ಕೋಲಾರ

ಲಾರಿ ಡಿಕ್ಕಿ: ಬೈಕ್ ಸವಾರ ಸಾವು

Published On :

ಬಾಗೇಪಲ್ಲಿ: ಲಾರಿ ಮತ್ತು ಮೋಟಾರ್ ಬೈಕ್ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಟ್ಟಿರುವ ಘಟನೆ ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ-7 ರಲ್ಲಿನ ಆರ್  ಟಿಒ ಚೆಕ್  ಪೋಸ್ಟ್ ಸಮೀಪ ನಡೆದಿದೆ. ವೆಂಕಟೇಶ್ (37) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಮೃತ ದ್ವಿಚಕ್ರ ವಾಹನ ಸವಾರ ಆಂಧ್ರಪ್ರದೇಶದ ತನ್ನ ಸ್ವಗ್ರಾಮ ಚಿಲಮತ್ತೂರಿನಿಂದ ತನ್ನ ಮೋಟಾರ್ ಬೈಕ್‌ನಲ್ಲಿ ಕೆಲಸದ ನಿಮಿತ್ತ ಬಾಗೇಪಲ್ಲಿ ಪಟ್ಟಣದ ಕಡೆಗೆ ಬರುತ್ತಿದ್ದ. ಈತನ ಮುಂದೆ ಹೋಗುತ್ತಿದ್ದ ಸಿಮೆಂಟ್ ತುಂಬಿದ ಲಾರಿಯ ಚಾಲಕ ತಪಾಸಣೆಗಾಗಿ ಆರ್‌ಟಿಒ ಚೆಕ್ ಪೋಸ್ಟ್ ಮುಂದೆ ಹಠಾತ್ತಾಗಿ ಬ್ರೇಕ್ ಹಾಕಿ ಲಾರಿಯನ್ನು ನಿಲ್ಲಿಸಿದ್ದು ಇದರ ಹಿಂದೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಸಿಇಟಿ: ವೆಂಕಟಾದ್ರಿ ಕಾಲೇಜ್ ಸಾಧನೆ
ಚಿಂತಾಮಣಿ: ಸಿಇಟಿ ಪರೀಕ್ಷೆಯಲ್ಲಿ ವೆಂಕಟಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಸಂಜಯ್.ಎನ್ ವೈದ್ಯಕೀಯ ವಿಭಾಗದಲ್ಲಿ 427, ಎಂಜನಿಯರಿಂಗ್ ವಿಭಾಗದಲ್ಲಿ 1163ನೇ ರ್ಯಾಂಕ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಸ್ವಾತಿ.ಎಂ ವೈದ್ಯಕೀಯ ವಿಭಾಗದಲ್ಲಿ 1447, ಎಂಜಿನಿಯರಿಂಗ್ ವಿಭಾಗದಲ್ಲಿ ಮುನೇಗೌಡ ಕೆ.ಎಂ. 1358 ನೇ ರ್ಯಾಂಕ್ ಪಡೆದಿದ್ದಾರೆ. ಅದೇ ವಳೆ, ಕಾರ್ತಿಕ್ ಎನ್.ವೈ ಅವರು ವೈದ್ಯಕೀಯ ವಿಭಾಗದಲ್ಲಿ 2016 ಪಡೆದಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

ಪರಿಷತ್‌ಗೆ ಆಯ್ಕೆ
ಬಂಗಾರಪೇಟೆ: ವೆಂಕೋಬರಾವ್ ಪಡತಾರೆ ಅವರನ್ನು ಬಂಗಾರಪೇಟೆ ತಾಲೂಕು ವಚನ ಸಾಹಿತ್ಯ ಪರಿಷತ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಜಿಲ್ಲಾ ಘಟಕ ಅಧ್ಯಕ್ಷ ರಾಮಪ್ರಸಾದ್ ಆದೇಶ ಹೊರಡಿಸಿದ್ದಾರೆ.

