಅತೃಪ್ತಿ
ಚಿಕ್ಕಬಳ್ಳಾಪುರ: ಜಿಲ್ಲಾಡಳಿತ, ಜಿಪಂ ವತಿಯಿಂದ ಜಿಲ್ಲೆಯಲ್ಲಿ ಕೈಗೊಳ್ಳುತ್ತಿರುವ ನಿಧಾನಗತಿಯ ಬರ ಪರಿಹಾರ ನಿರ್ವಹಣೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಲಾಂಬಿಕಾ ಅತೃಪ್ತಿ ತೋರಿದರು.
ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಹೆಚ್ಚಿಗೆ ಜನರು ತೊಂದರೆ ಅನುಭವಿಸುತ್ತಿದ್ದರೂ ಪರಸ್ಪರ ಹೊಂದಾಣಿಕೆಯಲ್ಲಿ ಸಮಸ್ಯೆ ಬಗೆಹರಿಸಲು ಹೋಗದೇ ಇನ್ನೂ ಈಗ ಪರಿಹಾರ ಕಾರ್ಯಗಳಿಗಾಗಿ ಸಿದ್ಧತೆಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಕಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಕುಡಿಯುವ ನೀರು, ಮೇವಿನ ಸಮಸ್ಯೆ ನಿವಾರಣೆ, ವಿದ್ಯುತ್ ನಿರ್ವಹಣೆ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು.
ಎಲ್ಲೂ ಕುಡಿಯುವ ನೀರಿನ ಸಮಸ್ಯೆಯ ದೂರುಗಳು ಬರಬಾರದು. ಗ್ರಾಮಗಳಲ್ಲಿ ತುರ್ತಾಗಿ ಕೊಳವೆ ಬಾವಿಗಳನ್ನು ಕೊರೆಸಿ ನೀರನ್ನು ಸರಬರಾಜು ಮಾಡಬೇಕು.ಒಂದು ವೇಳೆ ಕೊಳವೆ ಬಾವಿಗಳು ವಿಫಲವಾದಾಗ ಖಾಸಗೀ ಟ್ಯಾಂಕರುಗಳ ಮೂಲಕವಾದರೂ ಒದಗಿಸಬೇಕು. ಅತ್ಯಗತ್ಯವಿದ್ದರೆ ಸಮಸ್ಯೆಯ ನಿವಾರಣೆಗೆ ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳಲು ಹಿಂಜರಿಯಬಾರದು ಎಂದರು. ಸರ್ಕಾರದಿಂದ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿರುವುದರಿಂದ ಹಣದ ಸಮಸ್ಯೆ ಇಲ್ಲ. ಆದರೂ ಇಲ್ಲದ ನೆಪಗಳನ್ನು ಹೇಳಿ ಅಧಿಕಾರಿಗಳು ಸುಮ್ಮನೆ ಕೂರುವಂತಿಲ್ಲ. ಈ ಎಚ್ಚರಿಕೆಯ ನಡುವೆಯೂ ಬೇಜವಾಬ್ದಾರಿತನದಿಂದ ನಡೆದುಕೊಂಡರೆ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ ಎಂದು ಖಾರವಾಗಿ ತಿಳಿಸಿದರು. ಬಾಗೇಪಲ್ಲಿ ಪಟ್ಟಣದ ಚಿತ್ರಾವತಿ ಜಲಾಶಯದಲ್ಲಿ 30 ದಿನಗಳಿಗಾಗುವಷ್ಟು ನೀರು ಲಭ್ಯವಿರುವುದನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ನೀರಿನ ಸಮಸ್ಯೆ ಇಲ್ಲ. ಗುಡಿಬಂಡೆ ಪಟ್ಟಣದಲ್ಲೂ ಖಾಸಗೀ ಟ್ಯಾಂಕರುಗಳ ಮೂಲಕ ನೀರನ್ನು ಸರಬರಾಜು ಪೂರೈಕೆ ಮಾಡಲಾಗುತ್ತಿದೆ ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ತಿಳಿಸಿದಾಗ, ಆಂಧ್ರದ ಗಡಿಭಾಗದಲ್ಲಿರುವ ಬಾಗೇಪಲ್ಲಿ ಮತ್ತು ಗುಡಿಬಂಡೆಯಲ್ಲಿ ನೀರಿನ ಸಮಸ್ಯೆ ಹೆಚ್ಚಿಗೆ ಇಲ್ಲದಿರುವುದು ಸಂತಸದ ವಿಷಯ ಎಂದರು. ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಕೊಳವೆ ಬಾವಿಗಳು ವಿಫಲವಾಗುತ್ತಿರುವುದರಿಂದ ತೊಂದರೆಯಾಗುತ್ತಿದೆ ಎನ್ನುವುದನ್ನು ತಿಳಿದು ಎಷ್ಟೇ ಹಣ ಖರ್ಚಾದರೂ ಮೊದಲು ಖಾಸಗೀ ಟ್ಯಾಂಕರುಗಳ ಮೂಲಕ ನೀರನ್ನು ಒದಗಿಸಿ ಎಂದು ಸೂಚನೆ ನೀಡಿದರು.
