ಕೋಲಾರ

ಹೊಸ ಸಂಸದನಿಗಾಗಿ ಜನರ ಕಾತುರ

Published On :

ಚಿಕ್ಕಬಳ್ಳಾಪುರ: ಹೊಸದಾಗಿ ಕ್ಷೇತ್ರದಲ್ಲಿ ನರೇಂದ್ರ ಮೋದಿ ಅಲೆಯ ಪ್ರಭಾವ, ಮಾಜಿ ಮುಖ್ಯಮಂತ್ರಿಗಳಿಬ್ಬರ ಕದನದಿಂದ ಇಡೀ ರಾಷ್ಟ್ರದ ಗಮನ ಸೆಳೆದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸೋಲು ಯಾರಿಗೆ, ಗೆಲುವು ಯಾರಿಗೆ ಎನ್ನುವುದನ್ನು ತಿಳಿದುಕೊಳ್ಳುವ ಕಾತುರ ಕ್ಷೇತ್ರದ ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗೆಲವನ್ನು ಹೊರುತ್ತಾರಾ, ನರೇಂದ್ರ ಮೋದಿ ಅಲೆಯಲ್ಲಿ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡರು ವಿಜಯದ ನಗೆ ಬೀರುತ್ತಾರಾ ಇಲ್ಲವೇ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಎರಡನೇ ಬಾರಿ ಆಯ್ಕೆಯಾಗುತ್ತಾರಾ ಎಂಬ ಕುತೂಹಲಕ್ಕೆ ತೆರೆ ಬೀಳುವುದನ್ನು ಕಾಣಲು ಎದುರು ನೋಡುತ್ತಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 19 ಮಂದಿ ಚುನಾವಣೆಯನ್ನು ಎದುರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ (ಕಾಂಗ್ರೆಸ್), ಎಚ್.ಡಿ. ಕುಮಾರಸ್ವಾಮಿ (ಜೆಡಿಎಸ್), ಬಿ.ಎನ್. ಬಚ್ಚೇಗೌಡ (ಬಿಜೆಪಿ), ಆರ್ಕೇಶ್ (ಎಎಪಿ), ಜಿ.ವಿ. ಶ್ರೀರಾಮರೆಡ್ಡಿ ಸಿಪಿಎಂ, ರಾಬಿನ್ ಮಾಥ್ಯೂಸ್ (ಸಮಾಜವಾದಿ ಪಾರ್ಟಿ), ಚಿತ್ರಾ ಪ್ರಸಾದ್ (ಬಿ ಎಸ್ ಪಿ) ಮತ್ತು ಇತರೆ ಪಕ್ಷಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
 ಒಟ್ಟು 23 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಇದರಲ್ಲಿ 4 ಮಂದಿ ನಾಮಪತ್ರವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ 19 ಮಂದಿ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದರು. ನಂತರ ತೀವ್ರ ಪೈಪೋಟಿಯಲ್ಲಿ ಬಿರುಸಿನ ಪ್ರಚಾರವನ್ನು ಕೈಗೊಂಡು ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆಯುವ ಕೆಲಸವನ್ನು ಮಾಡಿದರು.
ಬಿ.ಎನ್. ಬಚ್ಚೇಗೌಡ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಕ್ಷೇತ್ರಕ್ಕೆ ಕರೆಸಿದ್ದರು. ಮೋದಿ ಅಲೆ ಮೂಲಕ ತಮ್ಮ ಬುಟ್ಟಿಗೆ ಮತಗಳನ್ನು ಹೆಚ್ಚಿಗೆ ಹಾಕಿಸಿಕೊಳ್ಳುವ ಕಸರತ್ತು ನಡೆಸಿದರು. ಇನ್ನೂ ನಾಮಪತ್ರ ಸಲ್ಲಿಕೆಯ ಅಂತಿಮ ದಿನದವರೆಗೂ ಪಕ್ಷದ ಅಭ್ಯರ್ಥಿಯ ಘೋಷಣೆಯನ್ನು ಬಾಕಿ ಉಳಿಸಿಕೊಂಡು ಬಂದಿದ್ದ ಜೆಡಿಎಸ್ ಕುಮಾರಸ್ವಾಮಿ ಕಣಕ್ಕಿಳಿದು ಚಿಕ್ಕಬಳ್ಳಾಪುರ ಜಿಲ್ಲಾ ರಚನೆಯ ತಮ್ಮ ಸಾಧನೆಯನ್ನು ಬಿಂಬಿಸಿಕೊಂಡರೆ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಮತ್ತೆ ಹೊಸ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಪ್ರಚಾರವನ್ನು ಕೈಗೊಂಡರು. ಕೊನೆಗೆ ಏ.17 ರಂದು ಕ್ಷೇತ್ರದ 2119 ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯಿತು. ಒಟ್ಟು 1658038 ಮತದಾರರಲ್ಲಿ 1259967 ಮಂದಿ ಮತವನ್ನು