ನಿಧನಕ್ಕೆ ಸಂತಾಪ
ಕೋಲಾರ: ವೇಣುಗೋಪಾಲಸ್ವಾಮಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್‌ನ ಹಿರಿಯ ನಿರ್ದೇಶಕ ಜಿ. ಗೋವಿಂದಪ್ಪ ಹೃದಯಾಘಾತದಿಂದ ನಿಧನರಾಗಿರುವುದಕ್ಕೆ ಟ್ರಸ್ಟ್ ಸಂತಾಪ ವ್ಯಕ್ತಪಡಿಸಿದೆ. ಬುಧವಾರ ಬೆಳಿಗ್ಗೆ ಅಧ್ಯಕ್ಷ ಲಕ್ಷ್ಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೋವಿಂದಪ್ಪರವರ ನಿಧನದಿಂದ ಟ್ರಸ್ಟ್‌ಗೆ ತುಂಬಲಾರದ ನಷ್ಟ ಎಂದು ಶ್ರೀನಿವಾಸಪ್ಪ ತಿಳಿಸಿದ್ದಾರೆ.

'ಖಾಸಗಿ ಡೈರಿಗೆ ಅವಕಾಶವಿಲ್ಲ'
ಶಿಡ್ಲಘಟ್ಟ: ತಾಲೂಕಿನಲ್ಲಿ ಖಾಸಗಿ ಉತ್ಪಾದಕರ ಸಂಘಗಳು ಹೆಚ್ಚುತ್ತಿದ್ದು, ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೂತನ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಿನ್ನಾಬಿಪ್ರಾಯ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಮುಖರನ್ನು ಕರೆದು ಮಾತುಕತೆಯ ಮೂಲಕ ಸಮಸ್ಯೆ ಬಗೆ ಹರಿಸಲಾಗುವುದು. ಖಾಸಗಿ ಡೈರಿಗಳ ಪ್ರಾರಂಭಕ್ಕೆ ಅವಕಾಶ ನೀಡುವುದಿಲ್ಲವೆಂದು ತಿಳಿಸಿದರು. ಶಾಸಕ ಎಂ. ರಾಜಣ್ಣ ಮಾತನಾಡಿದರು.

ಮಳೆಗಾಗಿ ಶಾಸಕ ನಾರಾಯಣಸ್ವಾಮಿ ಅವರಿಂದ ಕುರಿ ಬಲಿ
ಬಂಗಾರಪೇಟೆ: ಸತತ ಬರಗಾಲಕ್ಕೆ ತುತ್ತಾಗಿರುವ ಬಂಗಾರಪೇಟೆಯಲ್ಲಿ ಸಮೃದ್ಧ ಮಳೆಯಾಗಲಿ ಎಂದು ಪ್ರಾರ್ಥಿಸಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಂಧ್ರದ ಬಾಯಿಕೊಂಡ ಗಂಗಮ್ಮ ದೇವಿಗೆ ಕುರಿ ಬಲಿ ಕೊಟ್ಟಿದ್ದಾರೆ. ತಾಲೂಕು ಎಂಟು ವರ್ಷಗಳಿಂದ ಭೀಕರ ಬರಗಾಲಕ್ಕೆ ಸಿಲುಕಿದೆ. ಇದರಿಂದ ತಾಲೂಕಿನಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ. ಈ ಸಮಸ್ಯೆಯಿಂದ ಪಾರು ಮಾಡುವಂತೆ ಶಾಸಕ ನಾರಾಯಣಸ್ವಾಮಿ ಆಂಧ್ರದ ಪುಂಗನೂರು ಬಳಿಯಿರುವ ಬಾಯಿಕೊಂಡ ಗಂಗಮ್ಮ ದೇವಿರಲ್ಲಿ ಹರಕೆ ಹೊತ್ತು 16 ಕುರಿಗಳನ್ನು ಬಲಿ ಕೊಟ್ಟಿದ್ದಾರೆ. ಈ ವಿಶೇಷ ಪೂಜೆ ಕಾರ್ಯದಲ್ಲಿ ಕ್ಷೇತ್ರದಿಂದ ಪುರಸಭೆ ಸದಸ್ಯರು ಗ್ರಾಮ ಪಂಚಾಯ್ತಿ ಸದಸ್ಯರು ಸೇರಿ ಸುಮಾರು ಒಂದು ಸಾವಿರ ಜನ ಭಾಗವಹಿಸಿದ್ದರು. ಪೂಜೆ ಬಳಿಕ ಶಾಸಕರೇ ಎಲ್ಲರಿಗೂ ಬಾಡೂಟ ಬಡಿಸಿದರು.

