ಕೋಲಾರ

ಕಾಲೇಜಿನ ಅಭಿವೃದ್ಧಿ ಯಾವಾಗ?

Published On :

ಕೋಲಾರ ನಗರದ ಸರ್ಕಾರಿ ಬಾಲಕರ ಕಿರಿಯ ಕಾಲೇಜಿನ ಕಟ್ಟಡ ನಿರ್ಮಾಣವಾಗಿ ಸುಮಾರು ನೂರು ವರ್ಷಗಳಾಗಿದ್ದರೂ ತರಗತಿಗಳ ಕೊಠಡಿಗಳನ್ನು ದುರಸ್ತಿ ಮಾಡಿಸದಿರುವುದರಿಂದ ವಿದ್ಯಾರ್ಥಿಗಳು ನೆಮ್ಮದಿಯಿಂದ ಪಾಠ ಕೇಳದಂತಾಗಿದೆ. ಕೊಠಡಿಯ ಗೋಡೆಗಳಲ್ಲಿ ಗಾರೆ ಕಿತ್ತು ಬಂದಿದೆ. ಕಿಟಕಿಗಳು ಸರಿಯಾಗಿಲ್ಲ. ಕೆಲವು ದಿನಗಳ ಹಿಂದೆ ಕೊಠಡಿಯ ಕಿಟಕಿಯ ಸರಳುಗಳನ್ನು ಮುರಿದು ಕಳ್ಳರು ಒಳ ನುಗ್ಗಿ ಅಲ್ಲಿಂದ ಕಾಲೇಜಿನ ಪ್ರಾಂಶುಪಾಲರ ಕಚೇರಿಯ ಬೀಗ ಮುರಿದು ಪ್ರಮುಖ ದಾಖಲೆಗಳನ್ನು ಸುಟ್ಟು ಹಾಕಿದ್ದರು. ಕಳ್ಳರು ಯಾರೆಂಬುದು ಮಾತ್ರ ಗೊತ್ತಿಲ್ಲ. ತರಗತಿಯ ಕಿಟಕಿಗೆ ಈಗಲೂ ಸರಿಯಾದ ಭದ್ರತೆ ಒದಗಿಸಿಲ್ಲ. ವಿದ್ಯಾರ್ಥಿಗಳು ಕೂರುವ ಡೆಸ್ಕ್‌ಗಳು ಮುರಿದಿದ್ದರೂ ದುರಸ್ತಿ ಮಾಡಿಲ್ಲ. ಸಂಬಂಧಪಟ್ಟವರು ಈಗಲಾದರೂ ಕಾಲೇಜಿನ ಅಭಿವೃದ್ಧಿಯತ್ತ ಗಮನ ಹರಿಸಲಿ.
ಟಿ ಬಿ.ಸುರೇಶ್‌ಗೌಡ, ವಿದ್ಯಾರ್ಥಿ ಮುಖಂಡ, ಕೋಲಾರ


