ಕೋಲಾರ

ಕೋಚಿಮುಲ್ ಚುನಾವಣೆ ಕಾವು ಜೋರು

Published On :

ಪಾ.ಶ್ರೀ.ಅನಂತರಾಮ್
ಕ.ಪ್ರ.ವಾರ್ತೆ    ಕೋಲಾರ    ಮೇ 11
ಹೈನೋದ್ಯಮಕ್ಕೆ ಹೆಸರಾಗಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿಷ್ಠಿತ ಹಾಲು ಒಕ್ಕೂಟ(ಕೋಚಿಮುಲ್) ಆಡಳಿತ ಮಂಡಳಿಗೆ ಮೇ 25ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಭರ್ಜರಿ ಸಿದ್ಧತೆ ನಡೆಸುತ್ತಿದ್ದರೆ, ಬಿಜೆಪಿ ಮಾತ್ರ ಮೌನಕ್ಕೆ ಶರಣಾಗಿದೆ.
ಚುನಾವಣೆಗೆ ಮೇ 10ರಂದು ಅಧಿಸೂಚನೆ ಪ್ರಕಟವಾಗಿದ್ದು, 18ಕ್ಕೆ ನಾಮಪತ್ರ ಸಲ್ಲಿಕೆಗೆ ಕಡೆ ದಿನ. 19ರಂದು ನಾಮಪತ್ರ ಪರಿಶೀಲನೆ. 20 ನಾಮಪತ್ರ ಹಿಂದಕ್ಕೆ ಪಡೆಯಲು ಕಡೆ ದಿನ. 25ಕ್ಕೆ ಚುನಾವಣೆ ನಡೆಯಲಿದೆ.
ಚುನಾವಣೆಯನ್ನು ಕೋಲಾರ ನಗರದ ಹಾರೋಹಳ್ಳಿಯಲ್ಲಿರುವ ಶ್ರೀ ಗೋಕುಲ್ ಕಾಲೇಜಿನಲ್ಲಿ ನಡೆಸಲು ಸಕಲ ಸಿದ್ಧತೆ ನಡೆಯುತ್ತಿದೆ. ಮತದಾನ ಬೆಳಿಗ್ಗೆ 9ರಿಂದ ಸಂಜೆ 4ಗಂಟೆಯವರೆಗೆ ನಡೆಯಲಿದ್ದು, ಅಂದೇ ಮತ ಎಣಿಕೆ ಕಾರ್ಯವೂ ನಡೆಯಲಿದೆ.
ಕೋಚಿಮುಲ್ ಆಡಳಿತ ಮಂಡಳಿಯ ಸದಸ್ಯರ ಸಂಖ್ಯೆ ಹಾಲಿ 13 ಇದ್ದು, ಬೈಲಾಕ್ಕೆ ತಿದ್ದುಪಡಿ ತಂದು 15 ಸ್ಥಾನಕ್ಕೆ ಏರಿಕೆ ಮಾಡಲು ತೀರ್ಮಾನಿಸಲಾಗಿತ್ತಾದರೂ ಸಹಕಾರ ಇಲಾಖೆ ಪ್ರಸ್ತಾವನೆಯನ್ನು ತಳ್ಳಿಹಾಕಿರುವುದರಿಂದ 13ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದೆ. ಕೋಲಾರ ಜಿಲ್ಲೆಯ ಐದು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಆರು ಸ್ಥಾನ ಸೇರಿದಂತೆ ಒಟ್ಟು 11 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಜೊತೆಗೆ ಎರಡೂ ಜಿಲ್ಲೆಯಿಂದ ತಲಾ ಒರ್ವ ಮಹಿಳಾ ನಿರ್ದೇಶಕಿಯ ಆಯ್ಕೆ ಆಗಬೇಕಾಗಿದೆ. ಎರಡೂ ಜಿಲ್ಲೆಯ 160 ಮಹಿಳಾ ಸಹಕಾರಿ ಹಾಲು ಉತ್ಪಾಕರ ಸಂಘಗಳು ಸೇರಿದಂತೆ 1573ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಆಯಾ ತಾಲೂಕಿನಿಂದ ತಲಾ ಒಬ್ಬರನ್ನು ಆಯ್ಕೆ ಮಾಡಬೇಕಾಗಿದೆ.



