ಸೋಲಿಲ್ಲದ ಸರದಾರಗೆ ಸವಾಲುಗಳ ಸಾಲು ಸಾಲು
ಕುಡಿಯುವ ನೀರು, ಚಿನ್ನದ ಗಣಿ ಪುನಶ್ಚೇತನ, ರೇಲ್ವೆ
ಕೋಚ್ ಘಟಕ ನಿರ್ಮಾಣ ಪೂರ್ಣವಾಗುವುದೇ..?
ಟಿ ಪಾ.ಶ್ರೀ.ಅನಂತರಾಮ್
ಕೋಲಾರ: ಡಬಲ್ ಹ್ಯಾಟ್ರಿಕ್ ನಂತರವೂ ದೆಹಲಿ ಯಾತ್ರೆ ಮುಂದುವರಿಸಲು ಮತದಾರರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹತ್ತು ವರ್ಷಗಳ ಬಳಿಕ ಮುನಿಯಪ್ಪ ಪ್ರತಿಪಕ್ಷದ ಸ್ಥಾನದಲ್ಲಿ ಕೂರಬೇಕಾಗಿದೆ.
1991ರಿಂದ 2014ರವರೆಗೆ 23 ವರ್ಷಗಳ ಅವಧಿಯಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಗೆದ್ದು ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ, ಎಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ್ ಮತ್ತೆ ವಾಜಪೇಯಿ ಅವರ ನೇತೃತ್ವದ ಆಡಳಿತ ನೋಡಿದ್ದ ಮುನಿಯಪ್ಪನವರು 2004ರಿಂದ 2014ರವರೆಗೆ ಡಾ.ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡುವ ಅವಕಾಶ ಪಡೆದಿದ್ದರು. ಕಾಂಗ್ರೆಸ್ ಆಳ್ವಿಕೆ ಇಲ್ಲದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಮುನಿಯಪ್ಪ ಅವರು ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಮೇಲೆ ಹೊಸಕೋಟೆಯವರೆಗೆ ಇದ್ದ ಚತುಷ್ಪಥ ರಸ್ತೆಯನ್ನು ಮುಳಬಾಗಿಲು ತಾಲೂಕಿನ ನಂಗಲಿಯವರೆಗೆ ವಿಸ್ತರಣೆ ಆಗುವುದಕ್ಕೆ ಶ್ರಮಿಸಿದ್ದಾರೆ.
ಅಭಿವೃದ್ಧಿಗೆ ಆದ್ಯತೆ ನೀಡಬೇಕು
ರೇಲ್ವೆ ಸಚಿವರಾದ ಮೇಲೆ ಕೋಲಾರದಲ್ಲಿ ವ್ಯಾಗನ್ ಘಟಕ ಪ್ರಾರಂಭಕ್ಕೆ ಅನುಮತಿ ಪಡೆದಿದ್ದರು. ಆದರೆ ಇದರಿಂದ ಹೆಚ್ಚಿನ ಜನರಿಗೆ ಉದ್ಯೋಗ ಸಿಗಲಾರದು ಎಂಬ ಕಾರಣಕ್ಕೆ ರೇಲ್ವೆ ಕೋಚ್ ಘಟಕಕ್ಕೆ ಕೇಂದ್ರ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ಪಡೆದು, ಚುನಾವಣೆ ವೇಳಾ ಪಟ್ಟಿ ಪ್ರಕಟಣೆ ಮಾಡಿದ ದಿನವಾದ ಮಾರ್ಚ್ 5ರಂದು ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಿದ್ದಾರೆ. ಸುಮಾರು 1100 ಎಕರೆ ಪ್ರದೇಶದಲ್ಲಿ 1460 ಕೋಟಿ ಖರ್ಚಿನಲ್ಲಿ ರೇಲ್ವೆ ಕೋಚ್ ಘಟಕ ನಿರ್ಮಾಣವಾಗಲು ಯೋಜನೆ ರೂಪಿಸಲಾಗಿದೆ. ಇದರಿಂದ ಸುಮಾರು 15 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ.
