ಕೆರೆ ಅಂಗಳ ಕ್ರಿಕೆಟ್ ಮೈದಾನ!
ಪಾ.ಶ್ರೀ.ಅನಂತರಾಮ್
ಕೋಲಾರ: ಕೆಜಿಎಫ್ ಚಿನ್ನದ ಗಣಿ ಪ್ರದೇಶಕ್ಕೆ ನೀರು ಸರಬರಾಜು ಮಾಡಲು ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಬೇತಮಂಗಲ ಜಲಾಶಯ ಸಂಪೂರ್ಣವಾಗಿ ಬತ್ತಿ ಹೋಗಿದೆ. ಕೆರೆ ಅಂಗಳ ಕ್ರಿಕೆಟ್ ಮೈದಾನವಾಗಿದೆ.
ಕೆರೆಯಲ್ಲಿ ನೀರಿನ ಸಂಗ್ರಹಣೆ ಕುಸಿತವಾಗಿದ್ದರೂ ಕರ್ನಾಟಕ ನೀರು ಸರಬರಾಜು ಮಂಡಳಿ ಬೇತಮಂಗಲ ಜಲಾಶಯದ ಪಕ್ಕದಲ್ಲಿನ ನೀರು ಸರಬರಾಜು ಕೇಂದ್ರದ ಅವರಣದಲ್ಲಿ 2007ರಲ್ಲಿ ಬಯೋ ಮಾಸ್ ಎಂಬ ಹೆಸರಿನ ಜಲ ವಿದ್ಯುತ್ ಘಟಕ ನಿರ್ಮಿಸಿದ್ದರು. ಈ ಯೋಜನೆಗೆ ಬರೋಬ್ಬರೀ ಸುಮಾರು 2 ಕೋಟಿ ವ್ಯಯಿಸಲಾಗಿದೆ. ಆದರೆ, ಜಲಾಶಯ 2005ರಿಂದ ಈವರೆಗೆ ಭರ್ತಿಯಾಗಿಲ್ಲ. ಹಾಗಾಗಿ ಜಲ ವಿದ್ಯುತ್ಘ್ಟಕ ಉದ್ಘಾಟನೆಯಾಗಿಲ್ಲ! ಇದರಿಂದಾಗಿ ಘಟಕದಲ್ಲಿನ ಬೆಲೆ ಬಾಳುವ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ. ಯೋಜನೆ ಕಾರ್ಯರೂಪಕ್ಕೆ ಬರದೆ ವ್ಯರ್ಥವಾಗಿರುವುದರಿಂದ ಸಾರ್ವಜನಿಕರ ತೆರಿಗೆ ಹಣ ನೀರು ಪಾಲು ಆದಂತಾಗಿದೆ. ಯೋಜನೆ ಫಲಪ್ರದವಾಗಿದ್ದರೆ ದಿನಕ್ಕೆ 1 ಸಾವಿರ ಕಿಲೋ ವ್ಯಾಟ್ ವಿದ್ಯುತ್ ದೊರೆಯುತ್ತಿತ್ತು. ಇದೇ ಹಣವನ್ನು ಬೇತಮಂಗಲ ಕೆರೆಯ ಸಮಗ್ರ ಅಭಿವೃದ್ದಿಗೆ ಬಳಸಬಹುದಾಗಿತ್ತು ಎಂಬುದು ಜಿಪಂ ಸದಸ್ಯ ಅ.ಮು.ಲಕ್ಷ್ಮೀನಾರಾಯಣರವರ ಅಭಿಪ್ರಾಯ.
ಶ್ರಮದಾನದ ಫಲ ಜಲಾಶಯ
ಪಾಲಾರ್ ನದಿ ಕಣಿವೆ ವ್ಯಾಪ್ತಿಗೆ ಸೇರಿದ ಬೇತಮಂಗಲ ಕೆರೆಯನ್ನು ಜನರು ಶ್ರಮದಾನದ ಮೂಲಕ ನಿರ್ಮಿಸಿದ್ದಾರೆ. 1904ರಿಂದ ಸುಮಾರು 75 ವರ್ಷಗಳ ಕಾಲ ಈ ಕೆರೆ ನೀರನ್ನು ಕೆಜಿಎಫ್ ಮತ್ತಿತರ ಕಡೆಗಳಿಗೆ ಕುಡಿಯಲು ಪೂರೈಕೆ ಮಾಡಲಾಗುತ್ತಿತ್ತು. ಮಳೆಗಾಲದಲ್ಲಿ ನಂದಿ ಬೆಟ್ಟದಿಂದ ಹರಿಯುವ ನೀರು ಬೇತಮಂಗಲ ಕೆರೆ ಸೇರಲು ಪೂರ್ವಿಕರು ಕೃತಕ ಕಾಲುವೆಗಳನ್ನು ನಿರ್ಮಿಸಿದ್ದರು. ಕೆಜಿಎಫ್ನಲ್ಲಿ ಚಿನ್ನದ ಗಣಿ ಆರಂಭಗೊಂಡಾಗ ಕೆಲಸಕ್ಕಾಗಿ ಬೇರೆ ಬೇರೆ ಕಡೆಗಳಿಂದ ಬಂದ ಕಾರ್ಮಿಕರಿಗೆ ನೀರು ಒದಗಿಸಲು ಬೇತಮಂಗಲ ಕೆರೆಯಲ್ಲಿ ಅಣೆಕಟ್ಟೆ ನಿರ್ಮಿಸಿ ನೀರಿನ ದಾಹವನ್ನು ನಿವಾರಿಸಲಾಗಿತ್ತು.