ಕರವೇ ಲತಾ ಬಾಯಿ ಮಾಡಿಕ್‌ಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ
ಮಾಲೂರು: ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಲತಾ ಬಾಯಿ ಮಾಡಿಕ್ ರವರನ್ನು ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ಹಾಗೂ ವಿಶ್ವ ವೀರಶೈವ ಸಂಸ್ಕೃತಿ ಪ್ರತಿಷ್ಠಾನ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ನಯನ ಸಭಾಂಗಣದ ಕನ್ನಡ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಮಾಡಲಾಗಿದೆ. ಕೊಳದ ಮಠ ಮಹಾ ಸಂಸ್ಥಾನದ ಶ್ರೀ ಡಾ.ಶಾಂತ ವೀರಮಹಾಸ್ವಾಮೀಜಿ ರವರು ಆರ್ಶೀವಚನ ನೀಡಿದರು. ಈ ಸಮಾರಂಭದಲ್ಲಿ ಮಾಜಿ ಪೊಲೀಸ್ ಕಮೀಷನರ್ ಬಿ.ಜಿ.ಜ್ಯೋತಿಪ್ರಕಾಶ್ ಮಿರ್ಜಿ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಪ್ರೊ. ಡಾ.ಮುಮ್ತಾಜ್ ಅಲಿಖಾನ್, ವಿಶ್ರಾಂತ ಕೆ.ಎ.ಎಸ್.ನಾಗೇಂದ್ರ, ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ರಾಮದಾಸ್ ನಾಯಕ್, ವೈದ್ಯೆ ಡಾ.ಜಿ.ಪದ್ಮಾಕ್ಷಿ, ಸಂಘಟನೆಯ ಡಾ.ಕೆ.ಬಿ.ಪಾಟೀಲ್, ಲಯನ್ ಪ್ರೊ. ಡಾ.ಬಿ.ಜಿ.ರಾಜು, ಚಿತ್ರ ನಟಿ ಮೈತ್ರಿಯಾ, ನವಚೇತನ ಶ್ರೀ ಷಡಕ್ಷರಿ ಮಹಾಸ್ವಾಮಿಗಳು ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ಎಸ್‌ಡಿಸಿ ನಾರಾಯಣಸ್ವಾಮಿ ನ್ಯಾಯಾಂಗ ಬಂಧನ
ಕೋಲಾರ: ವಿಶೇಷ ಘಟಕದ ಅನುದಾನ ದುರ್ಬಳಕೆ ಹಿನ್ನಲೆಯಲ್ಲಿ ಬಂಧಿತರಾಗಿರುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಎಸ್.ಡಿ.ಸಿ ನಾರಾಯಣಸ್ವಾಮಿಯನ್ನು ಜೂ.7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಕಲಿ ಆದೇಶ ಪತ್ರಗಳು, ಕಾಮಗಾರಿಗಳು ಹಾಗೂ ಬಿಲ್‌ಗಳನ್ನು ತಯಾರಿಸಿ 2.33 ಕೋಟಿ ರು. ವಂಚಿಸಲು ಮುಂದಾಗಿದ್ದ ಈತನನ್ನು ಮೇ 26 ರಂದು ಪೊಲೀಸರು ಬಂಧಿಸಿದ್ದರು.
