ಕೋಲಾರ

ಆಯಾ ಶಾಸಕರಿಗೆ ಮತ ಶಾಸ್ತಿ!

Published On :

ಫಲಿತಾಂಶ ಶಾಸಕರಿಗೆ ಎಚ್ಚರಿಕೆ ಗಂಟೆ, ಏರು-ಪೇರುಗಳ ನಡುವೆಯೂ ಕೆ.ಎಚ್. ಮುನಿಯಪ್ಪ ಸೂಪರ್
-ಪಾ.ಶ್ರೀ. ಅನಂತರಾಮ್
ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಎಚ್. ಮುನಿಯಪ್ಪ ಏನೇ ಏರು-ಪೇರುಗಳಿದ್ದರೂ ತಮ್ಮ ಸ್ಥಾನ ಭದ್ರವಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, 2013ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದಿದ್ದ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಗಳಿಗೆ ಬಹುಮತ ಕಲ್ಪಿಸಲು ವಿಫಲರಾಗಿರುವುದು ಎಚ್ಚರಿಕೆಯ ಗಂಟೆಯಾಗಿದೆ.
ರಾಷ್ಟ್ರೀಯ ವಿಚಾರ, ಸ್ಥಳೀಯ ಅಭ್ಯರ್ಥಿ ಎಂಬ ಸಬೂಬು ಹೇಳುವುದು ಸುಲಭ. ಆದರೆ, ತಮ್ಮ ಕ್ಷೇತ್ರದಲ್ಲಿ ಮತಗಳು ಕುಸಿದಿರುವುದಕ್ಕೆ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ.
ಕೋಲಾರ ಕ್ಷೇತ್ರಕ್ಕೆ 8 ವಿಧಾನಸಭೆ ಕ್ಷೇತ್ರಗಳು ಸೇರಿದ್ದು, ಈ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಡೆದ ಮತ ಗಳಿಕೆಯ ಪ್ರಮಾಣಕ್ಕೂ ಹಾಗೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪಡೆದ ಮತಗಳಿಗೂ ಅಜಗಜಾಂತರವಿದೆ. ಬಂಗಾರಪೇಟೆ ಮತ್ತು ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಕೆಜಿಎಫ್‌ನಲ್ಲಿ ಬಿಜೆಪಿ, ಉಳಿದಂತೆ ಮಾಲೂರು, ಚಿಂತಾಮಣಿ ಹಾಗೂ ಶಿಡ್ಲಘಟ್ಟದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕೋಲಾರ ಮತ್ತು ಮುಳಬಾಗಲಿನಲ್ಲಿ ಪಕ್ಷೇತರ ಶಾಸಕರು ಕಾಂಗ್ರೆಸ್ ಬೆಂಬಲಿಸಿದ್ದಾರೆ.
ಚಿಂತಾಮಣಿ ಮಾಜಿ ಶಾಸಕ  ಸುಧಾಕರ ರೆಡ್ಡಿ ಅವರು ಮುನಿಯಪ್ಪನವರ ಮೇಲಿನ ದ್ವೇಷದಿಂದ ಜೆಡಿಎಸ್ ಬೆಂಬಲಿಸಿದ್ದರು. ಚಿಂತಾಮಣಿಯಲ್ಲಿ ಮುನಿಯಪ್ಪ 47,366, ಜೆಡಿಎಸ್‌ನ ಕೇಶವ್ 81,961 ಮತ ಪಡೆದಿದ್ದು ಮುನಿಯಪ್ಪನವರಿಗೆ 34,595 ಮತಗಳು ಕಡಿಮೆ ಆಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಎದುರು ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ ಲೋಕಸಭೆಯಲ್ಲಿ 34,681 ಮತ ಹೆಚ್ಚುವರಿ ಬುಟ್ಟಿಗೆ ಹಾಕಿಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ 12,685 ಮತ ಪಡೆದಿತ್ತು. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಭಾರೀ ಮುನ್ನಡೆ ಗಳಿಸಿಕೊಂಡ ಕ್ಷೇತ್ರವಾದರೂ ಶಾಸಕ ಕೃಷ್ಣಾರೆಡ್ಡಿ ಬೀಗುವ ಅಗತ್ಯವಿಲ್ಲ. ಏಕೆಂದರೆ ಮಾಜಿ ಶಾಸಕ ಸುಧಾಕರ ರೆಡ್ಡಿ 67,254 ಮತ ಪಡೆದಿದ್ದರು. ಈ ಮತ ಸೇರಿದರೆ ಜೆಡಿಎಸ್‌ನ ಒಟ್ಟು ಮತ ಗಳಿಕೆ ಕಡಿಮೆಯೇ ಆಗಿದೆ.
ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಳೆದ ವಿಧಾನಸಭೆಯಲ್ಲಿ ಪಡೆದ ಮತಕ್ಕಿಂತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 5087 ಮತಗಳ ಹಿನ್ನಡೆಯಾಗಿದೆ. ಇದು ಕಾಂಗ್ರೆಸ್‌ನ ಮಾಜಿ ಸಚಿವ ವಿ. ಮುನಿಯಪ್ಪ ಅವರಿಗೆ ಹಿನ್ನಡೆ ಎಂದರೆ ತಪ್ಪಾಗಲಾರದು. ಜೆಡಿಎಸ್ ಅಭ್ಯರ್ಥಿಗೆ ಲೀಡ್ ತಂದುಕೊಟ್ಟ ಕ್ಷೇತ್ರಗಳಲ್ಲಿ ಶಿಡ್ಲಘಟ್ಟವೂ ಒಂದು. ಆದರೆ ವಿಧಾನಸಭೆಯಲ್ಲಿ ಜೆಡಿಎಸ್ ಪಡೆದ ಮತಕ್ಕಿಂತ ಲೋಕಸಭೆಯಲ್ಲಿ 16,287 ಮತಗಳು ಕಡಿಮೆ ಆಗಿದೆ.

