ಆಲಿಕಲ್ಲು ಮಳೆಗೆ ನಾನಾ ಬೆಳೆ ಧ್ವಂಸ
ಮುಳಬಾಗಲು: ತಾಲೂಕಿನ ಪಿ. ಗಂಗಾಪುರ, ಮಜರಾ ವೆಂಕಟಾಪುರ, ಚಾಮರೆಡ್ಡಿಹಳ್ಳಿ, ಜಿ.ವಡ್ಡ ಹಳ್ಳಿ, ಪಿಚ್ಚಗುಂಟ್ಲಹಳ್ಳಿಯಲ್ಲಿ ಮಳೆಯೊಂದಿಗೆ ಬಿದ್ದ ಅಲಿಕಲ್ಲು ರೈತರ ಜೀವನ, ಬೆಳೆಗೆ ಕಲ್ಲು ಹಾಕಿದೆ.
ಸುತ್ತಮುತ್ತಲ ಆರು ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲೂ ಸಹ ಮಳೆಯಾಗಿದ್ದು. ಕೇವಲ ಈ ಗ್ರಾಮಗಳ ಮೇಲೆ ಆಲಿಕಲ್ಲು ಅಧಿಕವಾಗಿ ಬಿದ್ದಿದೆ. ಇನ್ನೂರು ಎಕರೆಗೂ ಹೆಚ್ಚಿನ ಮಾವು, 150 ಎಕರೆ ಟೊಮೆಟೊ, ಕೋಸು, ಮೆಣಸಿನ ಕಾಯಿ, ಫರಂಗಿ ಫಸಲಿನ ಮೇಲೆ ಅಲಿಕಲ್ಲಿನ ಕರಾಳ ಚಾಯೆ ಬಿದ್ದಿದೆ.
ಜಿ.ವಡ್ಡಹಳ್ಳಿಯಲ್ಲಿ ಪರಂಗಿ ತೋಟ ಸಂಪೂರ್ಣವಾಗಿ ಬೋಳಾಗಿದೆ. ಪಕ್ಕದಲ್ಲಿಯೇ ಟೊಮೆಟೋ ಬೆಳೆ ನೆಲಕ್ಕೊರಗಿದೆ.
ಪರಿಶೀಲನೆ: ಮುಳಬಾಗಲು ತಹಶೀಲ್ದಾರ್ ಕೆ. ಏಕೇಶಬಾಬು, ಕಂದಾಯ ನಿರೀಕ್ಷಕ ಮಾಲೂರು ರವಿ, ಅಲಂಗೂರು ನಾಗರಾಜ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು. ಮೊದಲ ಹಂತದಲ್ಲಿ ತಾಲೂಕು ಮಟ್ಟದಲ್ಲಿ ಎರಡು ಮೂರು ದಿವಸದಲ್ಲಿ ಪರಿಹಾರ ನೀಡಲಾಗುವುದು.
ನಂತರ ತೋಟಗಾರಿಕೆ ಇಲಾಖೆಯಿಂದ ನಷ್ಟದ ಅಂದಾಜು ತರಿಸಿಕೊಂಡು ಸೂಕ್ತ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ಕೆ. ಏಕೇಶಬಾಬು 'ಕನ್ನಡ ಪ್ರಭ'ಕ್ಕೆ ತಿಳಿಸಿದ್ದಾರೆ.
