ಕೋಚಿಮುಲ್ ಚುನಾವಣೆ ಪ್ರಚಾರ ಬಲು ಜೋರು
ಕೋಲಾರ: ಕೋಚಿಮುಲ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದೆ.
ಪ್ರತಿಷ್ಠಿತ ಹಾಲು ಒಕ್ಕೂಟವನ್ನು ತಮ್ಮ ತಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಪ್ರಬಲ ಪೈಪೋಟಿ ನಡೆಸಿದ್ದಾರೆ. ಬಿಜೆಪಿ ಮಾತ್ರ ಮೌನಕ್ಕೆ ಶರಣಾಗಿದೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಗೆದ್ದಿರುವ ಹುರುಪಿನಲ್ಲಿರುವ ಕಾಂಗ್ರೆಸ್ ಮುಖಂಡರು ಕೋಚಿಮುಲ್ ಆಡಳಿತ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. 13 ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಗೆ ಪಕ್ಷದಿಂದ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹಾಗೂ ಆರ್ಥಿಕವಾಗಿ ಸದೃಢರಾಗಿರುವವರನ್ನೇ ಕಣಕ್ಕೆ ಇಳಿಸಲಾಗಿದೆ.
ಪ್ರತಿ ಕ್ಷೇತ್ರದಲ್ಲಿ 40ರಿಂದ 215 ಮಂದಿ ಮತದಾರರು ಇದ್ದು, ಕನಿಷ್ಟ 150 ಮತ ಗಿಟ್ಟಿಸಿಕೊಳ್ಳಲು ಗಾಳ ಬೀಸಿದ್ದಾರೆ. ಜೆಡಿಎಸ್ನಲ್ಲೂ ಗೆಲ್ಲುವುದಕ್ಕೆ ತೀವ್ರ ಪೈಪೋಟಿ ನಡೆದಿದೆ. ಕೆಲವು ಕಡೆ ಬಂಡಾಯದ ಬಾವುಟ ಹಾರಿಸಿರುವುದರಿಂದ ಅಧಿಕೃತ ಅಭ್ಯರ್ಥಿಗಳು ಮನವೊಲಿಸುವ ಕಾರ್ಯ ನಡೆದಿದೆ.
ಜವಾಬ್ದಾರಿ ಹಂಚಿಕೆ: ಮುನಿಯಪ್ಪ ಅವರು ಕೋಚಿಮುಲ್ ಚುನಾವಣೆಯ ಜವಾಬ್ದಾರಿಯನ್ನು ಶಾಸಕರಾದ ರಮೇಶ್ಕುಮಾರ್, ಎಸ್.ಎನ್.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಚನ್ನಕೇಶವ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ರೇಷ್ಮೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ, ಕೋಚಿಮುಲ್ ನಾಮಕರಣ ಸದಸ್ಯ ಬ್ಯಾಟಪ್ಪ ಇನ್ನಿತರರಿಗೆ ವಹಿಸಿದ್ದಾರೆ.
ಮತದಾರರಿಗೆ ಆಮಿಷ: ಮತದಾರರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಈಗಾಗಲೇ ಕೆಲವು ಅಭ್ಯರ್ಥಿಗಳು ಮತದಾರರಿಗೆ ಪ್ರವಾಸ ಭಾಗ್ಯವನ್ನು ದಯಪಾಲಿಸಿದ್ದಾರೆ. ಜೊತೆಗೆ ಒಂದು ಮತಕ್ಕೆ 25 ರಿಂದ 40 ಸಾವಿರದ ವರೆಗೆ ನೀಡಲು ಮುಂದಾಗಿದ್ದಾರೆ ಎಂದು ಆರೋಪಗಳು ಕೇಳಿ ಬರುತ್ತಿವೆ. ಮೊಬೈಲ್, ಹಾಗೂ ಇನ್ನಿತರ ದುಬಾರಿ ಉಡುಗೊರೆಗಳ ಆಮಿಷ ಕೂಡಾ ಜೋರಾಗಿದೆ.
