ಮಾರ್ಕಾಂಡೇಯ ಜಲಾಶಯದಲ್ಲಿ ಬತ್ತಿದ ಗಂಗೆ
ಕೋಲಾರ: ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ತಂದೆ ಹೈದರಾಲಿ ಹುಟ್ಟಿದ ಸ್ಥಳವಾದ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸಮೀಪ 1940ರಲ್ಲಿ ನಿರ್ಮಿಸಿರುವ ಮಾರ್ಕಾಂಡೇಯ ಜಲಾಶಯ ಕಳೆದ ಒಂಬತ್ತು ವರ್ಷಗಳಿಂದ ಮಳೆಯಿಲ್ಲದೆ ಸಂಪೂರ್ಣವಾಗಿ ಬತ್ತಿದೆ!
ಈ ಕೆರೆಗೆ ಮಾಲೂರು ತಾಲೂಕಿನ ವಕ್ಕಲೇರಿಯ ಬಳಿಯ ಮಾರ್ಕಂಡೆಯ ಬೆಟ್ಟದ ಮೇಲೆ ಮಳೆಗಾಲದಲ್ಲಿ ಬೀಳುವ ಮಳೆ ಪ್ರವಾಹದ ರೀತಿಯಲ್ಲಿ ಹರಿದು ಬೂದಿಕೋಟೆ ಕೆರೆ ಸೇರಿ ಕೋಡಿ ಹೋಗುತ್ತಿದ್ದರಿಂದ ರೈತರ ಅನುಕೂಲಕ್ಕಾಗಿ 1936ರಲ್ಲಿ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. 1940ರಲ್ಲಿ ಜಲಾಶಯವನ್ನು ಲೋಕಾರ್ಪಣೆ ಮಾಡಲಾಗಿತ್ತು. ಈ ಜಲಾಶಯ 35 ಹಳ್ಳಿಗಳಿಗೆ ಇದರಿಂದ ವರದಾನವಾಗಿತ್ತು.
1940ರಿಂದ 2005ರವರೆಗೂ ಹತ್ತಾರು ಬಾರಿ ಜಲಾಶಯ ತುಂಬಿ ಕೋಡಿ ಬಿದ್ದಿತ್ತು. ಕಳೆದ 9 ವರ್ಷದಿಂದ ಮಳೆಯ ಪ್ರಮಾಣ ಕಡಿಮೆ ಹಾಗೂ ಪ್ರಕೃತಿಯ ಮೇಲೆ ನಡೆದಿರುವ ನಿರಂತರವಾದ ದಬ್ಬಾಳಿಕೆಯಿಂದಾಗಿ ಜಲಾಶಯ ಬರಡಾಗಲು ಪ್ರಮುಖ ಕಾರಣವಾಗಿದೆ.
ಮಾರ್ಕಾಂಡೇಯ ಜಲಾಶಯ ನಿರ್ಮಿಸಿದ ನಂತರ ಬೂದಿಕೋಟೆ ಸೇರಿದಂತೆ ಸುತ್ತಮುತ್ತಲ ಹಳ್ಳಿಯ ಜನರು ಸಮೃದ್ಧವಾಗಿ ಬತ್ತ ಬೆಳೆದು ಉತ್ತಮ ಜೀವನ ಸಾಗಿಸುತ್ತಿದ್ದರು. ಜಲಾಶಯ ಬತ್ತಿದ ಮೇಲೆ ಈ ಭಾಗದ ಅನೇಕ ರೈತರು ಹೊಲ ಗದ್ದೆಗಳನ್ನು ಮಾರಾಟ ಮಾಡಿದ್ದಾರೆ. ಬೂದಿಕೋಟೆ ಕೆರೆಯಲ್ಲಿ ಐದಾರು ವರ್ಷಗಳಿಂದ ಮಣ್ಣು ಮಾಫಿಯಾ ಹಾವಳಿ ಹೆಚ್ಚಾಗಿದೆ. ತಮಿಳುನಾಡಿನ ಕೆಲವರು ಕೆರೆಯಲ್ಲಿ ಮಣ್ಣು ಸಂಗ್ರಹಣೆ ಮಾಡಿ ಸಾಗಾಣೆ ಮಾಡುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.
ಬೂದಿಕೋಟೆ ಕೆರೆ 113.14 ಚದರ ಮೈಲಿ ವಿರ್ಸ್ತೀಣವನ್ನು ಒಳಗೊಂಡಿದ್ದು, ಅಂದು ಕೇವಲ 4.75 ಲಕ್ಷ ರು.ಗಳಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. 847 ಎಕರೆಗೆ ನೀರು ಒದಗಿಸಲು ಉದ್ದೇಶಿಸಿ ಜಲಾಶಯವನ್ನು ಅಂದಿನ ಮೈಸೂರು ಮಹಾರಾಜರು ಯೋಜನೆಗೆ ಅನುಮತಿ ನೀಡಿದ್ದರು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಯೋಜನೆ ಅನುಷ್ಠಾನಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಿದ್ದರು.