ಈ ಆರೋಪಿಯ ವಿರುದ್ಧ ನಗರದ ಗಲಲ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರಿ ನೌಕರನಾಗಿ ಸರ್ಕಾರಕ್ಕೆ ವಂಚನೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು.

ಸಾರ್ವಜನಿಕರಿಂದ ಅಹವಾಲು ಸ್ವೀಕಾರ: 'ಲೋಕಾ' ಡಿವೈಎಸ್ಪಿ
ಮುಳಬಾಗಲು: ಸರ್ಕಾರಿ ನೌಕರರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸತಾಯಿಸಿದಲ್ಲಿ ದೂರುಗಳು ಬಂದರೆ ತೀವ್ರ ಕ್ರಮ ಕೈಗೊಳ್ಳಲಾಗುವುದು ಎಂದು ಕೋಲಾರ ಲೋಕಾಯುಕ್ತ ಡಿವೈಎಸ್ಪಿ ರಾಮಮೂರ್ತಿ ನುಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಲ್ಕು ದೂರಿನ ಪ್ರಕರಣವಾದವು. ತಾಲೂಕಿನ ಮೂಡಿಯನೂರು ಗ್ರಾಮದ  ಸರ್ಕಾರಿ ಶಾಲೆಯ ಒತ್ತುವರಿ ಕುರಿತು ಮತ್ತು ತಾಪಂ ಅಧಿಕಾರಿಯ ಮೇಲೆ ಮಂಡಿಕಲ್ ನಾಗರಾಜ್ ಎಂಬುವರು ದೂರು ಸಲ್ಲಿಸಿದರು. ಮಿಕ್ಕಂತೆ ದುಗ್ಗಸಂದ್ರ ಹೋಬಳಿ ಜಮೀನು ಖಾತೆಯ ಕುರಿತು ಸಾರ್ವಜನಿಕರು ದೂರು ಸಲ್ಲಿಸಿದರು. ತಾಪಂ ಕುರಿತು ಮತ್ತೊಂದು ದೂರು ದಾಖಲಿಸಿಕೊಳ್ಳಲಾಯಿತು. ಇನ್ಸ್‌ಪೆಕ್ಟರ್ ಅಶ್ವಥನಾರಾಯಣ, ತಹಸೀಲ್ದಾರ್ ಕೆ.ಏಕೇಶಬಾಬು, ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಮುಂತಾದವರು ಭಾಗವಹಿಸಿದ್ದರು.

ದೊಡ್ಡಕೆರೆಯಲ್ಲಿ ವಾಕ್ಪಥವೂ ಇಲ್ಲ, ಒತ್ತುವರಿಯೂ ನಿಲ್ಲಲಿಲ್ಲ!