ಮಳೆಗೆ ಕೋಟ್ಯಂತರ ಮೌಲ್ಯದ ದ್ರಾಕ್ಷಿ ನಾಶ
ಚಿಕ್ಕಬಳ್ಳಾಪುರ: ಭಾರಿ ಗಾಳಿ ಸಮೇತ ಬಿದ್ದ ಆಲಿಕಲ್ಲು ಮಳೆಗೆ ಕೋಟ್ಯಂತರ ರುಪಾಯಿ ಮೌಲ್ಯದ ದ್ರಾಕ್ಷಿ ನಾಶವಾಗಿ ತಾಲೂಕಿನ ಕಣಿತಹಳ್ಳಿ ಗ್ರಾಮದ ರೈತರು ಕಣ್ಣೀರು ಸುರಿಸುವಂತಾಗಿದೆ. ಮಂಗಳವಾರ ಸಂಜೆ ಇದ್ದಕ್ಕಿದ್ದಂತೆ ಭಾರಿ ಗಾಳಿ ಬೀಸಿದ ನಂತರ ಆಲಿಕಲ್ಲು ಮಳೆ ಬಿದ್ದಿದೆ. ಇದರಿಂದ ಗ್ರಾಮದ ಕೃಷ್ಣಮೂರ್ತಿ, ಅಶ್ವತ್ಥರೆಡ್ಡಿ, ಮುನಿರಾಜು, ವೆಂಕಟರಾಯಪ್ಪ, ನಾಗರಾಜ್, ಮುನಿಕೃಷ್ಣ ಸೇರಿದಂತೆ ಅನೇಕ ರೈತರು ಬೆಳೆದಿದ್ದ ದ್ರಾಕ್ಷಿ ಬೆಳೆ ನೆಲಕಚ್ಚಿವೆ.
ಆಲಿಕಲ್ಲು ಬಿದ್ದ ಹಿನ್ನೆಲೆಯಲ್ಲಿ ದ್ರಾಕ್ಷಿ ಅಪ್ಪಚ್ಚಿಯಾಗಿವೆ. ಅಂತರ್ಜಲ ಮಟ್ಟ ಕುಸಿದು ನೀರಾವರಿ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿ ರೈತರು ಸಾಲ ಸೋಲ ಮಾಡಿ ದ್ರಾಕ್ಷಿ ಬೆಳೆಯನ್ನಿಟ್ಟಿದ್ದರು. ಇನ್ನೇನು ಸಮೃದ್ಧವಾಗಿ ಬೆಳೆದ ದ್ರಾಕ್ಷಿ ಲಾಭವನ್ನು ತಂದು ಕೊಡುವ ಹಂತದಲ್ಲಿತ್ತು. ಈಗು ಸುರಿದ ಮಳೆಯಿಂದ ಎಲ್ಲವೂ ನಾಶವಾಗಿದ್ದು, ರೈತರನ್ನು ಆತಂಕಕ್ಕೆ ಕಾರಣವಾಗಿದೆ.
ಕೋಲಾರದಲ್ಲಿ ಧಾರಾಕಾರ ಮಳೆ
ಕೋಲಾರ: ಕೋಲಾರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿದಿದೆ.
ಕಳೆದ ಮೂರು ದಿನಗಳಿಂದ ಸುಡು ಬಿಸಿಲಿಗೆ ಬಳಲಿದ್ದ ಜನರು ಮಳೆಯಿಂದ ಕೊಂಚ ಮಟ್ಟಿಗೆ ಸಂತಸಗೊಂಡಿದ್ದಾರೆ. ಜೋರು ಮಳೆಗೆ ಚರಂಡಿಗಳಲ್ಲಿ ಮತ್ತು ರಾಜಾ ಕಾಲುವೆಗಳಲ್ಲಿ ನೀರು ಪ್ರವಾಹದಂತೆ ಹರಿಯಿತು. ಕೆಲವು ಕಡೆ ಚರಂಡಿ ನೀರು ರಸ್ತೆಗಳಲ್ಲಿ ಹರಿದು ಜನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಗರದ ಹಳೆ ಪೇಟೆ ಇನ್ನಿತರ ಕಡೆ ರಸ್ತೆಗೆ ಹಾಕಿದ ಡಾಂಬಾರು ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದೆ. ಅನೇಕ ವಾರ್ಡುಗಳಲ್ಲಿ ವಿಲೇವಾರಿ ಆಗದ ಕಸ-ಕಡ್ಡಿ ರಸ್ತೆಗಳಲ್ಲಿ ತೇಲಾಡಿತು. ಸಿಡಿಲು-ಗುಡುಗಿನಿಂದಾಗಿ ಬೆಸ್ಕಾಂನವರು ಕರೆಂಟ್ ತೆಗೆದಿದ್ದರಿಂದ ಅನೇಕ ಕಡೆ ಕತ್ತಲು ಅವರಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