ಕಾಂಗ್ರೆಸ್‌ಗೆ ನಿರೀಕ್ಷಿತ ಮತ ಬರಲಿಲ್ಲ: ಚನ್ನಕೇಶವ್ ವಿಷಾದ
ಟೇಕಲ್: ಈ ಬಾರಿ ಕಾಂಗ್ರೆಸ್‌ಗೆ ನಮ್ಮ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಚನ್ನಕೇಶವ ಹೇಳಿದರು.
ತೊರಲಕ್ಕಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತೆ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ದಾಖಲೆ ಮೀರಿ ಪಕ್ಷಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಶೋಕ್‌ಕುಮಾರ್ ಮಾತನಾಡಿ, ಈ ಬಾರಿ ಮುನಿಯಪ್ಪನವರು ಗೆಲ್ಲಲು ಅವರ ಮಾಡಿದ ಅಭಿವೃದ್ಧಿ ಕೆಲಸಗಳೇ ಅವರಿಗೆ ಶ್ರೀರಕ್ಷೆಯಾಯಿತು ಎಂದು ತಿಳಿಸಿದರು. ಕೆಪಿಸಿಸಿ ಕಾರ್ಯದರ್ಶಿ ಎಸ್.ಎನ್.ರಘುನಾಥ್, ವಕೀಲ ಟಿ.ಬಿ.ಕೃಷ್ಣಪ್ಪ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟರಾಮು ಮಾತನಾಡಿದರು.
ಬಿ.ಕೆ.ನಾರಾಯಣಸ್ವಾಮಿ, ಚನ್ನರಾಯಪ್ಪ, ರಮೇಶ್, ಯಲ್ಲಪ್ಪ, ಬಿ.ಕೆ.ರಾಮಚಂದ್ರಪ್ಪ, ಕೃಷ್ಣಪ್ಪ, ನಾರಾಯಣಸ್ವಾಮಿ, ನೂಟವೆ ರಾಜಣ್ಣ, ಮಹಮ್ಮದ್, ಆನಿಮಿಟ್ಟಿಗಾನಹಳ್ಳಿ ರವಿ, ಲಕ್ಷ್ಮೀನಾರಾಯಣ್ ಸೇರಿದಂತೆ ಮುಂತಾದವರು ಇದ್ದರು.