ಬಂಗಾರಪೇಟೆ: ಪಟ್ಟಣದ ದೊಡ್ಡಕೆರೆ ಒತ್ತುವರಿಯನ್ನು ತಡೆಯಲು ಕೆರೆ ಸುತ್ತಲೂ ವಾಕಿಂಗ್ ಝೋನ್ ನಿರ್ಮಾಣ ಮಾಡಲು 2 ವರ್ಷಗ ಹಿಂದೆ ನಿರ್ಧರಿಸಲಾಗಿತ್ತು. ವಿಪರ್ಯಾಸವೆಂದರೆ ಇದೂವರೆಗೂ ವಾಕಿಂಗ್ ಝೋನ್ ನಿರ್ಮಾಣವಾಗಿಲ್ಲ. ಪಟ್ಟಣದಲ್ಲಿ ಸಂಜೆ ಮತ್ತು ಬೆಳಗ್ಗೆ ನಾಗರಿಕರು, ಯುವಕರಿಗೆ ವಾಯು ವಿಹಾರ ಮಾಡಲು ಸೂಕ್ತ ಸ್ಥಳಾವಕಾಶ ಕೊರತೆಯಿಂದಾಗಿ ಪರದಾಡುತ್ತಿದ್ದನ್ನು ಗಮನಿಸಿದ ಅಂದಿನ ಶಾಸಕ ಎಂ.ನಾರಾಯಣಸ್ವಾಮಿ ಅವರು, ಪುರಸಭೆ ಮತ್ತು ಎಲ್ಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕೆರೆ ಸುತ್ತಲೂ ವಾಕಿಂಗ್ ಝೋನ್ ನಿರ್ಮಾಣ ಮುಂದಾದರು. ಮೊದಲ ಹಂತದಲ್ಲಿ ಕೆರೆಯಲ್ಲಿರುವ ಮಣ್ಣನ್ನು  ಕೆರೆಗೆ ಬೌಂಡ್ರಿ ಹಾಕಿದಂತೆ ಹಾಕಿದರು. ಇದರಿದಂ ಕೆರೆಯ ಅಸ್ತಿತ್ವ ಉಳಿಯಲಿದೆ ಎಂದು ಪ್ರಜ್ಞಾವಂತರು ಭಾವಿಸಿದರು. ಆದರೆ, ವಾಕಿಂಗ್ ಝೋನ್ ಕಾಮಗಾರಿ ಮಾತ್ರ ಎದ್ದೇಳಲಿಲ್ಲ. ಅತ್ತ ಕೆರೆಯ ಒತ್ತುವರಿಯೂ ನಿಲ್ಲಲಿಲ್ಲ. ಈ ಹಿಂದೆ ಪಟ್ಟಣದ ಜನರಿಗೆ ಸದಾ ಕುಡಿಯುವ ನೀರಿನ ಆಶ್ರಯ ತಾಣವಾಗಿದ್ದ ದೊಡ್‌ಡಕೆರೆ ಮಳೆಯಿಲ್ಲದೆ ಸಂಪೂರ್ಣವಾಗಿ ಒಣಗಿರುವುದರಿಂದ ಭೂಮಾಫಿಯಾದವರು ಕೆರೆ ಅಂಗಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ಪರಿಣಾಮ ಈಗ ದೊಡ್ಡ ಕೆರೆ ಸಣ್ಣಕೆರೆಯಾಗಿದೆ.

ಅತ್ಯಾಚಾರ ಆರೋಪಿ ಸೆರೆ
ಮುಳಬಾಗಲು: ತಾಲೂಕಿನ ಮೂಡಿಯನೂರು ಗ್ರಾಮದ ಹೊರವಲಯದಲ್ಲಿ ನಾರಾಯಣಪುರ ಗ್ರಾಮದ 9 ವರ್ಷದ ಬಾಲಕಿ ಮೇಲೆ ಆತ್ಯಾಚಾರ ಎಸಗಿದ ಆರೋಪಿ ರಂಗಪ್ಪ ಅಲಿಯಾಸ್ ರಂಗಯ್ಯನನ್ನು ಮುಳಬಾಗಲು ಪೊಲೀಸರು ಬುಧವಾರ ಬಂಧಿಸಿದ್ದಾರೆ.  ಮೂಲತಃ ಆಂಧ್ರಪ್ರದೇಶದ ಗುರುಂಕೊಂಡ ಗ್ರಾಮದ ಆರೋಪಿಯಾದ ಈತ ಅಲೆಮಾರಿ. ಚಿಂತಾಮಣೆ ಬಳಿಯ ಇರಗಂಪಲ್ಲಿ ಗ್ರಾಮದಲ್ಲಿ ವಾಸವಿದ್ದು, ಶ್ರೀನಿವಾಸಪುರ ಹೊರ ವಲಯದಲ್ಲಿ ಪಾತ್ರೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ ಎಂದು ಮುಳಬಾಗಲು ಪೊಲೀಸರು ತಿಳಿಸಿದ್ದಾರೆ.

