ಕೋಲಾರ

ನರೇಗಾ ಅವ್ಯವಹಾರ: ದಂಡ ವಸೂಲಿಗೆ ಸೂಚನೆ

Published On :

ಕೋಲಾರ: ನರೇಗಾ ಯೋಜನೆಯಡಿ ಶ್ರೀನಿವಾಸಪುರ ತಾಲೂಕಿನ ಬೈರಗಾನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ದ ಒಂಬುಡ್ಸ್‌ಮನ್ ಸೂಚಿಸಿರುವ ದಂಡ ವಸೂಲಿ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಪಂ ಸಿಇಒ ವಿನೋತ್ ಪ್ರಿಯಾ ಸೂಚನೆ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ನರೇಗಾ ಯೋಜನೆಯಡಿ 2014-15 ನೇ ಸಾಲಿನಲ್ಲಿ ಸ್ವೀಕೃತಿಯಾದ ಹಾಗೂ ವಿಲೇವಾರಿ ಮಾಡಲಾದ ದೂರುಗಳ ವಿವರಗಳನ್ನು ಪರಿಶೀಲಿಸಿ ಮಾತನಾಡಿದರು.
ಬೈರಗಾನಹಳ್ಳಿಯಲ್ಲಿ ನಡೆದಿರುವ ಹಣ ದುರುಪಯೋಗ ಪ್ರಕರಣದಲ್ಲಿ ಗ್ರಾಪಂ ಪಿಡಿಒ ಅವರಿಂದ ಕೂಲಿಕಾರರ ಪರಿಹಾರ ವೆಚ್ಚ 20500, ಅಧ್ಯಕ್ಷರ ವಿಚಾರಣಾ ದಂಡ 1 ಸಾವಿರ, ಕಾರ್ಯದರ್ಶಿ ಶ್ರೀನಿವಾಸ್‌ರಿಂದ 1 ಸಾವಿರ, ಹಿಂದಿನ ತಾಪಂ ಇಒರಿಂದ 2 ಸಾವಿರ ದಂಡ ವಸೂಲಿ ಮಾಡಿ ಜೊತೆಗೆ ಕ್ರಿಮಿನಲ್ ಕೇಸ್ ಹಾಕಿ ಎಂದು ಹೇಳಿದರು.
ಹೊದಲಿ ಗ್ರಾಪಂ ವ್ಯಾಪ್ತಿಯ ದಾಸರ ತಿಮ್ಮನಹಳ್ಳಿಯಲ್ಲಿ 4 ಲಕ್ಷ ಕಾಮಗಾರಿ ನಡೆಸಿರುವುದಾಗಿ ಸುಳ್ಳು ಮಾಹಿತಿ ನೀಡಲಾಗಿದೆ. ಸೋಮಯಾಜಲಪಲ್ಲಿ ನಿರ್ವಹಿಸಿದ ಕಾಮಗಾರಿಯಲ್ಲೂ ಅವ್ಯವಹಾರ ನಡೆದಿದೆ. ಮೋತಕಪಲ್ಲಿಯಲ್ಲಿ ಪಿಡಿಒ ನಡೆಸಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಒಂಬುಡ್ಸ್‌ಮನ್ ಶಿಫಾರಿಸಿನಂತೆ ಸಂಬಂಧಿಸಿದವರಿಂದ ದಂಡ ವಸೂಲಿ ಮಾಡಬೇಕೆಂದು ತಾಪಂ ಇಒಗೆ ತಿಳಿಸಿದರು.
ಸಾರ್ವಜನಿಕರಿಂದ ದೂರು ಬಂದರೆ ಕೂಡಲೇ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದರು. ಸಾರ್ವಜನಿಕರು ದೂರು ಸಲ್ಲಿಸಿದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಗಂಭೀರವಾಗಿ ಪರಿಗಣಿಸಬೇಕು ಮತ್ತು ಕಾಮಗಾರಿ ಪರಿಶೀಲಿಸಿ ಸಮಗ್ರ ವರದಿಯನ್ನು ಸಲ್ಲಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬಂಗಾರಪೇಟೆ ತಾಲೂಕಿನ ಐನೋರಹೊಸಹಳ್ಳಿ ಗ್ರಾಪಂನಲ್ಲಿ ನಡೆದಿರುವ ನರೇಗಾ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ್ವಯ ನರೇಗಾದ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿ ಕೆಲವು ಕಡತಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಕಡತಗಳನ್ನು ಪರಿಶೀಲಿಸಿದ ನಿರ್ದೇಶಕರು ನಂತರ ಕಡತಗಳನ್ನು  ವಾಪಸ್ ತೆಗೆದುಕೊಂಡು ಹೋಗುವಂತೆ ಸೂಚಿಸಿ ತಿಂಗಳು ಕಳೆದಿದ್ದರೂ, ತಾಪಂ ಸಹಾಯಕ ನಿರ್ದೇಶಕರು ವಾಪಸ್ಸು ತಾರದಿರುವ ಜಿಪಂ ಸಿಸಿಒ ಆಕ್ಷೇಪಿಸಿ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಕೂಲಿ ಕಾರ್ಮಿಕರು ನರೇಗಾದಲ್ಲಿ ಕೂಲಿ ಕೊಡುವಂತೆ ಅರ್ಜಿಯನ್ನು ಸಲ್ಲಿಸಿದರೂ ಸಹ ಇಲ್ಲಿನ ಪಿಡಿಒ ಸಕಾಲಕ್ಕೆ ಕೆಲಸ ನೀಡಿಲ್ಲವೆಂದು ಮುನಿರಾಜು ಎಂಬುವರು ದೂರು ಸಲ್ಲಿಸಿದ್ದರು.
ಸಿಇಒ ವಿನೋತತ್ಪ್ರಿಯಾ, ಕಾರ್ಮಿಕರು ಅರ್ಜಿ ಸಲ್ಲಿಸಿ ಕೂಲಿ ಕೊಡದೆಯಿರುವ ಬಗ್ಗೆ ಕಂಡು ಬಂದರೆ ಪಿಡಿಒ ಮೇಲೆ ಕ್ರಮ ಕೈಗೊಳ್ಳುವುದರ ಜತೆಗೆ ವೇತನಲ್ಲಿ ಕೂಲಿ ಕಾರ್ಮಿಕರಿಗೆ ನೀಡಬೇಕಾಗಿರುವ ನಿರುದ್ಯೋಗ ಭತ್ಯೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದರು.
ಜಿಲ್ಲೆಯ ವಿವಿಧೆಡೆ ನರೇಗಾ ಯೋಜನೆಯಡಿಯಲ್ಲಿ ಪಿಡಿಒಗಳು  ಅವ್ಯವಹಾರ ನಡೆಸಿದ್ದು, ಕೂಡಲೇ ಇವರ ವೇತನದಿಂದ ದಂಡ ಕಡಿತಗೊಳಿಸುವಂತೆ ಒಂಬುಡ್ಸ್‌ಮನ್ ಶಿಫಾರಸು ಮಾಡಿದ್ದರೂ ಇದುವರೆಗೂ ಪಾಲಿಸಿದೆ ಇರುವ ಬಗ್ಗೆ ಜಿಪಂ ಸಿಇಒ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ, ನಂಬಿಹಳ್ಳಿ, ಗೌನಿಪಲ್ಲಿಯಲ್ಲಿ ನರೇಗಾದ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರ ದೂರಿನ್ವಯ ಸಿಇಒ ಪರಿಶೀಲನೆ ನಡೆಸಿ ಕೂಡಲೇ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಒಂಬುಡ್ಸ್‌ಮನ್ ಗೋವಿಂದಪ್ಪ, ಜಿಪಂ ಯೋಜನಾ ನಿರ್ದೇಶಕ ಮೋಹನ ಕುಮಾರ್, ಮುಳಬಾಗಲು ಇಒ ಅರುಣ್‌ಕುಮಾರ್, ಬಂಗಾರಪೇಟೆ ಇಒ ಕೆ.ಎಸ್.ಭಟ್, ಮಾಲೂರು ಇಒ ಸಂಜೀವಪ್ಪ, ಕೋಲಾರ ತಾಪಂ ಸಹಾಯಕ ನಿರ್ದೇಶಕ ರಾಜಣ್ಣ, ಬಂಗಾರಪೇಟೆ ಸಹಾಯಕ ನಿರ್ದೇಶಕ ಮಹದೇವಪ್ಪ, ಜಿಪಂ ಸಹಾಯಕ ನಿರ್ದೇಶಕ ರವಿರಾಜ್, ಪ್ರಭಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.