  ಮುನಿಯಪ್ಪ ಕೈಹಿಡಿದ ಮುಳಬಾಗಲು ಕ್ಷೇತ್ರ
ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಲೋಕಸಭೆ ಚುನಾವಣೆಯಲ್ಲಿ ಶ್ರೀನಿವಾಸಪು ಕ್ಷೇತ್ರದಲ್ಲಿ 17,711 ಮತಗಳು ಕಡಿಮೆ ಬಿದ್ದಿದೆ. ಆದರೆ ಈ ಚುನಾವಣೆಯಲ್ಲಿ ಇತರೆ ಪಕ್ಷಕ್ಕಿಂತ ಹೆಚ್ಚು ಲೀಡ್ ಸಿಕ್ಕಿದ್ದಷ್ಟೇ ಸಮಾಧಾನದ ಸಂಗತಿ. ಕಳೆದ ಬಾರಿ ಕಾಂಗ್ರೆಸ್ ಸೋತಿದ್ದ ಮುಳಬಾಗಲು ವಿಧಾನಸಭೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಇತರೆ ಪಕ್ಷಗಳಿಗಿಂತ ಲೀಡ್ ಸಾಧಿಸಿದೆ. ಆದರೆ, ಇಲ್ಲಿ 70 ಸಾವಿರ ಮತಗಳಿಗೂ ಅಧಿಕ ಅಂತರದಲ್ಲಿ ಗೆದ್ದಿದ್ದ ಕೊತ್ತೂರು ಮಂಜುನಾಥ್ 10,494 ಮತಗಳನ್ನು ಮುನಿಯಪ್ಪನವರಿಗೆ ಹೆಚ್ಚಿಸಿಕೊಟ್ಟಿದ್ದಾರೆ. ಕೆಜಿಎಫ್ ಕ್ಷೇತ್ರದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿಧಾನಭೆಗಿಂತ ಉತ್ತಮ ಸಾಧನೆ ಮಾಡಿದೆ. ಆದರೆ ಬಿಜೆಪಿ ಶಾಸಕರಿರುವ ಈ ಕ್ಷೇತ್ರದಲ್ಲಿ ಲೋಕಸಭೆಯಲ್ಲಿ ಬಿಜೆಪಿಗೆ ಕಾಂಗ್ರೆಸ್‌ಗಿಂತ 5,095 ಮತ ಹೆಚ್ಚಿಗೆ ಸಿಕ್ಕಿದ್ದು, ಶಾಸಕಿ ವೈ. ರಾಮಕ್ಕ ಅವರು ಅಭ್ಯರ್ಥಿ ನಾರಾಯಣಸ್ವಾಮಿ ಅವರ ಕೆಂಗಣ್ಣಿನಿಂದ ತಪ್ಪಿಸಿಕೊಂಡಂತಾಗಿದೆ.

  ಬಂಗಾರಪೇಟೆಯಲ್ಲಿ ಕುಸಿತ
ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲವು ಸಾಧಿಸಿದ್ದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮುನಿಯಪ್ಪನವರಿಗೆ ಲೀಡ್ ಕಲ್ಪಿಸಲು ವಿಫಲರಾಗಿದ್ದಾರೆ. ಇಲ್ಲಿ 17,975 ಮತಗಳ ಹಿನ್ನಡೆಯಾಗಿದೆ. ಮಾಲೂರು ಕ್ಷೇತ್ರದಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಕಾಂಗ್ರೆಸ್ ಇಲ್ಲಿ ಕಳೆದ ಬಾರಿಯ ಪಕ್ಷೇತರ ಅಭ್ಯರ್ಥಿ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಅವರ ಬೆಂಬಲದಿಂದ ಜೆಡಿಎಸ್ ಶಾಸಕ ಮಂಜುನಾಥಗೌಡರಿಗೆ ತಕ್ಕ ಉತ್ತರ ನೀಡಿದೆ. ಜೆಡಿಎಸ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 15,187 ಮತ ಹೆಚ್ಚು ಸಿಕ್ಕಿದೆ. ವಿಧಾನಸಭೆಯಲ್ಲಿ ಪರೋಕ್ಷವಾಗಿ ಕೃಷ್ಣಯ್ಯಶೆಟ್ಟರನ್ನು ಬೆಂಬಲಿಸಿದ್ದ ಬಿಜೆಪಿಗೆ ಈ ಬಾರಿ ಲೋಕಸಭೆಯಲ್ಲೂ ಭಾರೀ ಬೆಂಬಲ ಸಿಕ್ಕಿದ್ದು ಮೋದಿ ಅಲೆ ಕಾರಣವೆನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.