ಜೆಡಿಎಸ್ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದರೂ ಕೋಚಿಮುಲ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ಗೆ ತಿರುಗೇಟು ನೀಡಲು ಸನ್ನದ್ಧವಾಗುತ್ತಿದೆ. ಜೆಡಿಎಸ್ನ ಕೇಶವ ಕೆಲ ಮುಖಂಡರ ಮೇಲಿನ ಆಕ್ರೋಶದ ನಡುವೆಯೂ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡುವ ಮೂಲಕ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಚುನಾವಣೆ ನಂತರ ಜೆಡಿಎಸ್ ಅನೇಕ ಮುಖಂಡರು ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷ ಮೂರಾಂಡಹಳ್ಳಿ ಗೋಪಾಲಪ್ಪ ಮತ್ತಿತರರು ಮಾತ್ರ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಚುನಾವಣೆ ಮೇ 25ರಂದು ಭಾನುವಾರ ನಗರದ ಗೋಕುಲ್ ಕಾಲೇಜಿನಲ್ಲಿ ನಡೆಯಲಿದೆ.
ರೆಸಾರ್ಟ್ ರಾಜಕೀಯ ಶುರು!
ಚಿಂತಾಮಣಿ: ಕೋಚಿಮುಲ್ ನಿರ್ದೇಶಕ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬೆಂಬಲಿತ ಎಂಪಿಸಿಎಸ್ ಅಧ್ಯಕ್ಷರು ಮೋಜು ಮತ್ತು ಮಸ್ತಿಗಾಗಿ ಗುರುವಾರ ರಾತ್ರಿ ಬಸ್ಸುಗಳಲ್ಲಿ ಪ್ರವಾಸ ಕೈಗೊಂಡಿರುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಭಾನುವಾರ ನಡೆಯಲಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಂ.ಸಿ.ಸುಧಾಕರ್ ಬೆಂಬಲಿತ ಎಂಪಿಸಿಎಸ್ ಅಧ್ಯಕ್ಷರು ಸೇರಿ ಅನೇಕರು ಹವಾ ನಿಯಂತ್ರಣ 3 ಬಸ್ಸುಗಳಲ್ಲಿ ರೆಸಾರ್ಟ್ಗೆ ತೆರಳಿದ್ದಾರೆ. ಶಾಸಕರ ರಾಜಕೀಯ ಶತ್ರು ಜೆಡಿಎಸ್ನ ತಳಗವಾರ ರಾಜಗೋಪಾಲ್ಗೆ ಈ ಚುನಾವಣೆಯಲ್ಲಿ ಹಿನ್ನಡೆಯುಂಟು ಮಾಡುವುದು ಇದರ ಹಿಂದಿನ ಉದ್ದೇಶ ಎನ್ನಲಾಗುತ್ತಿದೆ. ಇದೇ ವೇಳೆ, ತಳಗವಾರ ರಾಜಗೋಪಾಲ್ ಅವರನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ತಾಲೂಕಿನಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಮತ್ತೊಂದೆಡೆ ಸೋಲಿಲ್ಲದ ಸರದಾರ ಸಂಸದ ಕೆ.ಎಚ್.ಮುನಿಯಪ್ಪ ಗೆಲುವಿನ ಹುಮ್ಮಸ್ಸಿನಲ್ಲಿ ಇದ್ದು, ಕಾಂಗ್ರೆಸ್ ಅಭ್ಯರ್ಥಿ ಆಲಂಬಗಿರಿ ಗ್ರಾಮದ ತಿಪ್ಪರೆಡ್ಡಿಯನ್ನು ಗೆಲ್ಲಿಸಲು ತಮ್ಮ ರಾಜಕೀಯ ತಂತ್ರಗಾರಿಕೆಯನ್ನು ಪ್ರಯೋಗಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