ಕಡ್ಡಾಯವಾಗಿ ಗ್ರಾಮಸ್ಥರಿಂದ ಬರುವ ದೂರುಗಳು ಮತ್ತು ಅದಕ್ಕೆ ತಕ್ಷಣ ಕೈಗೊಂಡ ಕ್ರಮಗಳ ಬಗ್ಗೆ ದಾಖಲೆಯನ್ನು ನಿರ್ವಹಿಸಬೇಕೆಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದರು. ಲೋಕಾಯುಕ್ತ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬೆಂಗಳೂರಿಗೆ ತೆರಳಿದ್ದರು. ತೀವ್ರ ಸಮಸ್ಯತ್ಮಾಕ ಗ್ರಾಮಗಳ ಸಮಗ್ರವಾದ ವಿವರಗಳನ್ನು ನೀಡುವಲ್ಲಿ ವಿಫಲವಾದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವರದಿಯನ್ನು ತರಲು ಕಾರ್ಯದರ್ಶಿಗಳೇ ಕಳುಹಿಸಿದರು. ಅಪರ ಜಿಲ್ಲಾಧಿಕಾರಿಗಳೂ ಸಭೆಗೆ ಆಗಮಿಸಿರಲಿಲ್ಲ.
ಮೇ 6 ರಂದು ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್ ಬರಪರಿಹಾರ ಕುರಿತ ಸಭೆ ಕೈಗೊಂಡಿದ್ದು ಅದರ ಸಿದ್ಧತೆಗಳಲ್ಲಿ ಜಿಪಂಅಧಿಕಾರಿಗಳು ತಲ್ಲೀನರಾಗಿದ್ದರು. ಇದರಿಂದ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಬೆಸ್ಕಾಂ ಇಲಾಖೆ ಸೇರಿದಂತೆ ಕೆಲ ಅಧಿಕಾರಿಗಳ ಹಾಜರಿಯಲ್ಲಿಯೇ ಸಭೆ ನಡೆಯಿತು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಉಪ ವಿಭಾಗಾಧಿಕಾರಿ ಶಾಂತಲಾ, ನಗರ ಯೋಜನಾ ನಿರ್ದೇಶಕ ನಾಗರಾಜ್ ಶೆಟ್ಟಿ ಇದ್ದರು.
ಜಿಲ್ಲೆಯ 676 ಗ್ರಾಮಗಳಲ್ಲಿ ಸಮಸ್ಯೆ
ಚಿಕ್ಕಬಳ್ಳಾಪುರ: ಜಿಲ್ಲೆಯ 676 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು 275 ಗ್ರಾಮಗಳಲ್ಲಿ ಟ್ಯಾಂಕರುಗಳ ಮೂಲಕ ಮತ್ತು ಉಳಿದ ಕಡೆ ಕೊಳವೆ ಬಾವಿಗಳಿಂದ ನೀರನ್ನು ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಲಾಂಬಿಕಾ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗುತ್ತಿರುವುದು, ಇದರ ಜೊತೆಯಲ್ಲಿಯೇ ರಾಯಚೂರಿನ ವಿದ್ಯುತ್ ಉತ್ಪಾದನಾ ಘಟಕದಿಂದ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಯಾಗುತ್ತಿರುವುದರಿಂದ ನೀರಿನ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ. 7 ಕೋಟಿ ಕುಡಿಯುವ ನೀರಿಗೆ ನೀಡಲಿದ್ದು ಈಗಾಗಲೇ 3 ಕೋಟಿ ಬಿಡುಗಡೆಯಾಗಿದೆ. 30 ಕೋಟಿ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯ ಕಡೆಗೆ ಹೆಚ್ಚಿನ ಗಮನ ಕೊಡಲು ಸೂಚನೆ ನೀಡಲಾಗಿದೆ ಎಂದ ಅವರು, ಬೆಸ್ಕಾಂ ಇಲಾಖೆ ಮತ್ತು ಜಿಪಂ ಅಧಿಕಾರಿಗಳು ಮನವಿಯಂತೆ ಅಗತ್ಯವಿರುವ ಹಣವನ್ನು ಒದಗಿಸಲು ಮುಂದಾಗುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