ದಾರಿಹೋಕರಿಗೆ ಕೆಸರೆರಚಾಟ..
ಬಾಗೇಪಲ್ಲಿ ತಾಲೂಕಿನ ಚಾಕವೇಲ್‌ನಲ್ಲಿ ಕೆನರಾ ಬ್ಯಾಂಕಿಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದೆ. ರಸ್ತೆ ಮಧ್ಯೆದಲ್ಲಿಯೇ ನೀರು ನಿಂತು ಸದಾ ಕೆಸರಿನಿಂದ ಕೂಡಿರುತ್ತದೆ. ಇದರಿಂದ ಗ್ರಾಮದ ಬಸ್ ನಿಲ್ದಾಣದಿಂದ ಕೆನರಾ ಬ್ಯಾಂಕ್ ವರೆಗಿನ ಈ ರಸ್ತೆಯಲ್ಲಿ ಓಡಾಡುವುದೇ ಜನರಿಗೆ ದುಸ್ತರವಾಗಿದೆ.
  ಒಮ್ಮೆ ರಸ್ತೆಯಲ್ಲಿ ಓಡಾಡಿದರೆ ಸಾಕು ಮೈ ಮೇಲೆ ಹಾಕಿಕೊಂಡಿರುವ ಬಟ್ಟೆಯೆಲ್ಲಾ ಗಲೀಜಾಗುತ್ತದೆ. ಅಷ್ಟರ ಮಟ್ಟಿಗೆ ಗುಂಡಿಗಳಿಂದ ತುಂಬಿ ತುಳುಕಾಡುತ್ತ ನೀರು ಇಲ್ಲಿ ತುಂಬಿಕೊಂಡಿರುತ್ತದೆ. ಇದರಿಂದ ಜನರು ಈ ರಸ್ತೆಯಲ್ಲಿ ಸಂಚರಿಸುವುದನ್ನೇ ಮರೆತು ಹೋಗುತ್ತಿದ್ದಾರೆ. ಮಳೆ ಬಂದಾಗಲೆಂತೂ ಈ ರಸ್ತೆಯೇ ಬೇಡ ಎಂದು ಬೇರೆ ರಸ್ತೆಯ ಮೂಲಕ ಒಂದು ಸುತ್ತು ಹಾಕಿಕೊಂಡು ಬ್ಯಾಂಕಿಗೆ ತೆರಳುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಈ ರಸ್ತೆ ಹದಗೆಟ್ಟಿದ್ದರೂ ಗ್ರಾ.ಪಂ. ಅಧಿಕಾರಿಗಳು ತಮ್ಮ ಗಮನಕ್ಕೆ ತೆಗೆದುಕೊಂಡಿಲ್ಲ. ರಿಪೇರಿ ಮಾಡಿಸದೇ ಕೇವಲ ನಿರ್ಲಕ್ಷ್ಯ ವಹಿಸಿಕೊಂಡು ಬರುತ್ತಿದ್ದಾರೆ. ಗ್ರಾಮ ಪಂಚಾಯ್ತಿಗೇನೋ ಸಾಕಷ್ಟು ಅನುದಾನ ಬರುತ್ತಿದೆ.ಇದನ್ನು ಸದ್ಬಳಕೆ ಮಾಡಿಕೊಂಡು ರಸ್ತೆಯನ್ನು ದುರಸ್ತಿಪಡಿಸಬಹುದು. ಆದರೆ,ಅಧಿಕಾರಿಗಳು ಸರಿಪಡಿಸಲು ಮುಂದಾಗುತ್ತಿಲ್ಲ. ಈಗಾಗಲೇ ಅನೇಕರು ರಸ್ತೆಯ ದುರಸ್ತಿಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ. ಆಗ ಮುಂದೆ ಬರುವ ಅನುದಾನದಲ್ಲಿ ರಸ್ತೆಯನ್ನು ದುರಸ್ತಿಪಡಿಸಲಾಗುತ್ತದೆ ಎಂದೇಳಲಾಯಿತಾದರೂ ರಸ್ತೆ ಮಾತ್ರ ಸರಿ ಹೋಗಿಲ್ಲ.ಇದೇ ರಸ್ತೆಗೆ ಹೊಂದಿಕೊಂಡಂತೆ ಅಂಬೇಡ್ಕರ್ ಕಾಲೋನಿ ಮತ್ತು ಖಾಸಗಿ ಶಾಲೆ ಇದೆ. ಅದೇಕೋ ಅಧಿಕಾರಿಗಳು ಮಾತ್ರ ರಸ್ತೆ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿ ಕೈಗೊಂಡು ಸರಿಪಡಿಸಬೇಕು.
ಟಿ ಎಸ್.ರಾವ್, ಪಾತಪಾಳ್ಯ, ಬಾಗೇಪಲ್ಲಿ


