ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವೈಭವೀಕರಣಕ್ಕೆ ಆಕ್ಷೇಪ
ಕೋಲಾರ: ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದವರು ಮಾತ್ರ ಪ್ರತಿಭಾವಂತರು ಉಳಿದವರು ದಡ್ಡರು ಎಂಬ ರೀತಿಯಲ್ಲಿ ಖಾಸಗಿ ವಿದ್ಯಾ ಸಂಸ್ಥೆಗಳು ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಸಾವಿರಾರು ರು. ಖರ್ಚು ಮಾಡಿ ನಗರಸಭೆಯಿಂದ ಯಾವುದೇ ಅನುಮತಿ ಇಲ್ಲದೆ, ತೆರಿಗೆ ಪಾವತಿಸದೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಭಾವಚಿತ್ರವಿರುವ ಫ್ಲೆಕ್ಸ್ ಮತ್ತು ಕಟೌಟ್ಗಳನ್ನು ಹಾಕುತ್ತಿರುವುದರಿಂದ ಸಾಮಾನ್ಯ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಗ್ಗಿಸುವಂತಾಗಿದೆ ಎಂದು ರೈತ ಸಂಘ ಆರೋಪಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕೋಲಾರದ ಕೆಲ ಕಾಲೇಜುಗಳ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮತ್ತು ಪ್ರಚಾರದಿಂದ ವ್ಯಾಪಾರ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ನಗರದ ವಿವಿಧ ಕಡೆಗಳಲ್ಲಿ ಫ್ಲೆಕ್ಸ್ಗಳನ್ನು ಹಾಕಿದ್ದಾರೆ. ಇದರಿಂದ ಹೆಚ್ಚು ಅಂಕ ಪಡೆದಿರುವ ಮಕ್ಕಳಿಗೆ ಖುಷಿ ಆಗಬಹುದೇ ಹೊರತು ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಅದರಲ್ಲೂ ಸಾಮಾನ್ಯ ಅಂಕ ಪಡೆದಿರುವವರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂದಿನ ಶಿಕ್ಷಣ ವ್ಯವಸ್ಥೆ ಬರೀ ಶಾಲಾ ಕಾಲೇಜುಗಳು ಹಣ ಮಾಡುವ ದಂಧೆಯಾಗಿ ಈ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳ ಫ್ಲೆಕ್ಸ್ಗಳ ಭೂತದಿಂದ ಶೇಖಡ ಶೇ.70ರಷ್ಟು ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಕುಗ್ಗಲು ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಗಳು ನೇರ ಕಾರಣವಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಕೀಳಿರಿಮೆ ತಂದೊಡ್ಡಿದ್ದಾರೆಂದು ದೂರಿದ್ದಾರೆ. ಅಂಕ ಗಳಿಕೆಯೇ ಪ್ರಧಾನವಾಗಿರುವ ನಮ್ಮ ಶಿಕ್ಷಣ ವ್ಯವಸ್ಥೆ ಕಡಿಮೆ ಅಂಕ ಗಳಿಸಿದವರನ್ನು ಅನುತ್ತೀರ್ಣಗೊಂಡವರನ್ನು ಸಮಾಜ ಕೀಳಾಗಿ ಕಾಣುವುದರಿಂದ ವಿದ್ಯಾರ್ತಿಗಳಲ್ಲಿ ಸಹಜವಾಗಿ ಕೀಳಿರಿಮೆಯ ಭಾವನೆ ಬರುತ್ತಿದೆ. ಈ ಭಾವನೆಯನ್ನು ಮೊಳಕೆಯಲ್ಲಿ ಚಿವುಟಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ. ಜ್ಞಾನಾರ್ಜನೆಗೆ ಖಾತರಿಸಬೇಕಾದ ವಿದ್ಯಾರ್ಥಿಗಳು