ಜಲಾಶಯ ಭರ್ತಿಯಾದಲ್ಲಿ ಹೊರ ಹರಿವಿಗಾಗಿ ಗೇಟ್ ನಿರ್ಮಿಸಲಾಗಿದೆ. ಇಲ್ಲಿಂದ 8200 ಕ್ಯುಸೆಕ್ ನೀರು ಹರಿಸಲು ಕಾಲುವೆಯನ್ನು ಸಹ ನಿರ್ಮಿಸಲಾಗಿದೆ.
ಜಲಾಶಯದಲ್ಲಿ ನೀರಿದ್ದಾಗ ಸುತ್ತಮುತ್ತಲ ತೆರೆದ ಬಾವಿಗಳಲ್ಲಿ ಹಾಗೂ ಕೊಳವೆ ಬಾವಿಗಳಲ್ಲಿ ನೀರು ದೊರೆಯುತ್ತಿತ್ತು. ಈಗ ಈ ಪ್ರದೇಶದಲ್ಲಿ 1400 ಅಡಿಯವರೆಗೂ ಕೊಳವೆ ಬಾವಿ ಕೊರೆದರೂ ನೀರು ಸಿಗಲ್ಲ.
ಜಲಾಶಯ ಬರಡೋ ಬರಡು
ಮಾರ್ಕಾಂಡೇಯ ಜಲಾಶಯ ತುಂಬಿದಾದಾಗಲೆಲ್ಲ ಸಾವಿರಾರು ಜನರು ಸೇರಿ ತೆಪ್ಪೋತ್ಸವ ನಡೆಸುವ ಮೂಲಕ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಋಣ ತೀರಿಸುತ್ತಿದ್ದರು. ಈಗ ಮಾರ್ಕಾಂಡೇಯ ಜಲಾಶಯ ಪ್ರದೇಶದಲ್ಲಿ ಮರ-ಗಿಡಗಳು ಒಣಗಿವೆ. ಕಲ್ಲುಬಂಡೆಗಳ ಮೇಲೆ ಪ್ರೇಮಿಗಳ ಹೆಸರು ರಾರಾಜಿಸುತ್ತಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಬೂದಿಕೋಟೆ ಕೆರೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಕೆರೆಯಲ್ಲಿ ಮಣ್ಣು ಕರಗುತ್ತಿದೆ. ಮಾಲೂರು ವಿಧಾನಸಭಾ ಕ್ಷೇತ್ರಕ್ಕೆ ನೀರು ಒದಗಿಸಲು ಕೆರೆಯಲ್ಲಿ ನಿರ್ಮಿಸಿರುವ ತೊಟ್ಟಿಗಳಿಗೆ ಖರ್ಚು ಮಾಡಿರುವ ಲಕ್ಷಾಂತರ ರುಪಾಯಿ ವ್ಯರ್ಥವಾಗುತ್ತಿದೆ.
ಮಾರ್ಕಾಂಡೇಯ ಜಲಾಶಯವನ್ನು ಸಂರಕ್ಷಣೆ ಮಾಡಿ ಕೆರೆಯನ್ನು ಅಭಿವೃದ್ಧಿಪಡಿಸದಿದ್ದರೆ ಯರಗೋಳ್ ನೀರಿನ ಯೋಜನೆಗೂ ಸಂಚಕಾರ ಉಂಟಾಗುವ ಸಾಧ್ಯತೆಗಳಿವೆ. ರಾಜ್ಯ ಸರ್ಕಾರ ಬೂದಿಕೋಟೆ ಕೆರೆಯಲ್ಲಿನ ಹೂಳು ತೆಗೆಸಬೇಕು, ಬೇಕಾಬಿಟ್ಟಿಯಾಗಿ ಮಣ್ಣು ಮತ್ತು ಮರಳು ಶೋಧನೆ ಮಾಡುತ್ತಿರುವವರಿಗೆ ನಿರ್ಭಂದನೆ ವಿಧಿಸಬೇಕು. ಒಟ್ಟು 1215 ಎಕರೆ ಅಟ್ಟುಕಟ್ಟು ಪ್ರದೇಶಕ್ಕೆ ಮಳೆಗಾಲದಲ್ಲಿ ನೀರು ಹರಿಸುವ ಸಾಮರ್ಥ್ಯವನ್ನು ಹೊಂದಿರುವ ಮಾರ್ಕಂಡೆಯ ಜಲಾಶಯವನ್ನು ನರೇಗಾ ಮತ್ತು ಇನ್ನಿತರ ಯೋಜನೆಗಳ ಮೂಲಕ ಅಭಿವೃದ್ಧಿಪಡಿಸುವುದರ ಜೊತೆಗೆ ಈ ಹಿಂದಿನ ರೀತಿಯಲ್ಲಿ ಪ್ರವಾಸೋಧ್ಯಮವು ಬೆಳೆಯಲು ಸರ್ಕಾರ ಗಮನ ಹರಿಸಬೇಕೆಂಬುದು ಬೂದಿಕೋಟೆ ಗ್ರಾಮದ ಹಿರಿಯ ಮುಖಂಡ ಬಿ.ಎಂ.ವಿ.ರಮಣ ಒತ್ತಾಯಿಸಿದ್ದಾರೆ.
-ಪಾ.ಶ್ರೀ.ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

