ಕೋಲಾರ

ಮತ ಎಣಿಕೆಗೆ ಸಕಲ ಸಿದ್ಧತೆ: ಡಿ.ಕೆ.ರವಿ

Published On :

ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆ ಮೇ 16 ರಂದು ಬೆಳಿಗ್ಗೆ 8 ಗಂಟೆಯಿಂದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಪಾರದರ್ಶಕ ಮತ ಎಣಿಕೆಗೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಡಿ.ಕೆ. ರವಿ ಅವರು ತಿಳಿಸಿದರು.
ನಗರದ ಶ್ರೀ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಬುಧವಾರ ಚುನಾವಣೆ ಅಭ್ಯರ್ಥಿಗಳು ಹಾಗೂ ಅವರ ಏಜೆಂಟ್‌ಗಳಿಗೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ನಡೆಸುವ ಬಗ್ಗೆ ವಿವರಗಳನ್ನು ನೀಡಿ ಅವರು ಮಾತನಾಡುತ್ತಿದ್ದರು. 14 ಕೊಠಡಿಗಳಲ್ಲಿ ಮತಎಣಿಕೆ ನಡೆಯಲಿದೆ. ಏಜೆಂಟರು ಗುರುತಿನ ಚೀಟಿ ಹಾಗೂ ನೇಮಕಾತಿ ಪತ್ರ ತೋರಿಸಿ ಎಣಿಕೆ ಕೇಂದ್ರಕ್ಕೆ ಬೆಳಿಗ್ಗೆ 7.20 ಗಂಟೆಗೆ ಹಾಜರಿರಬೇಕೆಂದು ತಿಳಿಸಿದರು.
ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಾಲೇಜಿನ ಒಳಗಡೆ ಗುರುತಿನ ಚೀಟಿ ಇಲ್ಲದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತದವರೆಗೂ ವಾಹನವನ್ನು ಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ವಿವರಿಸಿದರು.
ಪಾರ್ಕಿಂಗ್ ಜಾಗ: ವಾಹನಗಳ ಪಾರ್ಕಿಂಗ್ ಮೆಥೋಡಿಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅವಕಾಶ ಮಾಡಲಾಗಿದೆ. ಮತ ಎಣಿಕೆ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗೆದ್ದವರು ಮೆರವಣಿಗೆ ನಡೆಸುವಂತಿಲ್ಲ. ಶಾಂತಿಯುತವಾಗಿ ಮತ ಎಣಿಕೆ ನಡೆಯಲು ಸಹಕಾರ ನೀಡಬೇಕೆಂದು ಜನತೆಯಲ್ಲಿ ಮನವಿ ಮಾಡಿದರು. ಎಣಿಕೆ ಮಾಡುವ ಪ್ರತಿ ಟೇಬಲ್‌ಗೆ ಮೈಕ್ರೋ ವೀಕ್ಷಕರು ಮತ್ತು ಒಬ್ಬರು ಮೇಲ್ವಿಚಾರಕರು ಮತ್ತು ಒಬ್ಬರು ಸಹಾಯಕರನ್ನು ನೇಮಿಸಲಾಗಿದೆ. ಬಂದೋಬಸ್ತ್ ನೋಡಿಕೊಳ್ಳಲು ಮೂರು ಹಂತಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಯಾವುದೇ ರೀತಿಯ ಅನುಮಾನಕ್ಕೆ ಅವಕಾಶವಿಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ಮತ ಎಣಿಕೆಗೆ ಒಟ್ಟು 112 ಟೇಬಲ್‌ಗಳನ್ನು ಹಾಕಲಾಗಿದೆ. ಒಟ್ಟು 416 ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಗುವುದು.  ಒಟ್ಟು 2041 ಮತಗಟ್ಟೆಗಳಿವೆ, ಒಟ್ಟು 11,25,529 ಮತಗಳು ಚಲಾವಣೆಯಾಗಿವೆ ಎಂದು ವಿವರಿಸಿದರು.



ಮದ್ಯ ಮಾರಾಟ ನಿಷೇಧ
ಮೇ 16ರಂದು ನಡೆಯಲಿರುವ ಮತ ಎಣಿಕೆಯು ಶಾಂತಿಯುತವಾಗಿ, ನ್ಯಾಯ ಸಮ್ಮತವಾಗಿ ನಡೆಸುವ ಉದ್ದೇಶದಿಂದ ಮೇ 15ರ ಮಧ್ಯ ರಾತ್ರಿಯಿಂದ ಮೇ 16ರ ಮಧ್ಯರಾತ್ರಿಯವರೆಗೆ ಕೋಲಾರ ಜಿಲ್ಲೆಯಾದ್ಯಂತ ಬರುವ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ, ಸಾಗಾಣಿಕೆ, ದಾಸ್ತಾನು ನಿಷೇಧಿಸಿ ಒಣ ದಿನಗಳೆಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.