ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಯೋಜನೆ ಲಾಭ
ಕೋಲಾರ: ಅಸಂಘಟಿತ ಕಾರ್ಮಿಕರು ಹಾಗೂ ನಾಗರಿಕರು ವೃದ್ಧಾಪ್ಯದಲ್ಲಿ ಯಾರಿಂದಲೂ ತೊಂದರೆಗೆ ಸಿಲುಕದೆ ನೆಮ್ಮದಿಯ ಜೀವನೋಪಯಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೇಣುಕಾ ಪ್ರಸಾದ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಜಾಗೃತಿ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಯೋಜನೆ ಕುರಿತು ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಪಿಂಚಣಿಯ ಸೌಲಭ್ಯವಿದೆ. ಅದೇ ರೀತಿ ವೃದ್ಧಾಪ್ಯದಲ್ಲಿ ಜೀವನ ಸಾಗಿಸಲು ಕಟ್ಟಡ ಕಾರ್ಮಿಕರಿಗೆ ಹಾಗೂ ನಾಗರಿಕರಿಗೂ ಪಿಂಚಣಿ ಸೌಲಭ್ಯವಿದೆ. ಈ ಸೌಲಭ್ಯ ಪಡೆಯಲು ಕಾನೂನು ಅರಿವು ಪಡೆಯಬೇಕೆಂದರು.
ಬೀಡಿ ಕಾರ್ಮಿಕರು, ಆಟೋ ಚಾಲಕರು ಮತ್ತಿತರರಿಗೆ ವೃದ್ಧಾಪ್ಯದಲ್ಲಿ ಬದುಕಿನ ಹಾದಿ ಯಾವುದು ಎಂಬುದರ ಕುರಿತು ಇಂದೇ ಎಚ್ಚರಿಕೆ ವಹಿಸಬೇಕು. ತಮ್ಮ ದಿನನಿತ್ಯದ ಸಂಪಾದನೆಯಲ್ಲಿ ಸ್ವಲ್ಪ ಭಾಗ ಉಳಿತಾಯ ಮಾಡಿ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಉಳಿತಾಯದಷ್ಟೇ ಪಾಲನ್ನು ಸರ್ಕಾರ ತುಂಬುವ ಮೂಲಕ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಅಪರ ಹಿರಿಯ ಸಿವಿಲಲ್ನ್ಯಾಯಾಧೀಶರಾದ ಎಸ್.ಶ್ರೀಧರ್ ಮಾತನಾಡಿದರು. ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್, ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದ ಕಾಯಿದೆ-2013ರ ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ರಾಜಗೋಪಾಲ್, ಕಾರ್ಮಿಕ ನಿರೀಕ್ಷಕ ಕೆ.ಎಸ್.ವಿಜಯಕುಮಾರ್ ಅವರು ರಾಷ್ಟ್ರೀಯ ಪಿಂಚಣಿ ಯೋಜನೆಯ ಮಹತ್ವದ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಾಗೃತಿ ಸೇವಾ ಸಂಸ್ಥೆ ಆಶ್ರಯದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗಾಗಿ ಆರ್ಥಿಕ ಸಹಾಯಧನವನ್ನು ವಿತರಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕುಮಾರ್, 2ನೇ ಅಪರ ಸಿವಿಲ್ ನ್ಯಾಯಾಧೀಶ ಚಿನ್ನಸ್ವಾಮಿ, ಹಿರಿಯ ವಕೀಲ ಜಾಕೀರ್ ಉಸ್ಮಾನ್, ರಾಷ್ಟ್ರೀಯ ಪಿಂಚಣಿ ಯೋಜನೆಯ ಪ್ರವರ್ತಕ ಶಾಂತಪ್ಪ ಅನೆಗಲಪುರ, ಜಾಗೃತಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ನಾಗರಾಜ್ ಇದ್ದರು. ಕೆ.ಕೆ.ವಿಠಲಕೃಷ್ಣ ಸ್ವಾಗತಿಸಿ, ನ್ಯಾಯಾಂಗ ಇಲಾಖೆಯ ಸುಬ್ರಮಣಿ ನಿರೂಪಿಸಿ, ಸಿ.ವಿ.ಚೈತ್ರಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