ಕ್ಷೇತ್ರದಲ್ಲಿ ಐದು ಕಡೆ ಕೈಗಾರಿಕಾ ಪಾರ್ಕ್ ಸ್ಥಾಪನೆ, ಕೋಲಾರ ತಾಲೂಕಿನ ವೇಮಗಲ್‌ನಲ್ಲಿ 150 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಟೂಲ್‌ರೂಮ್ ನಿರ್ಮಾಣ, ಕಡಪದಿಂದ ವಯಾ ಮುಳಬಾಗಿಲು ಮೂಲಕ ಬೆಂಗಳೂರಿಗೆ ಹೊಸ ರೈಲು ಮಾರ್ಗ, 2001ರಲ್ಲಿ ಮುಚ್ಚಿರುವ ಕೆಜಿಎಫ್ ಚಿನ್ನದ ಗಣಿಯನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಜತೆ ಒಡಂಬಡಿಕೆ ಆಗಿದ್ದು, ಮುನಿಯಪ್ಪ ಅವರಿಗೆ ಈ ಯೋಜನೆಗಳು ಜಾರಿಗೆ ಬರವಂತೆ ಹೊಸ ಸರ್ಕಾರದ ಜೊತೆ ಹೋರಾಡುವುದು ದೊಡ್ಡ ಸವಾಲು ಮುಂದಿದೆ.
ಯುಪಿಎ ಸರ್ಕಾರವಿದ್ದಾಗಲೇ ರೂಪುಗೊಂಡ ಯೋಜನೆಗಳು ಸಕಾಲಕ್ಕೆ ಅನುಷ್ಠಾನಗೊಳಿಸಲು ಸಾಧ್ಯವಾಗದಿರುವಾಗ ಹೊಸ ಸರ್ಕಾರದ ಮೇಲೆ ಪ್ರಭಾವ ಬೀರಿ ಅಭಿವೃದ್ಧಿ ಕೆಲಸಗಳು ಯಾವುದೇ ಅಡೆ-ತಡೆ ಇಲ್ಲದಂತೆ ಮಾಡುವುದು ಹೇಗೆ ಸಾಧ್ಯವೆಂಬ ಜನರ ಪ್ರಶ್ನೆ ಹಾಗೂ ಅನುಮಾನಗಳಿಗೆ ಮುನಿಯಪ್ಪ ಉತ್ತರ ನೀಡಬೇಕಾಗಿದೆ.
ನಿಜ. ಮುನಿಯಪ್ಪ ಯಾವುದೇ ಸರ್ಕಾರವಿದ್ದರೂ 'ಅಂದರಿಕಿ ಮುಂಚಿವಾಡು'(ಎಲ್ಲರಿಗೂ ಒಳ್ಳೆಯವರು)ಎಂಬಂತೆ ಸಂಬಂಧಪಟ್ಟ ಸಚಿವರ ಬಳಿ ಕುಳಿತು ಕೆಲಸ ಮಾಡಿಸುವ ಶಕ್ತಿ ಇದೆ. ಆದರೆ, ಹೊಸ ಸರ್ಕಾರಕ್ಕೆ ಸದರಿ ಯೋಜನೆಗಳ ಬಗ್ಗೆ ಅನುಮಾನ, ಅಸಡ್ಡೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಮುನಿಯಪ್ಪ ಅವರ ಮೇಲಿದೆ.
ಜನರ ಋಣ ತೀರಿಸಲಿ
ಕರ್ನಾಟಕದಿಂದ ಗೆದ್ದಿರುವ 17 ಬಿಜೆಪಿ, ಇಬ್ಬರು ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಹಮ್ಮುಬಿಮ್ಮು ಬಿಟ್ಟು ಮಾಡಿಸಿಕೊಳ್ಳಬೇಕಾದ ಅನಿವಾರ್ಯಕತೆ ಅವರ ಮುಂದಿದೆ. ಇಲ್ಲದಿದ್ದರೆ, ಈಗ ಶಂಕು ಸ್ಥಾಪನೆಯಾಗಿರುವ ಯೋಜನೆಗಳು 'ತುಕ್ಕು' ಹಿಡಿಯುವುದು ಗ್ಯಾರಂಟಿ. ಬಾಕಿ ಇರುವ ಅಭಿವೃದ್ಧಿಯ ಕೆಲಸಗಳ ಜೊತೆಗೆ ಯಾವುದೇ ನದಿ, ನಾಲೆ ಇಲ್ಲದೆ ಮಳೆಯನ್ನು ನಂಬಿ ಜೀವನ ಸಾಗಿಸುತ್ತಿರುವ ಕೋಲಾರ ಕ್ಷೇತ್ರದ ಜನರಿಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಸಹಾಯ ಪಡೆಯುವುದು ಬಹುದೊಡ್ಡ ಸವಾಲು ಮುನಿಯಪ್ಪ ಅವರ ಮುಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