ನೋಡಿ ಸ್ವಾಮಿ ಈ ರಸ್ತೆ ಇರೋದೇ ಹೀಗೆ!
ಬಂಗಾರಪೇಟೆ ತಾಲೂಕಿನ ಬೂದಿಕೋಟೆ ರಸ್ತೆಗಳು ಉಚಿತ ಹೆರಿಗೆ ಕೇಂದ್ರಗಳಾಗುವುದಕ್ಕೆ ಯೋಗ್ಯವಾಗಿದೆ. ಬೂದಿಕೋಟೆ ಡ್ಯಾಮ್‌ನಿಂದ ಬೂದಿಕೋಟೆ ಗ್ರಾಮದ ಸುಮಾರು 3 ಕಿಮೀ ರಸ್ತೆ ಹಾಳಾಗಿದ್ದು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ದುರಸ್ತಿಯ ಕಡೆ ಗಮನ ನೀಡುತ್ತಿಲ್ಲ. ಈ ರಸ್ತೆಯಲ್ಲಿ ಓಡಾಡಬೇಕಾದರೆ ತಲೆಗೆ ಹೆಲ್ಮೆಟ್ ಕಡ್ಡಾಯವಾಗಿ ಇರಲೇಬೇಕು. ಅಪಘಾತ ಸಂಭವಿಸಿದರೆ ಸಾವು ಖಚಿತ. ರಸ್ತೆಗಳಲ್ಲಿ ಬಿದ್ದಿರುವ ದೊಡ್ಡ ಗುಂಡಿಗಳನ್ನು ಮುಚ್ಚಲು ಜಿಪಂನಲ್ಲಿ ಹಣವಿಲ್ಲವೇ ಅಥವಾ ರಸ್ತೆಯ ಅಭಿವೃದ್ಧಿಯ ಬಗ್ಗೆ ಅಸಡ್ಡೆಯೇ ಎಂಬುದು ಅರ್ಥವಾಗುತ್ತಿಲ್ಲ. ಬೂದಿಕೋಟೆ ಭಾಗದ ಜಿಪಂ ಸದಸ್ಯರು ಕೂಡಲೇ ರಸ್ತೆಯ ದುರಸ್ತಿಗೆ ಮುಂದಾಗಬೇಕು.
ಟಿ ಶಿಶಕಾಂತ್, ಬಂಗಾರಪೇಟೆ


ಕೆರೆಯನ್ನು ಅಭಿವೃದ್ಧಿಪಡಿಸಿ
ಕೋಲಾರದ ಕೋಡಿಕಣ್ಣೂರು ಕೆರೆ ಒತ್ತುವರಿಯ ಜೊತೆಗೆ ಮರಳು ಮಾಫಿಯಾದವರ ಹಣದಾಹಕ್ಕೆ ಅದ್ವಾನಗೊಂಡಿದೆ. 2005ರಲ್ಲಿ ಕೆರೆ ತುಂಬಿದಾಗ ಕೆಲ ಒತ್ತುವರಿದಾರರು ತಮ್ಮ ರಕ್ಷಣೆಗಾಗಿ ಕೆರೆಯ ಏರಿಯನ್ನು ಒಡೆದು ಹಾಕಿ ಕೆರೆಯಲ್ಲಿ ನೀರು ಖಾಲಿ ಆಗುವಂತೆ ಮಾಡಿದ್ದರು. ತದನಂತರ ಕೆರೆ ತುಂಬಿಯೇ ಇಲ್ಲ, ರಾಜಕಾರಣಿಗಳ ಕುಮ್ಮಕ್ಕು, ಓಟಿನ ದಾಹದಿಂದ ಒತ್ತುವರಿಗೆ ಅವಕಾಶ ನೀಡಲಾಗಿ ಇಂದು ಕೆರೆ ಬೆತ್ತಲಾಗುವಂತಾಗಿದೆ. ಆರೇಳು ವರ್ಷಗಳಿಂದ ಕೆರೆಯ ಒಡಲಿನ ಮೇಲೆ ನಡೆದ ಅತಿಕ್ರಮಣ, ಅಟ್ಟಹಾಸದಿಂದಾಗಿ ಕೆರೆಯ ಮೂಲ ಆಕೃತಿ, ವಿನ್ಯಾಸ ವಿರೋಪಗೊಂಡಿದೆ, ಮಳೆಗಾಲದಲ್ಲಿ ನೀರು ನಿಲ್ಲುವಂತಾಗಬೇಕಾದರೆ ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಬೇಕು.
ಟಿ ಪ್ರಕಾಶ್ ಸ್ವಾಮಿ, ಕೋಲಾರ