ಸಹಕಾರ ಸಂಘ ಅಭಿವೃದ್ಧೀಲಿ ರಾಜಕೀಯ ಸಲ್ಲ
ಬಾಗೇಪಲ್ಲಿ: ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರೆಸಬಾರದು ಎಂದು ಶಾಸಕ ಎಸ್ .ಎನ್.ಸುಬ್ಬಾರೆಡ್ಡಿ ಕಿವಿಮಾತು ಹೇಳಿದರು.  ತಾಲೂಕು ಹಾಲು ಉತ್ಪಾಧಕರ ಸಹಕಾರ ಸಂಘದ ವತಿಯಿಂದ ಪಟ್ಟಣದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಗೊಂಡಿರುವ ನಿರ್ದೇಶಕರಿಗೆ ಅಭಿನಂಧನಾ ಸಭೆ ಹಾಗೂ ಯಶಸ್ವಿನಿ ಸಹಕಾರಿ ವಿಮಾ ಯೋಜನೆಯ ಅನುಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ರಾಜಕೀಯ ತಾರತಮ್ಯವಿಲ್ಲದೆ ಸಂಘದ ಅಭಿವೃದ್ಧಿಗಾಗಿ ಕೈಜೋಡಿಸಿ ಶ್ರಮಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಅವರು, ತಾಲೂಕಿನ 22 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡಗಳಿಲ್ಲ ಹಾಗೂ 36 ಸಂಘಗಳಿಗೆ ನಿವೇಶನಗಳಿಲ್ಲ. ಈ ಹಿನ್ನೆಲೆಯಲ್ಲಿ ನಿವೇಶನ ಮತ್ತು ಕಟ್ಟಡ ರಹಿತ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 4 ವರ್ಷಗಳಲ್ಲಿ ನಿವೇಶನ ಹಾಗೂ ಕಟ್ಟಡಗಳನ್ನು ಕಟ್ಟಿಸಿಕೊಡಲು ಮುಂದಾಗುವುದಾಗಿ ಭರವಸೆ ನೀಡಿದರು. ಕೋಲಾರ ಜಿಲ್ಲೆಯ ಮಾಲೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಉತ್ತಮ ಗುಣಮಟ್ಟದ ಹಾಲು ನೀಡಲಾಗುತ್ತಿದೆ. ಅದೇ ರೀತಿ ಬಾಗೇಪಲ್ಲಿ ತಾಲೂಕಿನಿಂದಲೂ ಉತ್ತಮ ಗುಣಮಟ್ಟದ ಹಾಲು ನೀಡುವಂತಾಗಲು ಶ್ರಮಿಸಬೇಕೆಂದು ಮನವಿ ಮಾಡಿದರು. ಚಿಕ್ಕಬಳ್ಳಾಪುರದ ಒಕ್ಕೂಟದ ಮಹಿಳಾ ನಿರ್ದೇಶಕಿ ಸುನಂದಮ್ಮ, ಜಿಪಂ ಮಾಜಿ ಉಪಾಧ್ಯಕ್ಷ ಚೆಂಡೂರು ವೆಂಕಟೇಶ್, ಪುರಸಭೆಯ ಸದಸ್ಯ ಎ.ನಂಜುಂಡಪ್ಪ, ಸಹಾಯಕ ನಿಬಂಧಕರಾದ ಮಂಜುನಾಥ್ ಸಿಂಗ್, ಡಿ.ಎಂ ವೀರಭದ್ರರೆಡ್ಡಿ, ಮುಖಂಡರಾದ ಅಮರನಾಥರೆಡ್ಡಿ, ಅಶೋಕ್, ವಿಜಯಕುಮಾರ್, ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಮರಳು ದಿಬ್ಬ ಕುಸಿದು ವ್ಯಕ್ತಿ ಸಾವು