ಕೇವಲ ಕುಡಿಯವ ನೀರು ಮಾತ್ರವಲ್ಲದೆ ಮಳೆಗಾಲದಲ್ಲಿ ಜಲಾಶಯದಿಂದ ಹೆಚ್ಚುವರಿ ನೀರನ್ನು 34 ಗೇಟುಗಳ ಮೂಲಕ ಹೊರ ಬಿಡುತ್ತಿದ್ದರಿಂದ ಬೇತಮಂಗಲ ಸುತ್ತಮುತ್ತಲ 85ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರಾವರಿ ಸೌಕರ್ಯ ಲಭಿಸಿತ್ತು. ಬೇತಮಂಗಲ ಕೆರೆಯು ಒಟ್ಟು 997.27 ಎಕರೆ ವ್ಯಾಪ್ತಿಯನ್ನು ಒಳಗೊಂಡಿದ್ದು 793 ಎಕರೆ ಪ್ರದೇಶದಲ್ಲಿ ನೀರು ಸಂಗ್ರಹಣೆಯಾಗುತ್ತದೆ. 1957ರಿಂದ ಪ್ರತ್ಯೇಕ ನೀರು ಸರಬರಾಜು ಕೇಂದ್ರವನ್ನು ಸ್ಥಾಪಿಸಿ ಕೆಜಿಎಫ್ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಾ ಬಂದಿದ್ದ ಕೇಂದ್ರದಲ್ಲಿ ಈಗ ನೀರಿನ ಗಂಭೀರ ಸಮಸ್ಯೆಯಿಂದಾಗಿ ಪಂಪ್ ಹೌಸ್ ಕಾರ್ಯ ಸ್ಥಗಿತಗೊಂಡಿದೆ. 2005ರ ನಂತರ ಬೇತಮಂಗಲ ಜಲಾಶಯ ತುಂಬೇ ಇಲ್ಲ!
ಚಿನ್ನದ ಗಣಿ ನೀರಿಗೆ ಮುಕ್ತಿ ಎಂದು?
ಚಿನ್ನದ ಗಣಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗಿದ್ದು, ಜನರೇಟರ್ಗಳ ಮೂಲಕ ಮೂಲಕ ನೀರು ಹೊರ ತೆಗೆದು ಕಾಲುವೆಗಳ ಮೂಲಕ ಸಮೀಪದ ಕೆರೆಗಳಿಗೆ ಹರಿಸಬೇಕೆಂಬ ಪ್ರಸ್ತಾವನೆಯನ್ನು ಕೆಲವು ವರ್ಷಗಳ ಹಿಂದೆಯೇ ಕೆಲವರು ಸರ್ಕಾರದ ಮುಂದಿಟ್ಟಿದ್ದಾರೆ. ಆದರೆ, ಗಣಿಯಲ್ಲಿನ ನೀರಿನಲ್ಲಿ ಗಂಧಕಾಂಶ ಹೆಚ್ಚಿರುವುದರಿಂದ ಬಳಕೆಗೆ ಯೋಗ್ಯವಲ್ಲವೆಂಬುದು ತಜ್ಞರ ಅಭಿಪ್ರಾಯ.
ಚಿನ್ನದ ಗಣಿಯು ಮತ್ತೆ ಕಾರ್ಯಾರಂಭಕ್ಕೆ ಚಾಲನೆ ಸಿಕ್ಕಿದ ಮೇಲೆ ಗಣಿಯ ನೀರು ಹೊರ ತೆಗೆಯುವುದು ಅನಿವಾರ್ಯ. ಹಾಗಾಗಿ ಸರ್ಕಾರ ಗಣಿಯ ನೀರನ್ನು ಶುದ್ಧೀಕರಿಸಿ ಕನಿಷ್ಠ ಕೃಷಿಗಾದರೂ ಬರುವಂತೆ ಮಾಡದಿದ್ದರೆ ಮತ್ತೊಂದು ಹೊಸ ಸಮಸ್ಯೆ ಎದುರಿಸಬೇಕಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಗಣಿಯಲ್ಲಿನ ನೀರು ಹೊರ ತೆಗೆದು ಅಂತರ್ಜಲ ಅಭಿವೃದ್ಧಿಗೆ ಬಳಕೆ ಆಗುವ ರೀತಿಯಲ್ಲಿ ಸರ್ಕಾರ ಚಿಂತನೆ ಮಾಡಬೇಕೆಂದು ಕೋಲಾರ ನಗರಸಭೆ ಮಾಜಿ ಸದಸ್ಯ ಹಾಗೂ ಕರ್ನಾಟಕ ನೀರಾವರಿ ವೇದಿಕೆಯ ಸದಸ್ಯ ತ್ಯಾಗರಾಜ್ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