ಚಲಾಯಿಸಿದ್ದು ಶೇ.77.02 ರಷ್ಟು ಮತ ವಿದ್ಯುನ್ಮಾನ ಮತಯಂತ್ರಗಳನ್ನು ಸೇರಿದವು. ಇದೀಗ ಮೇ.16 (ಇಂದು) ಚಿಕ್ಕಬಳ್ಳಾಪುರ ತಾಲೂಕಿನ ಹೊರ ವಲಯದಲ್ಲಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಕುದುರೆ ಯಾವುದು: ಕ್ಷೇತ್ರದಲ್ಲಿ ಈ ಬಾರಿ ಭಾರಿ ಪೈಪೋಟಿ ನಡೆದಿದೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದ್ದರೂ ಗೆಲುವಿನ ಅಭ್ಯರ್ಥಿಯನ್ನು ಹೇಳುವುದು ಕಷ್ಟಕರವಾಗಿದೆ. ಯಾವ ತಂತ್ರ ಯಾರ ಕೈ ಕೊಟ್ಟು ಇನ್ಯಾವುದು ಕೈ ಹಿಡಿಯುತ್ತದೆಯೋ ಎನ್ನುವುದು ತಿಳಿಯುತ್ತಿಲ್ಲ. ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಏನೂ ಹೊಂದಿರದಿದ್ದ ಬಿಜೆಪಿ ಅದೇಕೆ ಕಮಲ ಅರಳುವುದಿಲ್ಲ ಎನ್ನುವುದರ ಮಟ್ಟಿಗೆ ಸ್ಪರ್ಧೆ ನೀಡಿದೆ. ನರೇಂದ್ರ ಮೋದಿ ಅಲೆಯ ಜೊತೆಗೆ ಕ್ಷೇತ್ರದಲ್ಲಿ ಬಲಿಜಿಗರು ಮತ್ತು ಒಕ್ಕಲಿಗರು ಕೈ ಹಿಡಿದಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಗೆಲುವಿನ ಸೂತ್ರವನ್ನು ಹೇಳುತ್ತಿದ್ದಾರೆ. ಮತ್ತೊಂದೆಡೆ ಜೆಡಿಎಸ್ ಮತ್ತು ಬಿಜೆಪಿ ನಡುವೆಯೇ ಹಣಾಹಣಿ ಇರುವುದು ಹೆಚ್ಚಿಗೆ ಕೇಳಿ ಬರುತ್ತಿರುವುದು. ಕೆಲ ಸಮೀಕ್ಷೆಗಳು ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದಿರುವುದು ಜೆಡಿಎಸ್ ಆತ್ಮಬಲವನ್ನು ಹೆಚ್ಚಿಸಿದೆ. ಜಾತಿಭೇದ ನೋಡದೇ ಕುಮಾರಸ್ವಾಮಿಯವರನ್ನು ಬೆಂಬಲಿಸಲಾಗಿದೆ ಎಂಬ ಮಂತ್ರ ಜಪ ನಡೆಯುತ್ತಿದೆ. ಇನ್ನೂ ವಿರೋಧಿ ಅಲೆಯಲ್ಲಿರುವ ಎಂ. ವೀರಪ್ಪ ಮೊಯ್ಲಿ ಶಾಸಕರ ಬಲ ಮತ್ತು ಪಕ್ಷದ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡಿದ್ದು ಬಚ್ಚೇಗೌಡ ಮತ್ತು ಕುಮಾರಸ್ವಾಮಿ ಒಕ್ಕಲಿಗರ ನಾಯಕರ ಗಲಾಟೆಯಲ್ಲಿ ತನ್ನದೇ ಆದ ಗೆಲುವಿನ ಲಾಭ ಎನ್ನುತ್ತಿದ್ದಾರೆ. ಆದರೆ, ಈ ಮೂವರಲ್ಲಿ ಯಾರೇ ಗೆಲುವನ್ನು ಸಾಧಿಸಿದರೂ ಅಂತರ ಮಾತ್ರ ಕಡಿಮೆಯಾಗಿರುತ್ತದೆ ಎಂದೇಳಲಾಗುತ್ತಿದೆ. ಉಳಿದಂತೆ ಇತರೆ ಅಭ್ಯರ್ಥಿಗಳು ಕೇವಲ ಚುನಾವಣೆಗೆ ಸ್ಪರ್ಧಿಸಿದ್ದು ಪೈಪೋಟಿ ಅಷ್ಟಕಷ್ಟೇ. ಇನ್ನೂ ಅರವಿಂದ ಕೇಜ್ರಿವಾಲ್ ಎಎಪಿಗೆ ಎಷ್ಟು ಮತಗಳು ಸಿಗುತ್ತವೆ ಎನ್ನುವುದು ತಿಳಿದುಕೊಳ್ಳುವುದೇ ಸಮಾಧಾನ.



ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ
ಕ್ಷೇತ್ರ     ಒಟ್ಟು     ಮತದಾರರು    ಮತ ಚಲಾವಣೆ ಶೇ.
ಗೌರಿಬಿದನೂರು    194540    145691    74.89
ಬಾಗೇಪಲ್ಲಿ    182321    139567     76.55
ಚಿಕ್ಕಬಳ್ಳಾಪುರ    184244    150472    81.67
ಯಲಹಂಕ     324459    208076    64.13
ಹೊಸಕೋಟೆ     195159    167630    85.89
ದೇವನಹಳ್ಳಿ    191300    156976    82
ದೊಡ್ಡಬಳ್ಳಾಪುರ    1932341    49415    77.32
ನೆಲಮಂಗಲ    1927811    142131    73.72
ಒಟ್ಟು           1658038     1259957     77.02

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.