ಅಂಕ ಗಳಿಕೆಗಾಗಿ ಕುದಿಯುವ ಪ್ರೆಷರ್ಕುಕ್ಕರ್ಗಳಾಗುತ್ತಿದ್ದಾರೆ. ಕಡಿಮೆ ಅಂಕ ಪಡೆದರೆ ಸಮಾಜದಲ್ಲಿ ಮಾನ್ಯತೆ ಇಲ್ಲ ಎಂಬ ಕೀಳಿರಿಮೆಗೆ ಈಡಾಗಿ ಒತ್ತಡಗಳಿಂದ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ. ಇಂದು ಜೀವನ ಶಿಕ್ಷಣ ನೀಡದ ಶಿಕ್ಷಣ ವ್ಯವಸ್ಥೆ ವೈಫಲ್ಯ ಮಕ್ಕಳ ಕೀಳರಿಮೆಗೆ ಕಾರಣವಾಗುತ್ತಿದೆ. ಆದ್ದರಿಂದ ಸಮಾಜ ಮತ್ತು ಸರ್ಕಾರ, ಶಾಲಾ ಕಾಲೇಜು ಆಡಳಿತ ಮಂಡಳಿ, ಶಿಕ್ಷಣ ತಜ್ಞರು, ಸಂಘ ಸಂಸ್ಥೆಗಳು, ಮಾನಸಿಕ ತಜ್ಞರು ಈ ನಿಟ್ಟಿನಲ್ಲಿ ಕೈಜೋಡಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಜಿಲ್ಲಾ ಆಡಳಿತವನ್ನು ಆಗ್ರಹಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ
ಜಗಳ: ವ್ಯಕ್ತಿ ಅಸ್ವಸ್ಥ
ಶಿರಾ: ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು, ಹನುಮಂತರಾಯಪ್ಪ ಎಂಬವರ ಮೇಲೆ ದೊಡ್ಡಬಾಣಗೆರೆ ಗ್ರಾಪಂ ಉಪಾಧ್ಯಕ್ಷ ದೊಣ್ಣೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಕರೇತಿಮ್ಮನಹಳ್ಳಿಯಲ್ಲಿ ನಡೆದಿದೆ. ದೊಡ್ಡಬಾಣಗೆರೆ ಗ್ರಾಪಂ ಉಪಾಧ್ಯಕ್ಷ ಗುಜ್ಜಾರಪ್ಪ, ಅಶ್ವಥನಾರಯಣನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಸಂಧರ್ಭದಲ್ಲಿ ಮಗನ ನೆರವಿಗೆ ಬಂದ ತಂದೆ ಹನುಮಂತರಾಯಪ್ಪ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ ಎನ್ನಲಾಗಿದ್ದು, ಹನುಮಂತರಾಯಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಶಿರಾ ಅಸ್ಪತ್ರೆಗೆ ಸಾಗಿಸಲಾಗಿದೆ.
ರಕ್ತಚಂದನ ಮರ ವಶ
ಮದ್ದೂರು: ತಾಲೂಕಿನ ಕೆ.ಹಾಗಲಹಳ್ಳಿ ಗ್ರಾಮದ ತೋಟದ ಮನೆಯೊಂದರ ಮೇಲೆ ಭಾನುವಾರ ದಾಳಿ ನಡೆಸಿದ ಮದ್ದೂರು ಪೊಲೀಸರು ಲಕ್ಷಾಂತರ ರು. ಮೌಲ್ಯದ ರಕ್ತಚಂದನ ಮರಗಳನ್ನು ವಶಪಡಿಸಿಕೊಂಡಿದ್ದಾರೆ. ಕೆ. ಹಾಗಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ವಿಶ್ವ ಎಂಬುವವರ ತೋಟದ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ಕೆ.ಸಿ. ಪ್ರಕಾಶ್ ಮಾರ್ಗದರ್ಶನದಲ್ಲಿ ಸಬ್ ಇನ್ಸೆಪೆಕ್ಟರ್ ಶ್ರೀಧರ್ ಅಪರಾಧ ವಿಭಾಗದ ಸಬ್ ಇನ್ಸೆಪೆಕ್ಟರ್ ಚಂದ್ರಶೇಖರ್, ಗುಪ್ತದಳ ಪೇದೆಗಳಾದ ಮಹದೇವ್ ಹಾಗೂ ಜೀಪ್ ಚಾಲಕ ಕುಮಾರ್ ಅವರು ಕಾರ್ಯಾಚರಣೆ ನಡೆಸಿ ದಾಸ್ತಾನು ಮಾಡಲಾಗಿದ್ದ 500 ಕೆಜಿಗೂ ಮೀರಿ ತೂಕವುಳ್ಳ 10 ಲಕ್ಷ ರು. ಮೌಲ್ಯದ ರಕ್ತ ಚಂದನ ಮರಗಳನ್ನು ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

