ಕೋಲಾರ

ಡೊನೇಷನ್ ಹಾವಳಿ ತಡೆಗೆ ರೈತ ಸಂಘ ಒತ್ತಾಯ

Published On :

ಕ.ಪ್ರ. ವಾರ್ತೆ ಟಿ ಕೋಲಾರ ಟಿ ಮೇ 13
ಜಿಲ್ಲೆಯ ಖಾಸಗಿ ಶಾಲಾ ಕಾಲೇಜುಗಳಲ್ಲಿ ಹೆಚ್ಚಾಗುತ್ತಿರುವ ಡೊನೇಷನ್ಹಾವಳಿ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳವಾರ ರೈತ ಸಂಘದಿಂದ ಪ್ರತಿಭಟನೆ ನಡೆಯಿತು.
ಇನ್ನು 15 ದಿನಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು ಬಹುತೇಕ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದು 2-3 ತಿಂಗಳಾಗಿದೆ. ಶಿಕ್ಷಣ ಇಲಾಖೆ ಪ್ರಕಟಿಸುವ ವೇಳಾಪಟ್ಟಿಯಂತೆ ದಾಖಲಾತಿ ನೀಡಬೇಕೆಂಬ ಆದೇಶಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕವಡೆ ಕಾಸಿನ ಕಿಮ್ಮತ್ತು ಕೊಡದೇ ಮನ ಬಂದಂತೆ ಡೊನೇಷನ್ ವಸೂಲಿ ಮಾಡುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರು ಆರೋಪಿಸಿದರು.
ಜಿಲ್ಲೆಯ ಕೆಲವು ಪ್ರತಿಷ್ಠಿತ ಸಂಸ್ಥೆಗಳು ಎಂದು ಹೇಳಿಕೊಂಡು ಹುಸಿ ಬೇಡಿಕೆಯನ್ನು ಸೃಷ್ಟಿಸಿಕೊಂಡು ಎಲ್ಕೆಜಿ ಪ್ರವೇಶಕ್ಕೂ 35 ರಿಂದ 75ಸಾವಿರದ ವರೆಗೂ ವಸೂಲಿ ಮಾಡುತ್ತಿವೆ. ಒಂದೇ ಕಂತಿನಲ್ಲಿ ಡೊನೇಷನ್ ಪಾವತಿಸಬೇಕೆಂದು ಕರಾರು ಮಾಡಿ ಮಗುವಿಗೆ ಬೇಕಾಗುವ ಪಠ್ಯ ಪುಸ್ತಕ, ನೋಟ್, ಶಾಲಾ ಬ್ಯಾಗ್, ಸಮವಸ್ತ್ರ, ಶೂ, ಮತ್ತಿತರ ವಸ್ತುಗಳನ್ನು ಶಾಲೆಯಲ್ಲಿ ಖರೀದಿಸಬೇಕು ಎಂಬ ನಿಯಮ ಒಡ್ಡಿ, ಕಂಪನಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಮಾರುಕಟ್ಟೆ ದರಕ್ಕಿಂತ 3 ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆಂದು ಡಿಡಿಪಿಐ ಪದ್ಮನಾಭ್ ಅವರಿಗೆ ದೂರಿದರು.
ಆರ್.ಟಿ.ಇ ಸೀಟಿನಲ್ಲಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆಯಲು ಪೋಷಕರು ಹರಸಾಹಸ ಪಡೆಯಬೇಕಾಗಿದೆ. ಆರ್.ಟಿ.ಐ ಕಾಯ್ದೆಯನ್ನು ದುರ್ಭಳಕೆ ಮಾಡಿಕೊಳ್ಳುತ್ತಿರುವ ಕೆಲವು ಶಾಲೆಗಳ ಆಡಳಿತ ಮಂಡಳಿಯವರು ಈಗಾಗಲೇ ಡೊನೇಷನ್ ನೀಡಿ ದಾಖಲಾಗಿರುವ ಹಣವಂತ ದಲಿತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನೆ ಆರ್.ಟಿ.ಇ ವಿದ್ಯಾರ್ಥಿಗಳು ಎಂಬಂತೆ ತೋರಿಸಿ, ಸರ್ಕಾರ ಮತ್ತು ಪೋಷಕರಿಂದಲೂ ಹಣ ವಸೂಲಿ ಮಾಡುತ್ತಿವೆ. ಈ ದಂಧೆಯಲ್ಲಿ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಆರೋಪಿದರು.
ಮನವಿ ಸ್ವೀಕರಿಸಿದ ಡಿಡಿಪಿಐ ಹದಿನೈದು ದಿವಸಗಳೊಳಗೆ ಕ್ರಮ ಕೈಗೊಂಡು ಎಲ್ಲಾ ಶಾಲೆಗಳ ಮುಂದೆಯೂ ಸರ್ಕಾರ ನಿಗಧಿಪಡಿಸಿರುವ ಶುಲ್ಕದ ಪಟ್ಟಿಯನ್ನು ಗೋಡೆ ಬರಹ ಬರೆಸಿ ಡೊನೇಷನ್ ಮತ್ತು ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದರು.
ಮುಖಂಡರಾದ ನಾರಾಯಣಗೌಡ, ಶ್ರೀನಿವಾಸಗೌಡ, ಮೂರಂಡಹಳ್ಳಿ ಶಿವಾರೆಡ್ಡಿ, ಮುಳಬಾಗಿಲು ರಂಜಿತ್ ಕುಮಾರ್, ಹೂವಳ್ಳಿ ನಾಗರಾಜ್, ಹಬೀದುಲ್ಲಾಖಾನ್ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.