ತಂಬಾಕು ನಿಷೇಧಕ್ಕೆ ಸರ್ಕಾರ ನಿರಾಸಕ್ತಿ: ವಿಷಾದ
ಕನ್ನಡಪ್ರಭ ವಾರ್ತೆ, ಕೋಲಾರ, ಮೇ 7
ತಂಬಾಕು ಸೇವನೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಸರ್ಕಾರಕ್ಕೆ ಗೊತ್ತಿದ್ದರೂ ನಿಯಂತ್ರಣಕ್ಕೆ ಮೀನ ಮೇಷ ಎಣಿಸುತ್ತಿದೆ ಎಂದು ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ತಂಬಾಕು ನಿಯಂತ್ರಣ ಕಾನೂನುಗಳ ಪರಿಣಾಮಕಾರಿ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಬೆಳೆ ಹಾಗೂ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಿದಾಗ ಮಾತ್ರ ತಂಬಾಕು ಮುಕ್ತ ದೇಶವನ್ನಾಗಿ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸರ್ಕಾರ ತಂಬಾಕು ನಿಷೇಧ ಕಾಯ್ದೆಯನ್ನು ತಂದಿದೆ. ಆದರೆ ತಂಬಾಕು ಬೆಳೆ ಮತ್ತು ಉತ್ಪನ್ನಗಳ ತಯಾರಿಕೆಗೆ ಅನುಮತಿ ನೀಡಿರುವುದರಿಂದ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಯುವಕರು ಮಟ್ಕಾ, ಧೂಮಪಾನ ಮತ್ತಿತರ ಚಟುವಟಿಕೆಗಳಿಗೆ ಸಿಲುಕಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಸರ್ಕಾರದ ದ್ವಂದ್ವ ನಿಲುವುಗಳಿಂದ ತಂಬಾಕು ನಿಷೇಧ ಕಷ್ಟವಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ, ನವದೆಹಲಿಯ ಡಿ.ಯುನಿಯನ್ ತಾಂತ್ರಿಕ ಸಲಹೆಗಾರ ಡಾ.ರವೀಂದ್ರನ್ ಮಾತನಾಡಿ, ಪ್ರತಿ ವರ್ಷ ವಿಶ್ವದಾದ್ಯಂತ 55 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆಯಿಂದ ಸಾಯುತ್ತಿದ್ದು, ದೇಶದಲ್ಲಿ ಸುಮಾರು 10 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆಂದರು.
ಪ್ರಸ್ತಾವಿಕವಾಗಿ ಮಾತನಾಡಿದ ರಾಜ್ಯ ತಂಬಾಕು ನಿಯಂತ್ರಣ ಘಟಕದ ಯೋಜನಾ ಸಂಯೋಜಕ ಸಿ.ಪ್ರಭಾಕರ್ ತಂಬಾಕು ನಿಯಂತ್ರಣ ಮಾಡುವುದು ಸರ್ಕಾರ ಮತ್ತು ಜನತೆಯ ಜವಾಬ್ದಾರಿ ಆಗಿದೆ ಎಂದರು.
ಜಿಪಂ ಉಪಾಧ್ಯಕ್ಷೆ ಆಲುವೇಲಮ್ಮ, ಸದಸ್ಯರಾದ ಮಂಗಮ್ಮ ಮುನಿಸ್ವಾಮಿ, ಯಲ್ಲಮ್ಮ, ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಮಹಮದ್ ಷರೀಫ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಘಟಕದ ರಾಜ್ಯ ಸಲಹೆಗಾರರ ಡಾ.ಜಗನ್ನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪದ್ಮನಾಭ್, ಅಪರಾಧ ವಿಭಾಗದ ಸರ್ಕಲ್ ಇನ್ಸ್ಪೆಕ್ಟರ್ ನಂದಕುಮಾರ್ ಇದ್ದರು. ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಜಯಣ್ಣ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