ಶಿಥಿಲಾವಸ್ಥೆಯಲ್ಲಿ ತಂಗುದಾಣ
ಬಾಗೇಪಲ್ಲಿ ತಾಲೂಕಿನ ರಾಚವಾರಪಲ್ಲಿ ಕ್ರಾಸ್ ನಲ್ಲಿನ ಪ್ರಯಾಣಿಕರ ತಂಗುದಾಣ ಶಿಥಿಲಾವಸ್ಥೆಯಲ್ಲಿದೆ.ಆಗಲೋ ಈಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿರುವುದರಿಂದ ತಂಗುದಾಣ ಪ್ರಯೋಜನಕ್ಕೆ ಬಾರದಂತಾಗಿದೆ.  1991-92 ನೇ ಸಾಲಿನ ಜವಹಾರ್ ರೋಜ್‌ಗಾರ್ ಯೋಜನೆಯಡಿಯಲ್ಲಿ ಇಲ್ಲಿ ತಂಗುದಾಣವನ್ನು ನಿರ್ಮಿಸಲಾಗಿದೆ.ಆದರೆ, ಈಗ ತಂಗುದಾಣದ ಗೋಡೆಗಳೆಲ್ಲಾ ಶಿಥಿಲವಾಗಿ ಬಿರುಕು ಬಿಟ್ಟಿವೆ. ಮಳೆ ಬಂದಾಗ ಮೇಲ್ಚಾವಣಿಯಿಂದ ನೀರು ಸೋರುತ್ತಿರುತ್ತದೆ. ಇದರಿಂದ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಅದರೊಳಗೆ ಹೋಗಲು ಭಯ ಬೀಳುತ್ತಿದ್ದಾರೆ. ಇದರ ನಡುವೆಯೂ ಭಿಕ್ಷಕರು ಬೇರೆ ಗತಿಯಿಲ್ಲದೇ ತಂಗುದಾಣದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಂದು ವೇಳೆ ತಂಗುದಾಣ ಕಟ್ಟಡವೇನಾದರೂ ಕುಸಿದು ಬಿದ್ದು ಅಮಾಯಕರ ಪ್ರಾಣ ಹೋದರೆ ಏನು ಗತಿ. ಶಿಥಿಲಾವಸ್ಥೆಯಲ್ಲಿ ಕಟ್ಟಡವನ್ನು ಹಾಗೆಯೇ ಬಿಟ್ಟು ಅನಾಹುತಗಳ ಸಂಭವಿಸುವುದಕ್ಕೆ ಅವಕಾಶವನ್ನು ನೀಡುವುದರ ಬದಲು ಕೆಡವಿ ಹಾಕುವುದು ಮೇಲಲ್ಲ ಎಂದು ಹಲವರು ಕೇಳುತ್ತಲೇ ಇದ್ದಾರೆ. ಜನರ ಅನುಕೂಲಕ್ಕಾಗಿ ತಂಗುದಾಣವನ್ನು ನಿರ್ಮಿಸಿರುವುದು. ಆದರೆ, ಜನರಿಗೆ ತೊಂದರೆಯನ್ನುಂಟು ಮಾಡುವ ಸ್ಥಿತಿಯಲ್ಲಿರುವ ಈ ಕಟ್ಟಡದ ಕಡೆಗೆ ಯಾರೂ ನೋಡುತ್ತಿಲ್ಲ. ಮೊದಲು ಅನಾಹುತಗಳು ಸಂಭವಿಸಲಿ ಆ ಮೇಲೆ ನೋಡೋಣ ಎಂಬ ಭಾವನೆಯಲ್ಲಿ ಅಧಿಕಾರಿಗಳಿದ್ದಾರೆಯೇ ಎಂಬ ಅನುಮಾನ ಕಾಡುತ್ತದೆ.ಇಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಕಟ್ಟಿದರೆ ಪ್ರಯಾಣಿಕರು ಬಸ್ಸು ಬರುವವರೆಗೂ ಇಲ್ಲಿ ಬಂದು ಕುಳಿತುಕೊಳ್ಳಲು ಸಹಾಯವಾಗುತ್ತದೆ.ಇಲ್ಲದಿದ್ದಲ್ಲಿ ರಸ್ತೆಯ ಬದಿಯಲ್ಲಿ ಬಿಸಿಲಿನಲ್ಲಿ ನಿಂತು ಬಸ್ಸಿಗಾಗಿ ಕಾದು ಕಾದು ಸುಸ್ತಾಗಬೇಕು.ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತ್ವರಿತವಾಗಿ ತಂಗುದಾಣ ದುರಸ್ತಿಗೆ ಮುಂದಾಗಬೇಕು.
ಟಿ ಶಂಕರ್, ರಾಚವಾರಪಲ್ಲಿ, ಬಾಗೇಪಲ್ಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.