ಗೌರಿಬಿದನೂರು: ಮರಳು ದಿಬ್ಬ ಕುಸಿದು ಸ್ಥಳದಲ್ಲೇ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಟ್ಟಣ ಸಮೀಪದ ಮಾದನಹಳ್ಳಿ ಬಳಿಯ ಮರಿಯಪ್ಪನ ಪಾಳ್ಯದ ನದಿಯಲ್ಲಿ ಸಂಭವಿಸಿದೆ. ಬುಧವಾರ ಸಂಜೆ 5ಗಂಟೆಯ ಸಮಯದಲ್ಲಿ ಟ್ರಾಕ್ಟರ್‌ಗೆ ಮರಳು ತುಂಬುತ್ತಿದ್ದಾಗ ಈ ಘಟನೆ ನಡೆದಿದೆ. ಮೃತನ ಹೆಸರು ಶಿವಪ್ಪ(50). ಪುರಠಾಣೆಯ ಪಿಎಸ್‌ಐ ಬೈರಾ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಯಿಕೃಷ್ಣ ಟ್ರಸ್ಟ್‌ನಿಂದ ಉಚಿತ ಬಸ್ ಪಾಸ್
ಚಿಕ್ಕಬಳ್ಳಾಪುರ: 8ನೇ ತರಗತಿಯಿಂದ ಮೇಲ್ಪಟ್ಟು ಪದವಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಉಚಿತ ಬಸ್ ಪಾಸ್ ವಿತರಿಸುತ್ತಿದೆ. 8ನೇ ತರಗತಿಯಿಂದ ಪದವಿವರೆಗೂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಗರದ ಶಿಡ್ಲಘಟ್ಟ ರಸ್ತೆಯಲ್ಲಿರುವ ಚಾಮರಾಜಪೇಟೆ, ಕಚೇರಿ ಸಂಖ್ಯೆ-239 ರಲ್ಲಿ ಭರ್ತಿ ಮಾಡಿದ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅರ್ಹ ವಿದ್ಯಾರ್ಥಿಗಳಿಗೆ ಜೂ. 29 ರಂದು ನಗರದ ನಂದಿ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಸ್‌ಪಾಸ್ ವಿತರಣೆ ಮಾಡಲಾಗುವುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾಯಿಕೃಷ್ಣ ಚಾರಿಟಬಲ್ ಮ್ಯಾನೇಜಿಂಗ್ ಟ್ರಸ್ಟಿ, ಶಾಸಕ ಡಾ.ಕೆ.ಸುಧಾಕರ್  ತಿಳಿಸಿದ್ದಾರೆ. ಅಲ್ಲದೆ, ಜೂ.27 ರಂದು ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್‌ನಿಂದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡುತ್ತಿದ್ದು, ನಗರ ಪ್ರದೇಶದಲ್ಲಿ 3 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ. ಘಟಕಗಳ ನಿರ್ವಹಣೆಗೆ ಮಹಿಳೆಯರನ್ನು ನೇಮಿಸಿದ್ದು, ಇದರಿಂದ ಬರುವ ಆದಾಯವನ್ನು ಘಟಕದ ನಿರ್ವಹಣೆಗೆ ಬಳಸಲಾಗುತ್ತದೆ. ಜನರಿಗೆ ಶುದ್ಧ ಕುಡಿಯುವ ನೀರು ನೀಡಬೇಕೆಂದು ಟ್ರಸ್ಟ್  ಪ್ರಮುಖ ಗುರಿಯಾಗಿದ್ದು, ಒಂದು ನೀರಿನ ಘಟಕಕ್ಕೆ ರು. 8.10 ಲಕ್ಷ ವೆಚ್ಚವಾಗುತ್ತದೆ. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ನಗರ ಪ್ರದೇಶಗಳಲ್ಲಿ 10 ಘಟಕಗಳನ್ನು ಹಾಗೂ ಕ್ಷೇತ್ರದ 28 ಗ್ರಾಮ ಪಂಚಾಯಿತಿಗಳಲ್ಲಿ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.