ಎಲೆಮಲ್ಲಪ್ಪಶೆಟ್ಟಿ ಕೆರೆ ಯೋಜನೆ 450 ಕೋಟಿ ಪರಿಷ್ಕೃತ ವೆಚ್ಚ: ಪ್ರಸ್ತಾವನೆ ಸಲ್ಲಿಕೆ
ಕೋಲಾರ: ಜಿಲ್ಲೆಯ ನೀರಿನ ಸಮಸ್ಯೆ ನಿವಾರಣೆಗಾಗಿ ರೂಪಿಸಿರುವ ಅಲ್ಪಾವಧಿ ಎಲೆಮಲ್ಲಪ್ಪ ಶೆಟ್ಟಿ ಕೆರೆ ನೀರು ಯೋಜನೆಯ ಪರಿಷ್ಕೃತ ಯೋಜನಾ ವೆಚ್ಚದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂ ಬಳಿಯ ಎಲೆಮಲ್ಲಪ್ಪಶೆಟ್ಟಿ ಕೆರೆಯ ನೀರನ್ನು ಶುದ್ಧಿಕರಿಸಿ ಪೈಪ್‌ಲೈನ್ ಮೂಲಕ ಕೆರೆಗಳಿಗೆ ತುಂಬಿಸಿ, ಅಂತರ್ಜಲ ಅಭಿವೃದ್ಧಿಪಡಿಸುವುದು. ಕುಡಿಯಲು ನೀರು ಒದಗಿಸಲು ಯೋಜನೆಯನ್ನು ಕಳೆದ ವರ್ಷವೇ ಜಿಲ್ಲಾಧಿಕಾರಿಗಳು ಸಿದ್ಧಪಡಿಸಿದ್ದರು. ಮುಂಚೆ ಯೋಜನೆಗೆ 250 ರಿಂದ 300 ಕೋಟಿಯಾಗಬಹುದೆಂದು ಅಂದಾಜಿಸಲಾಗಿತ್ತು. ಸರ್ಕಾರಕ್ಕೆ ಪ್ರಸ್ತಾವನೆ ಕೂಡಾ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.23ರಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಎಲೆಮಲ್ಲಪ್ಪ ಶೆಟ್ಟಿ ಕೆರೆ ನೀರಿನ ಯೋಜನೆಗೆ ಡಿಪಿಆರ್ ಮಾಡಿಸುವ ಭರವಸೆ ನೀಡಿದ್ದರು. ಆದರೆ, ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಡಿಪಿಆರ್ ಮಾಡಿಸಲಾಗಿಲ್ಲ. ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಆಗಿದ್ದರೂ ಹೈಕೋರ್ಟಿನಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದರಿಂದ ಯೋಜನೆ ಕಾರ್ಯಕೂಪಕ್ಕೆ ತರಲು ವಿಳಂಬವಾಗುವ ಸಾಧ್ಯತೆಗಳಿವೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು ಒಳಗೊಂಡ ನಿಯೋಗವನ್ನು ಮೇ 25ರಂದು ಸಿಎಂ ಬಳಿ ಕರೆದೊಯ್ಯುವ ಬಗ್ಗೆ ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದ್ದರು. ಆದರೆ, ಅವರಿಗೆ ನಿಯೋಗ ಕರೆದೊಯ್ಯಲು ಸಾಧ್ಯವಾಗಿಲ್ಲ.
ನೀರಿಗೆ ಲಕ್ಷಾಂತರ ರುಪಾಯಿ ಖರ್ಚು
ತಿಂಗಳೂ ಕುಡಿಯುವ ನೀರಿಗಾಗಿ ಪ್ರತಿ ತಿಂಗಳು ಕೋಟಿಗಟ್ಟೆಲೆ ಹಣವನ್ನು ಖರ್ಚು ಮಾಡಲಾಗುತ್ತಿದೆ. ಎಲೆಮಲ್ಲಪ್ಪಕೆರೆ ನೀರಿನ ಯೋಜನೆಗೆ 450 ಕೋಟಿ ಒಮ್ಮೆ ಖರ್ಚು ಮಾಡಿದಲ್ಲಿ ಕೇವಲ ಆರು ತಿಂಗಳಲ್ಲಿ ಯೋಜನೆ ಅನುಷ್ಟಾನಕ್ಕೆ ತರಬಹುದು. ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದು ಯೋಜನೆ ಜಾರಿಗೆ ಬರುವಂತೆ ಬದ್ಧತೆ ತೋರಬೇಕಾಗಿದೆ. ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಅವರು ಎತ್ತಿನ ಹೊಳೆಯಿಂದ ನೀರು ಕೊಟ್ಟೇ ಸಾಯುತ್ತೇನೆಂದು ಚುನಾವಣಾ ಪ್ರಚಾರ ಸಮಯದಲ್ಲಿ ವೀರಾವೇಷದಿಂದ ಮಾತನಾಡಿದ್ದರು.
ಚುನಾವಣೆ ಮುಗಿದು ಫಲಿತಾಂಶ ತಮ್ಮ ಪರವಾಗಿ ಬಂದಿದ್ದರೂ ಮೊಯ್ಲಿ ಅವರು ಎತ್ತಿನ ಹೊಳೆಯ ಬಗ್ಗೆ ಯಾವುದೇ ರೀತಿಯ ಚಕಾರ ಎತ್ತುತ್ತಿಲ್ಲ. ಮೊಯ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ಜನತೆ ನಿರೀಕ್ಷಿಸುತ್ತಿದ್ದಾರೆ. 24 ಟಿಸಿಎಂ ನೀರು ಎತ್ತಿನ ಹೊಳೆಯಿಂದ ಸಿಗುತ್ತದೆ ಅನುಮಾನ ಬೇಡವೆಂದು ಮುನಿಯಪ್ಪ ಸಹ ಸರ್ಕಾರದ ಪರವಾಗಿ ಜನರಿಗೆ ಭರವಸೆ ನೀಡಿದ್ದರು.
ಎತ್ತಿನ ಹೊಳೆ ಯೋಜನೆ ವಿಳಂಬವಾದಲ್ಲಿ ಎಲೆಮಲ್ಲಪ್ಪಶೆಟ್ಟಿ ಕೆರೆ ನೀರಿನ ಯೋಜನೆಯನ್ನಾದರೂ ಬೇಗನೆ ಜಾರಿಗೆ ತರಲಿ ಎಂಬುದು ಜನತೆಯ ಒತ್ತಾಸೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