ಒಕ್ಕೂಟದಲ್ಲಿ 277525 ಸದಸ್ಯರು
ಒಕ್ಕೂಟದಲ್ಲಿ ಹಾಲಿ 277525 ಮಂದಿ ಸದಸ್ಯರು ನೊಂದಣಿಯಾಗಿದ್ದು 1861 ಸಂಘಗಳು ನೊಂದಣಿ ಯಾಗಿದ್ದರೂ 1573 ಸಹಕಾರ ಸಂಘಗಳು ಕಾರ್ಯಾಚರಣೆಯಲ್ಲಿವೆ. 94810 ಸಣ್ಣ ರೈತರು,94736 ಅತಿ ಸಣ್ಣ ರೈತರು,49961 ಭೂ ರಹಿತ ಕಾರ್ಮಿಕರು,ಹಾಗೂ 38018 ಇತರರು ಸದಸ್ಯರಾಗಿದ್ದು ಇದರಲ್ಲಿ 69831 ಮಹಿಳಾ ಸದಸ್ಯರು,41054 ಹರಿಜನ,28058 ಗಿರಿಜನ ಮತ್ತು 1430 ಒಬಿಸಿ ಸದಸ್ಯರಿದ್ದರೂ ಕೋಚಿಮುಲ್ ಆಡಳಿತ ಮಂಡಳಿಯ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಹಾಲು ಸಹಕಾರ ಸಂಘಗಳ ಅಧ್ಯಕ್ಷರು ಮಾತ್ರ ಮತದಾನಕ್ಕೆ ಅರ್ಹರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಅತಿ ಹೆಚ್ಚು 220 ಮತದಾರರು ಇದ್ದರೆ,ಗುಡಿಬಂಡೆಯಲ್ಲಿ ಅತಿ ಕಡಿಮೆ 40 ಸದಸ್ಯರಿದ್ದಾರೆ. ಕೋಲಾರ ತಾಲೂಕಿನಲ್ಲಿ 213,ಶಿಡ್ಲಘಟ್ಟದಲ್ಲಿ 160,ಚಿಕ್ಕಬಳ್ಳಾಪುರದಲ್ಲಿ 170,ಗೌರಿಬಿದನೂರಿನಲ್ಲಿ 110,ಬಂಗಾರಪೇಟೆಯಲ್ಲಿ 104 ಮತದಾರರು ಇದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 70 ಹಾಗೂ ಕೋಲಾರ ಜಿಲ್ಲೆಯಲ್ಲಿ 52 ಮಹಿಳಾ ಸಂಘಗಳ ಅಧ್ಯಕ್ಷರು ಎರಡೂ ಜಿಲ್ಲೆಯಿಂದ ತಲಾ ಒರ್ವ ಮಹಿಳಾ ನಿರ್ದೇಶಕಿಯನ್ನು ಆಯ್ಕೆ ಮಾಡಬಹುದಾಗಿದೆ.



ಕಾಂಗ್ರೆಸ್, ಜೆಡಿಎಸ್ ಪೈಪೋಟಿ
ಈ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರತಿಷ್ಠೆಯಾಗಿಸಿವೆ. ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಬಹುತೇಕ ಆಯ್ಕೆ ಮಾಡಿದ್ದು, ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ಕೋಲಾರ ತಾಲೂಕಿನಿಂದ ಜಿಲ್ಲಾ ಸಹಕಾರ ಯೂನಿಯನ್ ಮಾಜಿ ಅಧ್ಯಕ್ಷ ಉರಿಗಿರಿ ರುದ್ರಸ್ವಾಮಿ, ಬಂಗಾರಪೇಟೆಯಲ್ಲಿ ಜಿಪಂ ಸದಸ್ಯ ಅ.ಮು.ಲಕ್ಷ್ಮೀನಾರಾಯಣ ಅವರು ಈಗಾಗಲೇ ಮತಬೇಟೆ ಆರಂಭಿಸಿದ್ದಾರೆ. ಜೆಡಿಎಸ್ ಕೂಡ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಕಸರತ್ತು ನಡೆಸಿದೆ. ಕೋಲಾರ ತಾಲೂಕಿನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಬಂಗಾರಪೇಟೆ ತಾಲೂಕಿನಲ್ಲಿ ಹಾಲಿ ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಜೆಡಿಎಸ್ ಅಭ್ಯರ್ಥಿಯಾಗಲು ಇಚ್ಚಿಸಿ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಮಾಲೂರು ತಾಲೂಕಿನಿಂದ ನಂಜೇಗೌಡ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಕೋಲಾರದ ಅಭ್ಯರ್ಥಿಯ ಆಯ್ಕೆಯನ್ನು ಪಕ್ಷದ ವರಿಷ್ಠರಿಗೆ ಬಿಡಲಾಗಿದೆ. ಗೌರಿಬಿದನೂರಿನಲ್ಲಿ ಜೆಡಿಎಸ್‌ಗೆ ಸೂಕ್ತ ಅಭ್ಯರ್ಥಿ ಹುಡುಕಾಟ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿರುವುದರಿಂದ ಈ ಬಾರಿ ಹೇಗಾದರೂ ಮಾಡಿ, ಈ ಚುನಾವಣೆಯಲ್ಲಿ ಗೆಲವು ಸಾಧಿಸಲೇಬೇಕು ಎಂಬುದು ಕಾಂಗ್ರೆಸ್ ಮುಖಂಡರ ಬಯಕೆ. ಜೆಡಿಎಸ್‌ಗೆ ಪೈಪೋಟಿ ನೀಡುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.